ಸಚಿವ ಕೆ.ಎಚ್ ಮುನಿಯಪ್ಪ ಈ ಬಾರಿಯ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಟಿಕೆಟ್ ರೇಸ್‌ನಲ್ಲಿ ಮುನಿಯಪ್ಪ ಅವರ ಪುತ್ರ ನರಸಿಂಹರಾಜು ಹೆಸರೂ ಸಹ ಕೇಳಿಬರುತ್ತಿದೆ. ಈ ಬಾರಿ, ಮುನಿಯಪ್ಪ ಅಥವಾ ಅವರ ಪುತ್ರ ನರಸಿಂಹರಾಜು ಅವರಿಗೆ ಟಿಕೆಟ್ ನೀಡಬೇಕೆಂಬ ಒತ್ತಡ ಕಾಂಗ್ರೆಸ್ ಮೇಲಿದೆ ಎಂಬುದು ಸ್ಪಷ್ಟವಾಗಿ ತೋರುತ್ತಿದೆ.
ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಮತ್ತು ಅಲ್ಪಸಂಖ್ಯಾತ ಮತದಾರರನ್ನು ಹೊಂದಿರುವ ಕೋಲಾರ ಮೀಸಲು ಕ್ಷೇತ್ರದಲ್ಲಿ ಕೆ.ಎಚ್ ಮುನಿಯಪ್ಪ ದಶಕಗಳಿಂದ ರಾಜಕೀಯ ಹಿಡಿತ ಸಾಧಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮುನಿಯಪ್ಪ ಬಿಜೆಪಿ ಅಭ್ಯರ್ಥಿ ಎಸ್ ಮುನಿಸ್ವಾಮಿ ವಿರುದ್ಧ ಸೋತಿದ್ದರು. ಅದಾದ ಬಳಿಕ ಕಳೆದ ವಿಧಾನಸಭೆ ಚುನಾವಣೆಯಲ್ಲಿ ದೇವನಹಳ್ಳಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಆಹಾರ ಖಾತೆಯನ್ನು ಹೊಂದಿದ್ದಾರೆ. ಅಲ್ಲದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾಗಿಯೂ ಸಂಚಲನ ಮೂಡಿಸಿದ್ದಾರೆ.
ಕೋಲಾರ ಮೀಸಲು ಕ್ಷೇತ್ರದ ವ್ಯಾಪ್ತಿಯಲ್ಲಿರುವ ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಿಡಿತ ಹೊಂದಿದೆ. ಕೋಲಾರದಲ್ಲಿ ಮುನಿಯಪ್ಪ ಅವರಿಗೆ ಟಿಕೆಟ್ ಪಡೆಯುವುದು ಸುಲಭದ ಕೆಲಸ. ಅವರಿಗೆ ಟಿಕೆಟ್ ದೊರೆತರೆ ಗೆಲ್ಲಬಹುದೆಂದೂ ಹೇಳಲಾಗುತ್ತಿದೆ. ಆದರೆ, ಕೋಲಾರ ಕಾಂಗ್ರೆಸ್‌ನೊಳಗೆ ಆಂತರಿಕೆ ಬೇಗುದಿ ಸದ್ದು ಮಾಡುತ್ತಿದ್ದು, ಹಲವಾರು ತೊಡಕುಗಳು ಎದುರಾಗಿವೆ.
ಇತ್ತ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಈ ಬಾರಿ ಕೋಲಾರ ಕ್ಷೇತ್ರ ಯಾರ ಪಾಲಾಗುತ್ತದೆ ಎಂಬುದು ಉಭಯ ಪಕ್ಷಗಳ ಸೀಟು ಹಂಚಿಕೆ ಕಸರತ್ತಿನ ಬಳಿಕ ಗೊತ್ತಾಗಲಿದೆ. ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಡಬೇಕೆಂಬ ಪ್ರಬಲ ಕೂಗು ತೆನೆ ಪಾಳಯದಲ್ಲಿ ಕೇಳಿಬರುತ್ತಿದೆ. ಜೆಡಿಎಸ್‌ನಲ್ಲಿ ಬಂಗಾರಪೇಟೆ ಮಲ್ಲೇಶ್ ಬಾಬು, ಮುಳಬಾಗಿಲು ಹಾಲಿ ಶಾಸಕ ಸಮೃದ್ಧಿ ಮಂಜುನಾಥ್, ದೇವನಹಳ್ಳಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಸೇರಿದಂತೆ ಸಾಕಷ್ಟು ಮಂದಿ ಆಕಾಂಕ್ಷಿಗಳಿದ್ದಾರೆ.
ಮುನಿಯಪ್ಪ ಅವರು ಜೆಡಿಎಸ್ ವರಿಷ್ಠರೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ, ಪ್ರತೀ ಬಾರಿ ನಾಮ್ ಕೆ ವಾಸ್ತೆಗೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಮೂರನೇ ಸ್ಥಾನಕ್ಕೆ ತೃಪ್ತಿಪಡುತ್ತಿತ್ತು. ಆದರೆ, ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಜೆಡಿಎಸ್‌ಗೆ ತನ್ನ ಅಸ್ತಿತ್ವದ ಪ್ರಶ್ನೆ ಎದುರಾಗಿದ್ದು, ತನ್ನ ಪಾಲಿಗೆ ಪಡೆಯುವ ಎಲ್ಲ ಕ್ಷೇತ್ರಗಳಲ್ಲಿಯೂ ಗೆಲ್ಲಬೇಕೆಂದು ಹಾತೊರೆಯುತ್ತಿದೆ. ಹೀಗಾಗಿ, ಕೋಲಾರವನ್ನು ತನ್ನ ಪಾಲಿಗೆ ಪಡೆದರೆ, ತೀವ್ರ ಪೈಪೋಟಿ ನೀಡಬಲ್ಲ ಅಭ್ಯರ್ಥಿಯನ್ನೇ ಈ ಬಾರಿ ಕಣಕ್ಕಿಳಿಸುತ್ತದೆ.
ಮುನಿಸ್ವಾಮಿಗೆ ಟಿಕೆಟ್ ಚಾಲೆಂಜ್
ಬಿಜೆಪಿಗೆ ಜೆಡಿಎಸ್ ಕ್ಷೇತ್ರ ಬಿಟ್ಟುಕೊಡುವುದಾದರೆ ಹಾಲಿ ಸಂಸದ ಮುನಿಸ್ವಾಮಿ ಮತ್ತೊಮ್ಮೆ ಟಿಕೆಟ್ ಪಡೆಯುವ ಅವಿರತ ಪ್ರಯತ್ನದಲ್ಲಿದ್ದಾರೆ. ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಹಾಗೂ ವೈಯಕ್ತಿಕ ವರ್ಚಸ್ಸು ಮೂಡಿಸುವುದರಲ್ಲಿ ಕಾಂಗ್ರೆಸ್ ಕೊಂಚ ಹಿಂದೆ ಸರಿಯುತ್ತಿದ್ದಂತೆ, ಕಾಂಗ್ರೆಸ್ ಭದ್ರಕೋಟೆಯಲ್ಲಿ ಎಸ್ ಮುನಿಸ್ವಾಮಿ ಕಮಲ ಅರಳಿಸಿದ್ದರು. ಇದೀಗ, ಅವರಿಗೆ ಟಿಕೆಟ್ ಪಡೆಯುವುದು ಚಾಲೆಂಜಿಂಗ್ ಆಗಿದೆ.
ರಾಮಮಂದಿರ ಉದ್ಘಾಟಿಸಿ ಹಿಂದುತ್ವದ ಕಾರ್ಡ್ ಮುಂದಿಟ್ಟುಕೊಂಡಿರುವ ಬಿಜೆಪಿಗೆ ಕೋಲಾರ ಕ್ಷೇತ್ರದಲ್ಲಿ ಹಿಂದುತ್ವ ಹಿಕಮತ್ತು ವರ್ಕೌಟ್ ಆಗಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೂ, ಈ ಬಾರಿ ಮೈತ್ರಿ ಹಿನ್ನೆಲೆ ಬಿಜೆಪಿಗೆ ಟಿಕೆಟ್ ಕೊಟ್ಟರೆ, ಜೆಡಿಎಸ್ ಮತಗಳು ಸೇರಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಕಾಂಗ್ರೆಸ್‌ನಲ್ಲಿ ಭಿನ್ನಸ್ವರ
ಕೆ.ಎಚ್ ಮುನಿಯಪ್ಪ ಸ್ಪರ್ಧೆಗೆ ಪಕ್ಷದಲ್ಲೇ ಭಿನ್ನಸ್ವರಗಳು ಕೇಳಿಬರುತ್ತಿವೆ. ಮುನಿಯಪ್ಪ ಗೆದ್ದರೆ, ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದರೆ, ಅವರು ಸಚಿವರಾಗಬಹುದು. ಅಲ್ಲದೆ, ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಲ್ಲಿ ಕೆ.ಎಚ್ ಮುನಿಯಪ್ಪ ಅವರೇ ಸ್ಪರ್ಧಿಸಿ, ಗೆಲ್ಲಬೇಕು ಎಂಬುದು ಮುನಿಯಪ್ಪ ಬಣದ ಒತ್ತಾಸೆ. ಆದರೆ, ಡಿಎಸ್‌ಎಸ್ ಮುಖಂಡ ಸಿ.ಎಂ ಮುನಿಯಪ್ಪ ಅವರಿಗೆ ಈ ಬಾರಿ ಟಿಕೆಟ್ ಕೊಡಬೇಕು ಎಂಬುದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣದ ಒತ್ತಾಯವಾಗಿದೆ.
ಅಲ್ಲದೆ, ಕೆ.ಎಚ್ ಮುನಿಯಪ್ಪ ಸಂಸದರಾದರೆ, ಅವರ ಮಗಳು, ಕೆ.ಜಿ.ಎಫ್ ಶಾಸಕಿ ರೂಪಕಲಾ ಅವರಿಗೆ ಮಂತ್ರಿಗಿರಿ ಸಿಗಬಹುದು ಎಂಬ ಮಾತುಗಳೂ ಇವೆ. ಸದ್ಯಕ್ಕೆ, ಈಗ ರೂಪಕಲಾ ಅವರಿಗೆ ಮಂಡಳಿಯೊಂದರ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಈ ವರದಿ ಓದಿದ್ದೀರಾ?: ಲೋಕಸಭಾ ಚುನಾವಣೆ | ಯಾರಿಗೆ ತುಮಕೂರು; ಅಭ್ಯರ್ಥಿ ಯಾರು?
“ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ. ಹೈಕಮಾಂಡ್ ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಬೂತ್ ಹಾಗೂ ಹೋಬಳಿ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ” ಎಂದು ಕೋಲಾರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ ಹೇಳಿದ್ದಾರೆ.
“ಕೇಂದ್ರ ಮತ್ತು ರಾಜ್ಯದಲ್ಲಿ ಮೋದಿ ಅಲೆ ಇದೆ. ಹಾಲಿ ಸಂಸದರೂ ಅತ್ಯಂತ ಕ್ರಿಯಾಶೀಲರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪಕ್ಷ ಸೂಚಿಸುವ ಅಭ್ಯರ್ಥಿಗೆ ನಮ್ಮ ಸಹಮತವಿದೆ” ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಹೇಳಿದ್ದಾರೆ.
ಒಟ್ಟಾರೆಯಾಗಿ, ಕೋಲಾರದಲ್ಲಿ ಮೈತ್ರಿ ಪಕ್ಷಗಳನ್ನು ಹೊಡೆದುರುಳಿಸುವುದು ಕಾಂಗ್ರೆಸ್‌ಗೆ ಸವಾಲಾಗಿದೆ. ಮೈತ್ರಿ ಪಕ್ಷಗಳ ತಂತ್ರಗಾರಿಕೆಗೆ ಕಾಂಗ್ರೆಸ್ ಪ್ರಬಲ ತಂತ್ರಗಾರಿಕೆ ರೂಪಿಸುವ ಅಗತ್ಯವಿದೆ. ಅಂತಿಮವಾಗಿ ಕೋಲಾರದಲ್ಲಿ ಕಾಂಗ್ರೆಸ್‌ನಿಂದ ಯಾರು ಕಣಕ್ಕಿಳಿಯುತ್ತಾರೆ. ಮೈತ್ರಿ ಪಕ್ಷಗಳಲ್ಲಿ ಕೋಲಾರ ಯಾರ ಪಾಲಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.