ಮಹಾರಾಷ್ಟ್ರ ಸರ್ಕಾರ ತ್ರಿಭಾಷಾ ನೀತಿಯ ಕುರಿತ ನಿರ್ಣಯವನ್ನು ರದ್ದುಗೊಳಿಸಿದ್ದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭಾನುವಾರ ಭಾಷಾ ಸೂತ್ರ ಅನುಷ್ಠಾನದ ಕುರಿತು ಸಮಿತಿ ರಚನೆಯ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಫಡ್ನವೀಸ್, “ಡಾ. ನರೇಂದ್ರ ಜಾಧವ್ ನೇತೃತ್ವದ ಸಮಿತಿಯು ತ್ರಿಭಾಷಾ ಸೂತ್ರದ ಸಂಪೂರ್ಣ ವಿಷಯವನ್ನು ಸಂಪೂರ್ಣವಾಗಿ ಪುನರ್ ಪರಿಶೀಲಿಸುತ್ತದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಶಾಲೆಗಳಲ್ಲಿ ಹಿಂದಿ ಹೇರಿಕೆಗೆ ವಿರೋಧ: ಮತ್ತೆ ಒಂದಾದ ರಾಜ್, ಉದ್ಧವ್ ಠಾಕ್ರೆ
ಈ ಸಂದರ್ಭದಲ್ಲೇ “ಶಿವಸೇನೆ(ಯುಬಿಟಿ) ಮುಖ್ಯಸ್ಥರು 1ನೇ ತರಗತಿಯಿಂದ ತ್ರಿಭಾಷಾ ನೀತಿಯನ್ನು ಜಾರಿಗೆ ತರುವ ಕುರಿತು ಮಾಷೇಲ್ಕರ್ ಸಮಿತಿಯ ಸಲಹೆಗಳನ್ನು ಒಪ್ಪಿಕೊಂಡಿದ್ದಾರೆ” ಎಂದು ಹೇಳುವ ಮೂಲಕ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ತರಾಟೆಗೆ ತೆಗೆದುಕೊಂಡರು.
ಮಹಾರಾಷ್ಟ್ರದಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿವರೆಗಿನ ಮಕ್ಕಳಿಗೆ ತ್ರಿಭಾಷಾ ನೀತಿಯಡಿಯಲ್ಲಿ ಹಿಂದಿ ಹೇರಿಕೆ ಮಾಡುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮರಾಠಿ ಸಂಘಟನೆಗಳು, ವಿಪಕ್ಷಗಳು ಹಿಂದಿ ಕಡ್ಡಾಯಗೊಳಿಸಿದ ಸರ್ಕಾರದ ಘೋಷಣೆಯನ್ನು ವಿರೋಧಿಸಿದೆ.
ಜೊತೆಗೆ ವಿಪಕ್ಷಗಳು ಜೊತೆ ಸೇರಿ ಜುಲೈ 5ರಂದು ಬೃಹತ್ ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದೆ. ಇಂದು(ಜೂನ್ 29) ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.
