ಅಡುಗೆಮನೆಯಲ್ಲಿ ಪುರುಷ, ಫುಟ್‌ಬಾಲ್ ಮೈದಾನದಲ್ಲಿ ಬಾಲಕಿ; ಪಿತೃಪ್ರಭುತ್ವವನ್ನು ಛಿದ್ರಗೊಳಿಸುವ ಕೇರಳದ ಶಾಲಾ ಪಠ್ಯಗಳು

Date:

Advertisements

ಒಬ್ಬ ಪುರುಷ ಅಡುಗೆಮನೆಯಲ್ಲಿ ತೆಂಗಿನಕಾಯಿ ತುರಿಯುತ್ತಾನೆ. ಆತನ ಪತ್ನಿ ಅಡುಗೆ ಮಾಡುತ್ತಾರೆ. ಆತನ ಮಗಳು ಅಡುಗೆಮನೆಯ ಕ್ಯಾಬಿನೆಟ್‌ನಲ್ಲಿ ಡಬ್ಬ ಜೋಡಿಸುತ್ತಾಳೆ ಮತ್ತು ಮಗ ಸಣ್ಣ ಆಟಿಕೆಯೊಂದಿಗೆ ಆಟವಾಡುತ್ತಾನೆ. ಈ ದೃಶ್ಯ ಸಾಂಪ್ರದಾಯಿಕ ಪಿತೃಪ್ರಧಾನ ವ್ಯವಸ್ಥೆ/ಸಮಾಜದಲ್ಲಿ ಅಸಾಂಪ್ರದಾಯಿಕವಾಗಿ ಕಾಣಬಹುದು. ಹೆಣ್ಣು ಅಡುಗೆ ಮನೆಗೆ ಸೀಮಿತವಲ್ಲ. ಪುರುಷನೂ ಅಡುಗೆ ಮನೆಯಲ್ಲಿ, ಅಡುಗೆ ಕೆಲಸದಲ್ಲಿ ಭಾಗಿಯಾಗಬೇಕು ಎಂಬ ಸಂದೇಶವುಳ್ಳ ಈ ದೃಶ್ಯವು ಕೇರಳದ ಮಲಯಾಳಂ ಪಠ್ಯಪುಸ್ತಕದಲ್ಲಿ ಕಾಣಸಿಗುತ್ತದೆ. 3ನೇ ತರಗತಿಗೆ ಹೊಸದಾಗಿ ಪರಿಚಯಿಸಲಾದ ಪಠ್ಯವು, ‘ವೀಟಿಲೆ ಪ್ರಧಾನ ತೊಝಿಲಿದಾಮನು ಅಡುಕ್ಕಲಾ’ (‘ಅಡುಗೆಮನೆಯು ಮನೆಯ ಮುಖ್ಯ ಕೆಲಸದ ಸ್ಥಳ’) ಎಂದು ತಿಳಿಸುತ್ತದೆ. ಪುರುಷರು ಅಡುಗೆಮನೆಯಲ್ಲಿ ಕೆಲಸ ಮಾಡುವುದು ಸಹಜವೆಂದು ಪಠ್ಯ ಹೇಳುತ್ತದೆ.

1, 3, 5, 7, ಮತ್ತು 9ನೇ ತರಗತಿಗಳ ಪಠ್ಯಪುಸ್ತಕಗಳಲ್ಲಿ ಕೇರಳ ಸರ್ಕಾರವು ಪರಿಚಯಿಸಿದ ಅನೇಕ ಬದಲಾವಣೆಗಳಲ್ಲಿ ಇದೂ ಕೂಡ ಒಂದು. ಈ ಪಠ್ಯವು ಪಿತೃಪ್ರಭುತ್ವದ ಲಿಂಗ ನಿಯಮಗಳನ್ನು ಒಡೆದು, ಲಿಂಗ ಸಮಾನತೆಯನ್ನು ಸಾರುವ ಉದ್ದೇಶವನ್ನು ಹೊಂದಿದೆ.

ಭಾರತೀಯ ಶಾಲಾ ಪಠ್ಯಪುಸ್ತಕಗಳಲ್ಲಿ ಪುರುಷರು ತಮ್ಮ ಪಕ್ಕದಲ್ಲಿ ಒಂದು ಕಪ್ ಚಹಾದೊಂದಿಗೆ ದಿನಪತ್ರಿಕೆಗಳನ್ನು ಓದುವುದು, ಅಡುಗೆಮನೆಯಲ್ಲಿ ಮಹಿಳೆ ಕೆಲಸ ಮಾಡುವ ಚಿತ್ರಗಳನ್ನೇ ಹೊಂದಿರುತ್ತವೆ. ಅಂತಹ ದೃಶ್ಯಗಳಿಗೆ ವಿರುದ್ಧವಾಗಿ ಪರಿಷ್ಕೃತ ಪಠ್ಯವು ಮಕ್ಕಳ ಮನಸ್ಸಿನಲ್ಲಿ ಹೊಸ ಚಿಂತನೆಯನ್ನು ಬಿತ್ತುತ್ತದೆ. ಮನೆಯ ಪ್ರತಿಯೊಬ್ಬ ಸದಸ್ಯರು ಲಿಂಗಬೇಧವಿಲ್ಲದೆ, ದೈನಂದಿನ ಕೆಲಸಗಳಲ್ಲಿ ತೊಡಗಬೇಕು ಎಂಬುದನ್ನು ಕಲಿಸುತ್ತದೆ.

Advertisements

May be a doodle of text that says 'വീട്ടിലെ പ്രധാന തൊഴിലിടമാണ് അടുക്കള. ചിത്രം നോക്കൂ. 白 ធបយ しょ ቀጌታ V s ses .എന്തെല്ലാം പണികളാണ് അടുക്കളയിൽ നടക്കുന്നത്? വീട്ടിലെ കാര്യങ്ങൾകൂടി ഓർമ്മിച്ചു പറയു. അടുക്കളയിൽ എന്തെല്ലാം ഉപകരണങ്ങൾ ഉപയോഗിക്കുന്നുണ്ട്? അടുക്കളപ്പണിയുമായി ബന്ധപ്പെട്ട് എന്തൊക്കെ വാക്കുകളും പ്രയോഗങ്ങളും നിങ്ങൾക്കു കണ്ടെത്താനാവും? പറയൂ. കണ്ടെത്തിയവ ഉൾപ്പെടുത്തി കുറിപ്പു തയ്യാറാക്കൂ. 59'

“ಇದು ಒಂದು ಉತ್ತಮ ಹೆಜ್ಜೆ. ಪಠ್ಯಪುಸ್ತಕಗಳು ಯುವ ಪೀಳಿಗೆಗೆ ಅಡಿಪಾಯವಾಗಿವೆ. ಅವರ ಆಲೋಚನೆಗಳ ಮೇಲೆ ಪ್ರಭಾವ ಬೀರುತ್ತವೆ. 2024ರಲ್ಲಿಯೂ ಸಹ, ಸಾರ್ವಜನಿಕ ಸ್ಥಳಗಳಲ್ಲಿ ಪ್ರಗತಿಪರವಾಗಿ ಮಾತನಾಡುವವರು, ತಮ್ಮ ಮನೆಯಲ್ಲಿ ಅದೇ ಪಿತೃಪ್ರಭುತ್ವದ ವಿಧಾನವನ್ನು ಅನುಸರಿಸುತ್ತಾರೆ. ಎಲ್ಲಾ ಮನೆಕೆಲಸಗಳು ಮಹಿಳೆಯರ ಜವಾಬ್ದಾರಿಯೆಂದು ಭಾವಿಸಿದ್ದಾರೆ. ಇಂತಹ ದುಸ್ಥಿತಿಯಲ್ಲಿ ಈ ಪಠ್ಯ ಎಲ್ಲರಿಗೂ ಪಾಠವಾಗುತ್ತದೆ” ಎಂದು ನೆದರ್‌ಲ್ಯಾಂಡ್‌ನ ಎರಾಸ್ಮಸ್ ವಿಶ್ವವಿದ್ಯಾಲಯದ ಲಿಂಗ ಮತ್ತು ರಾಜಕೀಯ ಆರ್ಥಿಕತೆಯ ಪ್ರಾಧ್ಯಾಪಕಿ ಡಾ. ಶ್ರೀರೇಖಾ ಸತಿ ಹೇಳಿರುವುದಾಗಿ ‘ಟಿಐಇ’ ವರದಿ ಮಾಡಿದೆ.

ಜಗತ್ತು ಎಷ್ಟೇ ಮುಂದೆ ಸಾಗುತ್ತಿದ್ದರೂ, ಭಾರತೀಯ ಶಾಲೆಗಳು ಮತ್ತು ಕಾಲೇಜುಗಳಲ್ಲಿನ ಪಠ್ಯಪುಸ್ತಕಗಳು ಪಿತೃಪ್ರಧಾನ ವಿಚಾರಗಳನ್ನು ಚಿತ್ರಿಸುತ್ತವೆ. ಉದಾಹರಣೆಗೆ, ಮಹಾರಾಷ್ಟ್ರದಲ್ಲಿ 12ನೇ ತರಗತಿಯ 2017ರ ಸಮಾಜಶಾಸ್ತ್ರ ಪಠ್ಯಪುಸ್ತಕದಲ್ಲಿ ವಿವಾಹಕ್ಕಾಗಿ ವರನ ಕಡೆಯವರು ‘ವಿಶೇಷಚೇತನ’ ಮಹಿಳೆಯನ್ನು ಮದುವೆ ಮಾಡಿಕೊಳ್ಳಲು ವರದಕ್ಷಿಣೆ ಕೇಳುವುದನ್ನು ಚಿತ್ರಿಸಿತ್ತು. ರಾಜಸ್ಥಾನದ 9ನೇ ತರಗತಿಯ ಹಿಂದಿ ಭಾಷೆಯ ಪಠ್ಯಪುಸ್ತಕದಲ್ಲಿ ಗೃಹಿಣಿಯರನ್ನು ಪುರುಷರು ತಮ್ಮ ಸೇವೆ ಮಾಡುವ ‘ಕತ್ತೆ’ಗಳಿಗೆ ಹೋಲಿಸುವುದನ್ನು ಬೋಧಿಸಿತ್ತು. ಅಲ್ಲದೆ, ನರ್ಸರಿ ಪಠ್ಯದಲ್ಲಿ ಬಿಳಿ ಚರ್ಮದವರನ್ನು ‘ಸುಂದರರು’ ಮತ್ತು ಕಪ್ಪು ತ್ವಚೆಯುಳ್ಳವರನ್ನು ‘ಕುರೂಪಿ’ ಎಂದು ಲೇಬಲ್ ಮಾಡುವ ಚಿತ್ರಣಗಳು ಇದ್ದುದ್ದನ್ನು ಐಎಎಸ್‌ ಅಧಿಕಾರಿಯೊಬ್ಬರು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದರು.

ಇಂತಹ ವರ್ಣ ಬೇಧ, ಲಿಂಗ ಬೇಧದ ನಡುವೆ ಕೇರಳ ಸರ್ಕಾರದ ನಡೆ ಇಡೀ ಭಾರತಕ್ಕೆ ಮಾತ್ರವಲ್ಲ, ಜಗತ್ತಿಗೆ ಹೊಸ ಸಂದೇಶವನ್ನು ರವಾನಿಸುತ್ತದೆ. ಅಡುಗೆ ಮನೆಯ ಆ ಚಿತ್ರದ ಜೊತೆಗೆ ಪ್ರಶ್ನೆಯನ್ನೂ ನೀಡಲಾಗಿದೆ. ಅದರಲ್ಲಿ, ಯಾರು ಯಾವ ಕಾರ್ಯ ನಿರ್ವಹಿಸುತ್ತಿದ್ದಾರೆ ವಿವರಿಸಿ ಎಂಬ ಪ್ರಶ್ನೆಯು ಮಕ್ಕಳನ್ನು ಹೊಸ ಚಿಂತನೆಗೆ ಹಚ್ಚುತ್ತದೆ.

ಇದು ಮಾತ್ರವಲ್ಲದೆ, ಕೇರಳದ ಅದೇ 3ನೇ ತರಗತಿಯ ಇಂಗ್ಲಿಷ್ ಭಾಷೆಯ ಪಠ್ಯದಲ್ಲಿ, ಸಾಶಾ ಎಂಬ ಮಗುವಿನ ಪಾಠವಿದೆ. ಅದರ ಚಿತ್ರವು ಸಾಶಾ ಬೆಳಿಗ್ಗೆ ಅಡುಗೆಮನೆಯಲ್ಲಿ ಇರುವುದನ್ನು ವಿವರಿಸುತ್ತದೆ. ಅಲ್ಲಿ, ಆಕೆಯ ತಂದೆ ಚಹಾ ಮತ್ತು ತಿಂಡಿ ತಯಾರಿಸುತ್ತಿರುತ್ತಾನೆ. ತಾಯಿ ಫ್ಯಾನ್‌ ಸ್ವಚ್ಛಗೊಳಿಸುತ್ತಿರುತ್ತಾಳೆ. ಬಾಲಕಿ ಪಾತ್ರೆಗಳನ್ನು ತೊಳೆಯುವ ದೃಶ್ಯವಿದೆ.

ಚಿತ್ರದ ವಿವರಣೆಯಲ್ಲಿ ಪಾವತಿಸದ ಮತ್ತು ಪಾವತಿಸಿದ ಕಾರ್ಮಿಕರು ಹಾಗೂ ಸಾಂಪ್ರದಾಯಿಕ ಲಿಂಗಾಧಾರಿತ ಪಾತ್ರಗಳ ಕುರಿತು ಚರ್ಚೆಯನ್ನು ಹುಟ್ಟುಹಾಕುವ ಪ್ರಶ್ನೆಗಳಿವೆ.

“ಮಹಿಳೆಯರು ಈಗ ವೃತ್ತಿಜೀವನ ನಡೆಸಲು ಬಯಸಿದ್ದಾರೆ. ಅಂದರೆ, ಪುರುಷರಂತೆ ಸಂಬಳದ ಕೆಲಸವನ್ನು ಮಾಡಲು ಉತ್ಸುಕರಾಗಿದ್ದಾರೆ. ಆದರೆ, ಅವರನ್ನು ಮನೆಯಲ್ಲಿ ಸಂಬಳವಿಲ್ಲದ ಕೆಲಸ ಮಾಡಲು ಒತ್ತಾಯಿಸಲಾಗುತ್ತಿದೆ. ಅದು ಅವರ ಕರ್ತವ್ಯ ಎಂಬಂತೆ ಹೇರಲಾಗುತ್ತಿದೆ. ಇನ್ನೂ, ಪುರುಷರು ತಮ್ಮ ಮನೆಯಲ್ಲಿ ಪಾವತಿಸದ ದುಡಿಮೆಯನ್ನು ಹಂಚಿಕೊಳ್ಳಲು ಸಿದ್ಧವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಮನಸ್ಸಿನಲ್ಲಿ ಲಿಂಗ ಸಮಾನತೆ ಮತ್ತು ದುಡಿಮೆಯಲ್ಲಿನ ತಾರತಮ್ಯದ ಚಿಂತನೆಯನ್ನು ಹುಟ್ಟುಹಾಕುವುದು ಅತ್ಯಂತ ಮುಖ್ಯ” ಎಂದು ಸತಿ ಹೇಳುತ್ತಾರೆ.

ಪಠ್ಯಪುಸ್ತಕದಲ್ಲಿ, ಸಾಶಾಳ ಬೆಸ್ಟ್‌ ಫ್ರೆಂಡ್‌ ನವೀನ್ ಎಂದು ಹೇಳುತ್ತದೆ. ಆ ಮೂಲಕ, ಸಾಶಾ ತನ್ನ ವಿರುದ್ಧ ಲಿಂಗಿ ಅಥವಾ ಹುಡುಗನೊಂದಿಗೆ ಸ್ನೇಹ ಬೆಳೆದಸುವುದು ಸಾಮಾನ್ಯ ಸಂಗತಿ ಎಂದು ತಿಳಿಸುತ್ತದೆ.

2022ರಲ್ಲಿ, ಕೇರಳ ಸರ್ಕಾರವು ಲಿಂಗ ಜಾಗೃತಿ, ಲಿಂಗ ಸಮಾನತೆ ಮತ್ತು ಲಿಂಗ ನ್ಯಾಯವನ್ನು ಉತ್ತೇಜಿಸಲು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳನ್ನು ಪ್ರಸ್ತಾಪಿಸಿತ್ತು. ಇವುಗಳಲ್ಲಿ ಹುಡುಗರು ಮತ್ತು ಹುಡುಗಿಯರಿಬ್ಬರಿಗೂ ಸಾಮಾನ್ಯ ಸಮವಸ್ತ್ರವನ್ನು ಪರಿಚಯಿಸುವುದು, ಹುಡುಗರು ಮತ್ತು ಹುಡುಗಿಯರನ್ನು ಪ್ರತ್ಯೇಕವಾಗಿ ಕೂರಿಸುವ ಪದ್ದತಿಯನ್ನು ತೆಗೆದು, ಎಲ್ಲರನ್ನೂ ಒಟ್ಟಿಗೆ ಕೂರಿಸುವ ವ್ಯವಸ್ಥೆಯನ್ನೂ ಜಾರಿಗೊಳಿಸಲು ಮುಂದಾಗಿತ್ತು.

ಆದರೆ, ಕಾಂಗ್ರೆಸ್ ಮಿತ್ರಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಸೇರಿದಂತೆ ವಿವಿಧ ಮುಸ್ಲಿಂ ಸಂಘಟನೆಗಳ ತೀವ್ರ ಆಕ್ಷೇಪಣೆಗಳು ಮತ್ತು ಪ್ರತಿಭಟನೆಗಳ ನಂತರ, ಈ ಕ್ರಮವನ್ನು ಕೈಬಿಡಲಾಯಿತು.

5ನೇ ತರಗತಿಯ ಇಂಗ್ಲಿಷ್ ಪಠ್ಯಪುಸ್ತಕದಲ್ಲಿ ‘ದಿ ವಿಂಗ್ಸ್ ಆಫ್ ಡ್ರೀಮ್ಸ್’ ಎಂಬ ಅಧ್ಯಾಯವು ಪೈಲಟ್ ಆಗುವ ಹಂಬಲ ಹೊಂದಿರುವ ಆರ್ಯಾ ಎಂಬ ಹುಡುಗಿಯ ಕಥೆಯನ್ನು ವಿವರಿಸುತ್ತದೆ. ಮತ್ತೊಂದು ಪಠ್ಯವು, ಮೂರು ಹುಡುಗಿಯರು ಫುಟ್ಬಾಲ್ ಆಡುವುದನ್ನು ವಿವರಿಸುತ್ತದೆ. (ಪುಟ್ಬಾಲ್‌ – ಸಾಂಪ್ರದಾಯಿಕವಾಗಿ ಪುರುಷರು ಆಡುವ ಆಟ).

football

ಅದೇ ರೀತಿ, 5 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು ವಿಕಲಾಂಗ ಬಾಲಕಿ ‘ನೀನು’, ಗಾಲಿಕುರ್ಚಿಯಲ್ಲಿ ತಿರುಗಾಡುವ ಕಥೆಯನ್ನು ಹೇಳುತ್ತದೆ. ಗಮನಾರ್ಹ ಸಂಗತಿಯೆಂದರೆ, ‘ನೀನು’ ತನ್ನ ಅಂಗವೈಕಲ್ಯದ ಕಾರಣಕ್ಕೆ ತಾರತಮ್ಯಕ್ಕೆ ಒಳಗಾಗುವುದಿಲ್ಲ. ಆಕೆ ಸ್ವಾಭಿಯಾನಿಯಾಗಿ, ಸಬಲಳಾಗಿ ಬೆಳೆಯುತ್ತಾಳೆ. ಆಕೆ, ತನ್ನ ಇತರ ಮೂವರು ಸ್ನೇಹಿತರಂತೆ, ತನ್ನ ಸ್ನೇಹಿತನ ಹಳ್ಳಿಗೆ ಪ್ರಯಾಣಿಸುತ್ತಾಳೆ.

“ಒಳಗೊಳ್ಳುವಿಕೆಯು ವಿಕಲಾಂಗ ವ್ಯಕ್ತಿಯ ಜೀವನದಲ್ಲಿ ಒಂದು ಪ್ರಮುಖ ಸಮಸ್ಯೆಯಾಗಿದೆ. ವಿಶೇಷವಾಗಿ ಭಾರತದಲ್ಲಿ. ಯಾವುದೇ ಅಂಗವೈಕಲ್ಯ ಎದುರಿಸುತ್ತಿರುವವರು ಸಮಾಜದ ನೋಡುವ ದೃಷ್ಠಿಕೋನ ಮತ್ತು ತಮ್ಮೊಳಗಿನ ಹಿಂಜರಿಕೆಯಿಂದ ಪ್ರತ್ಯೇಕವಾಗಿದ್ದಾರೆ. ಇಂತಹ ಅಂರತವನ್ನು ಮಕ್ಕಳು ಮೀರಲು ‘ನೀನು’ಳ ಪಠ್ಯ ನೆರವಾಗುತ್ತದೆ” ಎಂದು ಜಸ್ಟೀಸ್ ಅಂಡ್ ಹೋಪ್ ಫೌಂಡೇಶನ್‌ನ ಸಂಯೋಜಕ ಸಂದೀಪ್ ಪಾಲ್ ಹೇಳಿದ್ದಾರೆ.

ಬಿಜೆಪಿಯ ಶುದ್ಧೀಕರಣ ವಾದ v/s ಕೇರಳದ ಸುಧಾರಣೆ

ಕೇರಳ ಸರ್ಕಾರ ಮಕ್ಕಳಲ್ಲಿ ಹೊಸ ಚಿಂತನೆಗಳನ್ನು ಹುಟ್ಟುಹಾಕುವ ಪಠ್ಯಗಳನ್ನು ಶಾಲಾ ಪಠ್ಯಕ್ರಮಗಳಲ್ಲಿ ಜೋಡಿಸುತ್ತಿದೆ. ಇದೇ ಸಮಯದಲ್ಲಿ, ಪಠ್ಯದಲ್ಲಿ ದ್ವೇಷ, ಅಸೂಯೆ, ಧಾರ್ಮಿಕ ವಿಭಜನೆ, ಮತಾಂಧತೆಯನ್ನು ತುಂಬುವ ಕೆಲಸಗಳು ಕೆಲವು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ನಡೆಯುತ್ತಿದೆ.

ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ, ಪಠ್ಯದಲ್ಲಿ ಹಿಂದು ಮತೀಯವಾದವನ್ನು ತುಂಬಲಾಗಿತ್ತು. ಬ್ರಿಟಿಷರ ಬಳಿ ಕ್ಷಮೆ ಕೇಳಿದ್ದ ಹಿಂದುತ್ವವಾದಿ ಸಾವರ್ಕರ್‌ನನ್ನು ದೇಶಪ್ರೇಮಿ, ವೀರ ಎಂದು ಚಿತ್ರಿಸಲಾಗಿತ್ತು. ಟಿಪ್ಪು, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಬ್ಬಕ್ಕರ ಪಠ್ಯಗಳನ್ನು ಕೈಬಿಡಲಾಗಿತ್ತು.

2023ರಲ್ಲಿ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (ಎನ್‌ಸಿಇಆರ್‌ಟಿ) 6ಮತ್ತು 12ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಗಳಲ್ಲಿ 2002ರ ಗುಜರಾತ್ ಗಲಭೆಯ ಉಲ್ಲೇಖಗಳನ್ನು ತೆರವುಗೊಳಿಸಿತ್ತು. ಮೊಘಲ್ ಯುಗದ ವಿಷಯವನ್ನು ತೆಗೆಯಲಾಯಿತು. ಜೊತೆಗೆ, ಮಹಾತ್ಮ ಗಾಂಧಿ ಮತ್ತು ಅವರ ಹಂತಕ ನಾಥು ಅವರ ಮೇಲಿನ ಕೆಲವು ವಾಕ್ಯಗಳನ್ನು ಕಿತ್ತು ಹಾಕಲಾಯಿತು.

ಆಗಲೂ, ಎನ್‌ಸಿಇಆರ್‌ಟಿ ಕ್ರಮವನ್ನು ತೀವ್ರವಾಗಿ ಟೀಕಿಸಿದ ಪಿಣರಾಯಿ ವಿಜಯನ್, ಎನ್‌ಸಿಇಆರ್‌ಟಿ ತೆಗೆದುಹಾಕಿರುವ ಪಠ್ಯದ ಭಾಗಗಳನ್ನು ರಾಜ್ಯ ಶಿಕ್ಷಣ ಇಲಾಖೆಯು ಕೇರಳದಲ್ಲಿ 11 ಮತ್ತು 12ನೇ ತರಗತಿಗಳಿಗೆ ಪೂರಕ ಪಠ್ಯಪುಸ್ತಕಗಳನ್ನು ವಿತರಿಸುತ್ತೇವೆಂದು ಘೋಷಿಸಿತು.

ಅಂತೆಯೇ, 2018ರಲ್ಲಿ, ಕೇಂದ್ರ ಸರ್ಕಾರದಲ್ಲಿ ಆಗ ಮಾನವ ಸಂಪನ್ಮೂಲ ಖಾತೆಯ ರಾಜ್ಯ ಸಚಿವರಾಗಿದ್ದ ಸತ್ಯ ಪಾಲ್ ಸಿಂಗ್ ಅವರು ಚಾರ್ಲ್ಸ್ ಡಾರ್ವಿನ್ ಅವರ ‘ವಿಕಾಸನ ಸಿದ್ಧಾಂತ’ವು ವೈಜ್ಞಾನಿಕವಾಗಿ ತಪ್ಪಾಗಿದೆ. ಅದನ್ನು ಪಠ್ಯಕ್ರಮಗಳಿಂದ ತೆಗೆದುಹಾಕಬೇಕೆಂದು ಹೇಳಿದ್ದರು. ಅವರ ಹೇಳಿಕೆ ವಿವಾದ ಸೃಷ್ಟಿಸಿ, ತೀವ್ರ ವಿರೋಧಕ್ಕೆ ತುತ್ತಾಗಿತ್ತು. ಬಳಿಕ, ಅವರ ಹೇಳಿಕೆಯನ್ನು ಹಿಂಪಡೆದುಕೊಂಡರು.

ಪಠ್ಯಪುಸ್ತಕಗಳನ್ನು ಕೋಮುವಾದೀಕರಣ, ಸಂವಿಧಾನ ವಿರೋಧಿ ನೀತಿ ಅಳವಡಿಕೆ ಮಾಡುತ್ತಿರುವ ಇಂತಹ ಸಂದರ್ಭದಲ್ಲಿ ಕೇರಳ ಸರ್ಕಾರವು ಪ್ರಕಟಿಸುವ ಪ್ರತಿಯೊಂದು ಪಠ್ಯಪುಸ್ತಕದಲ್ಲಿ ರಾಷ್ಟ್ರಗೀತೆ, ರಾಷ್ಟ್ರದ ಪ್ರತಿಜ್ಞೆ ಮತ್ತು ಸಂವಿಧಾನ ಪ್ರಸ್ತಾವನೆಯನ್ನು ಕಡ್ಡಾಯವಾಗಿ ಮುದ್ರಿಸುತ್ತಿದೆ. 5ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಸಂವಿಧಾನದಲ್ಲಿ ಹೇಳಲಾಗಿರುವ ಮೂಲಭೂತ ಕರ್ತವ್ಯಗಳನ್ನು ಸಹ ಕೊನೆಯ ಪುಠದಲ್ಲಿ ಪ್ರಕಟಿಸಲಾಗಿದೆ.

ಸದ್ಯ, ಪಿಣರಾಯಿ ವಿಜಯನ್ ಅವರ ಸರ್ಕಾರವು ಲಿಂಗ-ಸಮಾನತೆ ಸಂದೇಶಗಳನ್ನು ಶೈಕ್ಷಣಿಕ ಸಾಮಗ್ರಿಗಳಲ್ಲಿ ಅಳವಡಿಸುತ್ತಿರುವ ಕ್ರಮವು ಸ್ವಾಗತಾರ್ಹವೂ, ಇಡೀ ದೇಶಕ್ಕೆ ಮಾದರಿಯೂ ಆಗಿದೆ.

ಮಾಹಿತಿ ಮೂಲ: ಟಿಐಇ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಬಾನಿಯ ವಂತಾರ ಮೃಗಾಲಯದ ಕಾರ್ಯಾಚರಣೆ ತನಿಖೆಗೆ ಎಸ್‌ಐಟಿ ರಚನೆ

ಕಳೆದ ಕೆಲವು ತಿಂಗಳುಗಳಿಂದ ಅಂಬಾನಿ ಅವರ ರಿಲಯನ್ಸ್‌ ಸಂಸ್ಥೆಗೆ ಸೇರಿದ, ಮುಕೇಶ್...

ಮದುವೆಯಾಗಲು ನಿರಾಕರಿಸಿದ ಯುವತಿಗೆ ಗುಂಡಿಕ್ಕಿ ಕೊಲೆ: ತಾನೂ ಆತ್ಮಹತ್ಯೆಗೆ ಶರಣಾದ ಯುವಕ

ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಯುವಕನೋರ್ವ ಯುವತಿಗೆ ಗುಂಡಿಕ್ಕಿ ಕೊಲೆ ಮಾಡಿ, ಬಳಿಕ...

ಅಣ್ಣಾಮಲೈ ಕೈಯಿಂದ ಪ್ರಶಸ್ತಿ ಪಡೆಯಲು ವಿದ್ಯಾರ್ಥಿ ನಕಾರ

ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ್ದ ವಿದ್ಯಾರ್ಥಿಯೊಬ್ಬ ಬಿಜೆಪಿ ನಾಯಕ ಕೆ ಅಣ್ಣಾಮಲೈ ಅವರಿಂದ...

ಆಸ್ಪತ್ರೆ ನಿರ್ಮಾಣ ಹಗರಣ: ಎಎಪಿಯ ಸೌರಭ್ ಭಾರದ್ವಾಜ್ ನಿವಾಸದ ಮೇಲೆ ಇಡಿ ದಾಳಿ

ದೆಹಲಿ ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಆಸ್ಪತ್ರೆಗಳ ನಿರ್ಮಾಣದಲ್ಲಿ ಹಗರಣ ನಡೆದಿದೆ ಎಂಬ...

Download Eedina App Android / iOS

X