ಈ ವರ್ಷದ ಕೊನೆಯಲ್ಲಿ ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನವೇ ಸರ್ಕಾರದ ಪ್ರಮುಖ ಇಲಾಖೆಗಳ ಕಡತಗಳಿದ್ದ ಭವನಕ್ಕೆ ಬೆಂಕಿ ಬಿದ್ದು ಎಲ್ಲವೂ ಸುಟ್ಟುಹೋಗಿವೆ. ಈ ಹಿಂದೆಯೂ ಚುನಾವಣೆಯ ಸಮಯದಲ್ಲಿ ಅದೇ ಕಟ್ಟಡಕ್ಕೆ ಎರಡು ಬಾರಿ ಬೆಂಕಿ ಬಿದ್ದಿತ್ತು. ಹೀಗಾಗಿ, ಬಿಜೆಪಿಯ ದುರುದ್ದೇಶದಿಂದಲೇ ಬೆಂಕಿಯ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.
ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ಮುಖ್ಯಮಂತ್ರಿ ಕಚೇರಿಯಿಂದ 100 ಮೀ. ಮತ್ತು ಅಗ್ನಿಶಾಮಕ ಠಾಣೆ ಕೇಂದ್ರ ಕಚೇರಿಯಿಂದ ಕೇವಲ 200 ಮೀ. ದೂರದಲ್ಲಿರುವ ಸಾತ್ಪುರ ಭವನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಭವನದ ಮೂರು ಮಹಡಿಗಳಿಗೆ ಬೆಂಕಿ ವ್ಯಾಪಿಸಿದ್ದು, ಅಲ್ಲಿದ್ದ ಎಲ್ಲ ಕಡತಗಳು ಸಂಪೂರ್ಣ ಸುಟ್ಟು ಹೋಗಿವೆ.
ಮಂಗಳವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಮೂರನೇ ಮಹಡಿಯಲ್ಲಿ ಶಾರ್ಟ್ಸರ್ಕ್ಯೂಟ್ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಅಧಿಕಾರಿಗಳ ಸಮನ್ವಯದ ಕೊರತೆಯಿಂದಾಗಿ, ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದೆ. ಐದನೇ ಮಹಡಿಯಲ್ಲಿದ್ದ ಆರೋಗ್ಯ ಇಲಾಖೆ, ಲೋಕಾಯುಕ್ತದ ದೂರು ಶಾಖೆ, ವೈದ್ಯಕೀಯ ದಾಖಲೆಗಳ ಶಾಖೆ ಮತ್ತು ಹೂಡಿಕೆ ನೀತಿ ಕಚೇರಿಯ ಸಾವಿರಾರು ಕಡತಗಳು ಸುಟ್ಟುಹೋಗಿವೆ. ಆರನೇ ಮಹಡಿಯಲ್ಲಿ ಭಾರತೀಯ ಆಡಳಿತ ಸೇವೆ (ಐಎಎಸ್), ರಾಜ್ಯ ಆಡಳಿತ ಸೇವೆ ಮತ್ತಿತರರ ಸೇವಾ ಪುಸ್ತಕಗಳೂ ಸುಟ್ಟು ಬೂದಿಯಾಗಿವೆ.
ಸತತ 16 ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಂದಿಸಲಾಗಿದೆ. ಘಟನೆಯ ಕಾರಣಗಳ ಕುರಿತು ತನಿಖೆ ಮಾಡಲು ರಾಜ್ಯ ಸರ್ಕಾರವು ಹಿರಿಯ ಅಧಿಕಾರಿಗಳ ಸಮಿತಿಯನ್ನು ರಚಿಸಿದೆ.
“ಹವಾನಿಯಂತ್ರಣದಲ್ಲಿನ (ಎಸಿ) ಶಾರ್ಟ್ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡು, ಗಾಳಿಯಿಂದಾಗಿ ಇತರ ಮಹಡಿಗಳೂ ವ್ಯಾಪಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಯಾವುದೇ ಸಾವುನೋವು ವರದಿಯಾಗಿಲ್ಲ. ಆದರೆ ಪ್ರಮುಖ ಕಡತಗಳು ಬೂದಿಯಾಗಿವೆ” ಎಂದು ಭೋಪಾಲ್ ಪೊಲೀಸ್ ಕಮಿಷನರ್ ಹರಿನಾರಾಯಣಚಾರಿ ಮಿಶ್ರಾ ತಿಳಿಸಿದ್ದಾರೆ.
ಒಂದು ದಶಕದಲ್ಲಿ ಇದು ಮೂರನೇ ಬಾರಿಗೆ ಸಾತ್ಪುರ ಭವನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾಕತಾಳೀಯವೆಂಬಂತೆ, 2012 ಮತ್ತು 2018ರಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಬೆಂಕಿ ಹೊತ್ತಿಕೊಂಡಿತ್ತು. ಈ ಬಾರಿಯೂ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ಈ ಸರ್ಕಾರಿ ಕಟ್ಟಡದ ಮೂರನೇ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
“ಭವನದ ಮೂರನೇ ಮಹಡಿಯಲ್ಲಿನ ಬೆಂಕಿ ಹೊತ್ತಿಕೊಂಡಿದೆ ಎಂದು ಸಂಜೆ 4.29ಕ್ಕೆ ಕರೆ ಬಂತು. 15-20 ನಿಮಿಷಗಳಲ್ಲಿ ಎರಡು ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವ ಕಾರ್ಯ ನಡೆಸಲಾಯಿತು. ನಾವು ಅಲ್ಲಿಗೆ ಹೋಗುವುದರಲ್ಲಿ, ಬೆಂಕಿ ಹೊತ್ತಿ ಉರಿಯುತ್ತಿತ್ತು” ಎಂದು ಭೋಪಾಲ್ನ ಅಗ್ನಿಶಾಮಕ ಅಧಿಕಾರಿ ರಮೇಶ್ ನೀಲ್ ಹೇಳಿದ್ದಾರೆ.
ಮೂಲಗಳ ಪ್ರಕಾರ, ಮರದ ವಸ್ತುಗಳಿಂದ ಹೊಸದಾಗಿ ನವೀಕರಿಸಿದ ಕಚೇರಿಗಳಿಗೆ ಬೆಂಕಿ ಆವರಿಸಿಕೊಂಡು ಸುಮಾರು ಒಂದು ಗಂಟೆ ತಡವಾಗಿ ಅಗ್ನಿಶಾಮಕ ಕಚೇರಿಗೆ ಕರೆ ಮಾಡಲಾಗಿದೆ. ಮಹಾನಗರ ಪಾಲಿಕೆಯ ಎಲ್ಲ ನೀರಿನ ಟ್ಯಾಂಕರ್ಗಳನ್ನು ಹಾಲಿ ಸಚಿವ ವಿಶ್ವಾಸ್ ಸಾರಂಗ್ ಆಯೋಜಿಸಿದ್ದ ‘ವಿಷ್ಣು ಪುರಾಣ’ ಕಥಾ ವಾಚನಕ್ಕೆ ಕಳುಹಿಸಿದ್ದರಿಂದ ಅಗ್ನಿಶಾಮಕ ಸಿಬ್ಬಂದಿಯೂ ನೀರಿಗಾಗಿ ಪರದಾಡುವಂತಾಗಿದೆ.
“ಎಲ್ಲ ಕಡತಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳ ಸೇವಾ ಪುಸ್ತಕಗಳು ಮತ್ತು ಕೋವಿಡ್-19ಗೆ ಸಂಬಂಧಿಸಿದ ಫೈಲ್ಗಳು ನಾಶವಾಗಿವೆ. ದಾಖಲೆಗಳು ಮತ್ತು ಡೇಟಾವನ್ನು ಹಿಂಪಡೆಯಲು ಪ್ರಯತ್ನಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ. ಆದರೆ ಸುಟ್ಟ ದಾಖಲೆಗಳನ್ನು ಹಿಂಪಡೆಯುವುದು ಅಸಾಧ್ಯವಾಗಿದೆ” ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಧ್ಯಪ್ರದೇಶ ಚುನಾವಣೆಯ ಭಾಗವಾಗಿ ಮಂಗಳವಾರ ಜಬಲ್ಪುರದಲ್ಲಿ ಮೊದಲ ರ್ಯಾಲಿ ನಡೆಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಆಡಳಿತಾರೂಢ ಸರ್ಕಾರದ ಭ್ರಷ್ಟಾಚಾರದ ಕುರಿತು ವಾಗ್ದಾಳಿ ನಡೆಸಿದ್ದರು. ಅವರು ಭಾಷಣದ ಒಂದು ಗಂಟೆಯ ಬಳಿಕ ಸಾತ್ಪುರ ಭವನದಲ್ಲಿ ಬೆಂಕಿ ಕಾಸಿಕೊಂಡಿದೆ. ಆಡಳಿತಾರೂಢ ಬಿಜೆಪಿ ಉದ್ದೇಶಪೂರ್ವಕವಾಗಿ ಘಟನೆ ಸಂಭವಿಸುವಂತೆ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
“12,000 ಕಡತಗಳು ಸುಟ್ಟು ಕರಕಲಾಗಿವೆ. ಬಿಜೆಪಿ ಸರ್ಕಾರವು ತನ್ನ ‘ಭ್ರಷ್ಟಾಚಾರ’ ಸಂಬಂಧಿತ ಕಡತಗಳನ್ನು ಸುಡಲು ಪ್ರಯತ್ನಿಸುತ್ತಿದೆ. ಈ ಬೆಂಕಿ ತನ್ನಷ್ಟಕ್ಕೆ ಹೊತ್ತಿಕೊಂಡಿತೇ ಅಥವಾ ಕಟ್ಟಡಕ್ಕೆ ಬೆಂಕಿ ಹಚ್ಚಲಾಗಿದೆಯೇ? ಘಟನೆಯ ಹಿಂದಿನ ಕಾರಣವೇನು? ಇದು ಭ್ರಷ್ಟಾಚಾರದ ವಿಷಯವಾಗಿದ್ದು, ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕು” ಎಂದು ಅಲ್ಲಿನ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಒತ್ತಾಯಿಸಿದ್ದಾರೆ.
“ಬಿಜೆಪಿ ಸರ್ಕಾರವು ‘ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಎಂದಿಗೂ ಸಿದ್ಧವಾಗಿಲ್ಲ’. ಅವರಿಗೆ ತಿಳಿದಿರುವ ಏಕೈಕ ವಿಷಯ ಹಣ ಗಳಿಸುವುದು ಹೇಗೆ ಎಂಬುದು” ಎಂದು ಕಮಲ್ ನಾಥ್ ಕಿಡಿ ಕಾರಿದ್ದಾರೆ.
ಕಟ್ಟಡವನ್ನು ಪರಿಶೀಲಿಸಲು ಪ್ರಯತ್ನಿಸಿದ ಪ್ರತಿಪಕ್ಷ ನಾಯಕ ಗೋವಿಂದ್ ಸಿಂಗ್ ನೇತೃತ್ವದ ಕಾಂಗ್ರೆಸ್ ನಾಯಕರ ನಿಯೋಗವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಸಿಂಗ್ ಮಾತ್ರವೇ ಕಟ್ಟಡಕ್ಕೆ ಹೋಗಲು ಅವಕಾಶ ಕೊಟ್ಟಿದ್ದರು.
ಘಟನೆಯ ಬಗ್ಗೆ ಮಾತನಾಡಿರುವ ಸಿಂಗ್, “ಭ್ರಷ್ಟಾಚಾರವು ಬಹಿರಂಗವಾಗುವ ಭಯದಲ್ಲಿ ಎಲ್ಲ ಕಡತಗಳನ್ನು ಉದ್ದೇಶಪೂರ್ವಕವಾಗಿ ಸುಡಲಾಗಿದೆ. ವ್ಯಾಪಂ ನಂತರ ನರ್ಸಿಂಗ್ ಕಾಲೇಜು ಹಗರಣವನ್ನು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಸಿಬಿಐ ತನಿಖೆ ನಡೆಸುತ್ತಿದೆ. ಎಸ್ಟಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಮತ್ತು ಹಾಸ್ಟೆಲ್ಗಳಲ್ಲಿ 3,000 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ. ಅದೆಲ್ಲದಕ್ಕೂ ಸಂಬಂಧಿಸಿದ ಕಡತಗಳನ್ನು ಸುಟ್ಟು ಹಾಕಲಾಗಿದೆ” ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಗಾಲ್ವಾನ್ ಘರ್ಷಣೆಗೆ ಮೂರು ವರ್ಷ: ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ನ ಮಾಧ್ಯಮ ಘಟಕದ ಉಸ್ತುವಾರಿ ಕೆ.ಕೆ.ಮಿಶ್ರಾ, “ಚುನಾವಣೆ ಸಮೀಪದಲ್ಲಿರುವಾಗ ಬೆಂಕಿ ಅವಘಡ ಸಂಭವಿಸುತ್ತಿರುವುದು ಇದೇ ಮೊದಲಲ್ಲ. 2013ರ ವಿಧಾನಸಭೆ ಚುನಾವಣೆಗೂ ಮುನ್ನ ಇದೇ ರೀತಿಯ ಬೆಂಕಿ ಕಾಣಿಸಿಕೊಂಡಿತ್ತು. ಅದೇ ರೀತಿ 2018ರಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಂಡ ವಾರದ ನಂತರ ಮಧ್ಯರಾತ್ರಿ ಭೋಪಾಲ್ ಮುನ್ಸಿಪಲ್ ಕಾರ್ಪೋರೇಷನ್ನ ರೆಕಾರ್ಡ್ ರೂಂ ಸುಟ್ಟು ಕರಕಲಾಗಿತ್ತು” ಎಂದು ವಿವರಿಸಿದ್ದಾರೆ.
ಬಿಜೆಪಿ ಆಡಳಿತದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ. 2018 ಮತ್ತು 2013 ರಲ್ಲಿ ಇಲಾಖೆಗಳ ಮುಖ್ಯ ಕಚೇರಿಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಈಗ, ಚುನಾವಣೆಗೆ ಎರಡರಿಂದ ನಾಲ್ಕು ತಿಂಗಳು ಬಾಕಿ ಇರುವಾಗ ಮತ್ತೆ ಬೆಂಕಿ ಹೊತ್ತಿಕೊಂಡಿದೆ. ಆರೋಗ್ಯ, ಸಾರಿಗೆ, ಆಯುಷ್, ವ್ಯಾಪಂ, ನರ್ಸಿಂಗ್, ಎನ್ಎಚ್ಎಂ ಮತ್ತು ಕೊರೊನಾ ಸಂಬಂಧಿತ ದಾಖಲೆಗಳು ಸುಟ್ಟುಹೋಗಿವೆ” ಎಂದು ಅವರು ಹೇಳಿದ್ದಾರೆ.