ಇಂದಿರಾ, ರಾಜೀವ್, ಸೋನಿಯಾ ಮತ್ತು ರಾಹುಲ್ – ಮೂರು ತಲೆಮಾರಿನ ಗಾಂಧಿಯವರೊಂದಿಗೆ ಕೆಲಸ ಮಾಡಿರುವ ಕಮಲ್ ನಾಥ್ ಅವರು ಬ್ರಾಹ್ಮಣ ವ್ಯಾಪಾರಿ ಕುಟುಂಬದ ಹಿನ್ನೆಲೆ ಉಳ್ಳವರು. ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಕಮಲ್ ನಾಥ್ ಅವರ ರೀತಿಯಲ್ಲೇ ರಾಜಕೀಯದಲ್ಲಿ ಬೆಳೆದಿದ್ದಾರೆ.
ಔಹಾಣ್ ಅವರು ವಿದಿಶಾ ಪ್ರದೇಶದ ಒಬಿಸಿ ಸಮುದಾಯಕ್ಕೆ ಸೇರಿದವರು. ಅವರು ಬೆಳೆದಿದ್ದೆಲ್ಲವೂ ಇದೇ ಪ್ರದೇಶದಲ್ಲಿ. ಆದರೆ, ಕಮಲ್ ನಾಥ್ ಅವರು ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಬೆಳೆದವರು. ಹೀಗಾಗಿ, ಅವರು ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥರಾಗಿ ನೇಮಕಗೊಂಡಾಗಿನಿಂದ ಮಧ್ಯಪ್ರದೇಶದ ರಾಜಕೀಯದಲ್ಲಿ ‘ಹೊರಗಿನವರು’ ಎಂಬ ಹಣೆಪಟ್ಟಿಯನ್ನು ಎದುರಿಸುತ್ತಿದ್ದಾರೆ. ಆದರೆ, ಅವರ ರಾಜಕೀಯಕ್ಕೆ ‘ಹೊರಗಿನವರು’ ಎಂಬ ಪದ ಯಾವುದೇ ಸಂದರ್ಭದಲ್ಲೂ ತೊಡಕಾಗಿಲ್ಲ ಎಂಬುದು ವಿಶೇಷ.
1980ರಿಂದ ಬುಡಕಟ್ಟು ಪ್ರಾಬಲ್ಯ ಹೆಚ್ಚಿರುವ ಚಿಂದ್ವಾರಾ ಕ್ಷೇತ್ರವನ್ನು ಕಮಲ್ ನಾಥ್ ಪ್ರತಿನಿಧಿಸುತ್ತಿದ್ದಾರೆ. ಹಲವಾರು ದೊಡ್ಡ ಕೈಗಾರಿಕಾ ಸಂಸ್ಥೆಗಳನ್ನು ಹೊಂದಿರುವ ಕಮಲ್ ನಾಥ್ ಅವರು 134.24 ಕೋಟಿ ರೂ. (ಲೋಕಸಭೆ ಚುನಾವಣೆಗೆ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ) ಮೌಲ್ಯದ ಘೋಷಿತ ಆಸ್ತಿಯನ್ನು ಹೊಂದಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಕಮಲ್ ಅವರನ್ನು ತಮ್ಮ ಮೂರನೇ ಮಗ ಎಂದು ಕರೆದಿದ್ದರು. 1980ರ ಚುನಾವಣೆಯಲ್ಲಿ ಕಮಲ್ ನಾಥ್ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದ ಇಂದಿರಾ ಗಾಂಧಿ, “ಇವರು ನನ್ನ ಮೂರನೇ ಮಗ. ದಯವಿಟ್ಟು ಅವರಿಗೆ ಮತ ನೀಡಿ” ಎಂದಿದ್ದರು. ಆ ಕಾರಣದಿಂದಾಗಿ ಆ ಸಂದರ್ಭದಲ್ಲಿ, “ಇಂದಿರಾ ಕೆ ದೋ ಹಾಥ್, ಸಂಜಯ್ ಗಾಂಧಿ ಔರ್ ಕಮಲ್ ನಾಥ್” ಎಂಬ ಘೋಷಣೆಗಳು ಕೇಳಿಬಂದಿದ್ದವು.
ಸಂಜಯ್ ಗಾಂಧಿಯವರಿಗೂ ನಿಕಟವರ್ತಿಯಾಗಿದ್ದ ಕಮಲ್ ನಾಥ್ ಅವರು ರಾಜೀವ್ ಗಾಂಧಿಯವರ ವಿಶ್ವಾಸಾರ್ಹರಾಗಿದ್ದರು. ಮಿತ್ರಪಕ್ಷಗಳು ಮತ್ತು ವಿರೋಧವನ್ನು ನಿರ್ವಹಿಸುವ ಕೆಲಸವನ್ನು ಕಮಲ್ ನಾಥ್ ನಿರ್ವಹಿಸುತ್ತಿದ್ದರು. ಅವರು ಪ್ರಧಾನ ಮಂತ್ರಿಗಳಾದ ಪಿವಿ ನರಸಿಂಹ ರಾವ್ ಮತ್ತು ಮನಮೋಹನ್ ಸಿಂಗ್ ಅವರ ಅಡಿಯಲ್ಲಿ ಕೇಂದ್ರ ಸರ್ಕಾರದಲ್ಲಿ ವಿವಿಧ ಸಚಿವಾಲಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅವರ ನೇತೃತ್ವದಲ್ಲಿಯೇ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಕಮಲ್ ನಾಥ್ ಮುಖ್ಯಮಂತ್ರಿಯೂ ಆಗಿದ್ದರು. ಆದರೆ, ಈಗ ಕೇಂದ್ರ ಸಚಿವರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರು ತಮ್ಮ 21 ಮಿತ್ರ ಶಾಸಕರೊಂದಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಆಪರೇಷನ್ ಕಮಲಕ್ಕೆ ಬಲಿಯಾದ ಕಮಲ್ ನಾಥ್ ಸರ್ಕಾರ 2020ರಲ್ಲಿ ಪತನವಾಗಿತು.