ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಗುರುವಾರ ಬೆಳಗ್ಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೌನ್ಸಿಲರ್ ದುಲಾಲ್ ಸರ್ಕಾರ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಬೆನ್ನಲ್ಲೇ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ “ನನ್ನ ಆಪ್ತ ಸಹಾಯಕನ ಹತ್ಯೆಯಾಗಿದೆ” ಎಂದು ಹೇಳಿದ್ದಾರೆ.
ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಬ್ಬರು ದುಷ್ಕರ್ಮಿಗಳು ಸರ್ಕಾರ್ ಕಚೇರಿಯೊಳಗೆ ನುಗ್ಗಿ ಅನೇಕ ಬಾರಿ ಗುಂಡು ಹಾರಿಸುವುದು ವಿಡಿಯೋದಲ್ಲಿ ಕಾಣಬಹುದು. ಮಾಲ್ಡಾದ ಜಲ್ಜಾಲಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಅವಕಾಶ ಸಿಕ್ಕರೆ ‘ಇಂಡಿಯಾ ಒಕ್ಕೂಟ’ವನ್ನು ಮುನ್ನಡೆಸಲು ಸಿದ್ಧ: ಮಮತಾ ಬ್ಯಾನರ್ಜಿ
ಒಂದು ಗುಂಡು ಮಾಲ್ಡಾ ಕೌನ್ಸಿಲರ್‌ನ ತಲೆಗೆ ತಗುಲಿದರೆ, ಇನ್ನೆರಡು ದೇಹದ ಇತರೆ ಭಾಗಕ್ಕೆ ತಗುಲಿದೆ. ಕೂಡಲೇ ದುಲಾಲ್ ಸರ್ಕಾರ್ ಅವರನ್ನು ಮಾಲ್ಡಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ.
ಈ ಹತ್ಯೆ ವಿಚಾರದಲ್ಲಿ ಮಮತಾ ಬ್ಯಾನರ್ಜಿ ಮಾಲ್ಡಾ ಪೊಲೀಸ್ ವರಿಷ್ಠಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಧಿಕಾರಿಯನ್ನು ‘ನಿಷ್ಪ್ರಯೋಜಕ’ ಎಂದು ಕರೆದಿದರುವ ಮಮತಾ ಬ್ಯಾನರ್ಜಿ ಅವರು, ದುಲಾಲ್ ಸರ್ಕಾರ್ ಅವರ ಭದ್ರತೆಯನ್ನು ಇತ್ತೀಚೆಗೆ ಹಿಂಪಡೆಯಲಾಗಿದೆ ಎಂದಿದ್ದಾರೆ. ಹಾಗೆಯೇ ಬಾಬ್ಲಾ ಎಂದೂ ಕರೆಯಲ್ಪಡುವ ಸರ್ಕಾರ್ ಸಾವಿಗೆ ಬಂಗಾಳ ಸಿಎಂ ಸಂತಾಪ ಸೂಚಿಸಿದರು.
“ನನ್ನ ನಿಕಟವರ್ತಿ ಮತ್ತು ಅತ್ಯಂತ ಜನಪ್ರಿಯ ನಾಯಕ, ಬಾಬ್ಲಾ ಸರ್ಕಾರ್ ಇಂದು ಕೊಲೆಯಾಗಿದ್ದಾರೆ. ತೃಣಮೂಲ ಕಾಂಗ್ರೆಸ್ ಆರಂಭದಿಂದಲೂ ಅವರು (ಮತ್ತು ಅವರ ಪತ್ನಿ ಚೈತಾಲಿ ಸರ್ಕಾರ್) ಪಕ್ಷಕ್ಕಾಗಿ ಶ್ರಮಿಸಿದರು. ಬಾಬ್ಲಾ ಕೌನ್ಸಿಲರ್ ಆಗಿ ಆಯ್ಕೆಯಾದರು” ಎಂದು ಎಕ್ಸ್‌ನಲ್ಲಿ ಮಮತಾ ಬ್ಯಾನರ್ಜಿ ಪೋಸ್ಟ್ ಮಾಡಿದ್ದಾರೆ.
My close associate, and a very popular leader, Babla Sarkar has been murdered today.
— Mamata Banerjee (@MamataOfficial) January 2, 2025
From the beginning of the Trinamool Congress, he (and his wife Chaitali Sarkar) worked hard for the party, and Babla was also elected a councillor.
I am sad and hugely shocked after knowing…
“ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಬೇಕು. ಕುಟುಂಬಕ್ಕೆ ನನ್ನ ಸಂತಾಪವನ್ನು ಹೇಗೆ ತಿಳಿಸಬೇಕೆಂದು ನನಗೆ ತಿಳಿಯುತ್ತಿಲ್ಲ. ನನಗೆ ಆಘಾತವಾಗಿದೆ ಮತ್ತು ದುಃಖವಾಗಿದೆ. ದೇವರು ಚೈತಾಳಿಗೆ ಈ ನೋವನ್ನು ತಡೆಯುವ ಶಕ್ತಿ ನೀಡಲಿ” ಎಂದು ಪೋಸ್ಟ್‌ನಲ್ಲಿ ಸೇರಿಸಿದ್ದಾರೆ.
ಇನ್ನು “ತನಿಖೆಯನ್ನು ಪ್ರಾರಂಭಿಸಲಾಗಿದೆ ಮತ್ತು ನಾವು ಅಪರಾಧಿಗಳನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
