- ಜೆ ಪಿ ನಗರದಲ್ಲಿ ಬೆಂಗಳೂರು ದಕ್ಷಿಣ ಕಾರ್ಯಕರ್ತರ ಸಮಾವೇಶ
- ‘ಶಾಸಕರು’ ಎಂಬುದರ ಬದಲು ‘ಶಾಕಸರು’ ಎಂದು ತಪ್ಪು ಬರಹ
ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಎಲ್ಲ ಕಡೆ ಎಡವಟ್ಟುಗಳ ಮೇಲೆ ಎಡವಟ್ಟು ಮಾಡಿಕೊಳ್ಳುತ್ತಿದೆ. ಇದಕ್ಕೆ ಹೊಸ ಉದಾಹರಣೆ ಬೆಂಗಳೂರಿನಲ್ಲಿ ಇಂದು ನಡೆದಿದ್ದ ಬಿಜೆಪಿ ಸಮಾವೇಶಕ್ಕೆ ಸ್ವಾಗತ ಕೋರಿದ್ದ ಫ್ಲೆಕ್ಸ್.
ಬೆಂಗಳೂರಿನಲ್ಲಿ ಇಂದು ನಡೆದಿದ್ದ ಬಿಜೆಪಿ ಸಮಾವೇಶಕ್ಕೆ ಸ್ವಾಗತ ಕೋರಿದ್ದ ಫ್ಲೆಕ್ಸ್‌ನಲ್ಲಿ ‘ಮಾಜಿ ಸಚಿವ’ ಸೋಮಣ್ಣರನ್ನು ‘ಚಿಕ್ಕಪೇಟೆ ಶಾಸಕ’ ಎಂದು ಉಲ್ಲೇಖಿಸಿರುವ ಪ್ರಸಂಗ ನಡೆದಿದೆ.
ಜೆ.ಪಿ. ನಗರದ ಪುಟ್ಟೇನಹಳ್ಳಿಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪಕ್ಷದ ವತಿಯಿಂದ ನಾಯಕರಿಗೆ ಸ್ವಾಗತ ಕೋರಿ ಫ್ಲೆಕ್ಸ್ ಹಾಕಲಾಗಿತ್ತು. ಈ ಫ್ಲೆಕ್ಸ್‌ನಲ್ಲಿ ಹಲವು ತಪ್ಪುಗಳು ಕಂಡುಬಂದಿದೆ.

ವಿಧಾನಸಭಾ ಚುನಾವಣೆಯಲ್ಲಿ ವರುಣಾ ಮತ್ತು ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ವಸತಿ ಸಚಿವ ವಿ. ಸೋಮಣ್ಣ ಎರಡೂ ಕಡೆಯಲ್ಲೂ ಸೋಲನನುಭವಿಸಿ, ಮುಖಭಂಗಕ್ಕೊಳಗಾಗಿದ್ದರು. ಇಂದು ನಡೆದಿದ್ದ ಬಿಜೆಪಿ ಸಮಾವೇಶದಲ್ಲಿ ಅವರಿಗೂ ಸ್ವಾಗತ ಕೋರಿ ಹಾಕಿದ್ದ ಫ್ಲೆಕ್ಸ್‌ನಲ್ಲಿ ‘ಚಿಕ್ಕಪೇಟೆ ಶಾಸಕ’ ಎಂದು ಉಲ್ಲೇಖಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ವಿಧಾನಸೌಧದಲ್ಲೇ ‘ಮೌಢ್ಯ’ಕ್ಕೆ ಸೆಡ್ಡು ಹೊಡೆದ ಸಿಎಂ ಸಿದ್ದರಾಮಯ್ಯ
ಇದಲ್ಲದೇ, ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಅವರ ಹೆಸರನ್ನು ‘ಗರಡಾಚಾರ್’ ಎಂದೂ, ಅವರ ಪದನಾಮದಲ್ಲಿ ‘ಶಾಸಕರು’ ಎಂದು ಉಲ್ಲೇಖ ಮಾಡುವ ಬದಲು ‘ಶಾಕಸರು’ ಎಂದು ತಪ್ಪಾಗಿ ಮುದ್ರಿಸಲಾಗಿದೆ.
ಆರ್. ಅಶೋಕ್ ಅವರ ‘ಪದ್ಮನಾಭ ನಗರ’ ಕ್ಷೇತ್ರದ ಎಂದು ಮುದ್ರಿಸುವ ಬದಲು, ‘ಪದ್ಮಾನಗರ’ ಎಂದು ಉಲ್ಲೇಖಿಸಿದ್ದಾರೆ. ಜೊತೆಗೆ, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರನ್ನು ರಾಜ್ಯ ಸದಸ್ಯರು ಎಂದು ಮುದ್ರಿಸಲಾಗಿದೆ. ಇದಲ್ಲದೇ, ವಿಧಾನ ಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿಯವರನ್ನು ಲೋಕಸಭಾ ಸದಸ್ಯ ಎಂದು ಉಲ್ಲೇಖಿಸಿ, ಮುದ್ರಿಸಿದ್ದನ್ನು ಹಾಕಲಾಗಿತ್ತು.