ಈ ವರ್ಷದ ಅಂತ್ಯದಲ್ಲಿ ಮಧ್ಯಪ್ರದೇಶ ಚುನಾವಣೆ ನಡೆಯಲಿದೆ. ಅಲ್ಲಿ ಅಪರೇಷನ್ ಕಮಲಕ್ಕೆ ಬಲಿಯಾಗಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್, ಈ ಬಾರಿಯ ಚುನಾವಣೆಯಲ್ಲಿ ಹಲವು ಗ್ಯಾರಂಟಿಗಳನ್ನು ಜನರ ಮುಂದಿಟ್ಟಿದೆ. ಕಾಂಗ್ರೆಸ್ ಗ್ಯಾರಂಟಿಗಳಿಗೆ ಬೆದರಿರುವ ಆಡಳಿತಾರೂಢ ಬಿಜೆಪಿ ಕೂಡ ಹಲವಾರು ಭರವಸೆಗಳನ್ನು ನೀಡಲು ಮುಂದಾಗಿದೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ರಾಜ್ಯದ ಪತ್ರಿ ಮನೆಗೆ ತಲಾ ಒಂದು ಉದ್ಯೋಗ ನೀಡುವುದಾಗಿ ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
2020ರ ಮಾರ್ಚ್‌ನಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ಮತ್ತು ಅವರ 22 ಬೆಂಬಲಿತ ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಪರಿಣಾಮ, ಕಾಂಗ್ರಸ್ ಅಧಿಕಾರ ಕಳೆದುಕೊಂಡಿತು. ಬಿಜೆಪಿ ಅಧಿಕಾರಕ್ಕೇರಿತು. ಆಪರೇಷನ್ ಕಮಲದ ಮೂಲಕ ಅಧಿಕಾರ ಪಡೆದ ಬಿಜೆಪಿ ಮೂರುವರೆ ವರ್ಷಗಳ ಕಾಲ ಆಡಳಿತ ನಡೆಸಿದೆ. ಆದರೆ, ‘ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಯುವಜನರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ. ನಿರುದ್ಯೋಗ ಹೆಚ್ಚಾಗಿದೆ’ ಎಂದು ಕಾಂಗ್ರೆಸ್ ಆರೋಪಿಸುತ್ತಲೇ ಇದೆ.
ಈ ನಡುವೆ, ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ, ರಾಜ್ಯದ ಪ್ರತಿ ಮನೆಯಲ್ಲಿ ಒಬ್ಬರಿಗೆ ಉದ್ಯೋಗ ನೀಡುವುದಾಗಿ ಮುಖ್ಯಮಂತ್ರಿ ಚೌಹಾಣ್ ಭರವಸೆ ನೀಡಿದ್ದಾರೆ. ಅವರ ಮಾತುಗಳಿಗೆ ವಿರೋಧ ವ್ಯಕ್ತವಾಗಿದ್ದು, ಅಧಿಕಾರದಲ್ಲಿದ್ಧಾಗಲೇ ಉದ್ಯೋಗ ಕೊಡದವರು, ಮತ್ತೊಮ್ಮೆ ಅಧಿಕಾರಕ್ಕೆ ಬಂದು ಉದ್ಯೋಗ ಕೊಡುತ್ತಾರೆಯೇ ಎಂಬ ವ್ಯಂಗ್ಯದ ಮಾತುಗಳು ಕೇಳಿಬಂದಿವೆ. ಕುತೂಹಲಕಾರಿ ಸಂಗತಿ ಎಂದರೆ, ಕಳೆದ ಮೂರು ವರ್ಷಗಳಲ್ಲಿ ಕೇವಲ 21 ಮಂದಿಗೆ ಮಾತ್ರ ಸರ್ಕಾರಿ ಮತ್ತು ಅರೆ ಸರ್ಕಾರಿ ಉದ್ಯೋಗ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ?: ದೆಹಲಿಯ ಬಡಗಿಗಳೊಂದಿಗೆ ಬೆರೆತು ಕೆಲಸ ಮಾಡಿ, ಕಷ್ಟಸುಖ ವಿಚಾರಿಸಿದ ರಾಹುಲ್ ಗಾಂಧಿ
ಮಧ್ಯಪ್ರದೇಶದ ಅಲಿರಾಜಪುರದಲ್ಲಿ ನಡೆದ ಸಭೆಯಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಮಾತನಾಡಿದ್ದು, “ನಾನು ರಾಜ್ಯದ ಜನರ ತೊಂದರೆಗಳನ್ನು ತೊಡೆದು ಹಾಕುತ್ತೇನೆ. ಮತ್ತೊಮ್ಮೆ ನಾವು ಅಧಿಕಾರಕ್ಕೆ ಬಂದರೆ, ಪ್ರತಿ ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ ನೀಡುತ್ತೇವೆ. ಉದ್ಯೋಗ ಹರಸಿ ಯಾರೂ ವಲಸೆ ಹೋಗುವ ಪರಿಸ್ಥಿತಿ ಇರುವುದಿಲ್ಲ” ಎಂದು ಹೇಳಿದ್ದಾರೆ.
“ಸ್ವ-ಸಹಾಯ ಗುಂಪುಗಳು, ಉದ್ಯಮ ಕ್ರಾಂತಿ ಯೋಜನೆಗಳ ಮೂಲಕ ಉದ್ಯೋಗ ನೀಡಲಾಗುತ್ತದೆ. ಖಾಲಿ ಇರುವ ಸರ್ಕಾರಿ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತದೆ” ಎಂದು ಹೇಳಿದ್ದಾರೆ.
ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಕೆಕೆ ಮಿಶ್ರಾ, “ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ. ಈಗ ಅವರು ಭವಿಷ್ಯದಲ್ಲಿ ಉದ್ಯೋಗ ನೀಡುವ ಬಗ್ಗೆ ಹೇಳುತ್ತಿದ್ದಾರೆ. ಮತ್ತೊಮ್ಮೆ ನಿರುದ್ಯೋಗಿ ಯುವಕರನ್ನು ವಂಚಿಸಲು ಅವರು ಯತ್ನಿಸುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಅಂದಹಾಗೆ, ಮಧ್ಯಪ್ರದೇಶದಲ್ಲಿ 39 ಲಕ್ಷ ಯುವಜನರು ನಿರುದ್ಯೋಗಿಗಳಾಗಿದ್ದಾರೆ. ಇವರ ಪೈಕಿ ಕೇವಲ 21 ಮಂದಿಗೆ ಮಾತ್ರ ಕಳೆದ ಮೂರು ವರ್ಷಗಳಲ್ಲಿ ಸರ್ಕಾರ ಮತ್ತು ಅರೆ ಸರ್ಕಾರಿ ಉದ್ಯೋಗಗಳನ್ನು ನೀಡಲಾಗಿದೆ. ಈ ಬಗ್ಗೆ ಸ್ವತಃ ಮಧ್ಯಪ್ರದೇಶದ ಕ್ರೀಡಾ ಮತ್ತು ಯುವ ಕಲ್ಯಾಣ ಸಚಿವ ಯಶೋಧರ ರಾಜೇ ಸಿಂಧಿಯಾ ಅವರು ಮಾರ್ಚ್‌ನಲ್ಲಿ ನಡೆದ ಮಧ್ಯಪ್ರದೇಶ ವಿಧಾನಸಭಾ ಅಧಿವೇಶನದಲ್ಲಿ ಮಾಹಿತಿ ನೀಡಿದ್ದಾರೆ. ಅಲ್ಲದೆ, 2022ರ ಏಪ್ರಿಲ್ ವೇಳೆಗೆ 25.8 ಲಕ್ಷ ಮಂದಿ ನಿರುದ್ಯೋಗಿಗಳಿದ್ದರು. ಈಗ ಅವರ ಸಂಖ್ಯೆ 39 ಲಕ್ಷಕ್ಕೆ ಏರಿಕೆಯಾಗಿದೆ.