ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದುವರೆಗೂ, ಚರ್ಚೆಗೆ ಕೇಂದ್ರವೇ ಆಗದಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಮತ್ತೆ ಗಮನ ಸೆಳೆಯುತ್ತಿದೆ. ಕಳೆದ ನಾಲ್ಕೂವರೆ ವರ್ಷಗಳಿಂದ ಕಾಣೆಯಾಗಿದ್ದ ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ, ಇದೀಗ ದಿಢೀರ್ ಪ್ರತ್ಯಕ್ಷವಾಗಿದ್ದಾರೆ. ತಮ್ಮ ಅದೇ ಉವಾಚ ವಾಚಾಳಿತನದಿಂದ ಮತ್ತೆ ಸುದ್ದಿಯಾಗುತ್ತಿದ್ದಾರೆ. ಹೀಗಾಗಿ, ಕ್ಷೇತ್ರದ ಬಗೆಗಿನ ಚರ್ಚೆಯೂ ಮುನ್ನೆಲೆಗೆ ಬಂದಿದೆ.
ಮುಸ್ಲಿಮರು ಮತ್ತು ಎಸ್‌ಸಿ/ಎಸ್‌ಟಿ ಜನರೇ ಹೆಚ್ಚಿನ ಸಂಖ್ಯೆಯಲ್ಲಿರುವ ಉತ್ತರ ಕನ್ನಡ ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ಒಮ್ಮೆಯೂ ಗೆಲ್ಲಲಾಗಿಲ್ಲ. ಇದೀಗ, ಕ್ಷೇತ್ರದ ವ್ಯಾಪ್ತಿಯಲ್ಲಿರುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ, ಆರು ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಯಲ್ಲಿವೆ. ಹೀಗಾಗಿ, ಮುಂದಿನ ಲೋಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ಧವೆಂದು ಹೇಳಲಾಗುತ್ತಿದೆ.
ಅಂದಹಾಗೆ, 6 ಬಾರಿ ಸಂಸದನಾಗಿ, 23 ವರ್ಷ ಅಧಿಕಾರದ ಗಮ್ಮತ್ತು ಅನುಭವಿಸಿರುವ ಸಂಸದ ಅನಂತ ಕುಮಾರ್ ಹೆಗಡೆ, ಕಳೆದ ಎರಡು ಚುನಾವಣೆಗಳಲ್ಲಿ ಗುಜರಾತ್ ಮಾಡೆಲ್, ಹಿಂದುತ್ವ ಹಾಗೂ ಮೋದಿ ಹೆಸರಿನಲ್ಲಿ ಗೆದ್ದಿದ್ದರು. ಆದರೆ, ಈ ಬಾರಿ ಅದಾವುದೂ ಫಲಿಸುವುದಿಲ್ಲ. ಹೆಗಡೆ ನಿರುದ್ಯೋಗಿ ಆಗುವುದು ಖಚಿತವೆಂಬ ಮಾತುಗಳು ಹೇಳಿಬರುತ್ತಿವೆ.
ಇಂತಹ ಹೊತ್ತಿನಲ್ಲಿ, ಬಿಲದಿಂದ ಎದ್ದು ಬಂದಿರುವ ನಾಡಸಿಂಗನಂತೆ ಅನಂತ ಹೆಗಡೆ, ತಮ್ಮ ಹರುಕು ನಾಲಗೆಯನ್ನು ಹರಿಬಿಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲೇ ನಿಂದಿಸಿದ್ದ ಹೆಗಡೆ, ಮುಸ್ಲಿಂ ವಿರೋಧಿ ಹೇಳಿಕೆಗಳನ್ನೂ ನೀಡುತ್ತಿದ್ದಾರೆ. ‘ಇಸ್ಲಾಂ ಇರುವವರೆಗೂ ಜಗತ್ತಿಗೆ ನೆಮ್ಮದಿ ಇರುವುದಿಲ್ಲ’ ಎಂಬಂತಹ ಹೇಳಿಕೆಗಳೊಂದಿಗೆ ವಿವಾದ ಸೃಷ್ಟಿಸಿಕೊಂಡು, ಜನರ ಚಿತ್ತ ಸೆಳೆಯಲು ಹವಣಿಸುತ್ತಿದ್ದಾರೆ.
ಆದರೆ, ಈ ಬಾರಿ ಹೆಗಡೆಗೆ ಬಿಜೆಪಿ ಟಿಕೆಟ್ ಕರುಣಿಸುವುದೇ ಅನುಮಾನ ಎಂಬ ಮಾತುಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಚರ್ಚೆಯಾಗುತ್ತಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಒಮ್ಮೆಯೂ ಸಂಸತ್‌ನಲ್ಲಿ ಒಂದೇ ಒಂದು ಮಾತನ್ನೂ ಆಡದ ಹೆಗಡೆ, ಕ್ಷೇತ್ರದಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಕಾರವಾರದಲ್ಲಿರುವ ಸಂಸದರ ಕಚೇರಿಯ ಬೀಗವೂ ತೆರೆದಿರಲಿಲ್ಲ. ಅಲ್ಲದೆ, 23 ವರ್ಷಗಳ ಅಧಿಕಾರಾವಧಿಯಲ್ಲಿ, ಒಮ್ಮೆ ಸಚಿವರಾದರೂ ಹೆಗಡೆ ಕ್ಷೇತ್ರಕ್ಕೆ ಏನನ್ನೂ ಮಾಡಲಿಲ್ಲ. ಹೇಳಿಕೊಳ್ಳುವಂತಹ ಒಂದೇ ಒಂದು ಅಭಿವೃದ್ಧಿ ಕೆಲಸವೂ ಆಗಿಲ್ಲ. ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಸತತ 11 ವರ್ಷಗಳಿಂದ ನಡೆಯುತ್ತಿದ್ದರೂ, ಇನ್ನೂ ಪೂರ್ಣಗೊಂಡಿಲ್ಲ ಎಂದು ಕ್ಷೇತ್ರದ ಜನರು ಅಸಮಾಧಾನಗೊಂಡಿದ್ದಾರೆ. ಹೀಗಾಗಿ, ಹೆಗಡೆ ಸ್ಪರ್ಧಿಸಿದರೂ, ಸ್ಪರ್ಧಿಸದಿದ್ದರೂ ಆತ ನಿರುದ್ಯೋಗಿ ಎಂಬುದನ್ನು ಜನರು ಈಗಾಗಲೇ ನಿರ್ಧರಿಸಿದಂತೆ ಕಾಣುತ್ತಿದೆ.
ಈ ವರದಿ ಓದಿದ್ದೀರಾ?: ಪ್ರಚೋದನಕಾರಿ ಭಾಷಣ: ಅನಂತ್ ಕುಮಾರ್ ಹೆಗಡೆ ವಿರುದ್ಧ ಪ್ರಕರಣ ದಾಖಲು
ಇನ್ನು, ಅನಂತ ಕುಮಾರ್ ಹೆಗಡೆ ವಿರುದ್ಧದ ಜನರ ಅಸಮಾಧಾನವನ್ನೇ ದಾಳವಾಗಿಟ್ಟುಕೊಂಡು, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಜೆಪಿ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ವಿಧಾನಸಭೆಯಲ್ಲಿ ಸ್ಪೀಕರ್ ಆಗಿಯೂ, ಆ ಹುದ್ದೆಯನ್ನೂ ಸರಿಯಾಗಿ ನಿಭಾಯಿಸಲಿಲ್ಲವೆಂಬ ಆರೋಪ ಹೊತ್ತಿರುವ ಕಾಗೇರಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದರು. ಅಧಿಕಾರವಿಲ್ಲದೆ, ನಿರುದ್ಯೋಗಿಯಾಗಿರುವ ಕಾಗೇರಿ, ರಾಷ್ಟ್ರ ರಾಜಕಾರಣಕ್ಕೆ ಹೋಗಲು ಯತ್ನಿಸುತ್ತಿದ್ದಾರೆ.
ಇತ್ತ, ಮಾಜಿ ಶಾಸಕಿ ರೂಪಾಲಿ ನಾಯ್ಕ್ ಕೂಡ ಸಂಸತ್ ಮೆಟ್ಟಿಲೇರುವ ಇರಾದೆ ಹೊಂದಿದ್ದಾರೆ. ಅವರೂ ಕೂಡ ಟಿಕೆಟ್‌ಗಾಗಿ ಬಿಜೆಪಿ ನಾಯಕರ ಮುಂದೆ ಮನವಿ ಇಟ್ಟಿದ್ದಾರೆ ಎಂಬ ಮಾತುಗಳೂ ಇವೆ. ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇದೆಲ್ಲದರ ನಡುವೆ, ಸದ್ಯ ಉತ್ತರ ಕನ್ನಡ ಬಿಜೆಪಿಯಲ್ಲಿ ಭಿನ್ನಮತವೂ ಭುಗಿಲೆದ್ದಿದೆ. ಫೆಬ್ರವರಿ 19ರಂದು ಬಿಜೆಪಿ ಪದಾಧಿಕಾರಿಗಳ ಹೊಸ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಪಕ್ಷದ ನಿಷ್ಠಾವಂತ ಮತ್ತು ಪಕ್ಷದ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಕಾರ್ಯಕರ್ತರಿಗೆ ಹುದ್ದೆಗಳನ್ನು ನೀಡಲಾಗಿಲ್ಲವೆಂದು ಅಸಮಾಧಾನ ವ್ಯಕ್ತವಾಗಿದೆ. ಮಾತ್ರವಲ್ಲದೆ, ಬಿಜೆಪಿ ಜಿಲ್ಲಾ ಘಟಕಕ್ಕೆ ವಿಶೇಷ ಆಹ್ವಾನಿತರಾಗಿ ನೇಮಕಗೊಂಡಿದ್ದ ಸಿದ್ದಾಪುರದ ನಾಗರಾಜ ನಾಯ್ಕ ಬೇಡ್ಕಣಿ, ಕೃಷ್ಣಮೂರ್ತಿ ಮಡಿವಾಳ ಹಾಗೂ ಸಿದ್ದಾಪುರ ಮಂಡಲದ ಪ್ರಧಾನ ಕಾರ್ಯದರ್ಶಿ ಎಸ್.ಕೆ ಮೇಸ್ತ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಇದು ಬಿಜೆಪಿಗೆ ಮತ್ತಷ್ಟು ಹೊಡೆತ ನೀಡುವ ಸಾಧ್ಯತೆಗಳಿವೆ.
ಬಿಜೆಪಿಯ ಒಡಕು, ಭಿನ್ನಮತ, ಅಸಮಾಧಾನಗಳು ಕಾಂಗ್ರೆಸ್‌ಗೆ ವರವಾಗುವ ಸಾಧ್ಯತೆಗಳಂತೂ ಇವೆ. ಕಳೆದ 20 ವರ್ಷಗಳಿಂದ ಕ್ಷೇತ್ರದಲ್ಲಿ ತನ್ನ ಸಂಸದರನ್ನು ಆಯ್ಕೆ ಮಾಡಿ ಸಂಸತ್‌ಗೆ ಕಳಿಸಲಾಗದೆ, ನಿಸ್ತೇಜ ಸ್ಥಿತಿಯಲ್ಲಿರುವ ಕಾಂಗ್ರೆಸ್, ಇದೀಗ ಮೈಕೊಡವಿ ಎದ್ದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಮಣ್ಣು ತಿಂದ ಕೈ ಪಡೆ, ಈಗ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಹಣಿಯಲು ತಯಾರಿ ನಡೆಸುತ್ತಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರೋಬ್ಬರಿ 6 ಮಂದಿ ಶಾಸಕರನ್ನು ಹೊಂದಿರುವ ಕಾಂಗ್ರೆಸ್, ಈ ಬಾರಿ ಕ್ಷೇತ್ರ ಗೆಲ್ಲಲು ತವಕಿಸುತ್ತಿದೆ.
ಅನಂತ ಕುಮಾರ್ ಹೆಗಡೆ ಅಥವಾ ಇನ್ನಾರೇ ಬಂದರೂ, ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕ್ಷೇತ್ರ ಗೆಲ್ಲಲು ಕೈ ನಾಯಕರು ಯೋಜಿಸುತ್ತಿದ್ದಾರೆ. ಒಂದು ವೇಳೆ ಅನಂತ ಹೆಗಡೆ ಸ್ಪರ್ಧಿಸಿದರೆ, ಆತನ ವಿರುದ್ಧ ಮಾಜಿ ಸಚಿವ, ಹಳಿಯಾಳ-ದಾಂಡೇಲಿ-ಜೋಯಿಡಾ ಶಾಸಕ ಆರ್.ವಿ ದೇಶಪಾಂಡೆ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತಿಸುತ್ತಿದೆ ಎಂದು ಹೇಳಲಾಗಿದೆ. 9 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ದೇಶಪಾಂಡೆ ಜಿಲ್ಲೆಯಲ್ಲಿ ತಮ್ಮದೇ ಆದ ನೆಲೆ ಮತ್ತು ಪ್ರಾಬಲ್ಯ ಹೊಂದಿದ್ದಾರೆ.
ಈ ವರದಿ ಓದಿದ್ದೀರಾ?: ಉತ್ತರ ಕನ್ನಡ ಬಿಜೆಪಿಯಲ್ಲಿ ಬಿರುಕು: ಸಭೆಯಿಂದ ಹೊರನಡೆದ ಕಾಗೇರಿ, ಕರೆಯಬೇಡಿ ಎಂದ ಅನಂತಕುಮಾರ್ ಹೆಗಡೆ
ಕ್ಷೇತ್ರದಲ್ಲಿ ಸಚಿವರಾಗಿ ಸಾಕಷ್ಟು ಕೆಲಸವನ್ನೂ ಮಾಡಿರುವ, ಗೌಡ ಸಾರಸ್ವತ ಬ್ರಾಹ್ಮಣ(ಜಿಎಸ್‌ಬಿ) ಸಮುದಾಯಕ್ಕೆ ಸೇರಿದ ದೇಶಪಾಂಡೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರೆ, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಂ, ಎಸ್‌ಸಿ/ಎಸ್‌ಟಿ ಮತಗಳ ಜೊತೆಗೆ ಬ್ರಾಹ್ಮಣರ ಮತಗಳೂ ಕಾಂಗ್ರೆಸ್‌ಗೆ ಒಲಿಯಬಹುದು ಎಂಬ ಜಾತಿ ಲೆಕ್ಕಾಚಾರಗಳೂ ಇವೆ.
ದೇಶಪಾಂಡೆ ಸ್ಪರ್ಧಿಸದೇ ಹೋದರು, ಅವರ ಮಗ ಪ್ರಶಾಂತ್ ದೇಶಪಾಂಡೆಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾತುಗಳೂ ಇವೆ. ಅಲ್ಲದೆ, ಖಾನಾಪುರದಲ್ಲಿ ಸೋಲುಂಡಿರುವ ಮಾಜಿ ಶಾಸಕ ಅಂಜಲಿ ನಿಂಬಾಳ್ಕರ್, ಕಾಂಗ್ರೆಸ್ ಮುಖಂಡ ರವೀಂದ್ರ ನಾಯ್ಕ್, ಸುಪ್ರೀಂ ಕೋರ್ಟ್ ವಕೀಲ ದೇವದತ್ ಕಾಮತ್ ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇದರ ಜೊತೆಗೆ ಉತ್ತರ ಕನ್ನಡದ ಹಿರಿಯ ನಾಯಕಿ ಮಾರ್ಗರೆಟ್ ಆಳ್ವ ಅವರ ಚಿತ್ತವೂ ಯಾರ ಕಡೆಗಿದೆ ಎಂಬುದು ಕೂಡ ಬಹಳ ಮುಖ್ಯವಾಗಲಿದೆ. ಇದರ ನಡುವೆ ಕ್ಷೇತ್ರ ಸಮೀಕ್ಷೆಗಳನ್ನು ನಡೆಸುತ್ತಿರುವ ಕಾಂಗ್ರೆಸ್, ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ದೇಶಪಾಂಡೆ-ಆಳ್ವ ಒಂದಾದರೆ, ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳುವ ಎಲ್ಲ ಸಾಧ್ಯತೆಗಳೂ ಇವೆ.