ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಒತ್ತಾಯಿಸಲಾಗಿದೆ ಎಂಬ ಆರೋಪದ ಮೇಲೆ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಶಾಲೆಯೊಂದರ ಮಾನ್ಯತೆಯನ್ನು ರದ್ದುಪಡಿಸಲಾಗಿದೆ. ಅಲ್ಲದೆ, ಶಾಲೆಯ ಪ್ರಾಂಶುಪಾಲರು ಸೇರಿದಂತೆ ಮೂವರು ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಮೇ ತಿಂಗಳ ಕೊನೆಯಲ್ಲಿ ಗಂಗಾ ಜಮುನಾ ಹೈಯರ್ ಸೆಕೆಂಡರಿ ಶಾಲೆಯ ಬೋರ್ಡ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ 18 ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದ ಪೋಸ್ಟರ್‌ವೊಂದು ವೈರಲ್ ಆಗಿತ್ತು. ಪೋಸ್ಟರ್‌ನಲ್ಲಿದ್ದ ಕೆಲವು ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿದ್ದರು. ಅದನ್ನು ಮುಸ್ಲಿಮೇತರ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಆ ಬಳಿಕ, ವಿವಾದ ಮುನ್ನೆಲೆಗೆ ಬಂದಿತ್ತು.
ಹಿಂದುತ್ವವಾದಿ ಕೋಮು ಸಂಘಟನೆಗಳು ಧಾರ್ಮಿಕ ಮತಾಂತರದ ನಡೆಯುತ್ತಿದೆ ಎಂಬ ಆರೋಪಗಳನ್ನು ಮಾಡಿದ್ದವು. ಶಾಲೆಯ ನೋಂದಣಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದವು. ಆದರೆ, ಶಾಲೆಯಲ್ಲಿ ಸ್ಕಾರ್ಫ್ ಧರಿಸುವುದು ಸಮವಸ್ತ್ರದ ಭಾಗವಾಗಿದೆ. ಯಾವುದೇ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಒತ್ತಾಯಿಸಿಲ್ಲ ಎಂದು ಶಾಲೆಯ ಆಡಳಿತ ಮಂಡಳಿ ಹೇಳಿರುವುದಾಗಿ ‘ಟಿಐಇ‘ ವರದಿ ಮಾಡಿದೆ.
ಈ ಮಧ್ಯೆ, ಪ್ರಕರಣ ಸಂಬಂಧ ಶಾಲೆಯ ಪ್ರಾಂಶುಪಾಲೆ ಅಫ್ಶಾ ಶೇಖ್, ಗಣಿತ ಶಿಕ್ಷಕ ಅನಾಸ್ ಅತಾಹರ್ ಮತ್ತು ಭದ್ರತಾ ಸಿಬ್ಬಂದಿ ರುಸ್ತಮ್ ಅಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
“ಮುಖ್ಯವಾಗಿ ಶಾಲಾ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದ ಸದಸ್ಯರನ್ನು ಒಳಗೊಂಡ ಆರು-ಏಳು ಸಾಕ್ಷಿಗಳ ಹೇಳಿಕೆಗಳನ್ನು ಆಧರಿಸಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ” ಎಂದು ದಾಮೋಹ್ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಸಿಂಗ್ ಹೇಳಿದ್ದಾರೆ. ಅವರೆಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಶಾಲಾ ಆಡಳಿತ ಸಮಿತಿಯ 11 ಸದಸ್ಯರ ವಿರುದ್ಧ ಐಪಿಸಿ ಸೆಕ್ಷನ್ 295 (ಯಾವುದೇ ಸಮುದಾಯ ವ್ಯಕ್ತಿಗಳು ಪವಿತ್ರವೆಂದು ಪರಿಗಣಿಸುವ ಯಾವುದೇ ವಸ್ತುವನ್ನು ಹಾನಿಗೊಳಿಸುವುದು ಅಥವಾ ಅಪವಿತ್ರಗೊಳಿಸುವುದು) ಮತ್ತು 506 (ಅಪರಾಧ ಬೆದರಿಕೆ) ಹಾಗೂ ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ-2021ರ ನಿಬಂಧನೆಗಳ ಅಡಿಯಲ್ಲಿ ದಾಮೋಹ್ ಪೊಲೀಸರು ಜೂನ್ 7 ರಂದು ಪ್ರಕರಣ ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: 2002ರ ಗುಜರಾತ್ ಗಲಭೆ | ಬೆಸ್ಟ್ ಬೇಕರಿ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಖುಲಾಸೆ
ಜೂನ್ 2 ರಂದು, ರಾಜ್ಯ ಶಿಕ್ಷಣ ಇಲಾಖೆಯು ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸಿದೆ. ವಿದ್ಯಾರ್ಥಿಗಳಿಗೆ ಮೀಸಲಾದ ಹಲವಾರು ಸೌಲಭ್ಯಗಳು ಅವರಿಗೆ ಲಭ್ಯವಿಲ್ಲ ಎಂದು ಆರೋಪಿಸಲಾಗಿದೆ. ಅಲ್ಲದೆ, ಶಾಲೆಯು ಅನಧಿತ ಕಟ್ಟಡವೆಂದು ಪರಿಗಣಿಸಿ ಕಟ್ಟದ ಭಾಗಗಳನ್ನು ಕಡವುವುದಾಗಿ ಸ್ಥಳೀಯ ಪುರಸಭೆ ಬೆದರಿಕೆ ಹಾಕಿದೆ ಎಂದು ತಿಳಿದುಬಂದಿದೆ.
ಈ ಶಾಲೆಯನ್ನು 2010ರಲ್ಲಿ ಗಂಗಾ ಜಮುನಾ ವೆಲ್ಫೇರ್ ಸೊಸೈಟಿ ಸ್ಥಾಪಿಸಿತ್ತು. ಸುಮಾರು 1,200 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇವರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಕಾರ್ಮಿಕ ಕುಟುಂಬಗಳ ಹಿನ್ನೆಲೆ ಹೊಂದಿದ್ದಾರೆ. ಅವರ ಪೋಷಕರು ಕೂಲಿಗಳು, ರೈತರು ಮತ್ತು ಬೀಡಿ ತಯಾರಕರಾಗಿ ಕೆಲಸ ಮಾಡುತ್ತಾರೆ ಎಂದು ವರದಿಯಾಗಿದೆ.