1992ರಲ್ಲಿ ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್‌ನ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಆರಂಭಿಸಿದ ದೇವೇಂದ್ರ ಫಡ್ನವೀಸ್, ತಮ್ಮ 27ನೇ ವಯಸ್ಸಿಗೆ 1997ರಲ್ಲಿ ನಾಗ್ಪುರ ಪಾಲಿಕೆಯ ಮೇಯರ್ ಕೂಡ ಆದರು. ಅತ್ಯಂತ ಕಿರಿಯ ಮೇಯರ್ ಎಂಬ ಖ್ಯಾತಿಯನ್ನೂ ಪಡೆದರು. ನಾಲ್ಕು ಬಾರಿ ಶಾಸಕರಾಗಿ, ಉಪಮುಖ್ಯಮಂತ್ರಿಯಾಗಿ, ಈಗ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ವಿರಾಜಮಾನರಾಗಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ಗುರುವಾರ ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕರ್ನಾಟಕದ ಯಡಿಯೂರಪ್ಪರಂತೆ ಫಡ್ನವೀಸ್ ಕೂಡ ಮೂರು ದಿನಗಳಿಗೂ ಮುಖ್ಯಮಂತ್ರಿಯಾಗಿದ್ದವರು ಎಂಬ ಹೆಸರಿಗೂ ಭಾಜನರಾಗಿದ್ದಾರೆ. ಈಗ ಬಿಜೆಪಿ-ಶಿವಸೇನೆ(ಶಿಂದೆ ಬಣ)-ಎನ್‌ಸಿಪಿ(ಅಜಿತ್ ಬಣ)ದ ಮಹಾಯುತಿ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದಾರೆ.
ಫಡ್ನವೀಸ್ 2014ರ ಅಕ್ಟೋಬರ್ 31ರಿಂದ 2019ರ ನವೆಂಬರ್‌ವರೆಗೆ ಬಿಜೆಪಿ-ಶಿವಸೇನೆ ಮೈತ್ರಿಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದರು. 2019ರ ಚುನಾವಣೆಯಲ್ಲಿ ಉದ್ಧವ್ ಠಾಕ್ರೆಗೆ ಮುಖ್ಯಮಂತ್ರಿ ಹುದ್ದೆಯ ಭರವಸೆ ನೀಡಿದ್ದ ಬಿಜೆಪಿ ಮತ್ತೆ ಫಡ್ನವೀಸ್‌ರನ್ನೇ ಮುಖ್ಯಮಂತ್ರಿ ಸ್ಥಾನಕ್ಕೇರಿಸಿತು. ಬಂಡಾಯ ಎದ್ದ ಠಾಕ್ರೆ ಮೈತ್ರಿ ತೊರೆದರು. 2019ರ ನವೆಂಬರ್ 23ರಿಂದ ನವೆಂಬರ್ 26ರವರೆಗೆ ಮೂರು ದಿನಗಳ ಮುಖ್ಯಮಂತ್ರಿಯಾಗಿದ್ದ ಫಡ್ನವೀಸ್ ರಾಜೀನಾಮೆ ನೀಡಿದರು. ಆ ಬಳಿಕ, 2022ರಲ್ಲಿ ರಚನೆಯಾದ ಅನೈತಿಕ ಮೈತ್ರಿ ಸರ್ಕಾರದಲ್ಲಿ ಫಡ್ನವೀಸ್, ಮಹಾರಾಷ್ಟ್ರದ 9ನೇ ಉಪಮುಖ್ಯಮಂತ್ರಿಯಾಗಿದ್ದರು.
2019ರಲ್ಲಿ ಮೂರು ದಿನಗಳ ಮುಖ್ಯಮಂತ್ರಿಯಾಗಿ ರಾಜೀನಾಮೆ ನೀಡಿದ್ದ ಫಡ್ನವೀಸ್, “ಮೇರಾ ಪಾನಿ ಉತರ್ತೆ ದೇಖ್ ಕಿನಾರೆ ಪರ್ ಘರ್ ಮತ್ ಬನಾ ಲೆನಾ, ಮೈನ್ ಸಮಂದರ್ ಹೂನ್, ಲೌಟ್ ಕರ್ ವಾಪಿಸ್ ಆವುಂಗಾ” (ಅಲೆಗಳ ಏರಿತವು ಕಡಿಮೆಯಾಗುತ್ತಿದೆ ಎಂದು ಭಾವಿಸಿ, ಕರಾವಳಿಯಲ್ಲಿ ನಿಮ್ಮ ಮನೆ ಕಟ್ಟಲು ಧೈರ್ಯ ಮಾಡಬೇಡಿ; ಏಕೆಂದರೆ ನಾನು ಸಮುದ್ರ, ನಾನು ಮತ್ತೆ ಹಿಂದಿರುಗುತ್ತೇನೆ) ಎಂದು ಠಾಕ್ರೆಯ ವಿರುದ್ಧ ಫಡ್ನವೀಸ್ ಆಕ್ರೋಶ ವ್ಯಕ್ತಪಡಿಸಿದ್ದರು.
ಆದಾಗ್ಯೂ, ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಯ ‘ಮಹಾ ವಿಕಾಸ್ ಅಘಾಡಿ’ ಸರ್ಕಾರವನ್ನು 2022ರಲ್ಲಿ ಬಿಜೆಪಿ ಉರುಳಿಸಿತು. ಶಿವಸೇನೆ ಮತ್ತು ಎನ್‌ಸಿಪಿಯನ್ನು ತಲಾ ಎರಡು ಭಾಗಗಳಾಗಿ ಒಡೆದುಹಾಕಿತು. ಅನೈತಿಕವಾಗಿ ಸರ್ಕಾರ ರಚಿಸಿತು. ಅನೈತಿಕ ಸರ್ಕಾರದಲ್ಲಿ ಏಕನಾಥ್ ಶಿಂದೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಬಿಜೆಪಿ ಪ್ರತಿಷ್ಠಾಪಿಸಿತು. ಈಗ, 2024ರ ಚುನಾವಣೆಯಲ್ಲಿ ಮಹಾಯುತಿ ಮೈತ್ರಿ ಪಕ್ಷಗಳ ಕೃಪಾಕಟಾಕ್ಷದಿಂದ ಬಿಜೆಪಿ ಮತ್ತೆ ಸರ್ಕಾರ ರಚನೆ ಮಾಡುತ್ತಿದೆ.
ಅಂದಹಾಗೆ, ಮಹಾರಾಷ್ಟ್ರದಲ್ಲಿ ಬಿಜೆಪಿ ಈವರೆಗೂ ಸ್ವಂತ ಬಲದಿಂದ ಎಂದಿಗೂ ಸರ್ಕಾರ ರಚಿಸಿಲ್ಲ. ಆದರೂ, ಈವರೆಗೆ ರಾಜ್ಯದಲ್ಲಿ ಐದು ಬಾರಿ ಬಿಜೆಪಿ ಆಡಳಿತ ನಡೆಸಿದೆ. ಅದರಲ್ಲಿ, ಮೂರು ಬಾರಿ ಸರ್ಕಾರದ ಭಾಗವಾಗಿ ಬಿಜೆಪಿ ಆಧಿಕಾರ ಅನುಭವಿಸುವಲ್ಲಿ ಫಡ್ನವೀಸ್ ಪಾತ್ರ ಪ್ರಮುಖವಾದದ್ದು. 2024ರ ಲೋಕಸಭಾ ಚುನಾವಣೆಯಲ್ಲಿ ಫಡ್ನವೀಸ್ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಿದ ಬಿಜೆಪಿ ಮಣ್ಣು ಮುಕ್ಕಿತ್ತು. ಬಳಿಕ, ಆರ್‌ಎಸ್‌ಎಸ್ ಜೊತೆ ಸಮನ್ವಯ ಸಾಧಿಸಿದ ಫಡ್ನವೀಸ್ ಬಿಜೆಪಿ ಪ್ರಾಬಲ್ಯವನ್ನು ಹೆಚ್ಚಿಸಲು ಭಾರೀ ಕಸರತ್ತು ನಡೆಸಿದರು.
ಫಡ್ನವೀಸ್ ಪ್ರಯತ್ನ ಮತ್ತು ಶಿಂದೆ ಜಾರಿಗೊಳಿಸಿದ ಯೋಜನೆಗಳ ಫಲವಾಗಿ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 288 ಸ್ಥಾನಗಳ ಪೈಕಿ, ಮಹಾಯುತಿ 235 ಸ್ಥಾನಗಳನ್ನು ಗೆದ್ದಿದ್ದು, ಬಿಜೆಪಿ 132 ಸ್ಥಾನಗಳನ್ನು ಗಳಿಸಿದೆ. ಹೆಚ್ಚು ಸ್ಥಾನಗಳನ್ನು ಗೆದ್ದು, ಮೈತ್ರಿಯಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಕಸಿದುಕೊಂಡಿದೆ. ಚುನಾವಣೆಯನ್ನು ಮುನ್ನಡೆಸಿದ್ದ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರನ್ನು ಹಿಂದೆ ದಬ್ಬಿ, ಉಪಮುಖ್ಯಮಂತ್ರಿ ಸ್ಥಾನಕ್ಕಿಳಿಸಿ ಮುಖ್ಯಮಂತ್ರಿ ಹುದ್ದೆಗೆ ಫಡ್ನವೀಸ್‌ರನ್ನು ಬಿಜೆಪಿ ಕೂರಿಸಿದೆ. ಅವರು ಮಹಾಯುತಿ 2.0 ಅನ್ನು ಮುನ್ನಡೆಸಲಿದ್ದಾರೆ.
2019ರಲ್ಲಿ ಸವಾಲು ಹಾಕಿದಂತೆ ಫಡ್ನವೀಸ್ ಅವರು ಬಿಜೆಪಿ ಸ್ವಂತ ಬಲದಿಂದ ಅಲ್ಲದಿದ್ದರೂ, ಮೈತ್ರಿ ಬಲದಿಂದ ಮುಖ್ಯಮಂತ್ರಿ ಹುದ್ದೆಗೇರಿದ್ದಾರೆ. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಮೋದಿ ಸಮ್ಮುಖದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಾರೆ.
ಫಡ್ನವೀಸ್ ಅವರು ಎಲ್‌ಎಲ್‌ಬಿ ಪದವಿ ಪಡೆದಿರುವ ವಕೀಲರು. ಆರ್‌ಎಸ್‌ಎಸ್ ಹಿನ್ನೆಲೆ ಉಳ್ಳವರು. ರಾಜಕೀಯ ಕುಟುಂಬದ ಹಿನ್ನೆಲೆಯನ್ನೂ ಹೊಂದಿರುವವರು. ವಿದ್ಯಾರ್ಥಿಯಾಗಿದ್ದಾಗಲೇ ಬಿಜೆಪಿಯ ವಿದ್ಯಾರ್ಥಿ ಘಟಕ ಎಬಿವಿಪಿಯ ಸಕ್ರಿಯ ಕಾರ್ಯಕರ್ತರಾಗಿದ್ದವರು. ಮುಖ್ಯವಾಗಿ, ಬಿಜೆಪಿ-ಆರ್‌ಎಸ್‌ಎಸ್‌ಅನ್ನು ನಿಯಂತ್ರಿಸುವ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಅವರು ಕಳೆದ 20 ವರ್ಷಗಳಿಂದ ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಮುನ್ನಡೆಸುತ್ತಿರುವವರು. ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಗಟ್ಟಿಯಾಗಿ ಅಂಟಿಕೊಂಡಿರುವವರು.
1970ರ ಜುಲೈ 22ರಂದು ನಾಗ್ಪುರದಲ್ಲಿ ಗಂಗಾಧರ ಫಡ್ನವೀಸ್ ಮತ್ತು ಸರಿತಾ ಫಡ್ನವೀಸ್ ಅವರ ಮಗನಾಗಿ ಬ್ರಾಹ್ಮಣ ಕುಟುಂಬದಲ್ಲಿ ಫಡ್ನವೀಸ್ ಜನಿಸಿದರು. ಅವರ ತಂದೆ ಗಂಗಾಧರ ಫಡ್ನವೀಸ್ ಜನಸಂಘದ ಸದಸ್ಯರಾಗಿದ್ದರು. ಜನಸಂಘದಿಂದ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸದಸ್ಯರೂ ಆಗಿದ್ದರು. ಅವರ ತಾಯಿ ಸರಿತಾ ಫಡ್ನವೀಸ್ ಅವರು ವಿದರ್ಭ ಹೌಸಿಂಗ್ ಕ್ರೆಡಿಟ್ ಸೊಸೈಟಿಯ ಮಾಜಿ ನಿರ್ದೇಶಕರಾಗಿದ್ದರು.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಗಂಗಾಧರ ಫಡ್ನವೀಸ್ ಜೈಲು ಸೇರಿದ್ದರು. ತನ್ನ ತಂದೆ ಜೈಲುವಾಸ ಅನುಭವಿಸಲು ಕಾರಣರಾದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರಿನ ಶಾಲೆಗೆ ಹೋಗಲು ನಿರಾಕರಿಸಿದ್ದ ಫಡ್ನವೀಸ್, ‘ಇಂದಿರಾ ಕಾನ್ವೆಂಟ್’ ತೊರೆದು ಬೇರೊಂದು ಶಾಲೆಗೆ ಸೇರಿದ್ದರು.
ಈ ವರದಿ ಓದಿದ್ದೀರಾ?: ಮೋದಾನಿ ಫೈಲ್ಸ್ | ಜಾರ್ಖಂಡ್‌ನ ಅದಾನಿ ವಿದ್ಯುತ್ ಸ್ಥಾವರದ ವಿಚಿತ್ರ ಕಥೆ ಇದು!
ಫಡ್ನವೀಸ್ ನಾಗ್ಪುರ ವಿಶ್ವವಿದ್ಯಾಲಯದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ. ಬುಸಿನೆಸ್ ಮ್ಯಾನೆಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಮತ್ತು ಜರ್ಮನಿಯ DSE-ಜರ್ಮನ್ ಫೌಂಡೇಶನ್ ಫಾರ್ ಇಂಟರ್ನ್ಯಾಷನಲ್ ಡೆವಲಪ್‌ಮೆಂಟ್‌ನಲ್ಲಿ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ನ ವಿಷಯದಲ್ಲಿ ಡಿಪ್ಲೊಮಾ ತರಬೇತಿ ಪಡೆದಿದ್ದಾರೆ.
ಅವರು 1992ರಲ್ಲಿ ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್‌ನ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯವನ್ನು ಆರಂಭಿಸಿದರು. ತಮ್ಮ 27ನೇ ವಯಸ್ಸಿಗೆ 1997ರಲ್ಲಿ ನಾಗ್ಪುರ ಪಾಲಿಕೆಯ ಮೇಯರ್ ಕೂಡ ಆದರು. ಅತ್ಯಂತ ಕಿರಿಯ ಮೇಯರ್ ಎಂಬ ಖ್ಯಾತಿಯನ್ನೂ ಪಡೆದರು.
ಅವರು 1999ರ ಚುನಾವಣೆಯಲ್ಲಿ ಗೆದ್ದು, ವಿಧಾನಸಭೆಗೆ ಪ್ರವೇಶಿಸಿದರು. ಅವರು 1999ರಿಂದ 2009ರವರೆಗೆ ನಾಗ್ಪುರ ಪಶ್ಚಿಮ ಕ್ಷೇತ್ರದ ಶಾಸಕರಾಗಿದ್ದರು. 2009ರ ಚುನಾವಣೆಯಲ್ಲಿ ಕ್ಷೇತ್ರವನ್ನು ಬದಲಿಸಿ ನಾಗ್ಪುರ ನೈಋತ್ಯ ಕ್ಷೇತ್ರಕ್ಕೆ ಹೋದರು. ಅಂದಿನಿಂದ ಕ್ಷೇತ್ರದಲ್ಲಿ ನಿರಂತರ ನಾಲ್ಕು ಬಾರಿ ಗೆಲುವು ಕಂಡಿದ್ದಾರೆ. ಮರಾಠ ಪ್ರಾಬಲ್ಯವಿರುವ ಮಹಾರಾಷ್ಟ್ರದಲ್ಲಿ ಶಿವಸೇನೆಯ ಮನೋಹರ್ ಜೋಶಿ ನಂತರ ಮುಖ್ಯಮಂತ್ರಿಯಾದ ಎರಡನೇ ಬ್ರಾಹ್ಮಣ ನಾಯಕನೂ ಆಗಿದ್ದಾರೆ.
ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಏಕೈಕ ಮುಖ್ಯಮಂತ್ರಿ ಫಡ್ನವೀಸ್ ಆಗಿದ್ದಾರೆ. ಒಂದು ವೇಳೆ, ಪ್ರಸ್ತುತ ಸರ್ಕಾರದಲ್ಲಿ ಏಕನಾಥ್ ಶಿಂದೆ ಉಪಮುಖ್ಯಮಂತ್ರಿಯಾದರೆ, ಎರಡೂ ಹುದ್ದೆಗಳನ್ನು ಪಡೆದವರಲ್ಲಿ ಶಿಂದೆ ಎರಡನೆಯವರಾಗಲಿದ್ದಾರೆ.