ಮಧ್ಯಪ್ರದೇಶದಲ್ಲಿ ಮತ ಎಣಿಕೆಯ ಆರಂಭದಲ್ಲೇ ಬಿಜೆಪಿ ಸರಳ ಬಹುಮತಕ್ಕೆ ಅಗತ್ಯವಿರುವ ಸ್ಥಾನಗಳನ್ನು ದಾಟಿ ಮುನ್ನಡೆ ಸಾಧಿಸಿದೆ ಮತ್ತೊಮ್ಮೆ ಅಧಿಕಾರಕ್ಕೇರುತ್ತೇವೆಂದು ಬಿಜೆಪಿ ಭರವಸೆಯಲ್ಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿ.ಡಿ ಶರ್ಮಾ ಅವರು ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದು, ಮತ ಹಾಕಿದ ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಇತ್ತೀಚಿನ ಮಾಹಿತಿ ಪ್ರಕಾರ, ಪ್ರಸ್ತುತ ಮಧ್ಯಪ್ರದೇಶದಲ್ಲಿ ಬಿಜೆಪಿ 143 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 59 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಗೊಂಡ್ವಾನಾ ಗಣತಂತ್ರ ಪಕ್ಷ (ಜಿಜಿಪಿ) ಮತ್ತು ಬಿಎಸ್‌ಪಿ ತಲಾ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿವೆ.
ರಾಜ್ಯದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಭೋಪಾಲ್‌ನ ಗೋವಿಂದಪುರದ ಬಿಜೆಪಿ ಅಭ್ಯರ್ಥಿ ಕೃಷ್ಣ ಗೌರ್ ಪ್ರತಿಪಾದಿಸಿದ್ದಾರೆ.
2024ರ ಲೋಕಸಭೆಯಲ್ಲಿ ಎಲ್ಲ 29 ಸ್ಥಾನಗಳನ್ನು ಗೆಲ್ಲುವುದು ನಮ್ಮ ಮುಂದಿನ ಗುರಿಯಾಗಿದೆ. ಕಾಂಗ್ರೆಸ್ ತನ್ನ ಸೋಲನ್ನು ಅರ್ಥಮಾಡಿಕೊಂಡಿದೆ. ಇದು ನಮಗೆ ಐತಿಹಾಸಿಕ ಜಯವಾಗಲಿದೆ. ಬಿಜೆಪಿ ಸರ್ಕಾರದಲ್ಲಿ ರಾಜ್ಯ ಮತ್ತು ದೇಶದ ಭವಿಷ್ಯ ಸುಭದ್ರವಾಗಿದೆ ಎಂದು ಅವರು ಹೇಳಿದ್ದಾರೆ.
ಮಧ್ಯಪ್ರದೇಶದ 16ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಬಾಬುಲಾಲ್ ಗೌರ್ ಅವರ ಸೊಸೆ ಕೃಷ್ಣ ಗೌರ್ ಅವರು ಗೋವಿಂದಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸ್ಥಾನವಿಲ್ಲ ಮತ್ತು ಮಧ್ಯಾಹ್ನ 12 ರ ನಂತರ ಅದರ ಸೋಲಿಗೆ ಇವಿಎಂ ಯಂತ್ರಗಳನ್ನು ದೂಷಿಸುತ್ತಾರೆ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ನರಸಿಂಗ್‌ಪುರ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.