ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ರಾಜ್ಯದ ಹಲವಾರು ಕ್ಷೇತ್ರಗಳಿಗೆ ಟಿಕೆಟ್‌ಗಾಗಿ ಪ್ರಮುಖ ಮೂರು ಪಕ್ಷಗಳ ನಾಯಕರು, ಮುಖಂಡರು ಕಸರತ್ತು ನಡೆಸುತ್ತಿದ್ದಾರೆ. ಹಲವರು ತಮಗೇ ಟಿಕೆಟ್ ಸಿಗಬಹುದೆಂಬ ಆಶಾವಾದದಿಂದ ಚುನಾವಣಾ ತಯಾರಿಯನ್ನೂ ಆರಂಭಿಸಿದ್ದಾರೆ. ಅಂತಹ ಕ್ಷೇತ್ರಗಳ ಪೈಕಿ, ತುಮಕೂರು ಸದ್ಯ ಚರ್ಚೆಯೊಂದಿಗೆ ಗಮನ ಸೆಳೆಯುತ್ತಿದೆ.
ತುಮಕೂರನ್ನು ಗೆದ್ದೇ ಗೆಲ್ಲುತ್ತೇವೆಂದು ಕಾಂಗ್ರೆಸ್ ಸಚಿವರು ಹೇಳುತ್ತಿದ್ದಾರೆ. ಬಿಜೆಪಿ ಕ್ಷೇತ್ರ ಉಳಿಸಿಕೊಳ್ಳಬೇಕೆಂದು ಯತ್ನಿಸುತ್ತಿದೆ. ಆದರೆ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಕೂಡ ತುಮಕೂರನ್ನು ತಮ್ಮ ಪಾಲಿಗೆ ಪಡೆದುಕೊಂಡು, ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಹವಣಿಸುತ್ತಿದೆ.
ಸದ್ಯ, ಹಾಲಿ ಸಂಸದ, ಬಿಜೆಪಿ ಮುಖಂಡ ಜಿ.ಎಸ್ ಬಸವರಾಜು ಅವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಲೋಕಸಭಾ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಹೊಸ ಚರ್ಚೆಯನ್ನೂ ಹುಟ್ಟು ಹಾಕಿರುವ ಅವರು, ಕ್ಷೇತ್ರದಲ್ಲಿ ಬಿಜೆಪಿಯಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪರ್ಧಿಸಬಹುದು ಎಂಬ ಕಿಡಿಯನ್ನೂ ಹೊತ್ತಿಸಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೂಗುಮಾರಿ ಎಂದೇ ಖ್ಯಾತಿ ಪಡೆದಿರುವ ಶೋಭಕ್ಕ, ಈ ಬಾರಿ ಆ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ, ಸೋಲುವ ಸಾಧ್ಯತೆಗಳೇ ಹೆಚ್ಚಿವೆ ಎನ್ನಲಾಗಿದೆ. ಹೀಗಾಗಿ, ಅವರು ತುಮಕೂರಿಗೆ ಜಿಗಿಯಬಹುದೆಂಬ ಕುರುಹನ್ನು ಸಂಸದ ಬಸವರಾಜು ನೀಡಿದ್ದಾರೆ.
ಇನ್ನು, ವಿಧಾನಸಭಾ ಚುನಾವಣೆಯಲ್ಲಿ ವರುಣಾ ಮತ್ತು ಚಾಮರಾಜನಗರ– ಎರಡು ದೋಣಿಗಳ ಮೇಲೆ ಕಾಲಿಟ್ಟು, ಸೋಲಿನಲ್ಲಿ ಮುಳುಗಿದ್ದ ಮಾಜಿ ಸಚಿವ ವಿ ಸೋಮಣ್ಣ ಲೋಕಸಭಾ ಚುನಾವಣೆಗೆ ತುಮಕೂರಿನಲ್ಲಿ ಸ್ಪರ್ಧಿಸಲು ಯತ್ನಿಸುತ್ತಿದ್ದಾರೆ. ಆದರೆ, ಬಿಜೆಪಿಯಿಂದ ಸ್ಪರ್ಧಿಸಬೇಕೋ, ಜೆಡಿಎಸ್‌ನಿಂದ ಸ್ಪರ್ಧಿಸಬೇಕೋ– ಕ್ಷೇತ್ರ ಯಾರ ಪಾಲಿಗೆ ಇರುತ್ತದೆ ಎಂಬುದೇ ಅವರಿಗೆ ದೊಡ್ಡ ತಲೆ ನೋವಾಗಿದೆ.
ಇತ್ತೀಚೆಗೆ, ಸೋಮಣ್ಣ ಅವರು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಅಲ್ಲದೆ, ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. ಬಿಜೆಪಿಯ ಹಾಲಿ ಸಂಸದ ಜಿ.ಎಸ್. ಬಸವರಾಜು ಅವರ ಬೆಂಬಲವನ್ನೂ ಗಿಟ್ಟಿಸಿದ್ದಾರೆ. ಕೊರಟಗೆರೆಯ ಕುರುಬ ಸಮುದಾಯದ ಸಿದ್ಧರಬೆಟ್ಟ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅವರನ್ನೂ ಭೇಟಿ ಮಾಡಿ ಮಾತನಾಡಿದ್ದಾರೆ. ಅಲ್ಲದೆ, ಬಿಜೆಪಿ ಹೈಕಮಾಂಡನ್ನೂ ಭೇಟಿ ಮಾಡಿ ಬಂದಿದ್ದಾರೆ. ತುಮಕೂರಿನಲ್ಲಿ ಹೇಗಾದರೂ ಟಿಕೆಟ್ ಪಡೆಯಲೇಬೇಕೆಂದು ತವಕಿಸುತ್ತಿದ್ದಾರೆ.
ಇನ್ನು, ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಜೆಡಿಎಸ್ ಹಳೇ ಮೈಸೂರು ಭಾಗದಲ್ಲಿ ಮೂರ್ನಾಲ್ಕು ಕ್ಷೇತ್ರಗಳನ್ನು ಬಿಜೆಪಿಯಿಂದ ಕಿತ್ತುಕೊಳ್ಳಲು ಚಿಂತಿಸುತ್ತಿದೆ. ಹಾಸನ, ಮಂಡ್ಯ, ಕೋಲಾರ ಮತ್ತು ತುಮಕೂರನ್ನು ಪಡೆಯಬೇಕೆಂಬ ಚಿಂತನೆಯಲ್ಲಿದೆ. ಹೀಗಾಗಿ, ಮಾಜಿ ಪ್ರಧಾನಿ ದೇವೇಗೌಡರು ಸೋಮಣ್ಣ ಅವರನ್ನು ಜೆಡಿಎಸ್‌ಗೆ ಬಂದು ಜೆಡಿಎಸ್‌ನಿಂದ ಸ್ಪರ್ಧಿಸಲು ಕೇಳಿದ್ದಾರೆ ಎಂಬ ಮಾತುಗಳೂ ಇವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಲ್ಲಿ ಸ್ಪರ್ಧಿಸಿ 14,000 ಮತಗಳ ಅಂತದಲ್ಲಿದೇವೇಗೌಡರು ಸೋತಿದ್ದರು. ಈ ಬಾರಿ, ಲಿಂಗಾಯತ, ಒಕ್ಕಲಿಗ ಮತಗಳು ಸಮ ಪ್ರಮಾಣದಲ್ಲಿರುವ ತುಮಕೂರನ್ನು ತಮ್ಮ ಪಾಲಿಗೆ ಪಡೆದು, ಲಿಂಗಾಯತ ಸಮುದಾಯದ ಸೋಮಣ್ಣರನ್ನು ಕಣಕ್ಕಿಳಿಸಿ ಒಕ್ಕಲಿಗರ ಮತಗಳನ್ನೂ ಸೆಳೆದು, ಪಕ್ಷದ ಬಲವರ್ದನೆಗೆ ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿ ಇದೆ. ಆದರೆ, ಸೋಮಣ್ಣಗೆ ಬಿಜೆಪಿ ಬಿಟ್ಟೋಗಲು ಮನಸ್ಸಿಲ್ಲ.
ಅಂದಹಾಗೆ, ಕಳೆದ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ತಾವು ಸೋಲಲು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರೇ ಕಾರಣ. ಅವರಿಬ್ಬರೂ ನನಗೆ ಸಹಕಾರ ನೀಡಲಿಲ್ಲವೆಂದು ಸೋಮಣ್ಣ ಆರೋಪಿಸಿದ್ದರು. ಅಲ್ಲದೆ, ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದಾಗಲೂ ಸೋಮಣ್ಣ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ, ಅವರಿಗೆ ಬಿಜೆಪಿ ಟಿಕೆಟ್ ಸಿಗುವುದೇ ಅನುಮಾನ ಎಂಬ ಮಾತುಗಳೂ ಇವೆ. ರಾಜಕೀಯ ಅಸ್ತಿತ್ವಕ್ಕಾಗಿ ಚುನಾವಣೆಯಲ್ಲಿ ನಿಂತು ಗೆಲ್ಲಲೇಬೇಕೆಂದರೆ, ಅವರು ಕೊನೆ ಗಳಿಗೆಯಲ್ಲಿ ಜೆಡಿಎಸ್‌ಗೆ ಹೋದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ.
ಇದೆಲ್ಲದರ ನಡುವೆ, ಮಾಜಿ ಸಚಿವ, ಹರುಕು ಬಾಯಿಯ ಜೆ.ಸಿ ಮಾಧುಸ್ವಾಮಿ ಅವರು ಬಿಜೆಪಿಯಿಂದ ಕಣಕ್ಕಿಳಿಯಬಹುದು ಎಂಬ ಮಾತುಗಳಿವೆ. ಆದರೆ, ಅವರಿಗೆ ಟಿಕೆಟ್ ನೀಡಿದರೆ, ಬಿಜೆಪಿ ಸೋಲು ಕಟ್ಟಿಟ್ಟ ಬುತ್ತಿ ಎಂದು ಸಂಸದ ಬಸವರಾಜ್ ಹೇಳುತ್ತಿದ್ದಾರೆ. ಅವರಿಗೆ ಟಿಕೆಟ್ ನೀಡಬಾರದೆಂಬ ವಿಚಾರವಾಗಿ ಹೈಕಮಾಂಡ್ ಜೊತೆಗೂ ಮಾತಾಡುತ್ತೇನೆ ಎನ್ನುತ್ತಿದ್ದಾರೆ.
ಹೀಗಾಗಿ, ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದು ಒಂದೆಡೆಯಾದರೆ, ಬಿಜೆಪಿ-ಜೆಡಿಎಸ್ ಮೈತ್ರಿಯ ಭಾಗವಾಗಿ ತುಮಕೂರು ಯಾರಿಗೆ ಎನ್ನುವುದು ಮತ್ತೊಂದೆಡೆ ಚರ್ಚೆ ಹುಟ್ಟು ಹಾಕಿದೆ.
ಬಿಜೆಪಿಯದ್ದು ಈ ಕತೆಯಾದರೆ, ಕಾಂಗ್ರೆಸ್‌ನದ್ದು ಮತ್ತೊಂದು ರೀತಿಯ ವ್ಯಥೆ. ತುಮಕೂರು ಜಿಲ್ಲೆಯವರೇ ಆದ ಸಚಿವ ಕೆ.ಎನ್ ರಾಜಣ್ಣ ಮತ್ತು ಸಚಿವ ಜಿ ಪರಮೇಶ್ವರ್– ನಮ್ಮ ಕ್ಷೇತ್ರದಲ್ಲಿ ನಮ್ಮ ಮಾತೇ ನಡೆಯಬೇಕು. ನಾವು ಹೇಳುವವರಿಗೇ ಟಿಕೆಟ್ ಕೊಡಬೇಕು. ಅವರನ್ನು ನಾವೇ ಗೆಲ್ಲಿಸಿಕೊಂಡು ಬರುತ್ತೇವೆ ಎನ್ನುತ್ತಿದ್ದಾರೆ.
ಈ ವರದಿ ಓದಿದ್ದೀರಾ?: ʼಗೋದಿ ಮೀಡಿಯಾʼ ಅಂದ್ರೇನು? ಇಲ್ಲಿದೆ ನೋಡಿ
ಮೂವರು ಉಪಮುಖ್ಯಮಂತ್ರಿಗಳ ನೇಮಕವಾಗಬೇಕು ಎಂಬ ವಿಚಾರದಲ್ಲಿ ಹೈಕಮಾಂಡ್ ವಿರುದ್ಧ ಪದೇ-ಪದೇ ಕಿಡಿಕಾರುತ್ತಿರುವ ರಾಜಣ್ಣ ಮತ್ತು ಅವರ ಬೆನ್ನಿಗೆ ನಿಂತಿರುವ ಪರಮೇಶ್ವರ್, ತುಮಕೂರಿನಲ್ಲಿ ತಮ್ಮ ಪಾರುಪತ್ಯದಲ್ಲೇ ಎಲ್ಲವೂ ಇರಬೇಕೆಂದು ಬಯಸುತ್ತಿದ್ದಾರೆ. ಅದಕ್ಕೆ, ಅಭ್ಯರ್ಥಿಗಳ ಆಯ್ಕೆಯಲ್ಲಿ ತಮ್ಮದೇ ಅಂತಿಮ ನಿರ್ಧಾರವಾಗಬೇಕು ಎನ್ನುತ್ತಿದ್ದಾರೆ.
ಈ ಹಿಂದೆ, ‘ನಾವೇನು ಹೈಕಮಾಂಡ್ ಗುಲಾಮರೇ’ ಎಂದಿದ್ದ ರಾಜಣ್ಣ, ತುಮಕೂರು ಕ್ಷೇತ್ರದಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮುದ್ದಹನುಮೇಗೌಡ ಇದೀಗ ಮತ್ತೆ ಕಾಂಗ್ರೆಸ್‌ಗೆ ಮರಳಲು ಸಿದ್ದರಾಗಿದ್ದಾರೆ. ಅವರಿಗೇ ಟಿಕೆಟ್ ನೀಡಬೇಕೆಂದು ರಾಜಣ್ಣ ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಅವರ ಪರವಾಗಿ ಪ್ರಚಾರವನ್ನೂ ಆರಂಭಿಸಿದ್ದಾರೆ.
ಆದರೆ, ಎಲ್ಲರನ್ನೂ, ಎಲ್ಲವನ್ನೂ ಅಳೆದು ತೂಗುತ್ತಿರುವ ರಾಜ್ಯ ಕಾಂಗ್ರೆಸ್ ನಾಯಕರು– ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್– ಯಾರ ಹೆಸರನ್ನು ಹೈಕಮಾಂಡ್ ಮುಂದೆ ಪ್ರಸ್ತಾಪಿಸುತ್ತಾರೆ ಎಂಬುದು ಮುಖ್ಯವಾದ ಸಂಗತಿ. ಡಿ.ಕೆ ಶಿವಕುಮಾರ್ ವರ್ಚಸ್ಸನ್ನು ಕಡಿಮೆ ಮಾಡುವುದಕ್ಕಾಗಿಯೇ ಮೂರು ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿದ್ದ ರಾಜಣ್ಣ ಅವರ ಮಾತಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಣೆ ಹಾಕುವುದು ದೂರದ ಮಾತು. ಹೀಗಾಗಿ, ಮುದ್ದಹನುಮೇಗೌಡರಿಗೆ ಟಿಕೆಟ್ ಸಿಗುತ್ತದೆಯೇ ಎಂಬುದು ಪ್ರಶ್ನಾರ್ಥಕವಾಗಿ ಉಳಿದಿದೆ. ಇನ್ನು, ಪರಮೇಶ್ವರ್ ಅವರ ಆಪ್ತ ಮುರಳೀಧರ ಹಾಲಪ್ಪ ಅವರ ಹೆಸರೂ ಕೂಡ ಟಿಕೆಟ್ ರೇಸ್‌ನಲ್ಲಿ ಮುಂದಿದೆ. ಜೊತೆಗೆ ಕಾಂಗ್ರೆಸ್ ವಕ್ತಾರರಾದ ಯುವ ನಾಯಕ ನಿಕೇತ್ ರಾಜ್ ಮೌರ್ಯ, ಮಧುಗಿರಿಯವರು ಎಂಬ ಕಾರಣಕ್ಕೆ, ಕೆಲವರು ನಿಕೇತ್ ರಿಗೆ ಟಿಕೆಟ್ ಕೊಡಬೇಕೆಂದು ಸುದ್ದಿ ಹಬ್ಬಿಸಿದ್ದಾರೆ.
ಕಾಂಗ್ರೆಸ್ ಟಿಕೆಟ್ ಯಾರಿಗೆ ಒಲಿಯಲಿದೆ? ಕ್ಷೇತ್ರ ಬಿಜೆಪಿಗೋ-ಜೆಡಿಎಸ್‌ಗೋ? ಆ ಮೈತ್ರಿಕೂಟದ ಅಭ್ಯರ್ಥಿ ಯಾರಾಗುತ್ತಾರೆ? ಎಲ್ಲ ಪ್ರಶ್ನೆಗಳಿಗೂ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.