ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲುತ್ತೇವೆಂದು ಬಿಜೆಪಿ ಅಬ್ಬರ ಭಾಷಣ ಮಾಡುತ್ತಿದೆ. ಪ್ರಧಾನಿ ಮೋದಿ ಅವರು ಹೋದಲ್ಲೆಲ್ಲ ‘ಅಬ್ ಕೀ ಬಾರ್ – ಚಾರ್ ಸೋ ಪಾರ್’ ಎಂದು ಹೇಳುತ್ತಲೇ ಇದ್ದಾರೆ. ಇದರ ಜೊತೆಗೆ, ವಾಟ್ಸಾಪ್ ಯೂನಿವರ್ಸಿಟಿಯಲ್ಲಿಯೂ ಬಿಜೆಪಿಯೇ ಗೆಲ್ಲುತ್ತದೆ – ಅಧಿಕಾರ ಹಿಡಿಯುತ್ತದೆ ಎಂಬ ಸಂದೇಶಗಳು ಹರಿದಾಡುತ್ತಿವೆ. ಇದು ಮತದಾರರ ಆಲೋಚನೆಯಲ್ಲಿ ಕಟ್ಟಿಹಾಕುವ ಬಿಜೆಪಿಯ ತಂತ್ರ. ಈ ತಂತ್ರಕ್ಕೆ ತುತ್ತಾಗಿರುವ ಹಲವರು ಬಿಜೆಪಿಯೇ ಗೆಲ್ಲುತ್ತದೆಂದು ನಂಬಿದ್ದಾರೆ.
ಇದೆಲ್ಲದರ ನಡುವೆ, ಹಲವಾರು ಚುನಾವಣಾ ಪೂರ್ವ ಸಮೀಕ್ಷೆಗಳು ಹೊರಬೀಳುತ್ತಿವೆ. ಬಿಜೆಪಿ ಕಳೆದ ಚುನಾವಣೆಯಲ್ಲಿ ಗೆದ್ದಿದ್ದಕ್ಕಿಂತ ತುಂಬಾ ಕಡಿಮೆ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. 2019ರಲ್ಲಿದ್ದ ಮೋದಿ ಅಲೆ ಈಗ ತೀವ್ರವಾಗಿ ಕುಸಿದಿದೆ ಎಂಬುದನ್ನೂ ಸೂಚಿಸುತ್ತಿವೆ. ಆದರೂ, ಬಿಜೆಪಿ ಮತ್ತು ಅಮಿತ್ ಶಾ 370 ಸ್ಥಾನಗಳನ್ನು ಗೆಲ್ಲುತ್ತೇವೆಂದು ತಮ್ಮದೇ ನಿರೂಪಣೆಯನ್ನು ಮುಂದಿಡುತ್ತಿದ್ದಾರೆ.
ಅಂದಹಾಗೆ, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಗೆದ್ದಿತ್ತು. ಆದರೆ, 2024ರ ಫೆಬ್ರವರಿ ಅಂತ್ಯದ ವೇಳೆಗೆ ಪಕ್ಷದಲ್ಲಿ 289 ಸಂಸದರು ಮಾತ್ರವೇ ಉಳಿದಿದ್ದಾರೆ. ಈ ನಾಪತ್ತೆಯಾದ 14 ಮಂದಿ ಸಂಸದರು ಏನಾದರು? ಅವರಲ್ಲಿ ಹಲವರು ಬಿಜೆಪಿ ಹೈಕಮಾಂಡ್ ಆದೇಶದ ಮೇರೆಗೆ ಬಲವಂತವಾಗಿ ರಾಜೀನಾಮೆ ನೀಡಿದ್ದಾರೆ.
ಮಧ್ಯಪ್ರದೇಶದಲ್ಲಿ ಐದು, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ತಲಾ ಮೂರು ಮಂದಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹರಿಯಾಣದ ರತ್ತನ್ ಲಾಲ್ ಕಟಾರಿಯಾ ಮತ್ತು ಮಹಾರಾಷ್ಟ್ರದ ಗಿರೀಶ್ ಬಾಪಟ್ ನಿಧನದಿಂದಾಗಿ ಅವರ ಸ್ಥಾನಗಳು ತೆರವಾಗಿವೆ. ಇನ್ನು, ಬಾಬುಲ್ ಸುಪ್ರಿಯೋ ಅವರು 2022ರಲ್ಲಿ ಬಿಜೆಪಿ ತೊರೆದು ಟಿಎಂಸಿ ಸೇರಿದ್ದರಿಂದಾಗಿ, ಆ ಸ್ಥಾನವನ್ನು ಟಿಎಂಸಿಯ ಶತ್ರುಘ್ನ ಸಿನ್ಹಾ ಗೆದ್ದುಕೊಂಡಿದ್ದಾರೆ.
ಈಗಾಗಲೇ 14 ಸಂಸದ ಸ್ಥಾನಗಳನ್ನು ಕಳೆದುಕೊಂಡಿರುವ ಬಿಜೆಪಿ, 370 ಸ್ಥಾನಗಳನ್ನು ಅಥವಾ ಮೋದಿ ಹೇಳುವಂತೆ 400 ಸ್ಥಾನಗಳನ್ನು ಗೆಲ್ಲುವುದು ತಮಾಷೆಯ ವಿಚಾರವಲ್ಲ. ಬಿಜೆಪಿ 370 ಸ್ಥಾನಗಳನ್ನು ಗೆಲ್ಲಬೇಕೆಂದರೂ ಈಗ ಕಳೆದುಕೊಂಡಿರುವ 14 ಸ್ಥಾನಗಳನ್ನು ಮರಳಿ ಪಡೆಯುವುದರ ಜೊತೆ, ಹೆಚ್ಚುವರಿ 67 ಸ್ಥಾನಗಳನ್ನು ಗೆಲ್ಲಬೇಕು ಹಾಗೂ ಈಗ ಬಿಜೆಪಿ ಸಂಸದರಿರುವ ಎಲ್ಲ ಸ್ಥಾನಗಳನ್ನು ಗೆಲ್ಲಬೇಕು. ಇದು ಸಾಧ್ಯವೇ?
ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಹಲವು ರಾಜ್ಯಗಳಲ್ಲಿ ಬಿಜೆಪಿ ಕೆಲ ಸ್ಥಾನಗಳನ್ನು ಕಳೆದುಕೊಳ್ಳುತ್ತದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ;
• ಕರ್ನಾಟಕ – ಒಟ್ಟು 28 ಸ್ಥಾನಗಳ ಪೈಕಿ 25 ಸ್ಥಾನಗಳನ್ನು 2019ರಲ್ಲಿ ಬಿಜೆಪಿ ಗೆದ್ದಿತ್ತು. ಈಗ, ರಾಜ್ಯಲ್ಲಿ ಬಿಜೆಪಿ 12-15 ಸ್ಥಾನಗಳನ್ನು ಕೆಳದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.
• ದೆಹಲಿ – ಒಟ್ಟು 7 ಸ್ಥಾನಗಳಲ್ಲಿ 7ನ್ನೂ ಬಿಜಪಿ ಗೆದ್ದಿತ್ತು. ಅಲ್ಲಿ, ಈಗ ಮತ್ತೆ ಅಷ್ಟೂ ಸ್ಥಾನಗಳನ್ನು ಗೆಲ್ಲುವುದು ಸಾಧ್ಯವೇ ಇಲ್ಲ. ಅಲ್ಲದೆ, ಎಎಪಿ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿರುವುದು ಬಿಜೆಪಿಗೆ ಹೊಡೆತ ನೀಡಲಿದೆ ಎಂದು ಹೇಳಲಾಗುತ್ತಿದೆ.
• ಮಹಾರಾಷ್ಟ್ರ – ಕಳೆದ ಬಾರಿ ಅವಿಭಜಿತ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ, 23 ಸ್ಥಾನಗಳನ್ನು ಗೆದ್ದಿತ್ತು. ಈಗ, ಪಕ್ಷವು ಸೇನೆಯ ಶಿಂಧೆ ಬಣ ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಬಣದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆದರೆ, ಈ ಮೈತ್ರಿಯಲ್ಲಿಯೂ ಬಿಜೆಪಿ ಸಾಕಷ್ಟು ಅಪಸ್ವರಗಳನ್ನು ಎದುರಿಸುತ್ತಿದೆ.
• ಉತ್ತರ ಪ್ರದೇಶ – 80 ಸ್ಥಾನಗಳಲ್ಲಿ 62 ಸ್ಥಾನಗಳು ಪ್ರಸ್ತುತ ಬಿಜೆಪಿ ತೆಕ್ಕೆಯಲ್ಲಿವೆ. ಆದರೆ, ಈ ಬಾರಿ ರಾಜ್ಯ ಬಿಜೆಪಿಯೊಳಗೆ ಬಂಡಾಯ, ಅಸಮಧಾನಗಳು ಎದ್ದು ಕಾಣುತ್ತಿವೆ. ಹೀಗಾಗಿ, 62 ಸ್ಥಾನಗಳನ್ನೂ ಉಳಿಸಿಕೊಳ್ಳುವುದು ಬಿಜೆಪಿ ಸುಲಭವಾಗಿಲ್ಲ. ಅಲ್ಲದೆ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಒಗ್ಗಟ್ಟಾಗಿ ಹೋರಾಟಕ್ಕೆ ಇಳಿದಿದ್ದು, ಬಿಜೆಪಿಗೆ ಭಾರೀ ಪೈಪೋಟಿ ಬೀಳಲಿದೆ. ರಾಮಮಂದಿರದ ಉದ್ಘಾಟನೆಯ ಹೊರತಾಗಿಯೂ ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗದು ಎಂಬ ಅಭಿಪ್ರಾಯಗಳೂ ಇವೆ.
• ಬಿಹಾರ – ಒಟ್ಟು 40 ಸ್ಥಾನಗಳಲ್ಲಿ ಬಿಜೆಪಿ 17 ಸ್ಥಾನಗಳನ್ನು ಗೆದ್ದಿತ್ತು. ಈ ನಡುವೆ ನಿತೀಶ್ ಅವರು ಬಿಜೆಪಿ ಸಖ್ಯ ತೊರೆದು, ಮತ್ತೆ ಮರಳಿ ಸಖ್ಯ ಬೆಳೆಸಿದ್ದಾರೆ. ಅದಕ್ಕಿಂತ ಮುಖ್ಯವಾಗಿ, ಆರ್‌ಜೆಡಿಯ ತೇಜಸ್ವಿ ಯಾದವ್ ಅವರು ಪ್ರಮುಖ ನಾಯಕನಾಗಿ ಬಿಹಾರದಲ್ಲಿ ಹೊರಹೊಮ್ಮಿದ್ದಾರೆ. ಅವರ ವರ್ಚಸ್ಸು ಬಿಜೆಪಿ ಭವಿಷ್ಯವನ್ನು ಅಲುಗಾಡಿಸುತ್ತಿದೆ.
• ಹರಿಯಾಣ – ಕಳೆದ ಚುನಾವಣೆಯಲ್ಲಿ ರಾಜ್ಯದ ಎಲ್ಲ 10 ಸ್ಥಾನಗಳಲ್ಲಿಯೂ ಬಿಜೆಪಿ ಗೆದ್ದಿತ್ತು. ಅದರೆ, ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದ ರೈತ ಹೋರಾಟವು ದೇಶದಲ್ಲಿ ಸಂಚಲನ ಮೂಡಿಸಿದೆ. ರೈತ ಸಂಘಟನೆಗಳು ಬಿಜೆಪಿ ವಿರುದ್ಧ ದಂಡೆದ್ದು ನಿಂತಿವೆ. ಹೀಗಾಗಿ, ಹರಿಯಾಣದಲ್ಲಿ ಬಿಜೆಪಿ ಸೊನ್ನೆ ಸುತ್ತಿದರೂ ಆಶ್ಚರ್ಯವಿಲ್ಲ ಎಂಬುದು ರಾಜಕೀಯ ವಲಯದಲ್ಲಿ ಕಂಡುಬರುತ್ತಿದೆ.
• ರಾಜಸ್ಥಾನ – 2019ರಲ್ಲಿ ಒಟ್ಟು 25ರಲ್ಲಿ 24 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಆದರೆ, ಈ ಬಾರಿ ಅದು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಪ್ರಭಾವಿಯಾಗಿ ಹೊರಹೊಮ್ಮಿರುವ ಸಚಿನ್ ಪೈಲಟ್ ಜನಸ್ನೇಹಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ನೇತೃತ್ವದಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸಲು ಸಜ್ಜಾಗಿದೆ.
ಸ್ಥೂಲ ಸಮೀಕರಣ ಹೀಗಿದೆ: ಬಿಜೆಪಿ 2019ರ ಪ್ರದರ್ಶನವನ್ನೇ ಈ ಬಾರಿಯೂ ನೀಡಿದರೆ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಉತ್ತರಾಖಂಡ, ದೆಹಲಿ, ಗುಜರಾತ್, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಸ್ಪರ್ಧಿಸುತ್ತಿರುವ 285 ಸ್ಥಾನಗಳಲ್ಲಿ 210 ಸ್ಥಾನಗಳನ್ನು ಗೆಲ್ಲಬಹುದು.
ಅದಾಗ್ಯೂ, 370 ಸ್ಥಾನಗಳಿಗೆ ತಲುಪಲು ಪಕ್ಷವು ಭಾರತದ ಉಳಿದ ರಾಜ್ಯಗಳಿಂದ 160 ಸ್ಥಾನಗಳನ್ನು ಗೆಲ್ಲಬೇಕಾಗುತ್ತದೆ. ಪಶ್ಚಿಮ ಬಂಗಾಳ (42 ಸ್ಥಾನಗಳು) ಮತ್ತು ಪಂಜಾಬ್ (13) ಹೊರತು ಪಡಿಸಿದರೆ, ದಕ್ಷಿಣ ಭಾರತದ ರಾಜ್ಯಗಳು ಒಟ್ಟು 128 ಸ್ಥಾನಗಳನ್ನು ಹೊಂದಿವೆ.
2019ರಲ್ಲಿ ಈ 128 ಸ್ಥಾನಗಳಲ್ಲಿ ಬಿಜೆಪಿ 29 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಅದರಲ್ಲೂ, ತಮಿಳುನಾಡು (38 ಸ್ಥಾನಗಳು), ಆಂಧ್ರ ಪ್ರದೇಶ (25 ಸ್ಥಾನಗಳು) ಮತ್ತು ಕೇರಳ (20 ಸ್ಥಾನಗಳು)ದಲ್ಲಿ ಬಿಜೆಪಿ ಒಂದೂ ಸ್ಥಾನವನ್ನೂ ಗೆಲ್ಲಲಾಗಿರಲಿಲ್ಲ. ಕರ್ನಾಟಕದಲ್ಲಿ 25 ಮತ್ತು ತೆಲಂಗಾಣದಲ್ಲಿ 4 ಸ್ಥಾನಗಳನ್ನು ಗೆದ್ದಿತ್ತು.
ಈಗ ಈ ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿಗೆ ಆ 29 ಸ್ಥಾನಗಳನ್ನು ಗೆಲ್ಲುವುದು ಕಷ್ಟವೇ. ಕರ್ನಾಟಕದಲ್ಲಿ 25 ಸ್ಥಾನ ಗೆಲ್ಲುವುದು ಅಸಂಭವ. ಇನ್ನು, ತಮಿಳುನಾಡು, ಕೇರಳ, ಆಂಧ್ರದಲ್ಲಿ ಒಂದು ಸ್ಥಾನವನ್ನೂ ಬಿಜೆಪಿ ಗೆಲ್ಲುವುದು ಕಠಿಣ ಸವಾಲು. ಹೀಗಿರುವಾಗ, ದಕ್ಷಿಣ ಭಾರತದಲ್ಲಿ ಕಳೆದ ಚುನಾವಣೆಗಿಂತ ಈ ಬಾರಿ ಬಿಜೆಪಿಯ ಸ್ಥಾನಗಳು ತೀವ್ರವಾಗಿ ಕುಸಿಯಲಿವೆ.
ಇಷ್ಟೆಲ್ಲ ಅಸಾಧ್ಯಗಳು ಎದುರಿಗಿದ್ದರೂ ಅಮಿತ್ ಮತ್ತು ಬಿಜೆಪಿ ಪಾದಕ್ಕೆ ಶರಣಾಗಿರುವ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದ ಪ್ರಭಾವಿಗಳು ಬಿಜೆಪಿ 370 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಬೊಬ್ಬೆ ಹೊಡೆಯುತ್ತಿವೆ. ಈ ಬೊಬ್ಬೆಗೆ ಕಿವಿಗೊಟ್ಟು, ಮತದಾರರು ತಮ್ಮ ಆಲೋಚನೆಗಳನ್ನು ಸ್ಥಬ್ಧಗೊಳಿಸುವ ಮುನ್ನ, ಸಾಧ್ಯಾಸಾಧ್ಯತೆಗಳ ಕುರಿತೂ ಅವಲೋಕಿಸುವುದು ಅತ್ಯಗತ್ಯ.