ಕಳೆದ 35 ವರ್ಷಗಳಲ್ಲಿ ವಿವಿಧ ಚುನಾವಣೆಗಳಲ್ಲಿ ಸ್ಪರ್ಧಿಸಿ ಬರೋಬ್ಬರಿ 18 ಬಾರಿ ಸೋಲುಂಡಿರುವ ವ್ಯಕ್ತಿಯೊಬ್ಬರು ಮತ್ತೊಮ್ಮೆ ಚುನಾವಣಾ ಕಣಕ್ಕಿಳಿದಿದ್ದಾರೆ. ಮಧ್ಯಪ್ರದೇಶದ ಇಂಧೋರ್-4 ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಇಂಧೋರ್ ನಿವಾಸಿ, 63 ವರ್ಷದ ಪರಮಾನಂದ ಟೋಲಾನಿ ಅವರು 18 ಬಾರಿ ಸೋಲು ಕಂಡರೂ ಆತ್ಮಸ್ಥೈರ್ಯ ಕಳೆದುಕೊಂಡಿಲ್ಲ. ರಿಯಲ್ ಎಸ್ಟೇಟ್ ಉದ್ಯಮಿ ಆಗಿರುವ ಅವರು 18 ಬಾರಿಯೂ ಠೇವಣಿ ಕಳೆದುಕೊಂಡಿದ್ದಾರೆ. ತಮ್ಮ ಸೋಲುಗಳಿಂದಲೇ ‘ಇಂಧೋರ್ ಧರ್ತಿ ಪಕಡ್’ ಎಂಬ ಹೆಸರು ಪಡೆದಿದ್ದಾರೆ. ಇದೀಗ ಅವರು 19ನೇ ಬಾರಿಗೆ ಸ್ಪತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಅವರ ಕುಟುಂಬ ರಾಜಕೀಯೇತರ ಹಿನ್ನೆಲೆಯಿಂದ ಬಂದಿದ್ದು, ಕಳೆದ ಎರಡು ತಲೆಮಾರುಗಳಿಂದ ಚುನಾವಣೆಗೆ ಸ್ಪರ್ಧಿಸಿ ಹೆಸರುವಾಸಿಯಾಗಿದೆ. ಆದರೆ, ಅವರ ಕುಟುಂಬದ ಯಾವುದೇ ಸದಸ್ಯರು ಯಾವುದೇ ಚುನಾವಣೆಯಲ್ಲಿ ಗೆದ್ದಿಲ್ಲ. ಬದಲಿಗೆ, ಆ ಕುಟುಂಬದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಎಲ್ಲರೂ ತಮ್ಮ ಭದ್ರತಾ ಠೇವಣಿ ಕಳೆದುಕೊಂಡಿದ್ದಾರೆ. ಅವರ ತಂದೆ ಕೂಡ 30 ವರ್ಷಗಳ ಕಾಲ ವಿವಿಧ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ.
ಸೋಮವಾರ ನಾಮಪತ್ರ ಸಲ್ಲಿಸಿರುವ ಟೋಲಾನಿ, “ಇದು ನನ್ನ 19ನೇ ಚುನಾವಣೆ. ಇದಕ್ಕೂ ಮುನ್ನ ಲೋಕಸಭೆ, ವಿಧಾನಸಭೆ, ಮೇಯರ್ ಸ್ಥಾನ ಸೇರಿದಂತೆ 18 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಒಮ್ಮೆ ಮೇಯರ್ ಸ್ಥಾನ ಮಹಿಳಾ ಅಭ್ಯರ್ಥಿಗೆ ಮೀಸಲಾಗಿದ್ದರಿಂದ ಪತ್ನಿ ಲಕ್ಷ್ಮಿ ಟೋಲಾನಿ ಅವರನ್ನು ಮೇಯರ್ ಚುನಾವಣೆಯಲ್ಲಿ ಕಣಕ್ಕಿಳಿಸಿದ್ದೆ” ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
“ಪ್ರತಿ ಬಾರಿಯೂ ಚುನಾವಣಾ ಆಯೋಗವು ತಮ್ಮ ಭದ್ರತಾ ಠೇವಣಿ ಮುಟ್ಟುಗೋಲು ಹಾಕಿಕೊಳ್ಳಬೇಕಾದರೂ, ಚುನಾವಣೆಯಲ್ಲಿ ಸ್ಪರ್ಧಿಸುವ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ” ಎಂದು ಟೋಲಾನಿ ಹೇಳಿದ್ದಾರೆ.
“ಇಂದೋರ್‌ನ ಜನರು ತುಂಬಾ ಬುದ್ಧಿವಂತರು. ಅವರು ಖಂಡಿತವಾಗಿಯೂ ನನ್ನನ್ನು ಎಂದಾದರೂ ಗೆಲ್ಲಿಸುತ್ತಾರೆ ಎಂಬ ಭರವಸೆ ಇದೆ” ಎಂದು ಅವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬಿಜೆಪಿ-ಜೆಡಿಎಸ್ ಮೈತ್ರಿ | ನಾವು ಸ್ವತಂತ್ರವಾಗಿರುತ್ತೇವೆ ಎಂದ ಕೇರಳ ಜೆಡಿಎಸ್
ಚುನಾವಣೆಯಲ್ಲಿ ಗೆದ್ದರೆ, 1,000 ಚದರ ಅಡಿ ವಿಸ್ತೀರ್ಣದ ಕಟ್ಟಡಗಳ ಆಸ್ತಿ ತೆರಿಗೆಯಿಂದ ಜನರಿಗೆ ಸಂಪೂರ್ಣ ವಿನಾಯತಿ ನೀಡುತ್ತೇನೆ. ಮನೆ-ಮನೆ ಕಸ ಸಂಗ್ರಹ ಮಾಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.
“ಇಂಧೋರ್‌ನಲ್ಲಿ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದ ನನ್ನ ತಂದೆ ಮೆಥಾರಾಮ್ ಟೋಲಾನಿ ಅವರು ತಮ್ಮ ಜೀವಿತಾವಧಿಯಲ್ಲಿ 30 ವರ್ಷಗಳ ಕಾಲ ನಿರಂತರವಾಗಿ ವಿವಿಧ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. 1988ರಲ್ಲಿ ನನ್ನ ತಂದೆಯ ನಿಧನದ ನಂತರ ನಾನು 1989ರಿಂದ ಚುನಾವಣೆಗೆ ಸ್ಪರ್ಧಿಸಲು ಆರಂಭಿಸಿದ್ದೇನೆ” ಎಂದು ಅವರು ತಿಳಿಸಿದ್ದಾರೆ.