ಮೂರನೇ ಬಾರಿಗೆ ಅಧಿಕಾರ ಹಿಡಿಯುತ್ತೇವೆಂದು ಅಬ್ಬರದ ಭಾಷಣ ಮಾಡುತ್ತಿರುವ ಬಿಜೆಪಿ, ಮುಂಬರು ಲೋಕಸಭೆ ಚುನಾವಣೆಗೆ ‘ಸಂಕಲ್ಪ ಪತ್ರ’ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಭಾನುವಾರ (ಏ.14) ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಬಿಜೆಪಿಯನ್ನು ಮಣಿಸಿ ಅಧಿಕಾರಕ್ಕೇರಲು ‘ಇಂಡಿಯಾ’ ಮೈತ್ರಿಕೂಟ ನೇತೃತ್ವ ವಹಿಸಿರುವ ಕಾಂಗ್ರೆಸ್ ಕೂಡ ಏಪ್ರಿಲ್ 5ರಂದೇ ತನ್ನ ‘ನ್ಯಾಯ ಪತ್ರ’ ಪ್ರಣಾಳಿಕೆ ಬಿಡುಗಡೆ ಮಾಡಿತ್ತು.
ಎರಡೂ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳನ್ನು ಹೋಲಿಸಿ ನೋಡಿದಾಗ, ಗಮನಿಸಬಹುದಾದ ಪ್ರಮುಖ 10 ಅಂಶಗಳು ಇಲ್ಲಿವೆ;
-
ಮೋದಿ ಗ್ಯಾರಂಟಿ Vs ನ್ಯಾಯ್ ಗ್ಯಾರಂಟಿ
ಬಿಜೆಪಿ
‘ಮೋದಿ ಕಿ ಗ್ಯಾರಂಟಿ’ ಎಂಬ ಶೀರ್ಷಿಕೆಯಲ್ಲಿ ಬಿಜೆಪಿ 2024ರ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ 14 ಭರವಸೆಗಳನ್ನು ಬಿಜೆಪಿ ನೀಡಿದೆ. ರಾಷ್ಟ್ರದ ಅಭಿವೃದ್ಧಿಯ ನಾಲ್ಕು ಸ್ತಂಭಗಳಾದ ಮಹಿಳೆಯರು, ಯುವಜನರು, ಹಿಂದುಳಿದವರು ಮತ್ತು ರೈತರ ವಿಷಯದಲ್ಲಿ ಬದ್ಧತೆ ಹೊಂದಿರುವುದಾಗಿ ಹೇಳಿಕೊಂಡಿದೆ.
ಕಾಂಗ್ರೆಸ್
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡಿ ನ್ಯಾಯ ಯಾತ್ರೆಯ ಮುದ್ರೆ ಇದೆ. ಪ್ರಣಾಳಿಕೆಯನ್ನು ‘ನ್ಯಾಯ ಪತ್ರ’ ಎಂದು ಕರೆಯಲಾಗಿದೆ. ನ್ಯಾಯ್ ಗ್ಯಾರಂಟಿಗಳೆಂದು – ಯುವ ನ್ಯಾಯ, ನಾರಿ ನ್ಯಾಯ, ಕಿಸಾನ್ ನ್ಯಾಯ, ಶ್ರಮಿಕ್ ನ್ಯಾಯ ಹಾಗೂ ಹಿಸ್ಸೆದಾರಿ ನ್ಯಾಯ – ಅಡಿಯಲ್ಲಿ 25 ಭವರಸೆಗಳನ್ನು ನೀಡಿದೆ.
-
ಯುವ ಮತದಾರರು ಗುರಿ
ಈಬಾರಿಯ ಲೋಕಸಭೆ ಚುನಾವಣೆಯಲ್ಲಿ 18-19 ವರ್ಷ ವಯಸ್ಸಿನ ಸುಮಾರು 1.8 ಕೋಟಿ ಹೊಸ ಮತದಾರರು ಮತ ಚಲಾಯಿಸಲಿದ್ದಾರೆ. ಎರಡೂ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಯುವ ಮತದಾರರ ಬಗ್ಗೆ ಪ್ರತ್ಯೇಕ ವಿಭಾಗಗಳನ್ನು ಹೊಂದಿವೆ. ಯುವಜನರಿಗೆ ನಾನಾ ಭರವಸೆಗಳನ್ನು ನೀಡಿವೆ.
ಬಿಜೆಪಿ
– ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕಾನೂನು ಜಾರಿ.
– ಕಾಲಮಿತಿಯಲ್ಲಿ ಸರ್ಕಾರಿ ಹುದ್ದೆಗಳ ಭರ್ತಿ ಮುಂದುವರಿಕೆ.
– ಭಾರತವನ್ನು ಸ್ಟಾರ್ಟ್‌ಅಪ್‌ಗಳ ಆದ್ಯತಾ ತಾಣವನ್ನಾಗಿ ಮಾಡುವ ಮೂಲಕ, ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆ ವಿಸ್ತರಣೆ.
– ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಮತ್ತು ಉತ್ಪಾದನಾ ವಲಯದಲ್ಲಿ ಉದ್ಯೋಗವನ್ನು ಹೆಚ್ಚಿಸಲು ಕೆಲಸ ಮುಂದುವರಿಕೆ.
– ಉದ್ಯಮಗಳನ್ನು ಪ್ರಾರಂಭಿಸಲು ಮತ್ತು ಉಳಿಸಿಕೊಳ್ಳಲು ಎಲ್ಲ ಮಹತ್ವಾಕಾಂಕ್ಷಿ ಉದ್ಯಮಿಗಳನ್ನು ಬೆಂಬಲಿಸಲು ಮುದ್ರಾ ಯೋಜನೆಯ ವಿಸ್ತರಣೆ. ಮುದ್ರಾ ಸಾಲದ ಮಿತಿಯನ್ನು ₹20 ಲಕ್ಷಕ್ಕೆ ದ್ವಿಗುಣಗೊಳಿಸುವುದು.
ಕಾಂಗ್ರೆಸ್
– ಯುವ ನ್ಯಾಯ ಯೋಜನೆಯೊಂದಿಗೆ ನಿರುದ್ಯೋಗ ಸಮಸ್ಯೆಯನ್ನು ಯುದ್ಧೋಪಾದಿಯಲ್ಲಿ ನಿರ್ವಹಿಸುವುದು.
– 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಬ್ಬ ಡಿಪ್ಲೊಮಾ ಅಥವಾ ಕಾಲೇಜು ಪದವೀಧರರಿಗೆ ಖಾಸಗಿ ಅಥವಾ ಸಾರ್ವಜನಿಕ ವಲಯದ ಕಂಪನಿಯಲ್ಲಿ ಒಂದು ವರ್ಷದ ಶಿಷ್ಯವೃತ್ತಿ ಖಾತರಿ. ಅದಕ್ಕಾಗಿ, ಹೊಸ ಅಪ್ರೆಂಟಿಸ್‌ಶಿಪ್ ಕಾಯಿದೆ ಜಾರಿ.
– ಕೇಂದ್ರ ಸರ್ಕಾರದ ಅಡಿಯಲ್ಲಿ ಖಾಲಿ ಇರುವ ಸುಮಾರು 30 ಲಕ್ಷ ಹುದ್ದೆಗಳ ಭರ್ತಿ.
– ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ 2020ರ ಏಪ್ರಿಲ್ 1 ರಿಂದ 2021ರ ಜೂನ್ 30 ರವರೆಗೆ ಅರ್ಹತಾ ಸಾರ್ವಜನಿಕ ಪರೀಕ್ಷೆಗಳನ್ನು ಬರೆಯಲು ಸಾಧ್ಯವಾಗದ ಅರ್ಜಿದಾರರಿಗೆ ಒಮ್ಮೆ ಪರಿಹಾರ.
-
ಹಿರಿಯ ನಾಗರಿಕರು
ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಹಿರಿಯ ನಾಗರಿಕರಿಗೆ ವಿಶೇಷವಾಗಿ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಭರವಸೆಗಳನ್ನು ನೀಡಿವೆ.
ಬಿಜೆಪಿ
– 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರನ್ನು ಒಳಗೊಳ್ಳಲು ಆಯುಷ್ಮಾನ್ ಭಾರತ್ ಯೋಜನೆಯ ವಿಸ್ತರಣೆ.
– ಹಿರಿಯ ನಾಗರಿಕರಿಗೆ ದೇಶದಾದ್ಯಂತತೀರ್ಥಯಾತ್ರೆಗಳನ್ನು ಕೈಗೊಳ್ಳಲು ಅನುಕೂಲಕರ ಸೌಲಭ್ಯಗಳನ್ನು ನೀಡುವುದು. ಅದಕ್ಕಾಗಿ ರಾಜ್ಯ ಸರ್ಕಾರಗಳ ಸಹಕಾರ ಪಡೆಯುವುದು.
ಕಾಂಗ್ರೆಸ್
– ವಿಕಲಚೇತನರ ಹಕ್ಕುಗಳ ಕಾಯಿದೆ-2016ರ ಕಟ್ಟುನಿಟ್ಟಿನ ಜಾರಿ.
– ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮದ ಅಡಿಯಲ್ಲಿ ಹಿರಿಯ ನಾಗರಿಕರು, ವಿಧವೆಯರು ಮತ್ತು ವಿಕಲಚೇತನರಿಗೆ ನೀಡಲಾಗುವ ಪಿಂಚಣಿ ಮೊತ್ತ ತಿಂಗಳಿಗೆ ₹1,000ಕ್ಕೆ ಹೆಚ್ಚಳ.
– ಹಿರಿಯ ನಾಗರಿಕರಿಗೆ ಸಾರ್ವಜನಿಕ ಸಾರಿಗೆಯಲ್ಲಿ (ರೈಲು ಮತ್ತು ರಸ್ತೆ) ಪ್ರಯಾಣ ರಿಯಾಯಿತಿ ಮರುಜಾರಿ.
-
ರೈತರು
ನಿರ್ಣಾಯಕ ಮತ ಬ್ಯಾಂಕ್‌ಗಳಲ್ಲಿ ರೈತ ಸಮುದಾಯವೂ ಒಂದಾಗಿದೆ. ಎರಡೂ ಪಕ್ಷಗಳು ಹಿಂದಿನ ಪ್ರಣಾಳಿಕೆಗಳಂತೆ ಈ ಬಾರಿಯೂ ರೈತರಿಗೆ ನಾನಾ ಭರವಸೆಗಳನ್ನು ನೀಡಿವೆ.
ಬಿಜೆಪಿ
– ಕೃಷಿ ಉತ್ಪನ್ನಗಳ ನಿಖರ ಮೌಲ್ಯಮಾಪನ, ವೇಗದ ಪಾವತಿ ಮತ್ತು ಕುಂದುಕೊರತೆಗಳ ತ್ವರಿತ ಪರಿಹಾರ ಒದಗಿಸಲು ತಂತ್ರಜ್ಞಾನದೊಂದಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಮತ್ತಷ್ಟು ಬಲಪಡಿಸುವುದು.
– ಕಾಲಕಾಲಕ್ಕೆ ಎಂಎಸ್‌ಪಿ ಹೆಚ್ಚಿಸುವುದನ್ನು ಮುಂದುವರಿಸುವುದು.
ಕಾಂಗ್ರೆಸ್
-ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಎಂಎಸ್‌ಪಿಗೆ ಕಾನೂನು ಖಾತರಿ.
– ರೈತರ ಸಾಲ ಮನ್ನಾ ಮಾಡಲು ಮತ್ತು ಸಾಲ ಮನ್ನಾ ಪ್ರಮಾಣವನ್ನು ನಿರ್ಧರಿಸಲು ಶಾಶ್ವತ ‘ಕೃಷಿ ಸಾಲ ಮನ್ನಾ ಆಯೋಗ’ ರಚನೆ.
– ವಿಮಾ ಯೋಜನೆಯನ್ನು ಬದಲಾಯಿಸುವ ಮೂಲಕ ಬೆಳೆ ನಷ್ಟವಾದಲ್ಲಿ 30 ದಿನಗಳೊಳಗೆ ನೇರವಾಗಿ ಬ್ಯಾಂಕ್ ಖಾತೆಗೆ ಪರಿಹಾರ ಪಾವತಿ.
– ರೈತರ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ಹೊಸ ಆಮದು-ರಫ್ತು ನೀತಿ ರಚನೆ.
– ಕೃಷಿ ಉತ್ಪನ್ನಗಳಿಂದ ಜಿಎಸ್‌ಟಿಯನ್ನು ತೆಗೆದುಹಾಕುವ ಮೂಲಕ ರೈತರನ್ನು ಜಿಎಸ್‌ಟಿ ಮುಕ್ತವನ್ನಾಗಿ ಮಾಡುವುದು.
-
ಮಹಿಳಾ ಮತದಾರರು
2024ರ ಲೋಕಸಭಾ ಚುನಾವಣೆಯಲ್ಲಿ 96.8 ಕೋಟಿ ಭಾರತೀಯರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಇವರಲ್ಲಿ 49.7 ಕೋಟಿ ಪುರುಷರು, 47.1 ಕೋಟಿ ಮಹಿಳೆಯರು ಮತ್ತು 48,000 ಲಿಂಗತ್ವ ಅಲ್ಪಸಂಖ್ಯಾತರು. ಈ ಮತದಾರರಲ್ಲಿ ಪಕ್ಷಗಳ ಭವಿಷ್ಯವನ್ನು ನಿರ್ಧರಿಸುವಲ್ಲಿ ಮಹಿಳಾ ಮತದಾರರು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ.
ಬಿಜೆಪಿ
– 3 ಕೋಟಿ ಗ್ರಾಮೀಣ ಮಹಿಳೆಯರಿಗೆ ‘ಲಖ್‌ಪತಿ ದೀದಿ’ ಆಗಲು ಪ್ರೋತ್ಸಾಹ.
– ಮಹಿಳೆಯರ ಆರೋಗ್ಯಕರ ಜೀವನ ಖಾತ್ರಿಗಾಗಿ ಅಸ್ತಿತ್ವದಲ್ಲಿರುವ ಆರೋಗ್ಯ ಸೇವೆಗಳನ್ನು ರಕ್ತಹೀನತೆ, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಮತ್ತು ಆಸ್ಟಿಯೊಪೊರೋಸಿಸ್ ತಡೆಗಟ್ಟುವಿಕೆಗೆ ವಿಸ್ತರಿಸುವುದು.
– ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರ ಪ್ರಾತಿನಿಧ್ಯಕ್ಕಾಗಿ ಮಹಿಳಾ ಮೀಸಲಾತಿ ಮಸೂದೆಯ ಜಾರಿ.
ಕಾಂಗ್ರೆಸ್
– ಮಹಾಲಕ್ಷ್ಮೀ: ಬಡ ಕುಟುಂಬದ ಒಬ್ಬ ಮಹಿಳೆಗೆ ಪ್ರತಿ ವರ್ಷ 1 ಲಕ್ಷ ರೂಪಾಯಿ.
– ಅರ್ಧದಷ್ಟು ಜನಸಂಖ್ಯೆ, ಸಂಪೂರ್ಣ ಹಕ್ಕು: ಕೇಂದ್ರ ಸರ್ಕಾರದ ಎಲ್ಲಾ ಹೊಸ ನೇಮಕಾತಿಗಳಲ್ಲಿ ಅರ್ಧದಷ್ಟು ಮಹಿಳೆಯರಿಗೆ ಮೀಸಲು.
– ಶಕ್ತಿಗೆ ಗೌರವ: ಆಶಾಗಳು, ಅಂಗನವಾಡಿ ಮತ್ತು ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಮಹಿಳೆಯರ ವೇತನದಲ್ಲಿ ಕೇಂದ್ರ ಸರ್ಕಾರದ ಪಾಲು ದುಪ್ಪಟ್ಟು.
– ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್: ದೇಶದಲ್ಲಿ ಉದ್ಯೋಗಿ ಮಹಿಳೆಯರಿಗಾಗಿ ಹಾಸ್ಟೆಲ್‌ಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಮೂಲಕ, ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಹಾಸ್ಟೆಲ್.
– ಅಧಿಕಾರ ಮೈತ್ರಿ: ಎಲ್ಲ ಪಂಚಾಯತಿಗಳಲ್ಲಿ ಅಧಿಕಾರ ಮೈತ್ರಿಯ ನೇಮಕದ ಮೂಲಕ ಮಹಿಳೆಯರಿಗೆ ಅವರ ಕಾನೂನು ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಮತ್ತು ಅವರು ಈ ಹಕ್ಕುಗಳನ್ನು ಪಡೆಯಲು ಸಹಾಯ.
-
ಎಲ್ಲರಿಗೂ ಆರೋಗ್ಯ
ಕೊರೊನಾ ಸಾಂಕ್ರಾಮಿಕದ ನಂತರ ಆರೋಗ್ಯದ ಬಗ್ಗೆ ಜನರು ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ಕೊರೊನಾ ಬಿಕ್ಕಟ್ಟನ್ನು ಹೇಗೆ ನಿಭಾಯಿಸಿದೆ ಎಂಬುದನ್ನು ಹೇಳಿಕೊಂಡಿದೆ. ಆದರೆ ಕಾಂಗ್ರೆಸ್ ತನ್ನ ರಾಜಸ್ಥಾನ ಸರ್ಕಾರದ ಮಾದರಿಯಲ್ಲಿ ಆರೋಗ್ಯ ವಿಮೆಯನ್ನು ದೇಶಾದ್ಯಂತ ಜಾರಿಗೆ ತರುವ ಭರವಸೆ ನೀಡಿದೆ.
ಬಿಜೆಪಿ
– ದೇಶದಾದ್ಯಂತ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲು ಏಮ್ಸ್ ನೆಟ್‌ವರ್ಕ್ ಅನ್ನು ಬಲಪಡಿಸುವುದು.
– ದೃಢವಾದ ಆರೋಗ್ಯ ರಕ್ಷಣೆಗಾಗಿ ಪಿಎಂ-ಅಭಿಮ್ ವಿಸ್ತರಣೆ.
– ದೇಶದಾದ್ಯಂತ ನಾಗರಿಕರಿಗೆ ಉತ್ತಮ ಗುಣಮಟ್ಟದ ಕಡಿಮೆ ಬೆಲೆಯ ಔಷಧಗಳನ್ನು ಒದಗಿಸಲು ಜನೌಷಧಿ ಕೇಂದ್ರ ಜಾಲ ವಿಸ್ತರಣೆ.
ಕಾಂಗ್ರೆಸ್
– ಸಾರ್ವತ್ರಿಕ ಆರೋಗ್ಯ ರಕ್ಷಣೆಗಾಗಿ ₹25 ಲಕ್ಷದವರೆಗಿನ ನಗದು ರಹಿತ ವಿಮೆಯನ್ನು ರಾಜಸ್ಥಾನ ಮಾದರಿಯಲ್ಲಿ ದೇಶಾದ್ಯಂತ ಜಾರಿ.
– ಆಸ್ಪತ್ರೆಗಳು, ಚಿಕಿತ್ಸಾಲಯಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಂಚಾರಿ ಆರೋಗ್ಯ ರಕ್ಷಣಾ ಘಟಕಗಳು, ಔಷಧಾಲಯಗಳು ಮತ್ತು ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಆರೋಗ್ಯ ಸೇವೆ. ಈ ಸೇವೆಯು ಪರೀಕ್ಷೆ, ರೋಗನಿರ್ಣಯ, ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಔಷಧಗಳು, ಪುನರ್ವಸತಿ ಮತ್ತು ಉಪಶಾಮನ ಆರೈಕೆಯನ್ನು ಒಳಗೊಂಡಿರುತ್ತದೆ.
– 2028-29ರ ವೇಳೆಗೆ ಒಟ್ಟು ವೆಚ್ಚದಲ್ಲಿ ಶೇ.4ರಷ್ಟನ್ನು ಆರೋಗ್ಯ ಕ್ಷೇತ್ರಕ್ಕೆ ವ್ಯಯಿಸಲು ಹಂತ-ಹಂತವಾಗಿ ಬಜೆಟ್ ಹಂಚಿಕೆಯಲ್ಲಿ ಹೆಚ್ಚಳ.
-
ಭಾರತದ ಆರ್ಥಿಕತೆ
ಭಾರತವನ್ನು 3ನೇ ಅತಿ ದೊಡ್ಡ ಆರ್ಥಿಕತೆಯಾಗಿಸುವ ಭರವಸೆಯನ್ನು ಬಿಜೆಪಿ ನೀಡಿದೆ. ಮುಂದಿನ ಹತ್ತು ವರ್ಷಗಳಲ್ಲಿ ದೇಶದ ಜಿಡಿಪಿಯನ್ನು ದ್ವಿಗುಣಗೊಳಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ.
ಬಿಜೆಪಿ
– ಭಾರತವು 3ನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡಲು ಕ್ರಮ.
– ಕಡಿಮೆ ಹಣದುಬ್ಬರವನ್ನು ಪ್ರದರ್ಶನ ಮುಂದುವರಿಕೆ.
– ನಾಗರಿಕರಿಗೆ ಉದ್ಯೋಗ, ಸ್ವಯಂ ಉದ್ಯೋಗ ಮತ್ತು ಜೀವನೋಪಾಯದ ಅವಕಾಶಗಳ ಹೆಚ್ಚಳ.
– ಆರ್ಥಿಕತೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ತೆರಿಗೆ ಪಾವತಿದಾರರಿಗೆ ಗೌರವ.
ಕಾಂಗ್ರೆಸ್
– ಮುಂದಿನ 10 ವರ್ಷಗಳಲ್ಲಿ ಜಿಡಿಪಿಯನ್ನು ದ್ವಿಗುಣಗೊಳಿಸುವ ಗುರಿ.
-ಗಿಗ್ ಕೆಲಸಗಾರರು ಮತ್ತು ಅಸಂಘಟಿತ ಕಾರ್ಮಿಕರ ಹಕ್ಕುಗಳ ರಕ್ಷಣೆ ಮತ್ತು ಅವರ ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲು ಕಾನೂನು ರಚನೆ.
– ಮುಕ್ತ ವ್ಯಾಪಾರ, ನಿಯಮ ಆಧಾರಿತ ಅಂತರಾಷ್ಟ್ರೀಯ ವ್ಯಾಪಾರಕ್ಕೆ ಬೆಂಬಲ.
– ಉದ್ಯೋಗ, ವೇತನ ಹಾಗೂ ಹೂಡಿಕೆಗಳು ಮತ್ತು ಲಾಭದ ದೃಷ್ಠಿಯಲ್ಲಿ ತೆರಿಗೆ ನೀತಿಗಳಿಗೆ ಮರುನಿರ್ದೇಶನ.
-
ಉತ್ತಮ ಗುಣಮಟ್ಟದ ಶಿಕ್ಷಣ
ಬಿಜೆಪಿ
– ಕೇಂದ್ರೀಕೃತ ಧನಸಹಾಯ, ಸಾಮರ್ಥ್ಯ ವೃದ್ಧಿ, ಮೂಲಸೌಕರ್ಯ ಉನ್ನತೀಕರಣ ಮತ್ತು ಮೀಸಲಾದ ಸಂಶೋಧನಾ ಅನುದಾನಗಳ ಮೂಲಕ ಅಸ್ತಿತ್ವದಲ್ಲಿರುವ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವುದನ್ನು ಮುಂದುವರಿಸುವುದು.
– ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಕಡ್ಡಾಯವಾಗಿ ಶಾಲಾ ಹಂತದಲ್ಲಿ ಕ್ರಿಯಾತ್ಮಕ ಕಲಿಕೆಯ ಪಠ್ಯಕ್ರಮವನ್ನು ಅಳವಡಿಸಿಕೊಳ್ಳುವುದು. ಉನ್ನತ ಶಿಕ್ಷಣದಲ್ಲಿ ಉದಯೋನ್ಮುಖ ತಂತ್ರಜ್ಞಾನ ಜೋಡಣೆಯ ಪಠ್ಯಕ್ರಮ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಅಳವಡಿಸುವುದು.
ಕಾಂಗ್ರೆಸ್
– ಸಾರ್ವಜನಿಕ ಶಾಲೆಗಳಲ್ಲಿ 1ನೇ ತರಗತಿಯಿಂದ 12ನೇ ತರಗತಿವರೆಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣ ನೀಡಲು ಶಿಕ್ಷಣ ಹಕ್ಕು ಕಾಯಿದೆಗೆ ತಿದ್ದುಪಡಿ.
– ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿ ಎನ್‌ಇಪಿ ಮರುಪರಿಶೀಲನೆ ಮತ್ತು ತಿದ್ದುಪಡಿ.
– ಶಾಲಾ ಮತ್ತು ಕಾಲೇಜು ಪಠ್ಯಕ್ರಮಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಸಲುವಾಗಿ ಎಸ್‌ಟಿಇಎಂ ವಿಷಯಗಳ ಅಧ್ಯಯನಕ್ಕೆ ಒತ್ತು .
-
ರಾಷ್ಟ್ರೀಯ ಭದ್ರತೆ
ಬಿಜೆಪಿ
– ಹೆಚ್ಚು ಪರಿಣಾಮಕಾರಿ ಕಾರ್ಯಾಚರಣೆಗಳಿಗಾಗಿ ಮಿಲಿಟರಿ ಥಿಯೇಟರ್ ಕಮಾಂಡ್‌ಗಳ ಹೆಚ್ಚಳ.
– ಇಂಡೋ-ಚೀನಾ, ಇಂಡೋ-ಪಾಕಿಸ್ತಾನ ಮತ್ತು ಇಂಡೋ-ಮ್ಯಾನ್ಮಾರ್ ಗಡಿಗಳಲ್ಲಿ ದೃಢವಾದ ಮೂಲಸೌಕರ್ಯಗಳ ಅಭಿವೃದ್ಧಿ.
– ನಕ್ಸಲ್ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳನ್ನು ತಲುಪಿಸುವುದು.
– ಯಾವುದೇ ಬೆದರಿಕೆಗಳನ್ನು ತ್ವರಿತವಾಗಿ ನಿರ್ವಹಿಸಲು ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಉಪಕರಣಗಳು ಮತ್ತು ತಂತ್ರಜ್ಞಾನದೊಂದಿಗೆ ಸಶಸ್ತ್ರ ಪಡೆಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು ಮತ್ತಷ್ಟು ಬಲಗೊಳಿಸುವುದು.
ಕಾಂಗ್ರೆಸ್
– ಅಗ್ನಿಪಥ್ ಯೋಜನೆಯನ್ನು ರದ್ದತಿ.
– ಸಮಗ್ರ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ ರೂಪಿಸುವುದು.
– ಪ್ರಸ್ತುತ ಎದುರಾಗಿರುವ ಎರಡು ಸವಾಲನ್ನು ಎದುರಿಸಲು ಹೊಸ ಕಾರ್ಯಾಚರಣೆ.
– ಪಾರದರ್ಶಕತೆ ಮತ್ತು ಮಿಲಿಟರಿ ಒಮ್ಮತದ ಖಾತ್ರಿಗಾಗಿ ಸಿಡಿಎಸ್‌ಅನ್ನು ನೇಮಿಸುವ ಪ್ರಕ್ರಿಯೆ ಅರಂಭ.
– 2014ರ ಫೆಬ್ರವರಿ 26ರ ಯುಪಿಎ ಸರ್ಕಾರದ ಆದೇಶಕ್ಕೆ ಅನುಗುಣವಾಗಿ ಒಂದು ಶ್ರೇಣಿ – ಒಂದು ಪಿಂಚಣಿ ಜಾರಿ.
-
ಪರಿಸರವನ್ನು ಸಂರಕ್ಷಣೆ
ಇತ್ತೀಚಿನ ವರ್ಷಗಳಲ್ಲಿ ಪರಿಸರ ಸಮಸ್ಯೆಗಳು ರಾಜಕೀಯ ಪಕ್ಷಗಳ ಪ್ರಣಾಳಿಕೆಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. ಅಂತೆಯೇ ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಪ್ರಣಾಳಿಕೆಗಳಲ್ಲಿ ಪರಿಸರ ರಕ್ಷಣೆಯ ಬಗ್ಗೆ ಮಾತನಾಡುತ್ತಿವೆ.
ಬಿಜೆಪಿ
– ರಾಷ್ಟ್ರೀಯ ಕ್ಲೀನ್ ಏರ್ ಪ್ರೋಗ್ರಾಂ (ಎನ್‌ಸಿಎಪಿ) – ರಾಷ್ಟ್ರದ ಎಲ್ಲ ಪ್ರದೇಶಗಳಲ್ಲಿ ಗೊತ್ತುಪಡಿಸಿದ ವಾರ್ಷಿಕ ಸರಾಸರಿಗೆ ಅನುಗುಣವಾಗಿ ಗಾಳಿಯ ಗುಣಮಟ್ಟ ಸುಧಾರಣೆ ಮತ್ತು ನಿರ್ವಹಣೆ. ವಿಶೇಷವಾಗಿ 2029ರ ವೇಳೆಗೆ 60 ನಗರಗಳಲ್ಲಿ ರಾಷ್ಟ್ರೀಯ ವಾಯು ಗುಣಮಟ್ಟ ಸುಧಾರಣೆ.
– ಎಲ್ಲ ಪ್ರಮುಖ ನದಿಗಳ ಆರೋಗ್ಯ ಮತ್ತು ಶುಚಿತ್ವದ ಸುಧಾರಣೆಗೆ ಕ್ರಮ.
ಕಾಂಗ್ರೆಸ್
– ವಾಯು ಮಾಲಿನ್ಯದ ಸಮಸ್ಯೆಯನ್ನು ತುರ್ತಾಗಿ ನಿಭಾಯಿಸಲು ಎನ್‌ಸಿಎಪಿ ಬಲಪಡಿಸುವುದು.
– ಪರಿಸರ ಮಾನದಂಡಗಳನ್ನು ಜಾರಿಗೊಳಿಸಲು, ಮೇಲ್ವಿಚಾರಣೆ ಮಾಡಲು ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ಹವಾಮಾನ ಬದಲಾವಣೆ ಯೋಜನೆಗಳನ್ನು ಜಾರಿಗೊಳಿಸಲು ಸ್ವತಂತ್ರ ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆ ಪ್ರಾಧಿಕಾರ ರಚನೆ.
ಈ ಪ್ರಮುಖ 10 ಅಂಶಗಳ ಬಗ್ಗೆ ಎರಡೂ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಮಾತನಾಡಿವೆ. ಇವುಗಳಲ್ಲದೆ, ಕಾಂಗ್ರೆಸ್ – ಕಾರ್ಮಿಕರು, ಶೋಷಿತ ಸಮುದಾಯಕ್ಕೆ ನಾನಾ ಭರವಸೆಗಳನ್ನು ನೀಡಿದೆ. ಬಿಜೆಪಿ ಕೂಡ ಕಳೆದ 10 ವರ್ಷಗಳಲ್ಲಿ ಭಾರೀ ಸಾಧನೆಗಳನ್ನು ಮಾಡಿರುವುದಾಗಿ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದೆ.