ಸ್ಥಳೀಯ ಸಮಸ್ಯೆಗಳ ಮೇಲೆ ಹೆಚ್ಚಾಗಿ ಕೇಂದ್ರೀಕರಿಸಿದ ಕಾಂಗ್ರೆಸ್, ಮಧ್ಯಪ್ರದೇಶದಲ್ಲಿ ತನ್ನ ಚುನಾವಣಾ ಪ್ರಚಾರವನ್ನು ಮುನ್ನಡೆಸಲು ಸ್ಥಳೀಯ ಮುಖಗಳಿಗೆ ಮಹತ್ವ ನೀಡಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಬಿಜೆಪಿ ಪ್ರಚಾರವು ಲೋಕಸಭಾ ಚುನಾವಣೆಯನ್ನು ಹೋಲುವ ರೀತಿಯಲ್ಲಿ ನಡೆದಿದೆ. ಅಂದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಲ್ಲೆಡೆ ಸ್ಟಾರ್ ಪ್ರಚಾರಕಾಗಿ ಕಾಣಿಸುತ್ತಿದ್ದರು. ಎಲ್ಲಾ ಭಾಗಗಳಿಗೂ ಮೋದಿ ಅವರು ಭೇಟಿ ನೀಡಿದ್ದರು.
ಉದಾಹರಣೆಗೆ, ಮಧ್ಯಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ರ್ಯಾಲಿಗಳ ಪ್ರಾರಂಭ ಮತ್ತು ಅಂತ್ಯದಲ್ಲಿ ಹಾಕಲಾಗಿದ್ದ ಹಾಡಿನ ಆರಂಭಿಕ ಸಾಲುಗಳು ಹೀಗಿವೆ: “ಮೋದಿ ಕೆ ದಿಲ್ ಮೇ ಎಂಪಿ, ಎಂಪಿ ಕೆ ದಿಲ್ ಮೇ ಮೋದಿ (ಮೋದಿ ಅವರ ಹೃದಯದಲ್ಲಿ ಮಧ್ಯಪ್ರದೇಶ; ಪ್ರಧ್ಯಪ್ರದೇಶದ ಹೃದಯದಲ್ಲಿ ಮೋದಿ ಇದ್ದಾರೆ).” ಈ ರೀತಿಯಲ್ಲಿ ಮೋದಿ ಅವರಿಗೆ ಪ್ರಾಮುಖ್ಯತೆ ನೀಡಲಾಗಿತ್ತು.
ಇನ್ನು, ಮಧ್ಯಪ್ರದೇಶದಲ್ಲಿ ಎರಡು ದಶಕಗಳಿಂದ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಈ ಬಾರಿ ಘೋಷಿತ ಮುಖ್ಯಮಂತ್ರಿ ಮುಖವಾಗಿರಲಿಲ್ಲ. ಚಂಬಲ್ ಪ್ರದೇಶದ ಠಾಕೂರ್ ನಾಯಕ ನರೇಂದ್ರ ಸಿಂಗ್ ತೋಮರ್, ಒಬಿಸಿ ಲೋಧಿ ಸಮುದಾಯದ ನಾಯಕ ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ಆದಿವಾಸಿ ನಾಯಕ ಫಗ್ಗನ್ ಸಿಂಗ್ ಕುಲಸ್ತೆ ಅವರಂತಹ ಕೇಂದ್ರ ಸಚಿವರನ್ನು ಚುನಾವಣಾ ಪ್ರಚಾರದಲ್ಲಿ ಮುನ್ನೆಲೆಯಲ್ಲಿ ಇರಿಸಲಾಗಿತ್ತು. ಒಂದು ವೇಳೆ ಪಕ್ಷವು ಮತ್ತೆ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆ ಮುಕ್ತವಾಗಿದೆ ಎಂಬ ಬಲವಾದ ಸಂಕೇತವನ್ನು ಈ ಮುಖಗಳು ರವಾನಿಸಿವೆ.
ಕಾಂಗ್ರೆಸ್ ಕೂಡ ಕಮಲ್ ನಾಥ್ ಅವರು ಮುಖ್ಯಮಂತ್ರಿ ಮುಖವೆಂದು ಘೋಷಿಸದಿದ್ದರೂ, ರಾಜ್ಯದಲ್ಲಿ ಕೇಂದ್ರ ನಾಯಕರಿಗಿಂತ ಹೆಚ್ಚಾಗಿ ಎಲ್ಲೆಡೆ ಕಮಲ್ ನಾಥ್ ಸದ್ದು ಮಾಡಿದ್ದರು. ಹಾಗಾಗಿ, ಅವರನ್ನು ಕಾಂಗ್ರೆಸ್‌ನ ಅಘೋಷಿತ ಮುಖ್ಯಮಂತ್ರಿ ಮುಖವೆಂದೇ ಹೇಳಲಾಗುತ್ತಿದೆ.
ಇನ್ನು, 2018ರಲ್ಲಿ ಅಧಿಕಾರಕ್ಕೇರಿ 2020ರಿಂದ ಪತನಗೊಂಡ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರದ 15 ತಿಂಗಳನ್ನು ಹೊರತುಪಡಿಸಿ, ಎರಡು ದಶಕಗಳ ಕಾಲ ಅಧಿಕಾರದಲ್ಲಿದ್ದ ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಅಂಶಗಳನ್ನು ಮುನ್ನೆಲೆ ತರುವಲ್ಲಿಯೂ ಕಾಂಗ್ರೆಸ್ ವಿಫಲವಾದಂತಿದೆ.
ಸದ್ಯ, ಮತ ಎಣಿಕೆ ನಡೆಯುತ್ತಿದ್ದು, 230 ಕ್ಷೇತ್ರಗಳ ಪೈಕಿ ಬಿಜೆಪಿ 150 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯತೆ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಚಾರವು ಮಧ್ಯಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿಸಲು ನೆವರಾಗಿದೆ ಎನ್ನಲಾಗಿದೆ. ಕಾಂಗ್ರೆಸ್ 69 ಸ್ಥಾನಗಳಲ್ಲಿ ಮಾತ್ರವೇ ಮುನ್ನಡೆ ಸಾಧಿಸಿದೆ.