- ಫೇಸ್‌ಬುಕ್ ಪೋಸ್ಟ್‌ನಲ್ಲಿ ಶರದ್ ಪವಾರ್ ಅವರಿಗೆ ಜೀವ ಬೆದರಿಕೆ ಎಂದಿದ್ದ ಎನ್‌ಸಿಪಿ
- ಖಾಸಗಿ ಸಂಸ್ಥೆಯಲ್ಲಿ ಡೇಟಾ ಫೀಡಿಂಗ್, ಅನಾಲಿಟಿಕ್ಸ್ ಕೆಲಸ ಮಾಡುತ್ತಿದ್ದ ಆರೋಪಿ
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಜೀವ ಬೆದರಿಕೆ ಹಾಕಿದ್ದ ಆರೋಪದಲ್ಲಿ ಪುಣೆಯ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಸೋಮವಾರ (ಜೂನ್ 12) ಬಂಧಿಸಿದ್ದಾರೆ.
ಖಾಸಗಿ ಸಂಸ್ಥೆಯೊಂದರಲ್ಲಿ ‘ಡೇಟಾ ಫೀಡಿಂಗ್ ಮತ್ತು ಅನಾಲಿಟಿಕ್ಸ್’ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಾಗರ್ ಬರ್ವೆ ಎಂಬ ವ್ಯಕ್ತಿ ಬಂಧಿತ ಆರೋಪಿ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಪ್ರಕರಣದ ತನಿಖೆ ನಡೆಸುತ್ತಿದ್ದ ಮುಂಬೈ ಅಪರಾಧ ವಿಭಾಗದ ಪೊಲೀಸರು ಬರ್ವೆಯನ್ನು ಶರದ್ ಪವಾರ್ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಮುಂಬೈಗೆ ಕರೆತಂದಿದ್ದಾರೆ. ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮಂಗಳವಾರದವರೆಗೆ ಆರೋಪಿಯನ್ನು ಪೊಲೀಸ್ ಬಂಧನಕ್ಕೆ ನೀಡಲಾಗಿದೆ” ಎಂದು ಅಧಿಕಾರಿ ತಿಳಿಸಿದರು.
ಆರೋಪಿ ಸಾಗರ್ ಬರ್ವೆ ಫೇಸ್‌ಬುಕ್ ಪೋಸ್ಟ್‌ವೊಂದರಲ್ಲಿ ಪವಾರ್ ಅವರಿಗೆ ಜೀವ ಬೆದರಿಕೆ ಹಾಕಿದ್ದ.
“ನಿಮಗೂ (ಶರದ್ ಪವಾರ್) 2013ರ ಆಗಸ್ಟ್ 20ರಂದು ಪುಣೆಯಲ್ಲಿ ಅಪರಿಚಿತರ ಗುಂಡಿಗೆ ಬಲಿಯಾಗಿದ್ದ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರಿಗಾದ ಗತಿಯೇ ಬರಲಿದೆ” ಎಂದು ಸಾಮಾಜಿಕ ಮಾಧ್ಯಮದಲ್ಲಿ ಬೆದರಿಕೆಯ ಸಂದೇಶ ಬಂದಿರುವ ಬಗ್ಗೆ ಎನ್ಸಿಪಿ ಜೂನ್ 9 ರಂದು ಹೇಳಿತ್ತು.
ಆರೋಪಿ ಬರ್ವೆ ಫೇಸ್‌ಬುಕ್‌ನಲ್ಲಿ ಎರಡು ನಕಲಿ ಖಾತೆಗಳನ್ನು ತೆರೆದು ಪವಾರ್ ಅವರಿಗೆ ಜೀವ ಬೆದರಿಕೆಯ ಪೋಸ್ಟ್ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜಸ್ಥಾನ | ಬೃಹತ್ ಸಮಾವೇಶ ನಡೆಸಿದ ಸಚಿನ್ ಪೈಲಟ್; ಹೊಸ ಪಕ್ಷ ಸ್ಥಾಪನೆಯ ಕುತೂಹಲಕ್ಕೆ ತೆರೆ
ಶರದ್ ಪವಾರ್ ಅವರಿಗೆ ಬೆದರಿಕೆ ಕರೆ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಪವಾರ್ ಅವರಿಗೆ ಭದ್ರತೆಯನ್ನು ಬಿಗಿಗೊಳಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಪವಾರ್ ಅವರ ಸುರಕ್ಷತೆಗೆ ಸರ್ಕಾರ ಅಗತ್ಯ ರೀತಿಯ ಎಲ್ಲ ಕ್ರಮಗಳನ್ನು ಕೈಗೊಳ್ಳುವುದು ಎಂದು ಹೇಳಿದರು.
ಎನ್‌ಸಿಪಿಯೊಂದಿಗೆ ಭಿನ್ನಾಭಿಪ್ರಾಯವಿದೆ. ಆದರೆ ಅದರ ನಾಯಕನಿಗೆ ಜೀವ ಬೆದರಿಕೆ ನೀಡುವುದನ್ನು ಸಹಿಸುವುದಿಲ್ಲ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿಳಿಸಿದರು.