ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಹಿನ್ನೆಡೆ ಕಾಣುತ್ತಿದ್ದಂತೆ ಶಿವಸೇನೆ (ಉದ್ದವ್ ಠಾಕ್ರೆ) ಬಣ ನಾಯಕ ಸಂಜಯ್ ರಾವತ್, “ಏನೋ ನಡೆದಿದೆ, ಇದು ಜನರ ತೀರ್ಪಾಗಿರಲು ಸಾಧ್ಯವಿಲ್ಲ, ಮತಪತ್ರ ಬಳಸಿ ಮತ್ತೆ ಚುನಾವಣೆ ನಡೆಯಲಿ” ಎಂದು ಅಭಿಪ್ರಾಯಿಸಿದ್ದಾರೆ.
ಆದರೆ ಸಂಜಯ್ ರಾವತ್ ಅವರಿಗೆ ತಿರುಗೇಟು ನೀಡಿರುವ ಬಿಜೆಪಿ, “ರಾಜ್ಯಸಭಾ ಸಂಸದ ಮಾನಸಿಕ ದಿವಾಳಿತನದಿಂದ ಬಳಲುತ್ತಿದ್ದಾರೆ” ಎಂದು ಹೇಳಿದೆ.
“ಏನೋ ಗೊಂದಲವಿದೆ, ಇದು ಜನರ ತೀರ್ಪು ಆಗಿರಲು ಸಾಧ್ಯವೇ ಇಲ್ಲ” ಎಂದು ಹೇಳಿರುವ ಸಂಜಯ್ ರಾವತ್, ಮತಯಂತ್ರದಲ್ಲಿ ಸಮಸ್ಯೆ ಇದೆ ಎಂದು ನೀವು ಹೇಳುವುದೇ ಅಥವಾ ಬೇರೆ ರೀತಿಯಲ್ಲಿ ಮತಗಳನ್ನು ತಿರುಚಲಾಗಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನು ಓದಿದ್ದೀರಾ? ಚುನಾವಣಾ ಫಲಿತಾಂಶ | ಮಹಾರಾಷ್ಟ್ರದಲ್ಲಿ ‘ಮಹಾಯುತಿ’, ಜಾರ್ಖಂಡ್‌ನಲ್ಲಿ ‘ಇಂಡಿಯಾ’ ಮುನ್ನಡೆ
“ಎಲ್ಲಾ ಕ್ಷೇತ್ರದಲ್ಲಿಯೂ ಹಣದ ಮೆಷಿನ್ ಅಳವಡಿಸಲಾಗಿದೆ. ಓರ್ವ ಶಾದಕ ಸೋತರೂ ರಾಜೀನಾಮೆ ನೀಡುವುದಾಗಿ ಮುಖ್ಯಮಂತ್ರಿ ಏಕನಾಥ್ ಶಿಂದೆ ಹೇಳಿದ್ದರು. ಯಾವುದೇ ಚುನಾವಣೆಯಲ್ಲಿ ಈ ರೀತಿ ನಡೆದಿದೆಯೇ? ಯಾವ ಧೈರ್ಯದಲ್ಲಿ ಶಿಂದೆ ಹೇಳಿಕೆ ನೀಡಿದರು? ಇದು ಯಾವ ರೀತಿಯ ಪ್ರಜಾಪ್ರಭುತ್ವ” ಎಂದು ಪ್ರಶ್ನಿಸಿದರು.
“ಯಾರಿಗಾದರೂ 200ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಲಭಿಸಲು ಸಾಧ್ಯವೇ? ರಾಜ್ಯದಲ್ಲಿ ಪ್ರಾಮಾಣಿಕತೆ ಇಲ್ಲದಂತೆ ತೋರುತ್ತದೆ. ಆದರೆ ಈ ರಾಜ್ಯದ ಜನರು ಅಪ್ರಾಮಾಣಿಕರಲ್ಲ” ಎಂದು ಹೇಳಿದರು.
#WATCH | Mumbai | As Mahayuti has crossed halfway mark in Maharashtra, Shiv Sena UBT leader Sanjay Raut says, "This cannot be the decision of the people of Maharashtra. We know what the people of Maharashtra want…" pic.twitter.com/X2UgBdMOCH
— ANI (@ANI) November 23, 2024
ಈ ಫಲಿತಾಂಶವನ್ನು ನಿಮ್ಮ ಪಕ್ಷ ಸ್ವೀಕರಿಸುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾವತ್, “ಇಲ್ಲ, ಜನರು ಕೂಡಾ ಈ ಫಲಿತಾಂಶವನ್ನು ಒಪ್ಪಲಾರರು ಎಂದು ನಾನು ಭಾವಿಸುತ್ತೇನೆ. ನಾನು ಮತ್ತೆ ಹೇಳುತ್ತೇನೆ, ಇದು ಜನರ ತೀರ್ಪಲ್ಲ. ಏಕನಾಥ್ ಶಿಂದೆ ಬಣ 60 ಸ್ಥಾನಗಳನ್ನು, ಅಜಿತ್ ಪವಾರ್ ಬಣ 40 ಸ್ಥಾನಗಳನ್ನು, ಬಿಜೆಪಿ 125 ಸ್ಥಾನಗಳನ್ನು ಪಡೆಯಲು ಹೇಗೆ ಸಾಧ್ಯ” ಎಂದು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಮಹಾರಾಷ್ಟ್ರದಲ್ಲಿ ಮತ್ತೆ ಮಹಾಯುತಿ ಎಂದ ಚುನಾವಣೋತ್ತರ ಸಮೀಕ್ಷೆಗಳು
ಇನ್ನು ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಸಂಜಯ್ ರಾವತ್, ಮತ್ತೆ ಈ ಆರೋಪವನ್ನೇ ಮಾಡಿದ್ದಾರೆ. ಜೊತೆಗೆ “ಮತ್ತೊಮ್ಮೆ ಮತಪತ್ರ ಬಳಸಿ ಚುನಾವಣೆ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ.
288 ಸದಸ್ಯ ಬಲದ ಮಹಾರಾಷ್ಟ್ರದಲ್ಲಿ 145 ಬಹುಮತವಾಗಿದೆ. ಈಗಾಗಲೇ ಮಹಾಯುತಿ ಮೈತ್ರಿಕೂಟವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಮತ್ತೆ ಸರ್ಕಾರ ಅಧಿಕಾರ ಪಡೆಯಲು ತಯಾರಿ ನಡೆಸುತ್ತಿದೆ. ಇಂಡಿಯಾ ಒಕ್ಕೂಟ ಭಾರಿ ಹಿನ್ನೆಡೆ ಅನುಭವಿಸಿದೆ.
