ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವುದಕ್ಕೆ ಆರ್‌ಎಸ್‌ಎಸ್ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ತಿಳಿದುಬಂದಿದೆ. ಆದರೂ, ಅಜಿತ್ ಅವರ ಎನ್‌ಸಿಪಿ ಜೊತೆ ಮೈತ್ರಿಗೆ ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಎನ್‌ಸಿಪಿ (ಅಜಿತ್ ಬಣ)-ಶಿವಸೇನಾ (ಸಿಂಧೆ ಬಣ)ದ ಮಹಾಯುತಿ ಕಳಪೆ ಪ್ರದರ್ಶನ ನೀಡಿ, ಹೀನಾಯವಾಗಿ ಸೋಲುಂಡಿದೆ. ಮಹಾರಾಷ್ಟ್ರದ 48 ಸ್ಥಾನಗಳ ಪೈಕಿ ಕೇವಲ 17 ಸ್ಥಾನಗಳನ್ನು ಮಾತ್ರವೇ ಮಹಾಯುತಿ ಗೆದ್ದುಕೊಂಡಿದೆ. ಅದರಲ್ಲೂ, ಅಜಿತ್ ಅವರ ಎನ್‌ಸಿಪಿ ಕೊಡುಗೆ ಕೇವಲ ಒಂದು ಸ್ಥಾನ ಮಾತ್ರ. ಹೀಗಾಗಿ, ಅಜಿತ್ ಅವರೊಂದಿಗಿನ ಮೈತ್ರಿಯನ್ನು ಕಡಿತಗೊಳಿಸಲು ಆರ್‌ಎಸ್‌ಎಸ್ ಬಯಸಿದೆ. ಆದರೂ, ಬಿಜೆಪಿಗರು ಅಜಿತ್ ಜೊತೆ ಮುಂದುವರೆಯಲು ನಿರ್ಧರಿಸಿದ್ದಾರೆ. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಗಮನಾರ್ಹವಾಗಿ ‘ಇಂಡಿಯಾ’ ಮೈತ್ರಿಕೂಟವು ಮಹಾರಾಷ್ಟ್ರದಲ್ಲಿ 31 ಸ್ಥಾನಗಳನ್ನು ಗೆದ್ದು, ಪ್ರಾಬಲ್ಯತೆಯನ್ನು ಹೆಚ್ಚಿಸಿಕೊಂಡಿದೆ.
ಲೋಕಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನದ ಕಾರಣಕ್ಕೆ ಅಜಿತ್ ಅವರ ಎನ್‌ಸಿಪಿಯನ್ನು ದೂಷಿಸಿರುವ ಆರ್‌ಎಸ್‌ಎಸ್ ಮುಖವಾಣಿ ‘ಆರ್ಗನೈಸರ್’, “ವಿಭಿನ್ನ ಸಿದ್ಧಾಂತ ಮತ್ತು ಅಜಿತ್ ಅವರು ತಮ್ಮ ಇಮೇಜ್ ಕಳೆದುಕೊಂಡಿರುವ ಕಾರಣದಿಂದಾಗಿ ಬಿಜೆಪಿ ನೇತೃತ್ವದ ಮಹಾಯುತಿಯು ಕಳಪೆ ಪ್ರದರ್ಶನ ನೀಡಬೇಕಾಯಿತು” ಎಂದು ಹೇಳಿಕೊಂಡಿದೆ. ಅಲ್ಲದೆ, ಆರ್‌ಎಸ್‌ಎಸ್‌ನ ಮತ್ತೊಂದು ಮುಖವಾಣಿ, ಮರಾಠಿ ವಾರಪತ್ರಿಕೆ ‘ವಿವೇಕ್’ ಕೂಡ ಅದೇ ಅಭಿಪ್ರಾಯಗಳನ್ನು ಪ್ರತಿಧ್ವನಿಸಿದೆ. ಅಜಿತ್ ಜೊತೆಗಿನ ಮೈತ್ರಿಯನ್ನು ಮುರಿಯುವಂತೆ ಪರೋಕ್ಷವಾಗಿ ಬಿಜೆಪಿಗೆ ಸೂಚನೆ ನೀಡಿದೆ.
ಆದಾಗ್ಯೂ, ಅಜಿತ್ ಮತ್ತು ಅವರ ಸಂಗಡಿಗರು ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಜೊತೆ ಗೌಪ್ಯ ಸಭೆ ನಡೆಸಿದ್ದಾರೆ. ಬಳಿಕ, ಬಿಜೆಪಿ ತಮ್ಮೊಂದಿಗಿನ ಮೈತ್ರಿಯನ್ನು ಕಡಿತಗೊಳಿಸುವುದಿಲ್ಲ. ಮುಂಬರು ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ (ಶಿಂಧೆ) ಮತ್ತು ಎನ್‌ಸಿಪಿ (ಅಜಿತ್) ಒಟ್ಟಾಗಿ ಮುನ್ನಡೆಯುತ್ತದೆ ಎಂದು ಬಿಜೆಪಿ ನಾಯಕರು ಭರವಸೆ ನೀಡಿರುವುದಾಗಿ ಅಜಿತ್ ಬಣ ಹೇಳಿಕೊಂಡಿದೆ.
ಮೂಲಗಳ ಪ್ರಕಾರ, ಅಜಿತ್ ಜೊತೆಗಿನ ಮೈತ್ರಿ ಪ್ರಸ್ತುತ ಅಗತ್ಯವಾಗಿದೆ ಎಂದು ಬಿಜೆಪಿ ನಾಯಕತ್ವವು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಮೂಲಕ ಆರ್‌ಎಸ್‌ಎಸ್‌ಗೆ ಸಂದೇಶ ರವಾನಿಸಿದೆ.
“ಮಹಾರಾಷ್ಟ್ರದಲ್ಲಿ ಬಿಜೆಪಿ ಸ್ವಂತ ಬಲದಿಂದ ಚುನಾವಣೆ ಎದುರಿಸುವ ಸ್ಥಿತಿಯಲ್ಲಿಲ್ಲ. ಎಂವಿಎಯನ್ನು (ಇಂಡಿಯಾ ಒಕ್ಕೂಟ) ಎದುರಿಸಲು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯೊಂದಿಗೆ ಮೈತ್ರಿ ಅಗತ್ಯ” ಎಂದು ಅಜಿತ್ ಅವರ ಎನ್‌ಸಿಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.