ಚುನಾವಣೆಗಳಿಗೆ ಸ್ಪರ್ಧಿಸುವವರಿಗೆ ಹಣ, ಜಾತಿ, ತೋಳ್ಬಲ ಇರಬೇಕು ಎಂಬುದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ. ಆದರೆ, ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವವರನ್ನು ಜನ ಹೆಚ್ಚು ಆಯ್ಕೆ ಮಾಡುತ್ತಿರುವುದು ಮಾತ್ರ ಅಪಾಯಕಾರಿ ಬೆಳವಣಿಗೆ. ಮಹಾರಾಷ್ಟ್ರದಲ್ಲಿ ಶಾಸಕರಾಗಿ ಆಯ್ಕೆ ಆದ ಕೆಲವರು ಕೊಲೆಯಂತಹ ಗಂಭೀರ ಪ್ರಕರಣ ಎದುರಿಸುತ್ತಿದ್ದಾರೆ. ಒಬ್ಬ ಅತ್ಯಾಚಾರದ ಆರೋಪಿ ಇದ್ದಾನೆ!
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮತ್ತು ಎಲೆಕ್ಷನ್ ವಾಚ್ ಮಹಾರಾಷ್ಟ್ರ 2024ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ 288 ಅಭ್ಯರ್ಥಿಗಳ ಪೈಕಿ 286 ಅಭ್ಯರ್ಥಿಗಳ ಸ್ವಯಂ ಪ್ರಮಾಣ ಪತ್ರಗಳನ್ನು ವಿಶ್ಲೇಷಣೆಗೆ ಒಳಪಡಿಸಿದೆ. ಅದರ ಪ್ರಕಾರ 187 ಮಂದಿಯ ವಿರುದ್ಧ ಕ್ರಿಮಿನಲ್ ಆರೋಪಗಳಿವೆ. ಒಬ್ಬ ಅತ್ಯಾಚಾರದ ಆರೋಪಿ, ಇಬ್ಬರಿಗೆ ಸಾಕ್ಷರತೆ ಮಾತ್ರ ಇದೆಯಂತೆ. ಆದರೆ ಕೋಟ್ಯಾಧಿಪತಿಗಳಿಗೆ ಕೊರತೆಯೇನಿಲ್ಲ. ಗೆದ್ದ ಬಹುತೇಕರು ಕೋಟಿ ಕೋಟಿ ಕುಳಗಳು. ಅಷ್ಟೇ ಅಲ್ಲ ಕ್ರಿಮಿನಲ್‌ಗಳನ್ನೂ ಮತದಾರ ಪ್ರಭುಗಳು ತಿರಸ್ಕರಿಸಿಲ್ಲ! ರೌಡಿಗಳು, ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರು, ಸಮಾಜದ ಶಾಂತಿ ಕದಡುವ ದೊಂಬಿಕೋರರು ನಮ್ಮನ್ನಾಳುವ ನಾಯಕರಾಗುತ್ತಿರುವುದು ಪ್ರಜಾಪ್ರಭುತ್ವದ ವ್ಯಂಗ್ಯ. ಇಂತಹ ವ್ಯಕ್ತಿಗಳಿಗೆ ಪಕ್ಷಗಳು ಮಣೆ ಹಾಕುತ್ತಿವೆ ಎಂಬುದು ಅವು ತಲುಪಿರುವ ನೈತಿಕ ಅಧಪತನವನ್ನು ಸೂಚಿಸುತ್ತದೆ.
ಶೇ 65% ವಿಜೇತರು ಕ್ರಿಮಿನಲ್ ಹಿನ್ನೆಲೆಯವರು!
2024ರಲ್ಲಿ ವಿಶ್ಲೇಷಣೆಗೆ ಒಳಪಡಿಸಿದ 286 ವಿಜೇತ ಅಭ್ಯರ್ಥಿಗಳಲ್ಲಿ 187 (65%) ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದಾರೆ. 2019ರ ಚುನಾವಣೆಯ ಸಂದರ್ಭದಲ್ಲಿ ವಿಶ್ಲೇಷಿಸಿದ 285 ಶಾಸಕರಲ್ಲಿ 176 (62%) ಶಾಸಕರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದರು. ಅಂದರೆ ಐದು ವರ್ಷಗಳಲ್ಲಿ ಶೇಕಡಾ ಮೂರರಷ್ಟು ಹೆಚ್ಚಾಗಿದೆ. ಇದರಲ್ಲಿ 118 ಮಂದಿ ಅಂದ್ರೆ ಶೇ 41 ಮಂದಿ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. 2019ರ ಚುನಾವಣೆಯ ಸಂದರ್ಭದಲ್ಲಿ 113 ಶಾಸಕರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದರು. ಅಂದ್ರೆ ಶೇ 40 ಇತ್ತು.
ಕೊಲೆ/ಕೊಲೆ ಯತ್ನ ಆರೋಪಿಗಳು: 3 ವಿಜೇತ ಅಭ್ಯರ್ಥಿಗಳು ತಮ್ಮ ವಿರುದ್ಧ ಕೊಲೆ (IPC ಸೆಕ್ಷನ್-302) ಮತ್ತು ಜೀವಾವಧಿ ಅಪರಾಧಕ್ಕೆ(IPC ಸೆಕ್ಷನ್-303) ಸಂಬಂಧಿಸಿದ ಪ್ರಕರಣ ಎದುರಿಸುತ್ತಿದ್ದಾರೆ. 11 ವಿಜೇತ ಅಭ್ಯರ್ಥಿಗಳು ತಮ್ಮ ವಿರುದ್ಧ ಕೊಲೆ ಯತ್ನ (ಐಪಿಸಿ ಸೆಕ್ಷನ್-307) ಪ್ರಕರಣಗಳು ಇರುವುದಾಗಿ ಘೋಷಿಸಿಕೊಂಡಿದ್ದಾರೆ.
ಮಹಿಳೆಯರ ವಿರುದ್ಧದ ಅಪರಾಧ: 10 ವಿಜೇತ ಅಭ್ಯರ್ಥಿಗಳು ತಮ್ಮ ಮೇಲೆ ಮಹಿಳೆಯರ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳು ಇರುವುದಾಗಿ ಘೋಷಿಸಿದ್ದಾರೆ. ಈ ಹತ್ತರಲ್ಲಿ ಒಬ್ಬಾತ ಅತ್ಯಾಚಾರ ಆರೋಪಿ (IPC ಸೆಕ್ಷನ್-376).

ಪಕ್ಷವಾರು: ಬಿಜೆಪಿಯಿಂದ 132 ವಿಜೇತ ಅಭ್ಯರ್ಥಿಗಳಲ್ಲಿ 92 (70%), ಶಿವಸೇನೆಯ 57 ವಿಜೇತ ಅಭ್ಯರ್ಥಿಗಳಲ್ಲಿ 38 (67%), ಎನ್‌ಸಿಪಿಯಿಂದ 41 ವಿಜೇತ ಅಭ್ಯರ್ಥಿಗಳಲ್ಲಿ 20 (49%), 13( ಶಿವಸೇನೆಯ 20 ವಿಜೇತ ಅಭ್ಯರ್ಥಿಗಳಲ್ಲಿ 65% (ಉದ್ಧವ್ ಠಾಕ್ರೆ), 9 (56%) ಕಾಂಗ್ರೆಸ್‌ನಿಂದ 16 ವಿಜೇತ ಅಭ್ಯರ್ಥಿಗಳು, ಎನ್‌ಸಿಪಿ(ಶರದ್‌ಚಂದ್ರ ಪವಾರ್)ಯ 8 ವಿಜೇತರಲ್ಲಿ 5(63%) ಮತ್ತು ಎಸ್‌ಪಿಯ 2 ವಿಜೇತರಲ್ಲಿ 2 (100%) ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇರುವುದನ್ನು ಘೋಷಿಸಿದ್ದಾರೆ.

ಗಂಭೀರ ಕ್ರಿಮಿನಲ್ ಪ್ರಕರಣ ಪಕ್ಷವಾರು : ಬಿಜೆಪಿಯಿಂದ 132 ವಿಜೇತರಲ್ಲಿ 53 (40%), ಶಿವಸೇನೆಯ 57 ವಿಜೇತ ಅಭ್ಯರ್ಥಿಗಳಲ್ಲಿ 27 (47%), NCP ಯಿಂದ 41 ವಿಜೇತರಲ್ಲಿ 12 (29%), 8 (40%) ಶಿವಸೇನೆಯ 20 ವಿಜೇತರಲ್ಲಿ (ಉದ್ಧವ್ ಠಾಕ್ರೆ), 6 (38%) ಕಾಂಗ್ರೆಸ್‌ನಿಂದ 16 ವಿಜೇತರು, ಎನ್‌ಸಿಪಿ-(ಶರತ್‌ಚಂದ್ರ ಪವಾರ್)ನ 8 ವಿಜೇತರಲ್ಲಿ 4 (50%) ಮತ್ತು ಎಸ್‌ಪಿಯ 2 ವಿಜೇತರಲ್ಲಿ 2 (100%) ತಮ್ಮ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇರುವುದಾಗಿ ಘೋಷಿಸಿದ್ದಾರೆ.
ಕೋಟ್ಯಾಧಿಪತಿ ವಿಜೇತರು: 286 ವಿಜೇತ ಅಭ್ಯರ್ಥಿಗಳಲ್ಲಿ 277 (97%) ಕೋಟ್ಯಾಧಿಪತಿಗಳು. 2019ರ ಚುನಾವಣೆಯ ಸಂದರ್ಭದಲ್ಲಿ 285 ಶಾಸಕರಲ್ಲಿ 264 (93%) ಶಾಸಕರು ಕೋಟ್ಯಧಿಪತಿಗಳಿದ್ದರು.
ಪಕ್ಷವಾರು ಕೋಟ್ಯಾಧಿಪತಿ ವಿಜೇತ ಅಭ್ಯರ್ಥಿಗಳು: ಬಿಜೆಪಿಯಿಂದ 132 ವಿಜೇತ ಅಭ್ಯರ್ಥಿಗಳಲ್ಲಿ 129 (98%), ಶಿವಸೇನೆಯ 57 ವಿಜೇತರಲ್ಲಿ 56 (98%), ಎನ್‌ಸಿಪಿಯ 41 ವಿಜೇತರಲ್ಲಿ 41 (100%), 19(95 %) ಶಿವಸೇನೆಯ 20ರಲ್ಲಿ (ಉದ್ಧವ್ ಠಾಕ್ರೆ), 15 (94%)ಕಾಂಗ್ರೆಸ್ ನಿಂದ 16 ವಿಜೇತ ಅಭ್ಯರ್ಥಿಗಳು, ಎನ್‌ಸಿಪಿ(ಶರತ್‌ಚಂದ್ರ ಪವಾರ್)ಯ 8 ವಿಜೇತ ಅಭ್ಯರ್ಥಿಗಳಲ್ಲಿ 7(88%), ಜನ ಸುರಾಜ್ಯ ಶಕ್ತಿಯಿಂದ 2 (100%) ಮತ್ತು ಎಸ್‌ಪಿಯಿಂದ 2 (100%)ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ಘೋಷಿಸಿದ್ದಾರೆ.

ಗೆಲ್ಲುವ ಅಭ್ಯರ್ಥಿಗಳಲ್ಲಿ ಸಂಪತ್ತಿನ ಪಾಲು
ಪಕ್ಷವಾರು ಸರಾಸರಿ ಆಸ್ತಿ: 132 ಬಿಜೆಪಿ ಶಾಸಕರ ಸರಾಸರಿ ಆಸ್ತಿ ರೂ. 59.68 ಕೋಟಿ, 57 ಶಿವಸೇನೆ ಶಾಸಕರು ರೂ. 30.61 ಕೋಟಿ ಸರಾಸರಿ ಆಸ್ತಿ ಹೊಂದಿದ್ದಾರೆ. 41 ಎನ್‌ಸಿಪಿ ಶಾಸಕರು ರೂ. 22.32 ಕೋಟಿ ಮೌಲ್ಯದ ಸರಾಸರಿ ಆಸ್ತಿ ಹೊಂದಿದ್ದಾರೆ. 20 ಶಿವಸೇನೆ (ಉದ್ಧವ್ ಠಾಕ್ರೆ ಬಣ) ಶಾಸಕರು ಸರಾಸರಿ ರೂ. 10.43 ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. 16 ಕಾಂಗ್ರೆಸ್ ಶಾಸಕರು ರೂ. 43.91 ಕೋಟಿ ಮೌಲ್ಯದ ಸರಾಸರಿ ಆಸ್ತಿ ಹೊಂದಿದ್ದಾರೆ. 8 ಎನ್‌ಸಿಪಿ (ಶರದ್‌ಚಂದ್ರ ಪವಾರ್) ಶಾಸಕರು ರೂ. 51.31 ಕೋಟಿ ಮತ್ತು 2 ಎಸ್‌ಪಿ ಶಾಸಕರು ಸರಾಸರಿ ಆಸ್ತಿ ರೂ. 158.52 ಕೋಟಿ ಆಸ್ತಿ ಹೊಂದಿದ್ದಾರೆ.

ಶಿಕ್ಷಣದ ವಿವರಗಳು: 105 (37%) ವಿಜೇತ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆಯನ್ನು 5ನೇ ಮತ್ತು 12ನೇ ಉತ್ತೀರ್ಣ ಎಂದು ಮತ್ತು 165 (58%) ವಿಜೇತ ಅಭ್ಯರ್ಥಿಗಳು ಪದವಿ ಮತ್ತು ಅದಕ್ಕಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದಾರೆಂದು ಘೋಷಿಸಿದ್ದಾರೆ. 14 ವಿಜೇತರು ಡಿಪ್ಲೊಮಾ ಮತ್ತು ಇಬ್ಬರು ವಿಜೇತ ಅಭ್ಯರ್ಥಿಗಳು ತಮ್ಮ ಶಿಕ್ಷಣ ಕೇವಲ ಸಾಕ್ಷರತೆ ಎಂದು ಘೋಷಿಸಿದ್ದಾರೆ.
ಮಹಿಳೆಯರು: 286 ವಿಜೇತ ಅಭ್ಯರ್ಥಿಗಳಲ್ಲಿ 22 (8%) ಮಹಿಳೆಯರು. 2019ರಲ್ಲಿ, 285 ಶಾಸಕರ ಪೈಕಿ 24 (8%) ಮಹಿಳೆಯರಿದ್ದರು. ಈ ಪ್ರಮಾಣ ಹೆಚ್ಚಳವಾಗಿಲ್ಲ.
ಒಟಾರೆಯಾಗಿ ನೋಡಿದರೆ ಸಜ್ಜನರು, ವಿದ್ಯಾವಂತರು, ಹಣಬಲ ಇಲ್ಲದವರು ಪ್ರವೇಶ ಪಡೆಯಲಾರದ ಕ್ಷೇತ್ರವೇನಾದರೂ ಇದ್ದರೆ ಅದು ರಾಜಕೀಯ ಕ್ಷೇತ್ರ ಎಂಬಂತಾಗಿದೆ. ಅವಿದ್ಯಾವಂತರಾದರೂ ಹಣಬಲವಿದ್ದರೆ ರಾಜಕೀಯ ಸ್ಥಾನ ಪಡೆಯಲು ಅರ್ಹರಾಗುತ್ತಾರೆ ಎಂಬುದನ್ನು ಈ ಅಂಕಿಅಂಶ ತೋರಿಸುತ್ತದೆ.

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.