ಚುನಾವಣಾ ಸಮಯದಲ್ಲಿ ದೇಶಾದ್ಯಂತ ಈ ವರೆಗೆ 8,889 ಕೋಟಿ ರೂ. ಮೌಲ್ಯದ ಹಣ, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ, 45% ಮಾದಕ ವಸ್ತುಗಳು ಸೇರಿವೆ ಎಂದುಭಾರತೀಯ ಚುನಾವಣಾ ಆಯೋಗ (ಇಸಿಐ) ಮಾಹಿತಿ ನೀಡಿದೆ.
ಲೋಕಸಭಾ ಚುನಾವಣೆಯ ನಾಲ್ಕು ಹಂತದ ಮತದಾನ ಮುಗಿದಿದೆ. ಇನ್ನೂ 3 ಹಂತಗಳ ಮತದಾನ ನಡೆಸಬೇಕಿದೆ. ಈ ನಡುವೆ, ಬರೋಬ್ಬರಿ ಸುರಿಸುಮಾರು 9 ಸಾವಿರ ಕೋಟಿ ರೂ. ಮೌಲ್ಯದ ಹಣ ಮತ್ತು ವಸ್ತುಗಳು ಚುನಾವಣಾ ಅಧಿಕಾರಿಗಳ ವಶವಾಗಿವೆ.
“ವಶಪಡಿಸಿಕೊಂಡ ವಸ್ತುಗಳಲ್ಲಿ ಮಾದಕ ವಸ್ತುಗಳು ಮತ್ತು ಸೈಕೋಟ್ರೋಪಿಕ್ ಪದಾರ್ಥಗಳು ಸೇರಿದ್ದು, ಅವುಗಳು ಹೆಚ್ಚು ಅಪಾಯಕಾರಿಯಾಗಿವೆ. ಮಾರ್ಚ್ 1ರಿಂದ ವಶಪಡಿಸಿಕೊಳ್ಳುವಿಕೆಯಲ್ಲಿ ಗಮನಾರ್ಹ ಏರಿಕೆ ಕಂಡುಬರುತ್ತಿದೆ” ಎಂದು ಆಯೋಗ ಹೇಳಿದೆ.
ಗುಜರಾತ್ ಎಟಿಎಸ್, ಎನ್‌ಸಿಬಿ ಮತ್ತು ಇಂಡಿಯನ್ ಕೋಸ್ಟ್ ಗಾರ್ಡ್ ಜಂಟಿ ಕಾರ್ಯಾಚರಣೆಯಲ್ಲಿ ಕೇವಲ ಮೂರು ದಿನಗಳಲ್ಲಿ 892 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿವೆ. ಗುಜರಾತ್, ಮಹಾರಾಷ್ಟ್ರ ಮತ್ತು ದೆಹಲಿ ಹೊರತುಪಡಿಸಿ ಇತರ ರಾಜ್ಯಗಳಲ್ಲಿಯೂ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ಶುಕ್ರವಾರ, ಗ್ರೇಟರ್ ನೋಯ್ಡಾದ ಡ್ರಗ್ ಫ್ಯಾಕ್ಟರಿ ಮೇಲೆ ದಾಳಿನಡೆಸಿದ್ದರು. ಅಲ್ಲಿ 150 ಕೋಟಿ ರೂ, ಮೌಲ್ಯದ 26.7 ಕೆಜಿ ಎಂಡಿಎಂಎ ಡ್ರಗ್ಸ್ ಪತ್ತೆಯಾಗಿತ್ತು. ಅಲ್ಲದೆ, ಅಲ್ಲಿದ್ದ ಇಬ್ಬರು ವಿದೇಶಿ ಮೂಲದ ವ್ಯಕ್ತಿಗಳನ್ನು ಬಂಧಿಸಲಾಗಿದೆ” ಎಂದು ಆಯೋಗ ತಿಳಿಸಿದೆ.