ಲೋಕಸಭಾ ಚುನಾವಣೆಗೆ ಭಾರೀ ತಯಾರಿ ನಡೆಸುತ್ತಿರುವ ಕಾಂಗ್ರೆಸ್, ನಾನಾ ಕ್ಷೇತ್ರಗಳಿಗೆ ನಾನಾ ರೀತಿಯ ಗ್ಯಾರಂಟಿಗಳನ್ನು ನೀಡುತ್ತಿದೆ. ಯುವಜನರು, ಆದಿವಾಸಿಗಳು ಹಾಗೂ ಮಹಿಳೆಯರಿಗೆ ಈಗಾಗಲೇ ಗ್ಯಾರಂಟಿಗಳ ಭರವಸೆ ನೀಡಿರುವ ಕಾಂಗ್ರೆಸ್, ಇದೀಗ, ರೈತರಿಗೆ ಐದು ಭವರಸೆಗಳನ್ನು ಘೋಷಿಸಿದೆ
ಕೃಷಿ ಕ್ಷೇತ್ರಕ್ಕೆ ಗ್ಯಾರಂಟಿಗಳನ್ನು ಘೋಷಿಸಿ, ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ದೇಶದ ಎಲ್ಲ ಅನ್ನದಾತರಿಗೆ ನನ್ನ ನಮನ! ಕಾಂಗ್ರೆಸ್ ನಿಮಗಾಗಿ 5 ಭರವಸೆಗಳನ್ನು ತಂದಿದೆ. ಈ ಭರವಸೆಗಳು ನಿಮ್ಮ ಎಲ್ಲ ಸಮಸ್ಯೆಗಳನ್ನು ಅವುಗಳ ಮೂಲದಿಂದ ತೊಡೆದು ಹಾಕುತ್ತವೆ” ಎಂದಿದ್ದಾರೆ.
ರೈತರಿಗೆ ಕಾಂಗ್ರೆಸ್ ಭರವಸೆಗಳು ಹೀಗಿವೆ:
- ಸ್ವಾಮಿನಾಥನ್ ಆಯೋಗದ ಸೂತ್ರದ ಅಡಿಯಲ್ಲಿ MSPಗೆ ಕಾನೂನು ಸ್ಥಾನಮಾನ.
- ರೈತರ ಸಾಲ ಮನ್ನಾ ಮಾಡಲು ಮತ್ತು ಸಾಲ ಮನ್ನಾ ಪ್ರಮಾಣವನ್ನು ನಿರ್ಧರಿಸಲು ಶಾಶ್ವತ ‘ಕೃಷಿ ಸಾಲ ಮನ್ನಾ ಆಯೋಗ’ ರಚನೆ.
- ವಿಮಾ ಯೋಜನೆಯನ್ನು ಬದಲಾಯಿಸುವ ಮೂಲಕ ಬೆಳೆ ನಷ್ಟವಾದಲ್ಲಿ 30 ದಿನಗಳೊಳಗೆ ನೇರವಾಗಿ ಬ್ಯಾಂಕ್ ಖಾತೆಗೆ ಪರಿಹಾರ ಪಾವತಿ.
- ರೈತರ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ಹೊಸ ಆಮದು-ರಫ್ತು ನೀತಿ ರಚನೆ.
- ಕೃಷಿ ಉತ್ಪನ್ನಗಳಿಂದ ಜಿಎಸ್‌ಟಿಯನ್ನು ತೆಗೆದುಹಾಕುವ ಮೂಲಕ ರೈತರನ್ನು ಜಿಎಸ್‌ಟಿ ಮುಕ್ತವನ್ನಾಗಿ ಮಾಡುವುದು.
“ತಮ್ಮ ಬೆವರಿನಿಂದ ನಾಡಿನ ಮಣ್ಣಿಗೆ ನೀರುಣಿಸುವ ರೈತರ ಬದುಕು ಹಸನುಗೊಳಿಸುವುದು ಕಾಂಗ್ರೆಸ್‌ನ ಉದ್ದೇಶವಾಗಿದೆ. ನಮ್ಮ 5 ಐತಿಹಾಸಿಕ ನಿರ್ಧಾರಗಳು ಆ ನಿಟ್ಟಿನಲ್ಲಿ ಕೈಗೊಂಡ ಹೆಜ್ಜೆಗಳಾಗಿವೆ. ಭಾರತದ ಕೃಷಿ ವ್ಯವಸ್ಥೆಯಲ್ಲಿ ‘ಸಮೃದ್ಧಿಯ ಸೂರ್ಯ’ ಉದಯಿಸಲಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.