“ಕಳೆದ 10 ವರ್ಷದಿಂದ ಸಂಸದರಾಗಿರುವ ರಾಘವೇಂದ್ರ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದ್ದಾರೆ. ಪ್ರಧಾನಿ ಮೋದಿ ಸರ್ಕಾರ ರಾಷ್ಟ್ರದಲ್ಲಿ ವಿದ್ಯಾಭ್ಯಾಸ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ. ರಾಘವೇಂದ್ರ ಅವರ ಪ್ರಕಾರ ಅಭಿವೃದ್ಧಿ ಅಂದರೆ ರಸ್ತೆ, ವಿಮಾನ ನಿಲ್ದಾಣ ಕಟ್ಟಡ ಕಟ್ಟುವುದು. ಅದನ್ನೇ ಅಭಿವೃದ್ಧಿ ಎಂದು ಭಾವಿಸಿದ್ದಾರೆ” ಎಂದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ನಾಗರಾಜ್ ಗೌಡ ಟೀಕಿಸಿದರು.
ಈ ದಿನ.ಕಾಂ ಜೊತೆ ಮಾತನಾಡಿದ ಅವರು, “ಶಿಕಾರಿಪುರ ತಾಲೂಕಿನ ರೈತರಿಗೆ ಕೇವಲ ಏತ ನೀರಾವರಿ ಯೋಜನೆ ಮಾಡಿದ್ದೀವಿ ಅಂತ ಹೇಳುತ್ತಾ ಇದ್ದಾರೆ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರ ಹೋರಾಟ ಪಾದಯಾತ್ರೆಯ ಫಲವಾಗಿ ಕಳೆದ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಶಿಕಾರಿಪುರ ಸೊರಬ ತಾಲೂಕಿಗೆ ನಿರಾವರಿಗೆ ಅನುದಾನ ಬಿಡುಗಡೆ ಮಾಡಲಾಯಿತು. ಶಿಕಾರಿಪುರ ತಾಲೂಕಿನಲ್ಲಿ ಅತಿ ಹೆಚ್ಚು ಬಗರ್ ಹುಕುಂ ರೈತರು ಇನಾಮ್ ಭೂಮಿ ಹೊಂದಿರುವ ರೈತರು ಆಗಿರಬಹುದು. ಶರಾವತಿ ಮುಳುಗಡೆ ಸಂತ್ರಸ್ತರು ಇವರೆಲ್ಲ ಶಿಕಾರಿಪುರದಲ್ಲಿ ವಾಸಿಸುತ್ತಿದ್ದಾರೆ.
ಆದರೆ, ರಾಘವೇಂದ್ರ ಅವರ ತಂದೆ ಯಡಿಯೂರಪ್ಪನವರು 4 ಬಾರಿ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದರು. ಯಾರೇ ಒಬ್ಬ ರೈತರಿಗೆ ಬಗರ್ ಹುಕುಂ ರೈತರು ಯಾವ ರೈತರಿಗೂ ಸಹ ಹಕ್ಕು ಪತ್ರ ಕೊಡಲಿಲ್ಲ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮ ರೈತರು ಬಗರ್ ಹುಕುಂನಲ್ಲಿ ವ್ಯವಸಾಯ ಮಾಡುತ್ತಿದ್ದಾಗ ಭೂಗಳ್ಳರು ಎಂದು ಕೇಸ್ ಹಾಕಿ ತಕ್ಷಣ ರೈತರನ್ನು ತೆರವುಗೊಳಿಸಬೇಕೆಂದು ಆದೇಶ ಮಾಡಿದ್ದರು. ಕೇಸ್ ಹಾಕಿದ್ದಲ್ಲದೆ ಹೈಕೋರ್ಟ್ ನಲ್ಲಿ ಜಮೀನು ವಾಪಸ್ ತೆಗೆದುಕೊಳ್ಳುವ ಕೆಲಸ ಮಾಡಿದ್ದರು.
ಯುಪಿಎ ಸರ್ಕಾರದ ಅವಧಿಯಿಂದಲೂ ರಾಘವೇಂದ್ರ ಸಂಸದರಾಗಿದ್ದಾರೆ. ಇಲ್ಲಿವರೆಗೂ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕು ಪತ್ರ ನೀಡಲಿಲ್ಲ, ಇನಾಮ್ ಭೂಮಿ ರೈತರಿಗೆ ಸಹಾಯ ಮಾಡಲಿಲ್ಲ, ಹಾಗೂ ಅರಣ್ಯ ಒತ್ತುವರಿ ರೈತರಿಗೆ ಕಾನೂನು ಸರಳೀಕರಣ ಮಾಡಿ ಅನುಕೂಲ ಮಾಡಿ ಕೊಡಲಿಲ್ಲ. ಕನಿಷ್ಠ 25 ವರ್ಷದಿಂದ ಸಮಸ್ಯೆ ಬಗೆಹರಿಸಿ ಕೊಡಲಿಲ್ಲ. ಹಾಗಿದ್ದೂ ಯಾವ ಅಭಿವೃದ್ಧಿ ಮಾಡಿದ್ದೀವಿ ಅಂತ ಮತ ಕೇಳಲು ಬರುತ್ತಿದ್ದೀರಾ” ಎಂದು ಪ್ರಶ್ನೆ ಮಾಡಿದ್ದಾರೆ
“ಸನ್ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪ ಅವರು ಗದಗ್ ತನಕ ಏತ ನೀರಾವರಿ ವ್ಯವಸ್ಥೆ ಮಾಡಿದ್ದರು. ಅಲ್ಲಿನ ರೈತರಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಬಂಗಾರಪ್ಪ ಅವರು ಮಾಡಿದ್ದರು. ಶಿಕಾರಿಪುರದಿಂದ ಯಡಿಯೂರಪ್ಪನವರು 4 ಬಾರಿ ಮುಖ್ಯಮಂತ್ರಿ ಆಗಿದ್ದರೂ ಕೂಡ ಒಂದು ಚಾನೆಲ್ ಮುಖಾಂತರ ನೀರು ತರಿಸುವ ಕೆಲಸ ಮಾಡಲಿಲ್ಲ. ಮಧು ಬಂಗಾರಪ್ಪ ಅವರ ಪಾದಯಾತ್ರೆ ಮೂಲಕ ಪುರದ ಕೆರೆಗೆ ನೀರು ತರುವ ಏತ ನೀರಾವರಿ ವ್ಯವಸ್ಥೆ ಆಯಿತು. ಇದರ ದಾಖಲೆ ಕೂಡ ಇದೆ” ಎಂದರು.
ಮೂರನೆಯದಾಗಿ, ರಾಘವೇಂದ್ರ ವಿಮಾನ ನಿಲ್ದಾಣ ಅಥವಾ ರೈಲ್ವೆ ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳುತ್ತಾ ಇದ್ದಾರೆ. ಆರ್ಥಿಕವಾಗಿ ಜನರಿಗೆ 40 ವರ್ಷದಿಂದ ಒಂದೇ ಕುಟುಂಬ ಶಿಕಾರಿಪುರದಲ್ಲಿ ಆಳ್ವಿಕೆ ಮಾಡುತ್ತ ಇದೆ. ಅದೇ ರೀತಿ ಮೂರು ಬಾರಿ ಶಿವಮೊಗ್ಗ ಸಂಸದರಾದ ರಾಘವೇಂದ್ರ ಅವರು ನಮ್ಮ ರೈತಾಪಿ ಜನರಿಗೆ ಆರ್ಥಿಕವಾಗಿ ಸದೃಢವಾಗಿ ನಿಲ್ಲುವಂತ ಯಾವುದೇ ಕೆಲಸ ಮಾಡಲಿಲ್ಲ. ಈ ಬರಪರಿಸ್ಥಿತಿಯಲ್ಲಿ ಅಡಿಕೆ ತೆಂಗು ಬೆಳೆಗಳನ್ನು ಉಳಿಸಿಕೊಳ್ಳಲು ಕಷ್ಟ ಇರುವ ಸಂದರ್ಭದಲ್ಲಿ ರೈತರು ಬಹಳಷ್ಟು ನಲುಗಿ ಹೋಗಿದ್ದಾರೆ” ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಇರುವ ವಿಮಾನ ನಿಲ್ದಾಣ ಮಾದರಿಯ ವಿಮಾನ ನಿಲ್ದಾಣ ನೋಯ್ಡಾದಲ್ಲಿದೆ. ಆದರೆ ಅಲ್ಲಿನ ವಿಮಾನ ನಿಲ್ದಾಣ ರೂ. 250 ಕೋಟಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಆದರೆ ಇದೇ ಶಿವಮೊಗ್ಗದಲ್ಲಿ ರೂ. 450 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ಮಾಡಿದ್ದಾರೆ. ಹಾಗಾದ್ರೆ ಹೆಚ್ಚುವರಿ ರೂ.200 ಕೋಟಿ ಎಲ್ಲಿ ಹೋಯಿತು ಎಂಬ ಸ್ಪಷ್ಟನೆ ಬೇಕಿದೆ.
ಇದರ ಜೊತೆ ಸತತ ಮೂರು ಬಾರಿ ಸಂಸದರಾಗಿರುವ ರಾಘವೇಂದ್ರ ಭದ್ರಾವತಿಯಲ್ಲಿ ವಿ ಐ ಎಸ್ ಎಲ್ ಕಾರ್ಖಾನೆಯನ್ನು ಉಳಿಸಿಕೊಳ್ಳುತ್ತೇವೆ ಎಂದು ಭರವಸೆ ಕೊಡುತ್ತ ಬಂದರು. ಮುಚ್ಚಲು ಬಿಡುವುದಿಲ್ಲ ಅಭಿವೃದ್ಧಿ ಮಾಡುತ್ತೀವಿ ಎಂದರು. ಆದರೂ ಕೊನೆಗೆ ಕಾರ್ಖಾನೆ ಮುಚ್ಚಿತು. ಕೇಂದ್ರ ಸರ್ಕಾರದ 10 ವರ್ಷ ಆಳ್ವಿಕೆಯಲ್ಲಿ ಕಳೆದ ವರ್ಷ ರಾಜ್ಯದಲ್ಲಿ ಸಹ ಬಿಜೆಪಿ ಸರ್ಕಾರವಿತ್ತು. ಆದರೂ ಸಹ ನಮ್ಮ ಶಿವಮೊಗ್ಗ ಜಿಲ್ಲೆ ಸಂಸದರಿಗೆ ವಿ ಐ ಎಸ್ ಎಲ್ ಅಭಿವೃದ್ಧಿ ಮಾಡುವ ಕೆಲಸ ಆಗಲಿಲ್ಲ ಎಂದು ಟೀಕಿಸಿದರು.
ಅದೇ ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಆಗಿದ್ದ ಬಂಗಾರಪ್ಪ ಅವರ ಸಮಯದಲ್ಲಿ ಉಚಿತವಾಗಿ ರೈತರಿಗೆ ವಿದ್ಯುತ್ ನೀಡಲಾಯಿತು. ಅದೇ ರೀತಿ ಗ್ರಾಮೀಣ ಕೃಪಾಂಕ ನೀಡಿ ಸರ್ಕಾರದಲ್ಲಿ ಉದ್ಯೋಗ ಪಡೆಯುವ ಶಕ್ತಿ ನೀಡಿದಂತಹ ಉದಾಹರಣೆ ಇದೆ. ಬಂಗಾರಪ್ಪ ಅವರ ಕಾಲದಲ್ಲಿ ಅನೇಕ ಯೋಜನೆಗಳು ಬಂದವು.
ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪ ಅವರಿಗೆ ಇಡೀ ಜಿಲ್ಲೆ ಹಾಗೂ ರಾಜ್ಯಕ್ಕೆ ಪಕ್ಷತೀತವಾಗಿ ಉಪಕಾರ ಮಾಡುವಂತ ಮನೋಭಾವನೆ ಇದೆ. ಹಾಗೆಯೇ, ಗೀತಾ ಶಿವರಾಜ್ ಕುಮಾರ್, ಬಂಗಾರಪ್ಪ ಅವರ ಮಗಳು. ನಮ್ಮ ಜಿಲ್ಲೆಯಿಂದ ಸ್ಪರ್ಧೆ ಮಾಡುತ್ತಿರುವುದು ನಮಗೆಲ್ಲ ಸಂತಸವಾಗಿದೆ. ಈ ಬಾರಿ ಗೀತಾ ಶಿವರಾಜ್ ಕುಮಾರ್ ಗೆಲ್ಲಿಸಿಯೇ ಗೆಲ್ಲಿಸುತ್ತೇವೆ.
ಸುಳ್ಳು ಭರವಸೆ ಕೊಟ್ಟು ರೈತಾಪಿ ಜನರಿಗೆ ಸ್ಪಂದಿಸದ, ವಿದ್ಯಾವಂತ ಯುವಕರಿಗೆ ಉದ್ಯೋಗ ನೀಡದ, ಎಲ್ಲಾ ಸುಳ್ಳು ಭರವಸೆ ನೀಡಿದ ಶಿವಮೊಗ್ಗ ಸಂಸದ ರಾಘವೇಂದ್ರ ಅವರಿಗೆ ಈ ಬಾರಿ ತಕ್ಕ ಉತ್ತರ ನೀಡುತ್ತೇವೆ” ಎಂದು ಹೇಳಿದರು.
