- ಮೂರು ಬಾರಿ ಮಧ್ಯಪ್ರದೇಶದ ಶಾಸಕರಾಗಿರುವ ದೀಪಕ್
- ವರ್ಷಾಂತ್ಯದಲ್ಲಿ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ
ಮಧ್ಯಪ್ರದೇಶ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಸಚಿವ ದೀಪಕ್ ಜೋಶಿ ಶನಿವಾರ (ಮೇ 6) ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಇದೇ ಡಿಸೆಂಬರ್‌ನಲ್ಲಿ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನವೇ ದೀಪಕ್ ಜೋಶಿ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ.
2018ರ ಚುನಾವಣೆಯ ನಂತರ ರಾಜ್ಯದಲ್ಲಿದ್ದ ಕಾಂಗ್ರೆಸ್ ಸರ್ಕಾರವನ್ನು ಎರಡು ವರ್ಷಗಳ ಒಳಗೆ ಉರುಳಿಸಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ತಂಡದವರ ಬಂಡಾಯದಿಂದ ಕಾಂಗ್ರೆಸ್ ಸರ್ಕಾರ ಉರುಳಿತ್ತು. ಇದೀಗ ಮತ್ತೆ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಾಂತರದ ಪರ್ವವೂ ಆರಂಭವಾಗಿದೆ.
ಭೋಪಾಲ್‌ನ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಕೈಲಾಶ್ ಜೋಶಿ ಅವರ ಪುತ್ರ ದೀಪಕ್ ಜೋಶಿ ಅವರು ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್‌ನಾಥ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.
ಹಿಂದಿನ ದಿನ ಮಾಜಿ ಬಿಜೆಪಿ ಶಾಸಕ ರಾಧೇಲಾಲ್ ಬಘೇಲ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.
ಕಾಂಗ್ರೆಸ್ ಸೇರ್ಪಡೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೀಪಕ್, ಬಿಜೆಪಿ ವಿರುದ್ಧ ತಮಗಿರುವ ಅಸಮಾಧಾನವನ್ನು ವಿವರಿಸಿದರು. “ನನ್ನ ಪತ್ನಿಗೆ ಕೋವಿಡ್ ಸೋಂಕು ತಗುಲಿದಾಗ ಇಂದೋರ್‌ನ ಆಸ್ಪತ್ರೆಗೆ ಸೇರಿಸಲು ಬಿಜೆಪಿ ಸರ್ಕಾರ ಯಾವುದೇ ಸಹಾಯ ಮಾಡಲಿಲ್ಲ. ಆಕೆ ಮೃತಪಟ್ಟಳು” ಎಂದು ದುಃಖ ತೋಡಿಕೊಂಡರು.
ಮಧ್ಯಪ್ರದೇಶ ಸರ್ಕಾರ ದೀಪಕ್ ಅವರ ಆರೋಪದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಸುದ್ದಿ ಓದಿದ್ದೀರಾ? ಉರಿಯುತ್ತಿರುವ ಮಣಿಪುರ | ಕುಕಿ-ಮೇಟಿ ಸಮುದಾಯಗಳ ನಡುವಿನ ಘರ್ಷಣೆಯ ಮೂಲವೇನು?
ದೀಪಕ್ (60) ಅವರು ಮೂರು ಬಾರಿ ಶಾಸಕರಾಗಿದ್ದಾರೆ. 2003ರಲ್ಲಿ ಮೊದಲ ಬಾರಿಗೆ ದೇವಾಸ್ ಜಿಲ್ಲೆಯ ಬಾಗ್ಲಿ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದರು. ಜ್ಯಾಟ್ಪಿಪ್ಲ್ಯಾ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದರು. ಮಧ್ಯಪ್ರದೇಶದಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.