ಬಲಪಂಥೀಯ ಶಿವಸೇನೆಯ ಮುಖ್ಯಸ್ಥ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕಳೆದ ತಿಂಗಳು ಘೋಷಣೆಯೊಂದನ್ನ ಮಾಡಿದ್ದು, ಒಂದು ವರ್ಷದ ಹಿಂದೆ ನಾವು ಇಂತಹ ಬೆಳವಣಿಗೆಯ ಬಗ್ಗೆ ಊಹಿಸಲೂ ಕೂಡಾ ಸಾಧ್ಯವಿರಲಿಲ್ಲ. ಉದ್ಧವ್ ಠಾಕ್ರೆ ಕಳೆದ ತಿಂಗಳು ಸುದ್ದಿಗಾರರೊಂದಿಗೆ ಮಾತನಾಡಿ ತಾನು ಶಿವಸೇನೆಯ ಈ ಹಿಂದಿನ ವಿಪಕ್ಷ ಕಾಂಗ್ರೆಸ್‌ನ ಅಭ್ಯರ್ಥಿಯ ಪರವಾಗಿ 2024ರ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸುವುದಾಗಿ ಹೇಳಿದ್ದಾರೆ.
“ತಾಯಿ ವರ್ಷ ನಿನಗೆ ನನ್ನ ಮತ ಸಿಗುತ್ತದೆ” ಎಂಬ ಠಾಕ್ರೆಯವರ ಗಾಯಕ್‌ವಾಡ್‌ನಲ್ಲಿನ ಆನ್-ಕ್ಯಾಮೆರಾ ಘೋಷಣೆಯು ಮಹಾರಾಷ್ಟ್ರ ರಾಜಕೀಯದಲ್ಲಿ 2019ರಿಂದ ಈವರೆಗೆ ನಡೆದ ರಾಜಕೀಯ ಬದಲಾವಣೆಯ ಅತೀ ಮುಖ್ಯವಾದ ಬೆಳವಣಿಗೆಗೆ ಸಾಕ್ಷಿಯಾಗಿದೆ. ಕೆಲವು ವರ್ಷಗಳ ಹಿಂದೆ ಬಿಜೆಪಿ ಕೂಟದಲ್ಲಿದ್ದ ಶಿವಸೇನೆ ಈಗ ಇಂಡಿಯಾ ಒಕ್ಕೂಟದ ಕೈ ಹಿಡಿದಿದೆ.
ಇದನ್ನು ಓದಿದ್ದೀರಾ? ಮುಂದಿನ ಪೀಳಿಗೆಗೆ ದಾರಿ ಮಾಡಿಕೊಡುವ ಬದಲು ಮೋದಿಗೆ ಪ್ರಧಾನಿ ಹುದ್ದೆಯ ಅತಿಯಾಸೆ: ಉದ್ಧವ್ ಠಾಕ್ರೆ
ಕಳೆದ ನಾಲ್ಕು ವರ್ಷಗಳಿಂದ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿ ಶಿವಸೇನೆಯ ಠಾಕ್ರೆ ಬಣವು ಕಾಂಗ್ರೆಸ್‌ನ ಮಿತ್ರಪಕ್ಷವಾಗಿದೆ. ಈ ಗುಂಪಿನ ಮೂರನೇ ಪ್ರಮುಖ ಸದಸ್ಯ ಪಕ್ಷ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಆಗಿದೆ. ಈ ಎರಡೂ ಪಕ್ಷಗಳು ಮಹಾರಾಷ್ಟ್ರದಾದ್ಯಂತ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರವನ್ನ ಮಾಡುತ್ತಿವೆ.
ಠಾಕ್ರೆ ಈಗ ಮಹಾ ವಿಕಾಸ್ ಅಘಾಡಿಯ ಐಕಾನ್
2012ರಲ್ಲಿ ಶಿವಸೇನೆಯ ನಾಯಕರಾದ ಬಳಿಕದಿಂದ ಠಾಕ್ರೆ ಅವರು ನಿರಂತರವಾಗಿ ತೀಕ್ಷ್ಣ ಹೇಳಿಕೆಗಳ ಮೂಲಕವೇ ಸುದ್ದಿಯಾಗುತ್ತಾ ಬಂದಿದ್ದರು. ಶಿವಸೇನೆಯ ಪ್ರಮುಖ ಐಕಾನ್ ಉದ್ಧವ್ ಠಾಕ್ರೆ ಆಗಿದ್ದರು. ಆದರೆ 2024ರ ಲೋಕಸಭೆ ಚುನಾವಣೆ ವೇಳೆಗೆ ಸಂಪೂರ್ಣ ಪರಿಸ್ಥಿತಿಯೇ ಬದಲಾವಣೆಯಾಗಿದೆ. ಠಾಕ್ರೆ ಈಗ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿಯ ಮತ್ತು ಇಂಡಿಯಾ ಮೈತ್ರಿಕೂಟದ ಪ್ರಮುಖಾಸ್ತ್ರ, ಐಕಾನ್ ಆಗಿ ಬದಲಾಗಿದ್ದಾರೆ.
ಇಂಡಿಯಾ ಮೈತ್ರಿಕೂಟದಲ್ಲಿರುವ ಠಾಕ್ರೆ ಅವರ ಶಿವಸೇನೆಯು ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. 48 ಲೋಕಸಭೆ ಕ್ಷೇತ್ರಗಳ ಪೈಕಿ 21ರಲ್ಲಿ ಶಿವಸೇನೆ ಸ್ಪರ್ಧಿಸುತ್ತಿದೆ. ಮಹಾರಾಷ್ಟ್ರದಲ್ಲಿ ಅಘಾಡಿ ಮೈತ್ರಿಕೂಟದ ಹಿರಿಯರಾದ ಶರದ್ ಪವಾರ್, ತಮ್ಮ ವಯಸ್ಸು ಮತ್ತು ಅನಾರೋಗ್ಯದ ಕಾರಣದಿಂದಾಗಿ ಪ್ರವಾಸ, ಪ್ರಚಾರ ಎರಡನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಕಾಂಗ್ರೆಸ್‌ಗೆ ಮಹಾರಾಷ್ಟ್ರದಲ್ಲಿ ಅಷ್ಟೊಂದು ಜನಪ್ರಿಯತೆ ಇಲ್ಲ. ಹಾಗಿರುವಾಗ ಈ ಮೈತ್ರಿಕೂಟದ ಮೂರೂ ಪಕ್ಷಗಳ ಅಭ್ಯರ್ಥಿಗಳ ಪ್ರಮುಖ ಪ್ರಚಾರಕರು ಠಾಕ್ರೆಯೇ ಆಗಿದ್ದಾರೆ.
ಇದನ್ನು ಓದಿದ್ದೀರಾ? ನಮ್ಮ ಹಿಂದುತ್ವ ಮನೆ ಒಲೆ ಹೊತ್ತಿಸಿದರೆ ಬಿಜೆಪಿಯ ಹಿಂದುತ್ವ ಮನೆಯನ್ನೇ ಸುಡುತ್ತದೆ: ಉದ್ಧವ್ ಠಾಕ್ರೆ
ಮಹಾರಾಷ್ಟ್ರದ ಪ್ರಮುಖ ಪಕ್ಷಗಳೇ ವಿಪಕ್ಷ, ಆಡಳಿತ ಪಕ್ಷ!
ಪ್ರಸ್ತುತ ಮಹಾರಾಷ್ಟ್ರದ ಪ್ರಮುಖ ಪಕ್ಷಗಳಾದ ಶಿವಸೇನೆ ಮತ್ತು ಎನ್‌ಸಿಪಿಯೇ ಆಡಳಿತ ಪಕ್ಷವೂ ಆಗಿದೆ, ವಿಪಕ್ಷವೂ ಆಗಿದೆ. ಇದಕ್ಕೆ ಪ್ರಮುಖ ಕಾರಣ ಈ ಎರಡೂ ಪಕ್ಷಗಳು ಇಬ್ಭಾಗವಾಗಿರುವುದು. ಶಿವಸೇನೆಯಲ್ಲಿ ಉದ್ಧವ್ ಠಾಕ್ರೆಯ ಬಣ ಮತ್ತು ಏಕನಾಥ್ ಶಿಂದೆ ಅವರ ಬಣವಿದ್ದು, ಶಿಂದೆ ಬಣ ಬಿಜೆಪಿ ಜೊತೆ ಕೈ ಜೋಡಿಸಿ ಸರ್ಕಾರ ನಡೆಸುತ್ತಿದೆ. ಎನ್‌ಸಿಪಿಯಲ್ಲಿ ಶರದ್ ಪವಾರ್ ಬಣ ಮತ್ತು ಅಜಿತ್ ಪವಾರ್ ಬಣವಿದ್ದು ಅಜಿತ್ ಪವಾರ್ ಬಣ ಬಿಜೆಪಿ ಸರ್ಕಾರದ ಮಿತ್ರ ಪಕ್ಷವಾಗಿದೆ.
ಪ್ರಸ್ತುತ ಎನ್‌ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಮೂರು ಪಕ್ಷಗಳ ಪ್ರಚಾರಕರಾಗಿರುವ ಠಾಕ್ರೆ, ತಮ್ಮ ಬಹುತೇಕ ಎಲ್ಲಾ ಭಾಷಣಗಳಲ್ಲಿ ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಮೋದಿ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಠಾಕ್ರೆ ಈಗ ಮೋದಿ ವಿರುದ್ಧವಾಗಿ ಮಾತನಾಡುವ ಮತ್ತು ಪ್ರಧಾನಿಯನ್ನು ಗೇಲಿ ಮಾಡುವ ಯಾವ ಅವಕಾಶವನ್ನು ತಪ್ಪಿಸುತ್ತಿಲ್ಲ ಎಂಬಂತೆ ಭಾಸವಾಗುತ್ತಿದೆ.
ಇತ್ತೀಚೆಗೆ ಪ್ರಚಾರದ ವೇಳೆ ಧಾರ್ಮಿಕ ಆಧಾರದ ಮೇಲೆ ಮತದಾರರನ್ನು ಧ್ರುವೀಕರಿಸುವುದನ್ನು ನಿಲ್ಲಿಸುವಂತೆ ಠಾಕ್ರೆ ಪ್ರಧಾನಿಗೆ ಸಲಹೆ ನೀಡಿದ್ದಾರೆ. ಮೋದಿ ಕೊಂಚ ಪತಂಜಲಿ ತೈಲವನ್ನು ಹಚ್ಚಿ ಮತ್ತು ಕಪಾಲ ಯೋಗ ಮಾಡುವಂತೆಯೂ ಸಲಹೆ ನೀಡಿದ್ದಾರೆ. ಇದು ಪ್ರೇಕ್ಷಕರನ್ನು ಸೆಳೆದಿದ್ದನ್ನು ನಾವು ವಿಡಿಯೋಗಳಲ್ಲಿ ನೋಡಬಹುದು.
ಇದನ್ನು ಓದಿದ್ದೀರಾ? ಬಿಜೆಪಿ ಬಾಗಿಲು ತೆರೆದರೂ ಹಿಂದಿರುಗಿ ಹೋಗಲ್ಲ: ಉದ್ಧವ್ ಠಾಕ್ರೆ
ಬಾಳ್ ಠಾಕ್ರೆ ಹಿಂದುತ್ವ
ತಂದೆ, ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆಯವರ ಹಿಂದುತ್ವವು ಉದ್ಧವ್ ಠಾಕ್ರೆ ಬಳಿ ಇಲ್ಲ ಎನ್ನುವ ಬಿಜೆಪಿಯ ಹೇಳಿಕೆಗಳಿಗೆ ಉತ್ತರಿಸುವುದಕ್ಕೂ ಉದ್ಧವ್ ಠಾಕ್ರೆ ಹಿಂಜರಿದಿಲ್ಲ. “ನಮ್ಮ ಹಿಂದುತ್ವ ಮನೆಗಳಲ್ಲಿ ಒಲೆ ಉರಿಸುತ್ತದೆ, ಬಿಜೆಪಿಯ ಹಿಂದುತ್ವ ಮನೆಗಳನ್ನೇ ಸುಡುತ್ತದೆ” ಎಂದು ಠಾಕ್ರೆ ಬಿಜೆಪಿಗೆ ನೇರವಾಗಿಯೇ ತಿರುಗೇಟು ನೀಡಿದ್ದರು. ಇದು ಹಿಂದುತ್ವದ ಅಜೆಂಡಾದಿಂದ ತಾವು ದೂರ ಸರಿದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಶಿವಸೇನೆಯು ಉದ್ಧವ್ ಠಾಕ್ರೆಯವರ ತಂದೆ ಬಾಳ್ ಠಾಕ್ರೆ ನೇತೃತ್ವದಲ್ಲಿದ್ದಾಗ, ಶಿವಸೇನೆಯು ಖಟ್ಟರ್ ಮುಸ್ಲಿಂ ವಿರೋಧಿಯಾಗಿತ್ತು ಎಂಬುವುದನ್ನು ನಾವು ಅಲ್ಲಗಳೆಯುವಂತಿಲ್ಲ. ಆದರೆ 2024ರ ಲೋಕಸಭೆ ಚುನಾವಣೆ ವೇಳೆಗೆ ಶಿವಸೇನೆಯ ಈ ಖಟ್ಟರ್ ಹಿಂದುತ್ವದಲ್ಲಿ ಭಾರೀ ಬದಲಾವಣೆ ಕಾಣಬಹುದು. ಈ ಚುನಾವಣೆಯಲ್ಲಿ ಮುಸ್ಲಿಂ ಮಹಿಳೆಯರೂ ಶಿವಸೇನೆ ಪರ ಪ್ರಚಾರ ಮಾಡುತ್ತಿದ್ದಾರೆ.
#WATCH | Mumbai: On BJP national president JP Nadda, Shiv Sena (UBT) chief Uddhav Thackeray says, “He may call RSS fake tomorrow and right now I feel there is a threat to RSS…BJP will ban RSS.” pic.twitter.com/kEyusf8jEF
— ANI (@ANI) May 18, 2024
ಮುಂಬೈ ಸೌತ್ ಸೆಂಟ್ರಲ್‌ನ ಮಾಹಿಮ್‌ನ ಸನಾ ಖಾನ್ ಶಿವಸೇನೆ ಪರವಾಗಿ ಪ್ರಚಾರದಲ್ಲಿ ಭಾಗಿಯಾಗಿದ್ದು, ಕೋವಿಡ್ ಸಂದರ್ಭದಲ್ಲಿ ಉದ್ಧವ್ ಠಾಕ್ರೆ ಸರ್ಕಾರದ ಕ್ರಮಗಳನ್ನು ಶ್ಲಾಘಿಸಿದ್ದಾರೆ. “ಕೋವಿಡ್ ವೇಳೆ ಠಾಕ್ರೆ ಸರ್ಕಾರ ತಮ್ಮ ಕೈಲಾದಷ್ಟು ಮಾಡಿದೆ. ಯಾವುದೇ ಸಮುದಾಯದ ವಿರುದ್ಧವೂ ತಾರತಮ್ಯ ಮಾಡಿಲ್ಲ” ಎಂದು ಸನಾ ಖಾನ್ ಹೇಳುತ್ತಾರೆ.
ಚುನಾವಣೆ ಪ್ರಚಾರ ಹೆಚ್ಚಿಸಿಕೊಂಡ ಮೋದಿ!
ದೇಶದಲ್ಲಿ ಐದನೇ ಹಂತದ ಚುನಾವಣೆ ನಡೆಯುತ್ತಿದ್ದಂತೆ ಬಹುತೇಕ ಜನರ ಕಣ್ಣು ಮಹಾರಾಷ್ಟ್ರದ ಪ್ರಮುಖ 13 ಸ್ಥಾನಗಳತ್ತ ತಿರುಗಿದೆ. ಮಹಾರಾಷ್ಟ್ರದಲ್ಲಿ ಇದು ಕೊನೆಯ ಹಂತದ ಮತದಾನವಾಗಿದೆ. ಮುಂಬೈ, ಥಾಣೆ ಮತ್ತು ನಾಸಿಕ್‌ನ ಎಲ್ಲಾ ಸ್ಥಾನಗಳಲ್ಲಿ ಮೇ 20ರಂದು ಚುನಾವಣೆ ನಡೆಯಲಿದೆ. 48 ಸ್ಥಾನಗಳನ್ನು ಹೊಂದಿರುವ ಮಹಾರಾಷ್ಟ್ರವು ದೇಶದಲ್ಲೇ ಎರಡನೇ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯವಾಗಿದೆ.
2019ರ ಲೋಕಸಭೆ ಚುನಾವಣೆ ವೇಳೆ ಮಹಾರಾಷ್ಟ್ರದಲ್ಲಿ ಒಟ್ಟಾಗಿ 9 ಪ್ರಚಾರ ರ್‍ಯಾಲಿಗಳನ್ನು ನಡೆಸಿದ್ದ ಪ್ರಧಾನಿ ಮೋದಿ, ಈಗಾಗಲೇ ರಾಜ್ಯದಲ್ಲಿ 20ಕ್ಕೂ ಹೆಚ್ಚು ರ್‍ಯಾಲಿಗಳನ್ನು ನಡೆಸಿದ್ದಾರೆ. ಅಂದರೆ ಕಳೆದ ಲೋಕಸಭೆ ಚುನಾವಣೆಗಿಂತ ಈ ಬಾರಿ ಮೋದಿ ಅವರು ಹೆಚ್ಚುವರಿ 11 ಬಾರಿ ಪ್ರಚಾರ ಮಾಡಿದ್ದಾರೆ. ಮೋದಿ ಪ್ರಚಾರದ ಪ್ರಮಾಣದಲ್ಲಿ ಹೆಚ್ಚಲವು ರಾಜ್ಯದಲ್ಲಿ ಚುನಾವಣಾ ಪ್ರಚಾರದ ಮೇಲೆ ಉದ್ಧವ್ ಠಾಕ್ರೆ ಬೀರಿದ ಪ್ರಭಾವವನ್ನು ತೋರಿಸುವುದಂತು ಖಚಿತ.
ಒಟ್ಟಿನಲ್ಲಿ ಕಾಂಗ್ರೆಸ್, ಎನ್‌ಸಿಪಿ, ಶಿವಸೇನೆಯ ಐಕಾನ್ ಆಗಿ ಬದಲಾಗಿರುವ ಉದ್ಧವ್ ಠಾಕ್ರೆ ಒಂದೆಡೆ ತಮ್ಮ ಹಿಂದುತ್ವವನ್ನು ದೂರ ಮಾಡದೆ, ಇನ್ನೊಂದೆಡೆ ಇತರೆ ಧರ್ಮಗಳ ಮೇಲೆ ವಾಕ್ ಪ್ರಹಾರವನ್ನೂ ಮಾಡದೆ ಮಹಾರಾಷ್ಟ್ರದ ಬಲಿಷ್ಠ ವಿಪಕ್ಷ ನಾಯಕನಾಗಿ ಸಮತೋಲನದಲ್ಲಿ ಚುನಾವಣಾ ಪ್ರಚಾರ ಮಾಡಿಕೊಂಡು ಹೋಗುತ್ತಿರುವುದು ಈ ಬಾರಿಯ ಚುನಾವಣೆಯ ವಿಶೇಷವೆಂದೇ ಹೇಳಬೇಕಾಗಿದೆ.