ಇಂದು ಬೆಂಗಳೂರಿನಲ್ಲಿ ಸುದೀರ್ಘ ಸುದ್ದಿಗೋಷ್ಠಿ ನಡೆಸಿದ್ದ ಕೇಂದ್ರ ಸಚಿವ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು, “ಸರಣಿ ಅಪರಾಧಗಳನ್ನು ಮಾಡಿರುವ ಒಬ್ಬ ಭ್ರಷ್ಟ ಐಪಿಎಸ್ ಅಧಿಕಾರಿ ಚಂದ್ರಶೇಖರ್ ರಾಜ್ಯಪಾಲರ ಕಚೇರಿಯ ಸಿಬ್ಬಂದಿಯನ್ನು ತನಿಖೆ ಮಾಡುವ ಅನುಮತಿ ಕೇಳಿದ್ದಾನೆ. ಈತನಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಪೂರ್ಣ ಕೃಪಾಕಟಾಕ್ಷವಿದೆ” ಎಂದು ನೇರ ಆರೋಪ ಮಾಡಿದ್ದರು.
“ಲೋಕಾಯುಕ್ತ ವಿಶೇಷ ತನಿಖಾ ದಳದ ಎಡಿಜಿಪಿ ಎಂ.ಚಂದ್ರಶೇಖರ್ ಭ್ರಷ್ಟ ಅಧಿಕಾರಿಯಾಗಿದ್ದು, ಇಂಥ ದರೋಡೆಕೋರ ಅಧಿಕಾರಿಗಳನ್ನು ಇಟ್ಟುಕೊಂಡು ರಾಜ್ಯ ಸರ್ಕಾರ ತನಿಖೆ ಮಾಡಿಸುತ್ತಿದೆ” ಎಂದು ಗಂಭೀರ ಆರೋಪ ಮಾಡಿದ್ದರು.
ಇದರ ಬೆನ್ನಲ್ಲೇ ಎಸ್‌ಐಟಿ ಸಿಬ್ಬಂದಿಗಳಿಗೆ ಪತ್ರವೊಂದನ್ನು ಬರೆದಿರುವ ಲೋಕಾಯುಕ್ತ ಎಡಿಜಿಪಿ, ಐಪಿಎಸ್ ಅಧಿಕಾರಿ ಚಂದ್ರಶೇಖರ್, ಜಾರ್ಜ್ ಬರ್ನಾರ್ಡ್ ಷಾ ಅವರ ಪ್ರಸಿದ್ಧ ಇಂಗ್ಲಿಷ್ ಮಾತನ್ನು ಉಲ್ಲೇಖಿಸುವ ಮೂಲಕ ಪರೋಕ್ಷವಾಗಿ ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೆ ಮಾರ್ಮಿಕ ಉತ್ತರ ನೀಡಿದ್ದಾರೆ.
ಪತ್ರದಲ್ಲಿ ಜಾರ್ಜ್ ಬರ್ನಾರ್ಡ್ ಷಾ ಅವರ ಮಾತನ್ನು ಉಲ್ಲೇಖಿಸಿದ್ದು, “ಹಂದಿಗಳೊಂದಿಗೆ ಎಂದಿಗೂ ಕುಸ್ತಿಯಾಡಬೇಡಿ. ನೀವಿಬ್ಬರೂ ಕೊಳಕಾಗುತ್ತೀರಿ ಮತ್ತು ಹಂದಿಯು ಅದನ್ನು ಇಷ್ಟಪಡುತ್ತದೆ” ಎಂದು ತಿಳಿಸಿದ್ದಾರೆ. ಆ ಮೂಲಕ ಕುಮಾರಸ್ವಾಮಿಯವರ ಆರೋಪಗಳಿಗೆ ಪ್ರತ್ಯುತ್ತರ ನೀಡಿದ್ದಾರೆ.

ಪತ್ರದಲ್ಲಿ ಕುಮಾರಸ್ವಾಮಿಯವರನ್ನು ‘ಪ್ರಕರಣವೊಂದರ ಆರೋಪಿ, ಜಾಮೀನಿನ ಮೇಲೆ ಹೊರಗಡೆ ಇರುವ ಆರೋಪಿ’ ಎಂದೂ ಕೂಡ ಉಲ್ಲೇಖಿಸುವ ಮೂಲಕ ಮತ್ತಷ್ಟು ಕಾಲೆಳೆದಿದ್ದಾರೆ.
ಲೋಕಾಯುಕ್ತ ವಿಶೇಷ ತನಿಖಾ ದಳದ ಎಡಿಜಿಪಿ ಎಂ.ಚಂದ್ರಶೇಖರ್ ಅವರು ಸಿಬ್ಬಂದಿಗಳಿಗೆ ಪತ್ರ ಸದ್ಯ ಸೋಷಿಯಲ್ ಮೀಡಿಯಾಗಳಲ್ಲೂ ವೈರಲಾಗಿದೆ.
ಪತ್ರದ ಪೂರ್ಣ ಪಾಠ ಹೀಗಿದೆ.
ಇಂದು ಎಸ್‌ಐಟಿಯ ಕ್ರೈಂ ನಂ.16/14 ರ ಆರೋಪಿ ಎಚ್.ಡಿ. ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳು ಮತ್ತು ಬೆದರಿಕೆಗಳನ್ನು ಹಾಕಿದ್ದಾರೆ. ನಿಮಗೆ ತಿಳಿದಿರುವಂತೆ ಎಸ್‌ಐಟಿ ಸಕ್ಷಮ ಪ್ರಾಧಿಕಾರದಿಂದ ಆರೋಪಿಗಳ ಪ್ರಾಸಿಕ್ಯೂಷನ್ ಮಂಜೂರಾತಿಗೆ ಕೋರಿದೆ. ಜಾಮೀನಿನ ಮೇಲಿರುವ ಆರೋಪಿ ಎಚ್.ಡಿ.ಕುಮಾರಸ್ವಾಮಿ ನಮ್ಮ ಕರ್ತವ್ಯ ನಿಭಾಯಿಸದಂತೆ ಈ ರೀತಿ ಮಾಡಿದ್ದಾರೆ. ನನ್ನ ಮೇಲೆ ದಾಳಿ ಮಾಡುವ ಮೂಲಕ ಎಸ್‌ಐಟಿ ಅಧಿಕಾರಿಗಳ ಮನಸ್ಸಿನಲ್ಲಿ ಭಯ ಮೂಡಿಸುವುದು ಅವರ ಉದ್ದೇಶವಾಗಿದೆ. ಆದರೆ ಒಬ್ಬ ಆರೋಪಿ, ಅವನು ಎಷ್ಟೇ ಉನ್ನತ ಮತ್ತು ಶಕ್ತಿಶಾಲಿಯಾಗಿದ್ದರೂ, ಅವನು ಆರೋಪಿಯಾಗಿದ್ದಾನೆ. ಇಂತಹ ಆರೋಪಗಳು ಮತ್ತು ಬೆದರಿಕೆಗಳಿಂದ ನಾವು ನಿರಾಶೆಗೊಳ್ಳಬಾರದು. ನಾನು ಎಸ್‌ಐಟಿ ಮುಖ್ಯಸ್ಥನಾಗಿ ಭಯ ಅಥವಾ ಯಾರ ಪರವೂ ವಹಿಸದೆ ಕೆಲಸ ಮಾಡುತ್ತೇನೆ ಮತ್ತು ನಮ್ಮ ಪ್ರಕರಣಗಳಲ್ಲಿ ಎಲ್ಲ ಅಪರಾಧಿಗಳು ಮತ್ತು ಆರೋಪಿಗಳನ್ನು ನ್ಯಾಯದ ಕಟಕಟೆಗೆ ಎಳೆದು ತರುತ್ತೇನೆ ಎಂದು ಭರವಸೆ ನೀಡುತ್ತೇನೆ. ಎಲ್ಲ ಬಾಹ್ಯ ಪ್ರಭಾವಗಳಿಂದ ನಾನು ನಿಮ್ಮನ್ನು ರಕ್ಷಿಸುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ.

ಜಾರ್ಜ್ ಬರ್ನಾರ್ಡ್ ಷಾ ಅವರ ಪ್ರಸಿದ್ಧ ಇಂಗ್ಲಿಷ್ ಮಾತೊಂದಿದೆ. ಅದು ಏನೆಂದರೆ, “ಹಂದಿಗಳೊಂದಿಗೆ ಎಂದಿಗೂ ಗುದ್ದಾಡಬೇಡಿ. ನೀವಿಬ್ಬರೂ ಕೊಳಕಾಗುತ್ತೀರಿ ಮತ್ತು ಹಂದಿಯು ಅದನ್ನು ಇಷ್ಟಪಡುತ್ತದೆ”. ಆದರೆ ನಮ್ಮ ಕರ್ತವ್ಯವನ್ನು ನಿರ್ವಹಿಸುವಾಗ ಅಪರಾಧಿಗಳು ಮತ್ತು ಆರೋಪಿಗಳನ್ನು ಎದುರಿಸುವುದನ್ನು ನಾವು ತಪ್ಪಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ನಾವು ಎದುರಿಸುವ ಅಪರಾಧಿಗಳು ಮತ್ತು ಆರೋಪಿಗಳು ನಮ್ಮ ಮೇಲೆ ಕೊಳಕು ಎಸೆಯುತ್ತಾರೆ. ಇದು ನಮ್ಮ ಕರ್ತವ್ಯವನ್ನು ನಿರ್ವಹಿಸುವುದರಿಂದ ನಮ್ಮನ್ನು ತಡೆಯಬಾರದು. ಭರವಸೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ. ಏಕೆಂದರೆ ಸತ್ಯವು ಯಾವಾಗಲೂ ಜಯ ಗಳಿಸುತ್ತದೆ. ನಮಗೆ ಸತ್ಯ ಮತ್ತು ದೇವರು ಮತ್ತು ನಮ್ಮ ಕಾನೂನಿನಲ್ಲಿ ನಂಬಿಕೆ ಇರಲಿ.
ಸತ್ಯಮೇವ ಜಯತೇ,
ಚಂದ್ರಶೇಖರ್, ಐಪಿಎಸ್,
ಎಡಿಜಿಪಿ, ಎಸ್‌ಐಟಿ, ಕರ್ನಾಟಕ ಲೋಕಾಯುಕ್ತ
