ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವೆಂದು ಕರೆಯಲಾಗುವ ಮಹಾ ಕುಂಭಮೇಳವು ಪ್ರಯಾಗ್‌ರಾಜ್ ನಗರನಲ್ಲಿ ನಡೆಯುತ್ತಿದೆ. ಉತ್ತರ ಪ್ರದೇಶ ಸರ್ಕಾರ ಮಂಗಳವಾರ ನೀಡಿದ ಮಾಹಿತಿ ಪ್ರಕಾರ ಕಳೆದ 17 ದಿನಗಳಲ್ಲಿ 15 ಕೋಟಿಗೂ ಅಧಿಕ ಭಕ್ತರು ಕುಂಭಮೇಳದಲ್ಲಿ ಭಾಗಿಯಾಗಿ, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಕುಂಭಮೇಳವನ್ನು ಬಿಜೆಪಿ ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ನೋಡುವ ಬಿಜೆಪಿ ಹಲವು ಕೇಂದ್ರ ಸಚಿವರು ಆರಂಭದಿಂದಲೇ ಮಹಾ ಕುಂಭಮೇಳವನ್ನು ರಾಜಕೀಯಗೊಳಿಸುತ್ತಿದ್ದಾರೆ. ಜೊತೆಗೆ, ರಾಜನಾಥ್ ಸಿಂಗ್ ಮತ್ತು ಕಿರಣ್ ರಿಜಿಜು ಸೇರಿದಂತೆ ಹಲವಾರು ಕೇಂದ್ರ ಸಚಿವರು ಮಹಾ ಕುಂಭಮೇಳಕ್ಕೆ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಾಬಾ ರಾಮದೇವ್ ಮತ್ತು ಇತರ ಸಂತರು ಮತ್ತು ಸಾಧುಗಳು ಗಂಗೆಯಲ್ಲಿ ಸ್ನಾನ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಕುಂಭಮೇಳ | ಗಂಗೆಯಲ್ಲಿ ಪಾಪ ತೊಳೆಯುವ ಭಕ್ತರಿಗೆ ರೋಗವೇ ಪ್ರಸಾದ!
ಈ ಎಲ್ಲಾ ಬೆಳವಣಿಗೆ ನಡುವೆ ಈಗ ಸುದ್ದಿಯಾಗುತ್ತಿರುವುದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಹೇಳಿಕೆ. ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹಾ ಕುಂಭಮೇಳದಲ್ಲಿ (ಪವಿತ್ರ) ಸ್ನಾನ ಮಾಡಿದ್ದಾರೆ. ಕೇಂದ್ರ ಸಚಿವರ ಈ ರಾಜಕೀಯ ನಾಟಕವನ್ನು ಟೀಕಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು, “ಅಮಿತ್ ಶಾ ಗಂಗೆಯಲ್ಲಿ ಮಿಂದೆದ್ದರೆ ಬಡತನ ನಿರ್ಮೂಲನೆಯಾಗದು” ಎಂದು ಹೇಳಿದ್ದಾರೆ. ಸದ್ಯ ಈ ಹೇಳಿಕೆಯು ವಿವಾದಕ್ಕೆ ತಿರುಗಿದೆ.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, “ಬಿಜೆಪಿ ನಾಯಕರು ಕ್ಯಾಮೆರಾಗಳಿಗಾಗಿ ಗಂಗಾ ನದಿಯಲ್ಲಿ ಸ್ನಾನ ಮಾಡಲು ಪರಸ್ಪರ ಪೈಪೋಟಿ ನಡೆಸುತ್ತಿದ್ದಾರೆ” ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ತಾನು ಯಾರ ನಂಬಿಕೆಗೂ ನೋವುಂಟು ಮಾಡಲು ಬಯಸುವುದಿಲ್ಲ ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ.
“ಗಂಗಾ ಸ್ನಾನ ಮಾಡಿದರೆ ಬಡತನ ಕೊನೆಗೊಳ್ಳುತ್ತದೆಯೇ? ಅದು ನಿಮ್ಮ ಹೊಟ್ಟೆಯನ್ನು ತುಂಬಿಸುತ್ತದೆಯೇ? ನಾನು ಯಾರ ನಂಬಿಕೆಯನ್ನು ಪ್ರಶ್ನಿಸಲು ಬಯಸುವುದಿಲ್ಲ. ಯಾರಿಗಾದರೂ ಇದು ತಪ್ಪಾಗಿ ಭಾವಿಸಿದರೆ, ನಾನು ಕ್ಷಮೆಯಾಚಿಸುತ್ತೇನೆ. ಆದರೆ ಹೇಳಿ, ಒಂದು ಮಗು ಹಸಿವಿನಿಂದ ಸಾಯುತ್ತಿರುವಾಗ, ಶಾಲೆಗೆ ಹೋಗಲು ಸಾಧ್ಯವಾಗದೆ ಇದ್ದಾಗ, ಕಾರ್ಮಿಕರಿಗೆ ಅವರ ಬಾಕಿ ಹಣ ಸಿಗದಿರುವ ಸಮಯದಲ್ಲಿ ಈ ಜನರು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ (ಗಂಗಾ ಸ್ನಾನ) ಮಾಡಲು ಸ್ಪರ್ಧೆ ನಡೆಸುತ್ತಿದ್ದಾರೆ” ಎಂದು ಖರ್ಗೆ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕುಂಭಮೇಳ | ಭಕ್ತರ ಪಾಪ ತೊಳೆಯುತ್ತಿದ್ದಾರೆ ಶೌಚಾಲಯ ಸ್ವಚ್ಛಗೊಳಿಸುವವರು!
ಯಾವುದೇ ನಂಬಿಕೆಯೂ ಧಾರ್ಮಿಕ ಚೌಕಟ್ಟನ್ನು ಹೊಂದಿರುವುದು ನಿಜ. ಯಾವುದೇ ಧರ್ಮವಾದರೂ, ಯಾರದೇ ನಂಬಿಕೆಯಾದರೂ ನಾವು ಕೀಳಾಗಿ ಕಾಣಬಾರದು, ಗೌರವಿಸಬೇಕು. ಈ ದೃಷ್ಟಿಯಲ್ಲಿ ನೋಡಿದಾಗ ರಾಜಕಾರಣಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಭಾಗಶಃ ತಪ್ಪಾಗಿ ಕಾಣಬಹುದು.
ಆದರೆ ಧಾರ್ಮಿಕ ನಂಬಿಕೆಗೂ ಮೀರಿ ಬಡತನ, ನಿರುದ್ಯೋಗ, ಅಪೌಷ್ಠಿಕತೆ ಇಂತಹ ಹಲವು ಸಮಸ್ಯೆಗಳು ಜನರನ್ನು ಕುಕ್ಕಿ ತಿನ್ನುತ್ತಿದೆ. ಅದೆಷ್ಟೋ ಹಸುಲೆಗಳು ಹಾಲಿಲ್ಲದೆ ಹಸಿವಿನಿಂದ ಸಾವನ್ನಪ್ಪುತ್ತಿರುವಾಗ ಕ್ಷೀರಾಭಿಷೇಕದ ನೆಪದಲ್ಲಿ ಹಾಲನ್ನು ಮೂರ್ತಿಗೆ ಎರೆಯುವುದು ಎಷ್ಟು ಅಸಮಂಜಸವೋ ಹಾಗೆಯೇ ದೇಶದಲ್ಲಿ ಬಡತನ ಹೆಚ್ಚಾಗುತ್ತಿರುವಾಗ ಯಾವುದೇ ಕಾರ್ಯಕ್ರಮಕ್ಕೆ ದುಂದುವೆಚ್ಚ ಸರಿಯೇ?