ಲೋಕಸಭಾ ಚುನಾವಣೆ | ತುಮಕೂರಿನಲ್ಲೇ ಕೊನೆಯಾಗುತ್ತಾ ಸೋಮಣ್ಣ ರಾಜಕೀಯ?

Date:

Advertisements

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟ ಮತ್ತು ಕಾಂಗ್ರೆಸ್‌ ನಡುವೆ ರಾಜ್ಯದಲ್ಲಿ ನೇರ ಹಣಾಹಣಿ ನಡೆಯಲಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ, ಕೆಲವು ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿಗಳ ಘೋಷಣೆಯಾಗಿದೆ. ಬೆರಳೆಣಿಕೆಯಷ್ಟು ಕ್ಷೇತ್ರಗಳಿಗೆ ಕಾಂಗ್ರೆಸ್‌-ಬಿಜೆಪಿ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳು ಯಾರೆಂದು ಪ್ರಕಟಿಸಿವೆ. ಅಂತಹ ಕ್ಷೇತ್ರದಲ್ಲಿ ತುಮಕೂರು ಲೋಕಸಭಾ ಕ್ಷೇತ್ರವೂ ಒಂದು.

ತುಮಕೂರಿನಲ್ಲಿ ಕಾಂಗ್ರೆಸ್‌ನಿಂದ ಮಾಜಿ ಸಂಸದ ಮುದ್ದಹನುಮೇಗೌಡ ಮತ್ತು ಬಿಜೆಪಿಯಿಂದ ಮಾಜಿ ಸಚಿವ ವಿ ಸೋಮಣ್ಣ ಕಣಕ್ಕಿಳಿದಿದ್ದಾರೆ. ಅಂದಹಾಗೆ, ಕಾಂಗ್ರೆಸ್‌ನಲ್ಲಿ ಪ್ರಬಲ ಮುಖಂಡರಾಗಿದ್ದ ಮುದ್ದಹನುಮೇಗೌಡ, ಕೈ ನಾಯಕರ ಮೇಲೆ ಮುನಿಸಿಕೊಂಡು 2022ರಲ್ಲಿ ಬಿಜೆಪಿ ಸೇರಿದ್ದರು. ಈಗ ಮತ್ತೆ ಕಾಂಗ್ರೆಸ್‌ಗೆ ಮರಳಿ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ನಾಯಕರ ಸೂತ್ರದ ಬೊಂಬೆಯಾಗಿದ್ದ ಸೋಮಣ್ಣ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪ್ರಾಬಲ್ಯವಿದ್ದ ಗೋವಿಂದರಾಜನಗರ ಕ್ಷೇತ್ರ ಬಿಟ್ಟು, ಸಿದ್ದರಾಮಯ್ಯ ವಿರುದ್ಧ ವರುಣಾದಲ್ಲಿ ಹಾಗೂ ಪುಟ್ಟರಂಗಶೆಟ್ಟಿ ವಿರುದ್ಧ ಚಾಮರಾಜನಗರದಲ್ಲಿ ಸ್ಪರ್ಧಿಸಿ, ಹೀನಾಯ ಸೋಲು ಕಂಡಿದ್ದರು.

ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ, ಐದು ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಯಲ್ಲಿವೆ. ಎರಡು ಜೆಡಿಎಸ್ ಮತ್ತು ಒಂದು ಬಿಜೆಪಿ ಹಿಡಿತದಲ್ಲಿದೆ. ಅಲ್ಲದೆ, ತುಮಕೂರು ಜಿಲ್ಲೆಯಲ್ಲಿಯೇ ಇಬ್ಬರು ಸಚಿವರೂ ಇದ್ದಾರೆ. ಹೀಗಾಗಿ, ತುಮಕೂರು ಕ್ಷೇತ್ರವನ್ನು ಸರಾಗವಾಗಿ ಗೆಲ್ಲುತ್ತೇವೆಂಬ ನಂಬಿಕೆ ಕಾಂಗ್ರೆಸ್‌ನಲ್ಲಿದೆ.

Advertisements

ಅಲ್ಲದೆ, ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡಬೇಕು. ಅವರು ಅಭ್ಯರ್ಥಿಯಾದರೆ, ಗೆಲ್ಲಿಸಿಕೊಂಡು ಬರುತ್ತೇವೆಂದು ಸಚಿವ ಕೆ.ಎನ್‌ ರಾಜಣ್ಣ ಹೇಳಿದ್ದರು. ಅವರ ಹೇಳಿಕೆಯನ್ನು ಗೃಹ ಸಚಿವ ಜಿ ಪರಮೇಶ್ವರ್ ಕೂಡ ಸಮ್ಮತಿಸಿದ್ದರು. ಜೊತೆಗೆ, ಎರಡು ಬಾರಿ ಶಾಸಕರಾಗಿ, ಒಮ್ಮೆ ಸಂಸದರೂ ಆಗಿದ್ದ ಮುದ್ದಹನುಮೇಗೌಡ ತುಮಕೂರಿನಲ್ಲಿ ತಮ್ಮದೇ ಪ್ರಾಬಲ್ಯವನ್ನೂ ಹೊಂದಿದ್ದಾರೆ. ಕಳೆದ, 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಕಾರಣಕ್ಕೆ ಟಿಕೆಟ್‌ ಕಳೆದುಕೊಂಡಿದ್ದರು, ಬಿಟ್ಟರೆ, ಸೋಲುಂಡಿರಲಿಲ್ಲ.

ಮಾತ್ರವಲ್ಲದೆ, ಮುದ್ದಹನುಮೇಗೌಡ ಪರವಾಗಿ ಜಿಲ್ಲೆಯ ಎಲ್ಲ ಕಾಂಗ್ರೆಸ್‌ ಶಾಸಕರು ಒಗ್ಗಟ್ಟಾಗಿ ನಿಂತಿದ್ದಾರೆ. ಪಕ್ಷದೊಳಗಿನ ಯಾವುದೇ ಬಂಡಾಯ, ವಿರೋಧವಿಲ್ಲದ ಕಾರಣ ಅವರಿಗೆ ಆತಂಕವಿಲ್ಲ. ಜೊತೆಗೆ, ಕಾಂಗ್ರೆಸ್‌ನ ಐದು ಗ್ಯಾರಂಟಿಗಳ ಬಗ್ಗೆಯೂ ಜನರಿಗೆ ಒಲವಿದ್ದು, ಗ್ಯಾರಂಟಿಗೆ ಮತ ಹಾಕುವುದಾಗಿಯೂ ಬಹುತೇಕ ಮತದಾರರು ಹೇಳುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಮುದ್ದಹನುಮೇಗೌಡ ಗೆಲ್ಲುವ ಸಾಧ್ಯತೆಗಳೇ ಹೆಚ್ಚಾಗಿವೆ. ಆದರೆ, ವಿ ಸೋಮಣ್ಣ ಪರಿಸ್ಥಿತಿ ಹಾಗಿಲ್ಲ.

ಬಂಡಾಯದ ಬೇಗುದಿಯನ್ನು ಶಮನ ಮಾಡುವರೇ ಸೋಮಣ್ಣ

ವಿಧಾನಸಭಾ ಚುನಾವಣೆಯಲ್ಲಿ ನಿರುದ್ಯೋಗಿಯಾಗಿದ್ದ ಸೋಮಣ್ಣ, ಮತ್ತೆ ಚಾಲ್ತಿಗೆ ಬರಬೇಕೆಂದು ಭಾರೀ ಕಸರತ್ತು ಮಾಡುತ್ತಿದ್ದಾರೆ. ಸೋಲುಂಡ ನಂತರ ಒಂದಲ್ಲ ಒಂದು ಹುದ್ದೆಗಾಗಿ ಹೆಣಗಾಡುತ್ತಿದ್ದ ಸೋಮಣ್ಣ, ಸದ್ಯಕ್ಕೆ ತುಮಕೂರಿನಲ್ಲಿ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಆದರೆ, ಅವರ ಗೆಲುವು ಮುಳ್ಳಿನ ಹಾದಿಯಾಗಿದೆ.

ಲಿಂಗಾಯತ ಸಮುದಾಯದ ಮುಖಂಡನಾಗಿರುವ ಸೋಮಣ್ಣ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದರೂ, ಗೆಲ್ಲಲಾಗಲಿಲ್ಲ. ಅವರ ಪರವಾಗಿ ಯಡಿಯೂರಪ್ಪ ಆಗಲೀ, ವಿಜಯೇಂದ್ರ ಆಗಲೀ ಪ್ರಚಾರಕ್ಕೆ ಹೋಗಲಿಲ್ಲ. ಈ ಅಪ್ಪ-ಮಗನ ವಿರುದ್ಧ ಸೋಮಣ್ಣ ಅಸಮಾಧಾನಗೊಂಡಿದ್ದರು. ಬಳಿಕ, ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಸೋಮಣ್ಣ ಬೇಡಿಕೆ ಇಟ್ಟಿದ್ದರು. ಇದು, ಯಡಿಯೂರಪ್ಪ-ವಿಜಯೇಂದ್ರ ಮತ್ತು ಸೋಮಣ್ಣ ನಡುವಿನ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಲೂ ಆ ಅಸಮಾಧಾನ ಮುಂದುವರೆದಿದೆ.

ಜೊತೆಗೆ, ಕಳೆದ ಬೊಮ್ಮಾಯಿ ಸರ್ಕಾರದಲ್ಲಿ ಸೋಮಣ್ಣ ಮತ್ತು ಮಾಧುಸ್ವಾಮಿ ಸಚಿವರಾಗಿ, ಸಹೋದ್ಯೋಗಿಗಳಾಗಿದ್ದರೂ, ಅವರಿಬ್ಬರೂ ಒಟ್ಟಿಗೆ ಕೆಲಸ ಮಾಡಿರಲಿಲ್ಲ. ಇಬ್ಬರ ನಡುವೆಯೂ ವೈಮನಸ್ಸಿದೆ. ಕಾಕತಾಳೀಯವೆಂದರೆ, ಈ ಇಬ್ಬರು ಕಳೆದ ಚುನಾವಣೆಯಲ್ಲಿ ಸೋತಿದ್ದಾರೆ.

ತುಮಕೂರು ಜಿಲ್ಲೆಯವರೇ ಆದ, ಮಾಧುಸ್ವಾಮಿ ಲೋಕಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಬಿಜೆಪಿ ಹೈಕಮಾಂಡ್‌ ಹೊರಗಿನವರಾದ ಸೋಮಣ್ಣಗೆ ಟಿಕೆಟ್ ನೀಡಿದೆ. ಇದು, ಸಹಜವಾಗಿಯೇ ಮಾಧುಸ್ವಾಮಿ ಮತ್ತು ಬೆಂಬಲಿಗರಲ್ಲಿ ಅಸಮಾಧಾನ ಹುಟ್ಟುಹಾಕಿದೆ. ಹೀಗಾಗಿ, ಮಾಧುಸ್ವಾಮಿ ಬೆಂಬಲಿಗರು ‘ಗೋ ಬ್ಯಾಕ್ ಸೋಮಣ್ಣ’ ಅಭಿಯಾನವನ್ನೂ ನಡೆಸಿದ್ದಾರೆ.

ಈ ವರದಿ ಓದಿದ್ದೀರಾ?: ಈದಿನ ಸಮೀಕ್ಷೆ– ಭಾಗ 1 | ಬೆಲೆಏರಿಕೆ, ನಿರುದ್ಯೋಗ, ಭ್ರಷ್ಟಾಚಾರ ಹೆಚ್ಚಾಗಿದೆ; ಗ್ಯಾರಂಟಿಗಳಿಗೆ ನಮ್ಮ ಓಟು – ಆದರೆ ಮೋದಿ ಸರ್ಕಾರ ಚೆಂದ ಎಂದ ಜನ

ಬಿಜೆಪಿಯ ಮತ್ತೊಂದು ಬಣ-ಜೆಡಿಎಸ್‌ ಕಾರ್ಯಕರ್ತರು, ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರನ್ನು ಕ್ಷೇತ್ರಕ್ಕೆ ಕರೆತಂದು ಕಣಕ್ಕಿಳಿಸಬೇಕು ಎಂಬ ಅಭಿಲಾಷೆ ವ್ಯಕ್ತಪಡಿಸಿದ್ದರು. ಇದೆಲ್ಲದರ ನಡುವೆ, ಹಾಲಿ ಬಿಜೆಪಿ ಸಂಸದ ಬಸವರಾಜು ಮಾತ್ರ ಸೋಮಣ್ಣ ಪರವಾಗಿ ನಿಂತಿದ್ದಾರೆ. ಹೀಗಾಗಿ, ಬಸವರಾಜು ಬೆಂಬಲಿಗರನ್ನು ಬಿಟ್ಟರೆ, ಬೇರಾರೂ ಸೋಮಣ್ಣಗೆ ಮಣೆ ಹಾಕುವಂತೆ ಕಾಣುತ್ತಿಲ್ಲ. ಇನ್ನು, ಟಿಕೆಟ್‌ ಘೋಷಣೆಗೂ ಮುನ್ನವೇ ಸೋಮಣ್ಣ ಅವರು ದೇವೇಗೌಡರನ್ನೂ-ಕುಮಾರಸ್ವಾಮಿಯನ್ನೂ ಭೇಟಿಯಾಗಿದ್ದರು. ಆದರೆ, ಅವರೆಷ್ಟು ಬೆಂಬಲ ನೀಡುತ್ತಾರೆ ಎಂಬುದು ಇನ್ನೂ ಖಾತ್ರಿ ಇಲ್ಲ.

ಇದೆಲ್ಲದರಿಂದಾಗಿ, ಅತ್ತ ಯಡಿಯೂರಪ್ಪ-ವಿಜಯೇಂದ್ರ ಬೆಂಬಲವೂ ಇಲ್ಲದೆ, ಅತ್ತ ಸಹೋದ್ಯೋಗಿ ಮಾಧುಸ್ವಾಮಿ ಬೆಂಬಲವೂ ಇಲ್ಲದೆ, ಮತ್ತೊಂದೆಡೆ, ಜೆಡಿಎಸ್‌ನ ಪೂರ್ಣ ಸಹಕಾರವೂ ಸಿಗದೆ ಸೋಮಣ್ಣ ಪರಿಸ್ಥಿತಿ ಅತಂತ್ರವಾಗಿದೆ.

ಒಂದು ವೇಳೆ, ಈ ಚುನಾವಣೆಯಲ್ಲಿ ಸೋಮಣ್ಣ ಗೆಲುವು ಸಾಧಿಸದಿದ್ದರೆ, ಬಿಜೆಪಿಯಲ್ಲಿ ಅವರ ಚುನಾವಣಾ ರಾಜಕೀಯ ಕೊನೆಗೊಳ್ಳುವುದು ಖಚಿತವೆಂದು ಹೇಳಲಾಗುತ್ತಿದೆ. ಸೋಮಣ್ಣರನ್ನು ಉಳಿಸುವುದು, ಉರುಳಿಸುವುದು ತುಮಕೂರಿನ ಮತದಾರರ ಕೈಯಲ್ಲಿದೆ, ಕಾದು ನೋಡಬೇಕು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

Download Eedina App Android / iOS

X