- ಖರ್ಗೆ ಅವರ ಸದಾಶಿವನಗರ ನಿವಾಸಕ್ಕೆ ಬೆಳಗ್ಗೆ ತೆರಳಿ ಸಮಾಲೋಚನೆ
- ಐಟಿ ದಾಳಿ, ವಿರೋಧ ಪಕ್ಷಗಳ ಕಮಿಷನ್ ಆರೋಪ ಕುರಿತು ಚರ್ಚೆ!
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿಕೆ ಶಿವಕುಮಾರ್ ಅವರು ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಗಳೂರಿನ ಸದಾಶಿವನಗರ ನಿವಾಸಕ್ಕೆ ಬೆಳಗ್ಗೆ ತೆರಳಿ ಸಮಾಲೋಚನೆ ನಡೆಸಿದ್ದಾರೆ.
ಭಾನುವಾರ ತಡರಾತ್ರಿ ಬೆಂಗಳೂರಿಗೆ ಬಂದಿರುವ ವೇಣುಗೋಪಾಲ್ ಅವರು ಬೆಳಗಿನ ಉಪಾಹಾರ ನೆಪದಲ್ಲಿ ಎಐಸಿಸಿ ಅಧ್ಯಕ್ಷರ ಮನೆಗೆ ತೆರಳಿ ರಾಜಕೀಯ ಚರ್ಚೆ ನಡೆಸಿದರು. ಈ ಚರ್ಚೆಯಲ್ಲಿ ರಾಜ್ಯದಲ್ಲಿ ಆಗಿರುವ ಬಿಜೆಪಿ- ಜೆಡಿಎಸ್ ಮೈತ್ರಿಯ ಪರಿಣಾಮಗಳು ಹಾಗೂ ಪಂಚರಾಜ್ಯಗಳ ಚುನಾವಣೆ ಸುತ್ತ ಚರ್ಚೆ ನಡೆದಿದೆ ಎನ್ನಲಾಗಿದೆ.
ರಾಜಕೀಯವಾಗಿ ಈ ಮೂವರೂ ನಾಯಕರು ಕೆಲಹೊತ್ತು ರಹಸ್ಯವಾಗಿ ಮಾತುಕತೆ ನಡೆಸಿರುವುದು ಈಗ ಕುತೂಹಲ ಮೂಡಿಸಿದೆ. ಮೂವರು ನಾಯಕರು ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಐಟಿ ದಾಳಿ, ವಿರೋಧ ಪಕ್ಷಗಳ ಕಮಿಷನ್ ಆರೋಪ ಸೇರಿದಂತೆ ಹಲವು ವಿಚಾರಗಳ ಬಗ್ಗೆಯೂ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ‘ಈ ದಿನ’ ಸಂಪಾದಕೀಯ | ರಾಜೀವ ತಾರಾನಾಥ್ ‘ಕಮಿಷನ್’ ಪ್ರಕರಣ; ಕನ್ನಡ-ಸಂಸ್ಕೃತಿ ಇಲಾಖೆ ಸರ್ಜರಿಗೆ ಸಕಾಲ
ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಡಿಕೆ ಶಿವಕುಮಾರ್, “ಯಾರಿಗೆ ಏನು ಉತ್ತರ ಕೊಡಬೇಕೋ ಖಂಡಿತ ಕೊಡುವೆ. ಹೈ ವೋಲ್ಟೇಜ್‌ಗೂ ಕೊಡ್ತೀನಿ, ಲೋ ವೋಲ್ಟೇಜ್‌ಗೂ ಕೊಡ್ತೀನಿ. ನಕಲಿಗಳಿಗೂ ಕೊಡ್ತೀನಿ, ಲೂಟಿಗಳಿಗೂ ಕೊಡ್ತೀನಿ, ಎಲ್ಲರಿಗೂ ಕೊಡ್ತೀನಿ. ಸ್ವಲ್ಪ ಕಾಯಿರಿ” ಎಂದು ಸೂಚ್ಯವಾಗಿ ಹೇಳಿದರು.
ಬಿಜೆಪಿಯವರು ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, “ಬಿಜೆಪಿಯವರು ಪ್ರತಿಭಟನೆ ಮಾಡಲಿ. ಅವರು ಪ್ರತಿಭಟನೆ ಮಾಡಿದರೆ ಮಾತ್ರ ಅವರ ಲೂಟಿ ಜನರಿಗೆ ತಿಳಿಯುವುದು. ಎಲ್ಲ ಬಿಚ್ಚಿಡುತ್ತೇನೆ” ಎಂದು ಹೇಳಿ ವೇಣುಗೋಪಾಲ್ ಜೊತೆ ಮುಂದೆ ಸಾಗಿದರು.