ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನದ (ನೂರಾ ಇಪ್ಪತ್ತೆಂಟನೇ ತಿದ್ದುಪಡಿ) ಮಹಿಳಾ ಮೀಸಲಾತಿ ಮಸೂದೆ, 2023 ಅನ್ನು ಲೋಕಸಭೆ ಬುಧವಾರ ಅಂಗೀಕರಿಸಿದೆ.
ಮಸೂದೆಯ ಪರವಾಗಿ 454 ಸಂಸದರು ಮತ ಚಲಾಯಿಸಿದರೆ ಮಸೂದೆ ವಿರುದ್ಧವಾಗಿ ಕೇವಲ 2 ಮತಗಳು ಮಾತ್ರ ಚಲಾವಣೆಯಾಗಿದೆ.ಈ ಮೂಲಕ ಬಹುಮತದೊಂದಿಗೆ ಮಹಿಳಾ ಮೀಸಲಾತಿ ಮಸೂದೆಯು ಅಂಗೀಕಾರವಾಯಿತು.
ಲೋಕಸಭೆಯಲ್ಲಿ ಸುದೀರ್ಘ 8 ಗಂಟೆಗಳ ಕಾಲ ಚರ್ಚೆ ನಂತರ ಸ್ಪೀಕರ್ ಓಂಬಿರ್ಲಾ ಮತದಾನ ಮಾಡುವಂತೆ ಸಂಸದರಲ್ಲಿ ಮನವಿ ಮಾಡಿದರು. ಆನಂತರ ಮತ ಪತ್ರಗಳ ಮೂಲಕ ಸಂಸದರು ಮತ ಚಲಾಯಿಸಿದ್ದಾರೆ. ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ 213 ಸದಸ್ಯರ ಬೆಂಬಲ ಅಗತ್ಯವಿತ್ತು.
ನಾಳೆ (ಸೆ.21) ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗುವುದು. ರಾಜ್ಯಸಭೆಯಲ್ಲೂ ಮಸೂದೆಗೆ ಅಂಗೀಕಾರ ಸಿಕ್ಕ ಬಳಿಕ ರಾಷ್ಟ್ರಪತಿಗಳ ಅನುಮೋದನೆಗೆ ಹೋಗಲಿದೆ. ರಾಷ್ಟ್ರಪತಿಗಳ ಒಪ್ಪಿಗೆ ದೊರೆತ ಬಳಿಕ ಇದು ಕಾನೂನಾಗಿ ರೂಪುಗೊಳ್ಳಲಿದೆ.
ಈ ಸುದ್ದಿ ಓದಿದ್ದೀರಾ? 90 ಅಧಿಕಾರಿಗಳಲ್ಲಿ ಮೂವರು ಮಾತ್ರ ಒಬಿಸಿಗಳು
ಮಸೂದೆ ಮೇಲಿನ ಚರ್ಚೆಯಲ್ಲಿ 60 ಸಂಸದರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಒಬಿಸಿ ಮೀಸಲಾತಿ ಇಲ್ಲದೆ ಈ ಮಸೂದೆ ಅಪೂರ್ಣ ಎಂದು ರಾಹುಲ್ ಗಾಂಧಿ ಹೇಳಿದರು.
ಈ ಬಗ್ಗೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಮೀಸಲಾತಿ ಸಾಮಾನ್ಯ, ಎಸ್‌ಸಿ ಮತ್ತು ಎಸ್‌ಟಿಗೆ ಸಮಾನವಾಗಿ ಅನ್ವಯಿಸುತ್ತದೆ. ಚುನಾವಣೆ ಮುಗಿದ ಕೂಡಲೇ ಜನಗಣತಿ ಮತ್ತು ಡಿಲಿಮಿಟೇಶನ್ ನಡೆಯಲಿದ್ದು, ಸದನದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಶೀಘ್ರದಲ್ಲಿ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿಯು ಪ್ರಮಾಣ ಶೇ. 14ರಷ್ಟು ಮಾತ್ರ ಇದೆ.
ಮೀಸಲಾತಿ ಮಸೂದೆಯನ್ನು ಜಾರಿಗೊಳಿಸಲು ಇದು ಐದನೇ ಪ್ರಯತ್ನವಾಗಿದೆ. ಮಾಜಿ ಪ್ರಧಾನಿಗಳಾದ ದೇವೇಗೌಡರಿಂದ ಹಿಡಿದು ಮನಮೋಹನ್ ಸಿಂಗ್‌ವರೆಗೆ ನಾಲ್ಕು ಬಾರಿ ಈ ಮಸೂದೆ ತರಲು ಪ್ರಯತ್ನಿಸಲಾಗಿತ್ತು. ಆದರೆ ನಾಲ್ಕು ಬಾರಿಯೂ ಇದು ಸಾಧ್ಯವಾಗಿರಲಿಲ್ಲ.