ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದ್ದು, ಮಹಾರಾಷ್ಟ್ರ ಸರ್ಕಾರವು ಕಾನೂನುಬದ್ಧವಾಗಿ ಆಯ್ಕೆಯಾಗಿಲ್ಲ ಎಂದು ವಿರೋಧ ಪಕ್ಷ ಕಾಂಗ್ರೆಸ್ ಶನಿವಾರ ಆರೋಪಿಸಿದೆ. ಮತದಾರರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ ಮತ್ತು 2024ರ ನವೆಂಬರ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮತಗಳಲ್ಲಿ ಬದಲಾವಣೆಯಾಗಿದೆ ಎಂದು ಕಾಂಗ್ರೆಸ್ ದೂರಿದೆ. ಈ ಹಿಂದೆಯೂ ಕಾಂಗ್ರೆಸ್ ಹಲವು ಬಾರಿ ಈ ಆರೋಪ ಮಾಡಿದೆ.
ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್‌ನ ದತ್ತಾಂಶ ವಿಶ್ಲೇಷಣೆ ವಿಭಾಗದ ಮುಖ್ಯಸ್ಥ ಪ್ರವೀಣ್ ಚಕ್ರವರ್ತಿ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಈ ಆರೋಪಗಳನ್ನು ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ | ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಮೊರೆ
“ಮಹಾರಾಷ್ಟ್ರ ಸರ್ಕಾರವು ಸರಿಯಾದ ರೀತಿಯ, ಕಾನೂನುಬದ್ಧವಾದ ಚುನಾವಣಾ ಪ್ರಕ್ರಿಯೆಯ ಮೂಲಕ ಆಯ್ಕೆಯಾಗಿಲ್ಲ. ಭಾರತದ ಅತೀ ಹಳೆಯ, ಸ್ವಾತಂತ್ರ್ಯದಲ್ಲಿ ಹೋರಾಡಿದ ಏಕೈಕ ಪಕ್ಷವಾಗಿ ನಾವು ಅತೀ ಜವಾಬ್ದಾರಿಯಿಂದ ಈ ಹೇಳಿಕೆಯನ್ನು ನೀಡುತ್ತಿದ್ದೇವೆ” ಎಂದು ಪ್ರವೀಣ್ ಚಕ್ರವರ್ತಿ ತಿಳಿಸಿದ್ದಾರೆ.
“ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮತ ಪ್ರಮಾಣದಲ್ಲಿ ಭಾರೀ ವ್ಯತ್ಯಾಸಗಳು ಕಂಡುಬಂದಿವೆ. ಲೋಕಸಭೆ ಚುನಾವಣೆಯ ಬಳಿಕ ವಿಧಾನಸಭೆ ಚುನಾವಣೆ ವೇಳೆಗೆ ಒಟ್ಟಾಗಿ 48 ಲಕ್ಷ ಹೊಸ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. 2019ರಲ್ಲಿ ಬರೀ 32 ಲಕ್ಷ ಮತದಾರರನ್ನು ಮಾತ್ರ ಪಟ್ಟಿಗೆ ಸೇರಿಸಲಾಗಿತ್ತು” ಎಂದು ವಿವರಿಸಿದ್ದಾರೆ.
“ಇನ್ನು ಆಶ್ಚರ್ಯವೆಂದರೆ ಈ ಎಲ್ಲಾ ಹೊಸ ಮತದಾರರು ಒಂದೇ ಮೈತ್ರಿಕೂಟಕ್ಕೆ ಮತ ಹಾಕಿರುವಂತಿದೆ, ಅದು ಮಹಾಯುತಿ. ಇದು ತರ್ಕಬದ್ಧವಾಗಿ ಕಾಣುತ್ತದೆಯೇ? ಇದು ಪವಾಡ ಸದೃಶವಾಗಿ ನಡೆದ ಕಾಕತಾಳೀಯತೆಯೇ? ಇದನ್ನು ಹೇಗೆ ವಿವರಿಸುವುದು? ಇದು ವಿಚಿತ್ರವಲ್ಲವೇ” ಎಂದು ಚಕ್ರವರ್ತಿ ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಚುನಾವಣೆ | ಗೆಲ್ಲುತ್ತಿರುವ ಶ್ರೀಮಂತ ಜಿಲ್ಲೆಗಳು ಮತ್ತು ಸೊರಗುತ್ತಿರುವ ಬಡ ಪ್ರದೇಶಗಳು
ಲೋಕಸಭೆ ಚುನಾವಣೆಗೆ ಹೋಲಿಸಿದರೆ ಮಹಾಯುತಿ ಸುಮಾರು 72 ಲಕ್ಷ ಅಧಿಕ ಮತವನ್ನು ವಿಧಾನಸಭೆ ಚುನಾವಣೆಯಲ್ಲಿ ಪಡೆದಿದೆ. ಮಹಾ ವಿಕಾಸ್ ಅಘಾಡಿಗೆ ಮತ ಹಾಕಿದ್ದ ಕೇವಲ 24 ಲಕ್ಷ ಜನರು ಮತ ಬದಲಾಯಿಸಿಕೊಂಡಿದ್ದಾರೆ. ಆದರೆ ಮಹಾಯುತಿ 72 ಲಕ್ಷ ಮತವನ್ನು ಪಡೆದಿದೆ ಎಂದು ಕಾಂಗ್ರೆಸ್ ನಾಯಕ ವಿವರಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ 48 ಕ್ಷೇತ್ರಗಳ ಪೈಕಿ ಮಹಾ ವಿಕಾಸ್ ಅಘಾಡಿ 30 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, 18 ಮಾತ್ರ ಮಹಾಯುತಿ ಪಾಲಾಗಿದೆ. ಆದರೆ ನವೆಂಬರ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ 288 ಕ್ಷೇತ್ರಗಳ ಪೈಕಿ 230ರಲ್ಲಿ ಮಹಾಯುತಿ ಗೆದ್ದಿದೆ. ಈ ಪೈಕಿ ಬಿಜೆಪಿ 132, ಶಿವಸೇನೆ (ಶಿಂದೆ ಬಣ) 57 ಮತ್ತು ಎನ್‌ಸಿಪಿ (ಅಜಿತ್ ಪವಾರ್ ಬಣ) 41 ಕ್ಷೇತ್ರಗಳಲ್ಲಿ ಜಯಗಳಿಸಿದೆ.
