“ಎಎಪಿ ಸೋತರೆ, ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳುತ್ತವೆ” -ಅರವಿಂದ್ ಕೇಜ್ರಿವಾಲ್, ಎಎಪಿ ಸಂಚಾಲಕ.
“ಇದು ಪಂಜಾಬಿಗಳು ಮತ್ತು ಹೊರಗಿನವರ ನಡುವಿನ ಹೋರಾಟ” -ಭರತ್ ಭೂಷಣ್ ಆಶು, ಕಾಂಗ್ರೆಸ್ ಅಭ್ಯರ್ಥಿ.
ಪಂಜಾಬ್‌ನ ಲುಧಿಯಾನ ಪಶ್ಚಿಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಈ ಎರಡು ಹೇಳಿಕೆಗಳು ಚರ್ಚಾ ವಿಷಯವಾಗಿವೆ. ಆಡಳಿತಾರೂಢ ಎಎಪಿಗೆ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳುವ ಪ್ರಶ್ನೆಯಾಗಿದ್ದರೆ; ಪಂಜಾಬ್‌ಅನ್ನು ಮರಳಿ ಪಡೆಯುವ ಪ್ರಯತ್ನಕ್ಕೆ ಕಾಂಗ್ರೆಸ್‌ಗೆ ಮುನ್ನುಡಿಯಾಗಲಿದೆ. ಒಂದು ವೇಳೆ ಎರಡೂ ಪಕ್ಷಗಳನ್ನು ಮಣಿಸಿ ಬಿಜೆಪಿ ಗೆದ್ದರೆ, ಬಿಜೆಪಿಗೆ ಪಂಜಾಬ್‌ನ ಬಾಗಿಲು ತೆರೆಯುತ್ತಿರುವುದರ ಸೂಚನೆಯಾಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಈಗಾಗಲೇ, ಕಳೆದ ಮೂರು ಚುನಾವಣೆಗಳಲ್ಲಿ ಲುಧಿಯಾನ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಎಎಪಿ, ಕಾಂಗ್ರೆಸ್ ಹಾಗೂ ಬಿಜೆಪಿ ತಲಾ ಒಮ್ಮೊಮ್ಮೆ ಮುನ್ನಡೆ ಸಾಧಿಸಿವೆ. 2019ರ ಲೋಕಸಭಾ ಚುನವಣೆಯಲ್ಲಿ ಲುಧಿಯಾನ ಪಶ್ಚಿಮ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರವನೀತ್ ಬಿಟ್ಟು ಮುನ್ನಡೆ ಸಾಧಿಸಿದ್ದರು. 2022ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಎಎಪಿ ಗೆದ್ದಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದ ಬಿಟ್ಟು ಮುನ್ನಡೆ ಸಾಧಿಸಿ, ಹೆಚ್ಚು ಮತಗಳನ್ನು ಪಡೆದಿದ್ದರು.
ಇದೀಗ, ಲುಧಿಯಾನ ಪಶ್ಚಿಮ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಈ ಬಾರಿ ಯಾವ ಪಕ್ಷವು ಕ್ಷೇತ್ರವನ್ನು ಗೆದ್ದುಕೊಳ್ಳಲಿದೆ ಎಂಬ ಕುತೂಹಲ ಚುನಾವಣಾ ಕಣವನ್ನು ರಂಗೇರಿಸಿದೆ. ಈ ಚುನಾವಣೆಯು ಎಎಪಿಯ ರಾಷ್ಟ್ರೀಯ ನಿರೀಕ್ಷೆಗಳು, ಪಂಜಾಬ್ ಕಾಂಗ್ರೆಸ್‌ನಲ್ಲಿ ನಾಯಕತ್ವದ ಪ್ರಶ್ನೆ, ರಾಜ್ಯದಲ್ಲಿ ಸ್ವಂತ ನೆಲೆ ಕಂಡುಕೊಳ್ಳಲು ಬಿಜೆಪಿಯ ಪ್ರಯತ್ನಗಳು ಹಾಗೂ ಅಕಾಲಿ ದಳದೊಳಗಿನ ಆಂತರಿಕ ಜಗಳಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.
ಎಎಪಿ ಗೆದ್ದರೆ ಕೇಜ್ರಿವಾಲ್ ರಾಜ್ಯಸಭೆಗೆ?
ಪಂಜಾಬ್‌ನಲ್ಲಿ ಆಡಳಿತಾರೂಢ ಎಎಪಿ ತನ್ನ ಅಭ್ಯರ್ಥಿಯನ್ನಾಗಿ ರಾಜ್ಯಸಭಾ ಸಂಸದ ಸಂಜೀವ್ ಅರೋರಾ ಅವರನ್ನು ಕಣಕ್ಕಿಳಿಸಿದೆ. ಉಪಚುನಾವಣೆಯಲ್ಲಿ ಅರೋರಾ ಗೆದ್ದರೆ, ಖಾಲಿಯಾಗುವ ರಾಜ್ಯಸಭಾ ಸ್ಥಾನಕ್ಕೆ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂಬ ಚರ್ಚೆಗಳು ನಡೆಯುತ್ತಿವೆ. ಅರೋರಾ ಅವರು ಲುಧಿಯಾನದಲ್ಲಿ ಪ್ರಮುಖ ಕೈಗಾರಿಕೋದ್ಯಮಿಯಾಗಿದ್ದು, ಉಡುಪು ಮತ್ತು ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ನಡೆಸುತ್ತಿದ್ದಾರೆ.
ಇದೇ ವರ್ಷದ ಆರಂಭದಲ್ಲಿ (ಫೆಬ್ರವರಿ) ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಅಧಿಕಾರವನ್ನು ಕಳೆದುಕೊಂಡಿದೆ. ಹೀಗಾಗಿ, ಎಎಪಿಗೆ ಪಂಜಾಬ್‌ನಲ್ಲಿ ತನ್ನ ಹಿಡಿತವನ್ನು ಉಳಿಸಿಕೊಳ್ಳಲು ಮತ್ತು ರಾಷ್ಟ್ರೀಯ ಪಕ್ಷವೆಂಬ ಪ್ರೊಫೈಲ್‌ಅನ್ನು ಕಾಪಿಟ್ಟುಕೊಳ್ಳಲು ಲುಧಿಯಾನದಲ್ಲಿನ ಗೆಲುವು ಎಎಪಿಗೆ ಅನಿವಾರ್ಯವಾಗಿದೆ. ಅದಕ್ಕಾಗಿ, ಯಾವುದೇ ಸಣ್ಣ ಅವಕಾಶವನ್ನೂ ಬಿಟ್ಟುಕೊಡದೆ, ಪ್ರಚಾರ ನಡೆಸುತ್ತಿದೆ. ಗಣನೀಯ ಸಂಪನ್ಮೂಲಗಳು ಮತ್ತು ಮಾನವಶಕ್ತಿಯನ್ನು ಬಳಸುತ್ತಿದೆ.
ಪಂಜಾಬ್‌ನಲ್ಲಿ ಎಎಪಿ ಸರ್ಕಾರದ ಎಲ್ಲ ವ್ಯವಹಾರ, ಯೋಜನೆ, ಚಟುವಟಿಕೆಗಳ ಮೇಲೆ ಕೇಜ್ರಿವಾಲ್ ಮತ್ತು ಎಎಪಿಯ ರಾಷ್ಟ್ರೀಯ ನಾಯಕತ್ವವು ಹೆಚ್ಚಿನ ಗಮನ ಹರಿಸುತ್ತಿದೆ. ಪಂಜಾಬ್ ಸರ್ಕಾರದ ಪ್ರಮುಖ ಹುದ್ದೆಗಳಲ್ಲಿ ಕೇಜ್ರಿವಾಲ್ ಆಯ್ಕೆ ಮಾಡಿದ ಹಲವರನ್ನು ನೇಮಿಸಲಾಗಿದೆ. ಹೀಗಾಗಿ, ಈ ಉಪಚುನಾವಣೆಯು ಕೇಜ್ರಿವಾಲ್‌ಗೆ ಪ್ರತಿಷ್ಠೆಯ ಕಣವಾಗಿದೆ. ಈಗ ಉಪಚುನಾವಣೆ ಸಮಯದಲ್ಲಿ ಪಕ್ಷದ ಪ್ರಚಾರ ಸೇರಿದಂತೆ ಎಲ್ಲ ಚಟುವಟಿಕೆಗಳನ್ನು ಎಎಪಿ ಹೈಕಮಂಡ್ ನಿಯಂತ್ರಿಸುತ್ತಿದೆ.
“ಎಎಪಿ ಸೋತರೆ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳುತ್ತವೆ” ಎಂಬ ಕೇಜ್ರಿವಾಲ್ ಅವರ ಹೇಳಿಕೆ ಚರ್ಚೆಯನ್ನು ಹುಟ್ಟುಹಾಕಿದೆ. ಆದಾಗ್ಯೂ, ಅವರ ಹೇಳಿಕೆಯನ್ನು ಸಂದರ್ಭೋಚಿತವಾಗಿ ನೋಡಬೇಕಾಗಿದೆ.
ಕಳೆದ ವರ್ಷ ಜಲಂಧರ್ ಪಶ್ಚಿಮ ವಿಧಾನಸಭಾ ಕ್ಷೇತ್ರಕ್ಕೂ ಉಪಚುನಾವಣೆ ನಡೆದಿತ್ತು. ಆ ಚುನಾವಣೆಯಲ್ಲಿ ಎಎಪಿ ಗೆದ್ದಿತ್ತು. ಆದಾಗ್ಯೂ, 2022ರಲ್ಲಿ ನಡೆದಿದ್ದ ಸಂಗ್ರೂರ್ ಲೋಕಸಭಾ ಉಪಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದ ಎಎಪಿಗೆ, 2024ರಲ್ಲಿ ನಡೆದ ಜಲಂಧರ್ ವಿಧಾನಸಭಾ ಉಪಚುನಾವಣೆಯ ಗೆಲುವು ಹೊಸ ಹೊರುಪು ತಂದುಕೊಟ್ಟಿತ್ತು. ಸರ್ಕಾರವು ಸ್ಥಿರವಾಗಿ ಮುನ್ನಡೆಸಲು ಸಾಧ್ಯವಾಗಿತ್ತು. ಇದಾದ ಬಳಿಕ, ಪಕ್ಷವು ಡೇರಾ ಬಾಬಾ ನಾನಕ್ ಮತ್ತು ಗಿಡ್ಡರ್ ಬಹಾದಂತಹ ಕಾಂಗ್ರೆಸ್ ಭದ್ರಕೋಟೆಗಳನ್ನು ಭೇದಿಸಿ, ಉಪಚುನಾವಣೆಗಳನ್ನು ಗೆದ್ದಿತು.
ಈಗ ಲುಧಿಯಾನವನ್ನು ಗೆದ್ದು, ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡು, ದೇಶದ ರಾಜಕಾರಣದಲ್ಲಿ ಎಎಪಿ ವರ್ಚಸ್ಸನ್ನು ಪ್ರರ್ದಶಿಸುವುದು ಎಎಪಿಗೆ ಅತ್ಯಗತ್ಯವಾಗಿದೆ. ಹೀಗಾಗಿ, ”2022ರ ಸಂಗ್ರೂರ್ ಉಪಚುನಾವಣೆಯಲ್ಲಿ ನಿರ್ಣಾಯಕವಾಗಿದ್ದ ‘ಭಾವನಾತ್ಮಕ’ ನಿರ್ಧಾರಕ್ಕಿಂತ ಲುಧಿಯಾನ ಪಶ್ಚಿಮದ ಮತದಾರರು ಬಾಕಿ ಇರುವ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ‘ಪ್ರಾಯೋಗಿಕ’ ನಿರ್ಧಾರ ತೆಗೆದುಕೊಳ್ಳುತ್ತಾರೆ” ಎಂದು ಕೇಜ್ರಿವಾಲ್ ಆಶಿಸುತ್ತಿದ್ದಾರೆ.
ಪಂಜಾಬ್‌ನಲ್ಲಿ ಎಎಪಿ ಸರ್ಕಾರವು ರಿಯಲ್ ಎಸ್ಟೇಟ್ಅನ್ನು ಉತ್ತೇಜಿಸಲು ‘ಹೊಸ ಭೂ ಸಂಚಯನ ನೀತಿ’ಯನ್ನು ಪರಿಚಯಿಸಿದೆ. ಇದು ಡೆವಲಪರ್‌ಗಳ ಪ್ರಶಂಸೆ ಮತ್ತು ರೈತರ ಟೀಕೆಗೆ ಗುರಿಯಾಗಿದೆ. ಲುಧಿಯಾನವು ನಗರ ಪ್ರದೇಶವಾದ್ದರಿಂದ ಡೆವಲಪರ್‌ಗಳ ತಾಣವಾಗಿದೆ. ಅವರೆಲ್ಲರೂ ಈ ಉಪಚುನಾವಣೆಯಲ್ಲಿ ಎಎಪಿಗೆ ಎಂಬಲ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪಂಜಾಬ್ ಕಾಂಗ್ರೆಸ್‌ನಲ್ಲಿನ ನಾಯಕತ್ವ ಜಟಾಪಟಿ ಮೇಲೆ ಪರಿಣಾಮ?
ಪಂಜಾಬ್ ಕಾಂಗ್ರೆಸ್‌ನಲ್ಲಿ ನಾಯಕತ್ವದಲ್ಲಿ ಆಂತರಿಕ ಜಗಳಗಳು ನಡೆಯುತ್ತಿವೆ. ಕಾಂಗ್ರೆಸ್‌ನ ಹಾಲಿ ರಾಜ್ಯಾಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಮತ್ತು ಲುಧಿಯಾನ ಅಭ್ಯರ್ಥಿ ಭರತ್ ಭೂಷಣ್ ಆಶು ನಡುವೆ ರಾಜ್ಯಾಧ್ಯಕ್ಷ ಹುದ್ದೆ ವಿಚಾರದಲ್ಲಿ ಪೈಪೋಟಿ ನಡೆದಿದೆ. ಇದೇ ಹೊತ್ತಿನಲ್ಲಿ ಲುಧಿಯಾನ ಉಪಚುನಾವಣೆ ಎದುರಾಗಿದೆ. ಆದಾಗ್ಯೂ, ಈ ಉಪಚುನಾವಣೆಯೂ ಕಾಂಗ್ರೆಸ್‌ನಲ್ಲಿ ಪೈಪೋಟಿಯ ಕಣವಾಗಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ಇದೇ ಲುಧಿಯಾನದ ಸಂಸದರಾಗಿದ್ದಾರೆ. ಅಂತೆಯೇ, ಲುಧಿಯಾನ ನಗರದಲ್ಲಿ ಭರತ್ ಭೂಷಣ್ ಆಶು ಅವರು ಪಕ್ಷದ ಬಲಿಷ್ಠ ಮುಖವಾಗಿದ್ದಾರೆ. ಹೀಗಾಗಿ, ಉಪಚುನಾವಣೆಯಲ್ಲಿ ಆಶು ಅವರು ಗೆದ್ದರೆ, ಅವರ ಗೆಲುವು ಎದುರಾಳಿ ಅಭ್ಯರ್ಥಿಗಳ ವಿರುದ್ಧ ಮಾತ್ರವಲ್ಲ, ವಾರಿಂಗ್ ವಿರುದ್ಧವೂ ಆಗಿರಲಿದೆ ಎಂಬ ಅಭಿಪ್ರಾಯಗಳಿವೆ.
ಲೋಕಸಭಾ ಚುನಾವಣೆಯ ಸಮಯದಲ್ಲಿ ವಾರಿಂಗ್ ಅವರ ಪರವಾಗಿ ಆಶು ಅವರ ಬೆಂಬಲಿಗರು ಹೆಚ್ಚು ಪ್ರಚಾರ ನಡೆಸಲಿಲ್ಲ. ಹೀಗಾಗಿಯೇ, ಲುಧಿಯಾನ ನಗರ ಪ್ರದೇಶದಲ್ಲಿ ವಾರಿಂಗ್ ಅವರಿಗೆ ಹೆಚ್ಚಿನ ಮತಗಳು ಬರಲಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಲುಧಿಯಾನ ನಗರದ ಜನರು ಬಿಜೆಪಿ ಅಭ್ಯರ್ಥಿ ಬಿಟ್ಟು ಅವರಿಗೆ ಹೆಚ್ಚು ಮತ ಚಲಾಯಿಸಿದ್ದರು. ಆದಾಗ್ಯೂ, ಗ್ರಾಮೀಣ ಭಾಗಗಳ ಹೆಚ್ಚಿನ ಬೆಂಬಲದಿಂದಾಗಿ ವಾರಿಂಗ್ ಗೆದ್ದು, ಲೋಕಸಭೆ ಪ್ರವೇಶಿಸಿದ್ದರು.
ಮತ್ತೊಂದೆಡೆ, ಆಶು ಅವರನ್ನು ಪಂಜಾಬ್ ಸರ್ಕಾರ ಬಂಧಿಸಿದಾಗ, ಆಶು ಅವರ ನೆರವಿಗೆ ವಾರಿಂಗ್ ಬರಲಿಲ್ಲ ಎಂಬ ಆರೋಪಗಳೂ ಇವೆ. ಜೊತೆಗೆ, ಆಶು ಅವರೇ ಎಎಪಿ ಅಧ್ಯಕ್ಷರಾಗಬೇಕೆಂದು ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ, ಮತ್ತೊಬ್ಬ ಹಿರಿಯ ನಾಯಕ ರಾಣಾ ಗುರ್ಜೀತ್ ಸಿಂಗ್ ಕೂಡ ಬಯಸುತ್ತಿದ್ದಾರೆ.
ಆದಾಗ್ಯೂ, ವಾರಿಂಗ್ ಸೇರಿದಂತೆ ಪಂಜಾಬ್ ಕಾಂಗ್ರೆಸ್‌ನ ಎಲ್ಲ ನಾಯಕರು ಉಪಚುನಾವಣೆಯಲ್ಲಿ ಆಶು ಅವರ ಗೆಲುವಿಗಾಗಿ ಕಷ್ಟಪಟ್ಟು ಕೆಲಸ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಪಕ್ಷದ ಮುಖ್ಯಸ್ಥರಾಗಿರುವ ವಾರಿಂಗ್ ಅವರಿಗೆ ತಮ್ಮ ನಾಯಕತ್ವವನ್ನು ಭದ್ರಪಡಿಸಿಕೊಳ್ಳಲು ಆಶು (ಲುಧಿಯಾನ) ಗೆಲುವು ಅನಿವಾರ್ಯವಾಗಿದೆ.
ವಿಜಯ್ ರೂಪಾನಿ ಸಾವಿನಿಂದ ಮಂಕಾದ ಬಿಜೆಪಿ
ಇತ್ತೀಚೆಗೆ ನಡೆದ ಅಹಮದಾಬಾದ್ ವಿಮಾನ ದುರಂತದಲ್ಲಿ ಬಿಜೆಪಿಯ ಪಂಜಾಬ್ ಉಸ್ತುವಾರಿ, ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಸಾವನ್ನಪ್ಪಿದ್ದಾರೆ. ಅವರ ಸಾವಿನಿಂದಾಗಿ ಲುಧಿಯಾನದಲ್ಲಿ ಬಿಜೆಪಿ ಪ್ರಚಾರವು ಮಂಕಾಗಿದೆ.
ಎಎಪಿ ಮತ್ತು ಕಾಂಗ್ರೆಸ್‌ಗಿಂತ ತಡವಾಗಿ ತನ್ನ ಅಭ್ಯರ್ಥಿಯನ್ನು ಬಿಜೆಪಿ ಘೋಷಿಸಿತ್ತು. ಆದರೂ, 2024ರ ಲೋಕಸಭಾ ಚುನಾವಣೆಯಲ್ಲಿ ಲುಧಿಯಾನ ಪಶ್ಚಿಮ ಪ್ರದೇಶದಲ್ಲಿ ಭಾರೀ ಬೆಂಬಲ ಪಡೆದಿತ್ತು. ಲುಧಿಯಾನದಲ್ಲಿ ಪ್ರಧಾನಿ ಮೋದಿ ಪ್ರಚಾರ ನಡೆಸಿದ್ದು ಮತ್ತು ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿದ್ದ ರವನೀತ್ ಬಿಟ್ಟು ಅವರ ವೈಯಕ್ತಿಕ ವರ್ಚಸ್ಸು ಆ ಚುನಾವಣೆಯಲ್ಲಿ ಬಿಜೆಪಿ 13%ರಷ್ಟು ಮತಗಳ ಮುನ್ನಡೆ ಸಾಧಿಸಲು ಸಾಧ್ಯವಾಗಿತ್ತು. ಅಂದಿನ ಉತ್ತಮ ಪ್ರದರ್ಶನದಿಂದಾಗಿ ಈ ಉಪಚುನಾವಣೆಯಲ್ಲಿ ಗೆಲ್ಲುತ್ತೇವೆಂಬ ಆಶಾವಾದ ಬಿಜೆಪಿಯಲ್ಲಿದೆ.
2024ರ ಚುನಾವಣೆಯಲ್ಲಿ ಬಿಟ್ಟು ಸೋತರೂ, ಪಂಜಾಬ್‌ನಿಂದ ಕೇಂದ್ರ ಸರ್ಕಾರದಲ್ಲಿ ಪ್ರಾತಿನಿಧ್ಯ ಕೊಡಬೇಕೆಂಬ ಕಾರಣಕ್ಕೆ ಬಿಟ್ಟು ಅವರನ್ನು ಸಂಪುಟಕ್ಕೆ ಬಿಜೆಪಿ ಸೇರಿಸಿಕೊಂಡಿದೆ. ಈಗ, ಉಪಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವುದು ಬಿಟ್ಟು ಅವರಿಗೆ ಪ್ರತಿಷ್ಠೆಯ ಹೋರಾಟವಾಗಿದೆ. ಅವರು ತಮ್ಮ ಪಕ್ಷದ ಅಭ್ಯರ್ಥಿ ಜೀವನ್ ಲಾಲ್ ಗುಪ್ತಾ ಅವರ ಪರವಾಗಿ ಭಾರೀ ಕೆಲಸ ಮಾಡುತ್ತಿದ್ದಾರೆ. ಆದರೆ, ಗುಪ್ತಾ ಅವರು ಎಎಪಿಯ ಅರೋರಾ ಮತ್ತು ಕಾಂಗ್ರೆಸ್‌ನ ಆಶು ಅವರಿಗೆ ಪ್ರಬಲ ಪ್ರತಿಸ್ಪರ್ಧಿಯಲ್ಲ ಎಂಬ ಭಾವ ಅವರಲ್ಲಿದೆ.
ಈ ಲೇಖನ ಓದಿದ್ದೀರಾ?: ಇರಾನ್‌ನೊಂದಿಗೆ ಅಕ್ರಮ ಯುದ್ಧ ಆರಂಭಿಸಿ, ನಿಲ್ಲಿಸಲು ತಿಳಿಯದೆ ಅಮೆರಿಕ ಸಹಾಯ ಕೇಳುತ್ತಿದೆಯೇ ಇಸ್ರೇಲ್?
ಸ್ಥಳೀಯ ಮಾಹಿತಿಯ ಪ್ರಕಾರ, ಗುಪ್ತಾ ಅವರ ಭವಿಷ್ಯವು ಬಿಜೆಪಿಯ ಕಾರ್ಯಕರ್ತರು, ಬಿಟ್ಟು ಅವರ ಬೆಂಬಲಿಗರು ಹಾಗೂ ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದ ಜೊತೆಗಿನ ಸಂಘರ್ಷದ ವಿಚಾರಗಳಿಗೆ ಜನರು ಹೇಗೆ ಸ್ಪಂದಿಸುತ್ತಾರೆ ಎಂಬುದರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ.
ಎಸ್‌ಎಡಿ ಆಂತರಿಕ ಜಗಳವು ಗೆಲುವಿಗೆ ಅಡ್ಡಿಯಾಗಬಹುದು
ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದಾಗ ಲುಧಿಯಾನ ಪಶ್ಚಿಮ ಕ್ಷೇತ್ರವು ಬಿಜೆಪಿ ಪಾಲಿನಲ್ಲಿತ್ತು. ಆದ್ದರಿಂದ, ಕ್ಷೇತ್ರದಲ್ಲಿ ಎಸ್‌ಎಡಿಗೆ ಅಂತಹ ನೆಲೆಯೇನೂ ಇಲ್ಲ. ಆದರೂ, ಮೈತ್ರಿ ಕಳಚಿಕೊಂಡ ಬಳಿಕ ಎಸ್‌ಎಡಿ ಲುಧಿಯಾನವನ್ನು ಪ್ರವೇಶಿಸಿದೆ. ಈ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಪಕ್ಷವು ಲುಧಿಯಾನ ಪಶ್ಚಿಮ ಕ್ಷೇತ್ರದಲ್ಲಿ ಜನರೊಂದಿಗೆ ಪರಿಚಿತರಾಗಿರುವ ವಕೀಲ ಪರುಪ್ಕರ್ ಸಿಂಗ್ ಘುಮ್ಮನ್ ಅವರನ್ನು ಕಣಕ್ಕಿಳಿಸಿದೆ. ಆದರೆ, ಪಕ್ಷದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಮತ್ತು ಲುಧಿಯಾನ ಜಿಲ್ಲೆಯಲ್ಲಿನ ಪಕ್ಷದ ಪ್ರಬಲ ನಾಯಕ ದಖಾ ಶಾಸಕ ಮನ್ಪ್ರೀತ್ ಸಿಂಗ್ ಅಯಾಲಿ ನಡುವಿನ ಜಗಳದಿಂದಾಗಿ ಚುನಾವಣೆಯಲ್ಲಿ ಎಸ್‌ಎಡಿ ಪ್ರಭಾವ ಗೌಣವಾಗಲಿದೆ ಎಂದು ಹೇಳಲಾಗುತ್ತಿದೆ.
ಫಲಿತಾಂಶದಿಂದ ಏನಾಗಬಹುದು?
ಲುಧಿಯಾನ ನಗರವು ಭಾರತದ ಅತ್ಯಂತ 20 ಕಲುಷಿತ ನಗರಗಳ ಪಟ್ಟಿಯಲ್ಲಿ ಒಂದಾಗಿದೆ. ನಗರವು ಹಲವಾರು ಮೂಲಸೌಕರ್ಯಗಳ ಸಮಸ್ಯೆ, ಸಂಚಾರ ದಟ್ಟಣೆ ಹಾಗೂ ವಾಯು-ಜಲ ಮಾಲಿನ್ಯದಿಂದ ಬಳಲುತ್ತಿದೆ. ಇದರಲ್ಲಿ, ಲುಧಿಯಾನ ಪಶ್ಚಿಮವೂ ಹೊರತಾಗಿಲ್ಲ.
ಆದರೆ, ನಗರದ ಈ ಪರಿಸ್ಥಿತಿಗೆ ಅಲ್ಲಿನ ನಿವಾಸಿಗಳು ನಿರ್ದಿಷ್ಟವಾಗಿ ಯಾವುದೇ ಒಂದು ಪಕ್ಷದ ಮೇಲೆ ಆರೋಪ ಹೊರಿಸುತ್ತಿಲ್ಲ. ಆದರೂ, ರಾಜ್ಯದಲ್ಲಿ ಮತ್ತು ಪುರಸಭೆಯಲ್ಲಿ ಅಧಿಕಾರದಲ್ಲಿರುವ ಕಾರಣ ಎಎಪಿ ಹೆಚ್ಚು ಟೀಕೆಗಳನ್ನು ಎದುರಿಸುತ್ತಿದೆ. ಕಾಂಗ್ರೆಸ್ ಕೂಡ ಈ ಹಿಂದೆ ಅಧಿಕಾರದಲ್ಲಿದ್ದ ಕಾರಣ, ಟೀಕೆಗಳನ್ನು ಎದುರಿಸಲೇಬೇಕಿದೆ. ಬಿಜೆಪಿ ಕೂಡ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯ ಕಳಪೆ ಅನುಷ್ಠಾನದಿಂದಾಗಿ ಆಕ್ರೋಶವನ್ನು ಎದುರಿಸಬೇಕಾಗಿದೆ.
ಲುಧಿಯಾನ ಪಶ್ಚಿಮ ಕ್ಷೇತ್ರದಲ್ಲಿ ಪ್ರಬಲ ಜಾತಿಯ ಹಿಂದು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರೇ ಕ್ಷೇತ್ರದಲ್ಲಿ ಗೆಲವು-ಸೋಲಿನ ಲೆಕ್ಕಾಚಾರವನ್ನು ಹೆಚ್ಚಾಗಿ ಪ್ರಭಾವಿಸುತ್ತಾರೆ. ಈ ಕ್ಷೇತ್ರದಲ್ಲಿ ಇದೇ ಪ್ರಬಲ ಜಾತಿಯ ಮತದಾರರು 2017 ಮತ್ತು 2019ರಲ್ಲಿ ಕಾಂಗ್ರೆಸ್ ಅನ್ನು, 2022ರಲ್ಲಿ ಎಎಪಿಯನ್ನು ಹಾಗೂ 2024ರಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದರು.
ಉಪಚುನಾವಣೆಗಳಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಪಕ್ಷಕ್ಕೆ ಮತ ಚಲಾಯಿಸುವ ಇತಿಹಾಸವನ್ನು ಪಂಜಾಬ್ ಹೊಂದಿದೆ. ಆದಾಗ್ಯೂ, 2022ರ ಸಂಗ್ರೂರ್ ಉಪಚುನಾವಣೆ ಸೇರಿದಂತೆ ಕೆಲವು ಉಪಚುನಾವಣೆಗಳನ್ನೂ ಆಡಳಿತ ಪಕ್ಷಗಳು ಸೋತಿರುವ ಉದಾಹರಣೆಗಳೂ ಇವೆ. ಹೀಗಾಗಿ, ಎಎಪಿ ಹೇಗಾದರೂ ಕ್ಷೇತ್ರವನ್ನು ಗೆಲ್ಲಬೇಕೆಂದು ಕಸರತ್ತು ನಡೆಸುತ್ತಿದೆ. ಈ ನಡುವೆ, ಚುನಾವಣೆ ಗೆಲ್ಲುವುದಕ್ಕಾಗಿ ಎಎಪಿ ರಾಜ್ಯದ ಆಡಳಿತ-ಯಂತ್ರೋಪಕರಣಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್-ಬಿಜೆಪಿ ಆರೋಪಿಸುತ್ತಿವೆ.
ಸದ್ಯ, ಕೇಜ್ರಿವಾಲ್ ಸಂಸತ್ತು ಪ್ರವೇಶಿಸಲು ಅರೋರಾ ಗೆಲುವು ಅನಿವಾರ್ಯವಾಗಿದೆ. ಜೊತೆಗೆ, ಇನ್ನು 18 ತಿಂಗಳಲ್ಲಿ (2027) ಮತ್ತೆ ವಿಧಾನಸಭಾ ಚುನಾವಣೆ ಎದುರಾಗಲಿದೆ. ಆ ಚುನಾವಣೆಗೆ ಮುಂಚಿತವಾಗಿ ಎಎಪಿಗೆ ಈ ಗೆಲುವು ತನ್ನ ದಕ್ಷತೆಯನ್ನು ಉಳಿಸಿಕೊಂಡು, ಮುಂದೋಗಲು ನೆರವಾಗಲಿದೆ. ಒಂದು ವೇಳೆ, ಎಎಪಿ ಗೆದ್ದರೆ ಆಶ್ಚರ್ಯವೇನು ಇರುವುದಿಲ್ಲ. ಆದರೆ, ಸೋತರೆ ಎಎಪಿಗೆ ಮತ್ತೊಂದು ದುರಂತದ ಸಂಕೇತವಾಗಲಿದೆ.
ಮೂಲ: ದಿ ಕ್ವಿಂಟ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ