- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ‘ಮತದಾರರ ಚೇತನ ಮಹಾಭಿಯಾನ’ ಸಭೆ
- ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಮುಖ ನಾಯಕರ ಅನುಪಸ್ಥಿತಿ
ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸಿರುವ ರಾಜ್ಯ ಬಿಜೆಪಿ ಗುರುವಾರ ಲೋಕಸಭಾ ಕ್ಷೇತ್ರಗಳ ‘ಮತದಾರರ ಚೇತನ ಮಹಾಭಿಯಾನ’ವನ್ನು ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆಸಿದ್ದು, ಪ್ರಮುಖ ನಾಯಕರೇ ಗೈರಾಗಿದ್ದಾರೆ.
ಮತದಾರರ ಚೇತನ ಮಹಾಭಿಯಾನದ ಭಾಗವಾಗಿ ಸಂಸದರು, ಶಾಸಕರು, ಪರಾಜಿತ ಅಭ್ಯರ್ಥಿಗಳು, ಪದಾಧಿಕಾರಿಗಳ ಸಭೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ನೇತೃತ್ವದಲ್ಲಿ ನಡೆಯಿತು.
ಈ ಸಭೆಗೆ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಬಿ ಎಸ್ ಯಡಿಯೂರಪ್ಪ ಸೇರಿದಂತೆ ಶಾಸಕರಾದ ಎಸ್ ಟಿ ಸೋಮಶೇಖರ್, ಶಿವರಾಮ ಹೆಬ್ಬಾರ್, ಮಾಜಿ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ, ವಿ ಸೋಮಣ್ಣ ಹಾಗೂ ಎಂ ಪಿ ರೇಣುಕಾಚಾರ್ಯ ಅವರೆಲ್ಲ ಗೈರಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಆಪರೇಷನ್ ಹಸ್ತ ವದಂತಿ
ಬಿಜೆಪಿ ಶಾಸಕರಾದ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಹಾಗೂ ಎಂ ಪಿ ರೇಣುಕಾಚಾರ್ಯ ಅವರು ಆಪರೇಷನ್ ಹಸ್ತದಲ್ಲಿ ಸಿಲುಕಿದ್ದಾರೆ ಎಂಬ ವದಂತಿ ಮಾತುಗಳಿಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಈ ನಾಯಕರೆಲ್ಲ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಆಶ್ಚರ್ಯ ಮೂಡಿಸಿದ್ದಾರೆ. ಮುಂದುವರಿದು, ಸೋಮಶೇಖರ್ ಅವರ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಸದ್ಯ ಇವರೆಲ್ಲ ಬಿ ಎಲ್ ಸಂತೋಷ್ ನೇತೃತ್ವದ ಸಭೆಗೆ ಗೈರಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ನನಗೆ ನೋಟಿಸ್ ಕೊಟ್ಟಿದ್ದಾರೆ, ಗೈರಾಗಿದ್ದೇನೆ: ರೇಣುಕಾಚಾರ್ಯ
ಸಭೆಗೆ ಗೈರಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ, “ನನಗೆ ನೋಟಿಸ್ ಕೊಟ್ಟಿದ್ದಾರೆ. ಆ ನೋಟಿಸ್ ವಾಪಸ್ಸು ಪಡೆಯಬೇಕು. ಅದಕ್ಕೇ ಸಭೆಗೆ ಹಾಜರಾಗುತ್ತಿಲ್ಲ” ಎಂದಿದ್ದಾರೆ.
“ನಾನು ಏನು ಹೇಳಬೇಕೊ ಅದನ್ನು ಈಗಾಗಲೇ ಹೇಳಿದ್ದೇನೆ. ಇದರಿಂದ ನನಗೆ ವೈಯಕ್ತಿಕವಾಗಿ ಯಾವುದೇ ಲಾಭ ಇಲ್ಲ. ಸಾಮಾನ್ಯ ಕಾರ್ಯಕರ್ತರ ಅಪೇಕ್ಷೆಯಂತೆ ಇರುವುದನ್ನು ನೇರವಾಗಿ ಹೇಳಿದ್ದೇನೆ. ಯಡಿಯೂರಪ್ಪ ಅವರಂತ ನಾಯಕರನ್ನು ಕಡೆಗಣಿಸಿರುವುದು ಬಿಜೆಪಿಗೆ ಶಾಪವಾಗಿದೆ” ಎಂದು ಹೇಳಿದ್ದಾರೆ.
“ಬಿಜೆಪಿಯಲ್ಲಿ ವರ್ಚಸ್ಸು ಇರುವವರನ್ನು ಬೆಳೆಯಲು ಬಿಡುತ್ತಿಲ್ಲ. ವಿಜಯೇಂದ್ರ ಅಂತವರನ್ನ ಮೂಲೆಗುಂಪು ಮಾಡಿದ್ದಾರೆ. ನಾನು ನೇರವಾಗಿ ಮಾತನಾಡಿದ್ದೇನೆ. ಅದಕ್ಕೆ ಶಿಸ್ತು ಕ್ರಮ ತೆಗೆದುಕೊಂಡಿದ್ದಾರೆ. ನಾನು ಪಕ್ಷ, ಮೋದಿ, ನಡ್ಡಾ, ಅಮಿತ್ ಶಾ ವಿರುದ್ದ ಮಾತಾಡಿಲ್ಲ. ನಾನು ಮಾತಾಡಿರುವುದು ಕೆಲ ವ್ಯಕ್ತಿಗಳ ದೌರ್ಬಲ್ಯವನ್ನು. ಅದನ್ನ ನೇರವಾಗಿಯೇ ಖಂಡಿಸಿದ್ದೇನೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯದ ಜನತೆಗೆ ತಪ್ಪು ಸಂದೇಶ ಹೋಗಿದೆ. ವಿಪಕ್ಷ ಹಾಗೂ ಅಧ್ಯಕ್ಷ ಸ್ಥಾನ ಆಯ್ಕೆಯಾಗಿಲ್ಲ. ಇದನ್ನೆಲ್ಲ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡಬೇಕು. ಕೆಲವರು ದುರಹಂಕಾರ ಭ್ರಮಾಲೋಕದಲ್ಲಿದ್ದಂತೆ ಆಡುತ್ತಾರೆ. ಅದಕ್ಕೆ ಈ ಪಕ್ಷಕ್ಕೆ ಹಿನ್ನಡೆಯಾಗಿದೆ. ಲೋಕಸಭೆಗೆ ಇದು ಆಗಬಾರದು ಅನ್ನುವುದು ನಮ್ಮ ಉದ್ದೇಶ” ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಧಾನಿಗೆ 9 ವರ್ಷಗಳಿಂದ ಕಾಣದ ಅಕ್ಕತಂಗಿಯರ ಸಂಕಟ ಈಗ ಕಂಡಿದ್ದು ಹೇಗೆ?
ಯಡಿಯೂರಪ್ಪ, ಬೊಮಾಯಿ ಗೈರು
ಶಿವಮೊಗ್ಗ ವಿಮಾನಯಾನ ಆರಂಭದ ಹಿನ್ನೆಲೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಆರಗ ಜ್ಞಾನೇಂದ್ರ, ಶಾಸಕ ಬಿ.ವೈ. ವಿಜಯೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ ಅವರು ಸಭೆಗೆ ಗೈರಾಗಿದ್ದಾರೆ ಎನ್ನಲಾಗಿದೆ. ಹಾಗೆಯೇ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಆರೋಗ್ಯ ಸಮಸ್ಯೆ ಹಿನ್ನೆಲೆ ಸಭೆಗೆ ಆಗಮಿಸಿಲ್ಲ ಎಂದು ತಿಳಿದು ಬಂದಿದೆ.
ಕೇಂದ್ರ ಸಚಿವ ನಾರಾಯಣಸ್ವಾಮಿ, ಸಂಸದರಾದ ಡಿ.ವಿ. ಸದಾನಂದ ಗೌಡ, ತೇಜಸ್ವಿ ಸೂರ್ಯ, ಈರಣ್ಣ ಕಡಾಡಿ, ಶಾಸಕರಾದ ರಮೇಶ್ ಜಾರಕಿಹೊಳಿ, ಶ್ರೀವತ್ಸ, ನಿಖಿಲ್ ಕತ್ತಿ, ಪರಾಜಿತ ಅಭ್ಯರ್ಥಿಗಳಾದ ಪ್ರತಾಪ್ ಗೌಡ ಪಾಟೀಲ್, ಮಹೇಶ್ ಕುಮಟಳ್ಳಿ, ಜಿ.ಹೆಚ್. ತಿಪ್ಪಾರೆಡ್ಡಿ, ರೂಪಾಲಿ ನಾಯಕ್, ಬಿ.ಸಿ. ಪಾಟೀಲ್, ಡಾ. ಕೆ. ಸುಧಾಕರ್, ಡಿ.ಎನ್. ಜೀವರಾಜ್, ಬಸವರಾಜ ದಡೇಸೂಗೂರು, ಬೆಳ್ಳಿ ಪ್ರಕಾಶ್, ಗೋವಿಂದ ಕಾರಜೋಳ, ಪಿ. ರಾಜೀವ್, ಸಂಜಯ್ ಪಾಟೀಲ್, ಬಿ.ಸಿ. ನಾಗೇಶ್, ಸಪ್ತಗಿರಿ ಗೌಡ, ಪ್ರೀತಮ್ ಗೌಡ, ಎನ್. ಮಹೇಶ್, ಸಿ.ಪಿ. ಯೋಗೇಶ್ವರ್ ಸೇರಿದಂತೆ ಹಲವರು ಭಾಗಿಯಾದರು.
ಬಿಜೆಪಿಗೂ ಕಾಂಗ್ರೆಸ್‌ಗೂ 9 ಲಕ್ಷ ಮತಗಳ ಅಂತರ
ಸಭೆಯಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, “ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ ಶುರುವಾಗಿದೆ. ಚುನಾವಣಾ ಆಯೋಗದ ಜೊತೆ ಬಿಜೆಪಿ ಕೈ ಜೋಡಿಸಿದೆ. ರಾಜ್ಯ ಮಟ್ಟ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಿತಿ ತಂಡ ಕೆಲಸ ಮಾಡುತ್ತದೆ. ಕಾಂಗ್ರೆಸ್ ಪಡೆದಿರುವ ಮತಕ್ಕೂ ಬಿಜೆಪಿ ಪಡೆದ ಮತಕ್ಕೂ ಒಂಬತ್ತು ಲಕ್ಷ ಮತಗಳಷ್ಟೇ ಅಂತರವಿದೆ. 2019 ರಲ್ಲಿ ನರೇಂದ್ರ ಮೋದಿ ಹೇಗೆ ಗೆಲ್ಲಿಸಿದರೋ ಹಾಗೆ 2024 ರಲ್ಲೂ ಗೆಲ್ಲಿಸಲು ಜನ ಕಾಯುತ್ತಿದ್ದಾರೆ” ಎಂದರು.
“ರಾಜ್ಯ ಸರ್ಕಾರದ ವೈಫಲ್ಯದಿಂದ ಜನರು ಬೇಸತ್ತಿದ್ದಾರೆ: ಬೆಂಗಳೂರಿನ ಜನರು ಕಾವೇರಿ ನೀರಿನ ಬಗ್ಗೆ ಸರ್ಕಾರದ ನಡವಳಿಕೆಯಿಂದ ಬೇಸರಗೊಂಡಿದ್ದಾರೆ. ಕಾವೇರಿ ನೀರಿನ ವಸ್ತುಸ್ಥಿತಿ ಬಗ್ಗೆ ಸರ್ಕಾರ ಮನವರಿಕೆ ಮಾಡಿಕೊಟ್ಟಿಲ್ಲ. ಗ್ಯಾರಂಟಿಗಳ ಸುಳ್ಳು ಭರವಸೆ ನೀಡಿ, ಜನರನ್ನು ಮೂರ್ಖರಾಗಿ ಮಾಡಿದ್ದಾರೆ. ಮೋದಿ ಸರ್ಕಾರ ಎಲ್ಪಿಜಿ ದರ ಕಡಿಮೆ ಮಾಡಿದ್ದನ್ನು ಇವರು ಸಹಿಸುತ್ತಿಲ್ಲ. ಬಿಬಿಎಂಪಿ ಚುನಾವಣೆ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಎದುರಿಸಬೇಕಾದರೆ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ ಪ್ರಮುಖ ಆಗಿದೆ” ಎಂದು ಹೇಳಿದರು.