ಬಿಹಾರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ವಿರೋಧ ಪಕ್ಷಗಳ ಮೈತ್ರಿಕೂಟ ಮಹಾಘಟಬಂಧನ ನಿರ್ಧರಿಸಲಿದೆ. ಆದರೆ ಮೈತ್ರಿಕೂಟದಲ್ಲಿ ಪ್ರಮುಖ ಪಕ್ಷವಾಗಿರುವ ಕಾರಣ ಆರ್‌ಜೆಡಿಗೆ ಕಾನೂನುಬದ್ಧ ಹಕ್ಕಿದೆ ಎಂದು ಅಜಮ್‌ಗಢದ ಸಮಾಜವಾದಿ ಪಕ್ಷದ ಸಂಸದ ಧರ್ಮೇಂದ್ರ ಯಾದವ್ ಹೇಳಿದ್ದಾರೆ.
ಬಿಹಾರದಲ್ಲಿ ನವೆಂಬರ್ ಒಳಗಾಗಿ ವಿಧಾನಸಭೆ ಚುನಾವಣೆ ನಡೆಯಲಿದೆ. ಒಂದೆಡೆ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ ಆಡಾಳಿತರೂಢ ಪಕ್ಷ ಜೆಡಿಯು ಮಿತ್ರ ಪಕ್ಷ ಬಿಜೆಪಿ ಜೊತೆ ಪ್ರಚಾರ ನಡೆಸುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್, ಆರ್‌ಜೆಡಿ ಒಳಗೊಂಡ ವಿಪಕ್ಷಗಳ ಮೈತ್ರಿಕೂಟ ಪ್ರಚಾರದಲ್ಲಿ ತೊಡಗಿದೆ. ಎರಡೂ ಕಡೆಯ ಸಿಎಂ ಅಭ್ಯರ್ಥಿ ಯಾರು ಎಂಬ ಬಗ್ಗೆ ಚರ್ಚೆಯೂ ಶುರುವಾಗಿದೆ.
ಇದನ್ನು ಓದಿದ್ದೀರಾ? ಎನ್‌ಡಿಎ ಸರ್ಕಾರ ಬಿಹಾರದ ಜನರ ಮೇಲೆ ಹೊರೆ, 15 ವರ್ಷ ಹಳೆಯ ವಾಹನದಂತೆ ಸ್ಕ್ರಾಪ್ ಮಾಡಬೇಕು: ತೇಜಸ್ವಿ ಯಾದವ್
ಆರ್‌ಜೆಡಿ ತೇಜಸ್ವಿ ಯಾದವ್ ಅವರೇ ಮಹಾಘಟಬಂಧನದ ಸಿಎಂ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿದ್ದರೆ ಕಾಂಗ್ರೆಸ್ ಮಾತ್ರ ಎಲ್ಲಿಯೂ ಈ ಬಗ್ಗೆ ಸ್ಪಷ್ಟಣೆಯನ್ನು ನೀಡಿಲ್ಲ. ಈ ಬಗ್ಗೆ ಮಾಧ್ಯಮಗಳು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನೂ ಪ್ರಶ್ನಿಸಿದ್ದು ರಾಹುಲ್ ಉತ್ತರಿಸಿಲ್ಲ.
ಇವೆಲ್ಲವುದರ ನಡುವೆ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರದಲ್ಲಿ ಆರ್‌ಜೆಡಿಗೆ ಕಾನೂನುಬದ್ಧ ಹಕ್ಕಿದೆ ಎಂದು ಎಸ್‌ಪಿ ಸಂಸದ ಧರ್ಮೇಂದ್ರ ಯಾದವ್ ಹೇಳಿಕೊಂಡಿದ್ದಾರೆ. ಹಾಗೆಯೇ, “ಬಿಹಾರದಲ್ಲಿ ಯಾವ ಪಕ್ಷ ಪ್ರಬಲವಾಗಿದೆ, ಅದರ ನಾಯಕ ಯಾರು ಎಂಬುದು ಎಲ್ಲರಿಗೂ ತಿಳಿದಿದೆ” ಎಂದೂ ಹೇಳಿದ್ದಾರೆ.
“ಸ್ವಾಭಾವಿಕವಾಗಿಯೇ ಆರ್‌ಜೆಡಿ ಬಿಹಾರದಲ್ಲಿ ಪ್ರಮುಖ ಪಕ್ಷವಾಗಿದೆ. ಹಾಗಾಗಿ ಆರ್‌ಜೆಡಿಗೆ ತನ್ನದೇ ಆದ ಹಕ್ಕಿದೆ. ಆದರೂ ಅಂತಿಮವಾಗಿ ನಿರ್ಧಾರವನ್ನು ತೆಗೆದುಕೊಳ್ಳುವುದು ಮಹಾಘಟಬಂಧನ ಒಕ್ಕೂಟ” ಎಂದರು.
