ಲೋಕಸಭಾ ಚುನಾವಣೆ | ಟಿಕೆಟ್ ಘೋಷಣೆ ಬೆನ್ನಲ್ಲೇ ರಾಜ್ಯದಲ್ಲಿ ಬಿಜೆಪಿ ವಿರುದ್ಧ ಭಾರೀ ಬಂಡಾಯ; ಕಾರಣವೇನು?

Date:

Advertisements

ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕರ್ನಾಟಕದಲ್ಲಿ ಬಿಜೆಪಿ ಹಿಂದೆಂದೂ ಕಾಣದ ಭಿನ್ನಾಭಿಪ್ರಾಯ, ಬಂಡಾಯ ಎದುರಿಸುತ್ತಿದೆ. ರಾಜ್ಯದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. 20 ಅಭ್ಯರ್ಥಿಗಳ ಪಟ್ಟಿಯಲ್ಲಿ 8 ಮಂದಿ ಹಾಲಿ ಸಂಸದರನ್ನು ಕೈಬಿಟ್ಟು, ಎಂಟು ಹೊಸ ಮುಖಗಳಿಗೆ ಮಣೆ ಹಾಕಿದೆ. ಹೀಗಾಗಿ, ಟಿಕೆಟ್‌ ಕಳೆದುಕೊಂಡ ಸಂಸದರು ಅಸಮ್ಮತಿ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಸಮ್ಮತಿಸಲೂ ಆಗದೆ, ವಿರೋಧಿಸಲೂ ಆಗದೆ ವಿಲವಿಲ ಒದ್ದಾಡುತ್ತಿದ್ದಾರೆ.

ಟಿಕೆಟ್‌ ಕಳೆದುಕೊಂಡ ಮೈಸೂರು-ಕೊಡಗು ಹಾಲಿ ಸಂಸದ ಪ್ರತಾಪ್‌ ಸಿಂಹ, ಟಿಕೆಟ್‌ ಘೋಷಣೆಗೂ ಮುನ್ನವೇ ಫೇಸ್‌ಬುಕ್‌ ಲೈವ್‌ನಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಟಿಕೆಟ್ ಪಡೆದುಕೊಂಡಿರುವ ರಾಜವಂಶಸ್ಥ ಯದುವೀರ್ ಒಡೆಯರ್ ಅವರ ಹಿಂದಿನ ವಂಶಸ್ಥರನ್ನು ತೆಗಳಿದ್ದಾರೆ. ಅಲ್ಲದೆ, ಜನಸಂಪರ್ಕವಿಲ್ಲದೆ ‘ಎಸಿ ರೂಮ್‌’ನಲ್ಲಿದ್ದವರು ಜನರ ಮಧ್ಯೆ ಬಂದರೆ ಸ್ವಾಗತವೆಂದು ವ್ಯಂಗ್ಯವಾಡಿದ್ದಾರೆ.

ಬೆಂಗಳೂರು ಉತ್ತರ ಸಂಸದ ಡಿವಿ ಸದಾನಂದ ಗೌಡ ಅವರನ್ನು ಕೈಬಿಡಲಾಗಿದೆ. ಬಿಜೆಪಿಯ ಈ ನಿರ್ಧಾರವು ಒಕ್ಕಲಿಗರ ಪ್ರಾಬಲ್ಯ ಇರುವ 12 ಕ್ಷೇತ್ರಗಳಲ್ಲಿ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿತ್ತು. ಆದರೆ, ಅದನ್ನು ಸರಿದೂಗಿಸಿಕೊಳ್ಳಲು ಒಕ್ಕಲಿಗರೇ ಆದ ಉಡುಪಿ-ಚಿಕ್ಕಮಗಳೂರು ಸಂಸದೆ, ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಬಿಜೆಪಿ ಕಣಕ್ಕಿಳಿಸಲಾಗಿದೆ. ಆದರೆ, ತಮ್ಮನ್ನು ಬೆಂಗಳೂರು ಉತ್ತರಕ್ಕೆ ಸ್ಥಳಾಂತರಿಸಿರುವುದು, ತಮ್ಮ ವಿರುದ್ಧದ ರಾಜಕೀಯ ಪಿತೂರಿಯೆಂದು ಕರಂದ್ಲಾಜೆ ಆರೋಪಿಸಿದ್ದಾರೆ.

Advertisements

ಪ್ರತಾಪ್ ಬದಲಿಗೆ ಕಣಕ್ಕಿಳಿದ ಒಡೆಯರ್

ಬಿಜೆಪಿ ಮಣೆ ಹಾಕಿರುವ 8 ಹೊಸ ಮುಖಗಳಲ್ಲಿ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಪ್ರಮುಖರು. ಮೈಸೂರು ಒಡೆಯರ್ ರಾಜವಂಶಸ್ಥನಾಗಿರುವ ಯದುವೀರ್‌ಗೆ ಮೈಸೂರು-ಕೊಡಗು ಕ್ಷೇತ್ರದ ಜನರು ಮತ ನೀಡಬಹುದು ಎಂದು ಬಿಜೆಪಿ ಲೆಕ್ಕಾಚಾರ ಹಾಕಿದೆ.

ಯದುವೀರ್ ಅವರ ದೊಡ್ಡಪ್ಪ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ನಾಲ್ಕು ಅವಧಿಗೆ ಕಾಂಗ್ರೆಸ್‌ನಿಂದ ಸಂಸದರಾಗಿದ್ದರು. ಆದರೆ, 1991ರ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಸೇರಿದ ಅವರು, ಸೋಲುಂಡಿದ್ದರು. ಇದೀಗ, ಶ್ರೀಕಂಠದತ್ತರ ವಂಶಸ್ಥ ಯದುವೀರ್ ಬಿಜೆಪಿಯಿಂದ ಚುನಾವಣಾ ಕಣಕ್ಕಿಳಿದಿದ್ದಾರೆ.

ಯದುವೀರ್‌ಗೆ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆಯೇ ಟಿಕೆಟ್‌ ಕಳೆದುಕೊಂಡ ಪ್ರತಾಪ್ ಸಿಂಹ ಟ್ವೀಟ್‌ ಮಾಡಿ ವ್ಯಂಗ್ಯವಾಗಿ ಶುಭಾಶಯ ಕೋರಿದ್ದಾರೆ. ಯದುವೀರ್ ಅವರು ರಾಜನ ವೇಶಭೂಷಣ ಧರಿಸಿದ್ದ ಉಡುಗೆಯಲ್ಲಿದ್ದ ಫೋಟೋವನ್ನು ಎರಡೆರಡು ಬಾರಿ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದು, ಪರೋಕ್ಷವಾಗಿ ‘ಎಸಿ ರೂಮ್‌’ನಲ್ಲಿದ್ದ ರಾಜ ಎಂಬುದನ್ನು ನೆನಪಿಸಿ ಕುಟುಕಿದ್ದಾರೆ.

 

2023ರ ಡಿಸೆಂಬರ್‌ನಲ್ಲಿ ಸಂಸತ್ತಿಗೆ ನುಗ್ಗಿದವರಿಗೆ ನೀಡಲಾಗಿದ್ದ ಪಾಸ್‌ನಲ್ಲಿ ಪ್ರತಾಪ್‌ ಸಿಂಹ ಸಹಿಯಿತ್ತು. ಪ್ರತಾಪ್ ಅವರೇ ಆ ಇಬ್ಬರಿಗೂ ಪಾಸ್‌ ನೀಡಿ, ಟೀಕೆಗೆ ಗುರಿಯಾಗಿದ್ದರು. ಪತ್ರಕರ್ತರಾಗಿದ್ದ ಪ್ರತಾಪ್ ಸಿಂಹ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ತಮ್ಮ ಮೊದಲ ಅವಧಿಯಲ್ಲಿ ಹೇಳಿಕೊಳ್ಳುವಂತಹ ಯಾವುದೇ ಕೆಲಸ ಮಾಡಲಿದ್ದರೂ, 2019ರಲ್ಲಿ ಮೋದಿ ಅಲೆಯಲ್ಲಿ ತೇಲಿಕೊಂಡು ಗೆದ್ದಿದ್ದರು. ಆದರೆ, ಈ 5 ವರ್ಷಗಳಲ್ಲಿ ಕ್ಷೇತ್ರದ ಜನ ಮಾತ್ರವಲ್ಲ, ಬಿಜೆಪಿ ಕಾರ್ಯಕರ್ತರೇ ಪ್ರತಾಪ್ ವಿರುದ್ಧ ಅಸಮಾಧಾನಗೊಂಡಿದ್ದರು.

ಕ್ಷೇತ್ರದಲ್ಲಿ ಕೆಲಸ ಮಾಡದಿದ್ದರೂ, ಟಿಪ್ಪು ವಿರೋಧಿ ಹೇಳಿಕೆ, ಮಹಿಷ ವಿರೋಧಿ ಆಚರಣೆ, ಹನುಮ ಜಯಂತಿ ಹೆಸರಿನಲ್ಲಿ ಸಂಘಪರಿವಾರದ ಕಾಲಾಳಿನಂತೆ ಪ್ರತಾಪ್ ಸಿಂಹ ದುಡಿದ್ದರು. ಆದರೂ, ಈ ಬಾರಿ ಅವರಿಗೆ ಟಿಕೆಟ್ ದೊರೆತಿಲ್ಲ. ಸಂಘಪರಿವಾರವೂ ಅವರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಲಿಲ್ಲ. ತಮಗೆ ಟಿಕೆಟ್‌ ಸಿಗದೇ ಕಂಗಾಲಾಗಿರುವ ಪ್ರತಾಪ್ ಸಿಂಹ, ಅಸಮಾಧಾನವನ್ನು ಮುಕ್ತವಾಗಿ ಹೊರಹಾಕಲಾಗದೆ, ಬಂಡಾಯದ ಮಾತನ್ನೂ ಆಡಲಾಗದೆ, ಇತ್ತ ಒಪ್ಪಿಕೊಳ್ಳಲೂ ಆಗದೆ ತ್ರಿಶಂಕು ಸ್ಥಿತಿಯಲ್ಲಿ ಜೋತಾಡುತ್ತಿದ್ದಾರೆ.

ಮಾವನ ಜೆಡಿಎಸ್‌ ಬಿಟ್ಟು ಬಿಜೆಪಿಗೆ ಬಂದ ಅಳಿಯ!

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಅಳಿಯ, ಖ್ಯಾತ ಹೃದ್ರೋಗ ತಜ್ಞ ಮಂಜುನಾಥ್ ಅವರು ಡಿಕೆ – ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌, ಸಂಸದ ಡಿ.ಕೆ ಸುರೇಶ್‌ – ಸಹೋದರ ಅಭೇದ್ಯ ಕೋಟೆಯಾಗಿರುವ ಬೆಂಗಳೂರು ಗ್ರಾಮಾಂತರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಡಿ.ಕೆ ಸುರೇಶ್‌ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ.

ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯಲ್ಲಿ ದಶಕದ ಕಾಲ ನಿರ್ದೇಶಕರಾಗಿದ್ದ ಡಾ. ಸಿ.ಎನ್. ಮಂಜುನಾಥ್ ಅವರು 2024ರ ಜನವರಿಯಲ್ಲಿ ನಿವೃತ್ತರಾಗಿದ್ದಾರೆ. ಅವರು ಇದೀಗ, ಚುನಾವಣಾ ರಾಜಕೀಯಕ್ಕೆ ಧುಮುಕಿದ್ದಾರೆ. ಆದರೆ, ಅಚ್ಚರಿಯ ಸಂಗತಿಯೆಂದರೆ ಅವರು ಜೆಡಿಎಸ್ ವರಿಷ್ಠ ದೇವೇಗೌಡರ ಕುಟುಂಬದವಾಗಿದ್ದರೂ, ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.

ಮೂಲೆಗುಂಪಾದ ಸಿ.ಟಿ ರವಿ

ವಿಧಾನಸಭಾ ಚುನಾವಣೆಯಲ್ಲಿ ಸಿ.ಟಿ ರವಿ ಸೋತ ಬಳಿಕ, ಉಡುಪಿ-ಚಿಕ್ಕಮಗಳೂರು ಕ್ಷೇತ್ರವು ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಸಿ.ಟಿ ರವಿ ನಡುವಿನ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿತ್ತು. ಹೇಗಾದರೂ ಮಾಡಿ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಟಿಕೆಟ್‌ ತೆಗೆದುಕೊಳ್ಳಬೇಕೆಂದು ಸಿ.ಟಿ ರವಿ ಹವಣಿಸುತ್ತಿದ್ದರು. ಇತ್ತೀಚೆಗೆ, ಶೋಭಾ ವಿರುದ್ಧ ಪಕ್ಷದ ಕಾರ್ಯಕರ್ತರು ‘ಗೋ ಬ್ಯಾಕ್ ಶೋಭಾ’ ಘೋಷಣೆಗಳನ್ನೂ ಮೊಳಗಿಸಿದ್ದರು.

ಹೀಗಾಗಿ, ಕರಂದ್ಲಾಜೆಗೆ ಈ ಬಾರಿ ಟಿಕೆಟ್ ದೊರೆಯುವುದಿಲ್ಲ. ಸಿ.ಟಿ ರವಿಗೆ ಟಿಕೆಟ್‌ ಸಿಕ್ಕರೂ ಸಿಗಬಹುದು ಎನ್ನಲಾಗಿತ್ತು. ಆದರೆ, ಅದೆರಡೂ ಆಗಲಿಲ್ಲ. ಕರಂದ್ಲಾಜೆಯನ್ನು ಬೆಂಗಳೂರು ಉತ್ತರಕ್ಕೆ ವರ್ಗಾಯಿಸಿದ ಬಿಜೆಪಿ, ಉಡುಪಿ-ಚಿಕ್ಕಮಗಳೂರಿನಲ್ಲಿ ಎಂಎಲ್‌ಸಿ ಕೋಟಾ ಶ್ರೀನಿವಾಸ ಪೂಜಾರಿಗೆ ಟಿಕೆಟ್‌ ಕೊಟ್ಟಿದೆ. ಸಂಘಪರಿವಾರದ ಮತ್ತೊಬ್ಬ ಕಾಲಾಳು ಸಿ.ಟಿ ರವಿಯನ್ನು ಮೂಲೆಗೆ ದೂಡಿದೆ.

ಸಿಟ್ಟಿಗೆದ್ದ ಈಶ್ವರಪ್ಪ

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಪುತ್ರ ಕೆ.ಇ.ಕಾಂತೇಶ್ ಅವರಿಗೆ ಹಾವೇರಿಯಲ್ಲಿ ಟಿಕೆಟ್ ನೀಡುವಂತೆ ಬಿಜೆಪಿ ಮುಂದೆ ಬೇಡಿಕೆ ಇಟ್ಟಿದ್ದರು. ಅದರೆ, ಈಗ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಲಾಗಿದೆ. ಒಲ್ಲದ ಮನಸ್ಸಿನಲ್ಲಿದ್ದ ಬೊಮ್ಮಾಯಿ ಮತ್ತೆ ಚುನಾವಣೆಯನ್ನು ಎದುರಿಸಬೇಕಾಗಿದೆ. ಇತ್ತ, ಕುರುಬ ಸಮುದಾಯದ ಪ್ರಬಲ ನಾಯಕರಾದ ಈಶ್ವರಪ್ಪ ಅಸಮಾಧಾನಗೊಂಡಿದ್ದು, ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ತಮಗೆ ‘ಮೋಸ’ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾರ್ಚ್ 15ರ ಶುಕ್ರವಾರದಂದು ಈಶ್ವರಪ್ಪ ತಮ್ಮ ಅನುಯಾಯಿಗಳ ಸಭೆ ಕರೆದಿದ್ದು, ಹಾವೇರಿಯಿಂದ ತಮ್ಮ ಪುತ್ರನನ್ನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಸಿದ್ದರಾಗಿದ್ದಾರೆ.

ಪರಿವಾರದ ವಿರುದ್ಧ ಗುಡುಗಿದ ರೇಣುಕಾಚಾರ್ಯ

ದಾವಣಗೆರೆಯಲ್ಲಿ ಹಾಲಿ ಸಂಸದ ಜಿ.ಎಂ ಸಿದ್ದೇಶ್ವರ್ ವಿರುದ್ಧ ಅಸಮಾಧಾನವಿದೆ. ಹೀಗಾಗಿ, ತಮಗೆ ಟಿಕೆಟ್ ನೀಡಬೇಕೆಂದು ರೇಣುಕಾಚಾರ್ಯ ಬಿಜೆಪಿ ನಾಯಕರನ್ನು ಒತ್ತಾಯಿಸಿದ್ದರು. ಆದರೆ, ಸಿದ್ದೇಶ್ವರ್‌ಗೂ, ರೇಣುಕಾಚಾರ್ಯಗೂ ಟಿಕೆಟ್ ನೀಡದ ಬಿಜೆಪಿ ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್‌ರನ್ನು ಹೊಸ ಮುಖವೆಂದು ಬಿಂಬಿಸಿ ಟಿಕೆಟ್ ನೀಡಿದೆ. ಸಿದ್ದೇಶ್ವರ್‌ಗೆ ಟಿಕೆಟ್ ನೀಡದರೇನು? ಅವರ ಪತ್ನಿಗೆ ಟಿಕೆಟ್‌ ನೀಡದರೇನು? ಎರಡೂ ಒಂದೇ ಅಲ್ಲವೆ ಎಂದಿರುವ ರೇಣುಕಾಚಾರ್ಯ, “ಇದೇನು ಪರಿವಾರ ರಾಜಕಾರಣವಾ” ಎಂದು ಗುಡುಗಿದ್ದಾರೆ.

ಬಿಜೆಪಿ ಮೂಲಗಳ ಪ್ರಕಾರ, ಚಾಮರಾಜನಗರದಲ್ಲಿ ಬಾಲರಾಜ್‌ ಮತ್ತು ಕರಂದ್ಲಾಜೆ ಹಾಗೂ ಬೊಮ್ಮಾಯಿಗೆ ಟಿಕೆಟ್‌ ಪಡೆಯುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಇನ್ನು, ಯಡಿಯೂರಪ್ಪ ಅವರ ಬದ್ದ ವಿರೋಧಿ ಎನ್ನಲಾಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಅವರ ಬೆಂಬಲಿಗಾರಾದ ಈಶ್ವರಪ್ಪ ಮತ್ತು ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್ ಟಿಕೆಟ್‌ ವಂಚಿತರಾಗಿದ್ದಾರೆ.

ಹೊಸ ಮುಖಗಳ ಪೈಕಿ 43 ವರ್ಷದ ಬ್ರಿಜೇಶ್ ಚೌಟ ದಕ್ಷಿಣ ಕನ್ನಡದಿಂದ ಸ್ಪರ್ಧಿಸಿದ್ದಾರೆ. ಅವರು 2003 ರಿಂದ 2010 ರವರೆಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.

ಹೊಸ ಮುಖಗಳಲ್ಲಿ ಚಿಕ್ಕೋಡಿಯಿಂದ ಅಣ್ನಾ ಸಾಹೇಬ್ ಶಂಕರ್ ಜೊಲ್ಲೆ, ಬಾಗಲಕೋಟೆಯಿಂದ ಪಿ.ಸಿ ಗದ್ದಿಗೌಡರ, ಕೊಪ್ಪಳದಿಂದ ಬಸವರಾಜ ಕ್ಯಾವತ್ತೂರ, ಚಾಮರಾಜನಗರದಿಂದ ಎಸ್‌. ಬಾಲರಾಜ್‌ ಕಣಕ್ಕಿಳಿದಿದ್ದಾರೆ.

ಇನ್ನೂ 8 ಕ್ಷೇತ್ರಗಳಿಗೆ –  ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಹಾಸನ, ಚಿತ್ರದುರ್ಗ, ಬೆಳಗಾವಿ, ರಾಯಚೂರು ಮತ್ತು ಉತ್ತರ ಕನ್ನಡ – ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ. ಈ ಎಂಟರ ಪೈಕಿ ಮೂರು ಕ್ಷೇತ್ರಗಳನ್ನು – ಕೋಲಾರ, ಮಂಡ್ಯ ಮತ್ತು ಹಾಸನ – ತಮ್ಮ ಮಿತ್ರ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಡುವ ಸಾಧ್ಯತೆ ಇದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X