“ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಸಂಬಂಧಿಸಿದಂತೆ ಮಾದಿಗರ ಬಗ್ಗೆ ನರೇಂದ್ರ ಮೋದಿಯವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ”
ಮಂದಕೃಷ್ಣ ಮಾದಿಗ ಅವರು ಬಿಜೆಪಿಗೆ ಮಾರಾಟವಾಗಿದ್ದು, ಅವರು ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕರಾದ ಎಸ್.ಮಾರೆಪ್ಪ ಹೇಳಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿರುವ ಅವರು, ಕರ್ನಾಟಕ ರಾಜ್ಯದಲ್ಲಿ ಮಂದಕೃಷ್ಣ ಮಾದಿಗ ಅವರನ್ನು ತಿರಸ್ಕರಿಸಿ 1997ರಲ್ಲಿ ಪರ್ಯಾಯವಾಗಿ ಮತ್ತು ಪರಿಶಿಷ್ಟ ಜಾತಿಗಳ ಒಳಮೀಸಲಾತಿಗಾಗಿ ಎಂಆರ್‌ಎಚ್‌ಎಸ್ ಸಂಘಟನೆ ಸ್ಥಾಪನೆಯಾಯಿತು. ಮಂದಕೃಷ್ಣ ಅವರನ್ನು ಒಬ್ಬ ಮಾದರಿ ನಾಯಕನೆಂದು ಕರ್ನಾಟಕ ರಾಜ್ಯ ಒಳಮೀಸಲಾತಿ ಹೋರಾಟಗಾರರು ಎಂದೂ ಅಂಗೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.
“ಪರಿಶಿಷ್ಟ ಜಾತಿಗಳ ಚಳವಳಿಯನ್ನು ರಾಜಕೀಯೇತರ ಸಂಘಟನೆಯಾಗಿ ಮುನ್ನೆಡೆಸಲು ಅವರಿಗೆ ಸಾಧ್ಯವಾಗಿಲ್ಲ. ಚಂದ್ರಬಾಬು ನಾಯ್ಡು, ವೈ.ಎಸ್.ರಾಜಶೇಖರ ರೆಡ್ಡಿ, ವೆಂಕಯ್ಯ ನಾಯ್ಡು, ಈಗ ನರೇಂದ್ರ ಮೋದಿ, ಅಮಿತ್ ಶಾ ಕೃಪಾಪೋಷಿತ ಸಂಘಟನೆಯಾಗಿ ಎಂಆರ್‌ಪಿಎಸ್ (ಮಾದಿಗ ಮೀಸಲಾತಿ ಪೋರಾಟ ಸಮಿತಿ) ಮಾರ್ಪಟ್ಟಿದೆ ಎಂದು ಟೀಕಿಸಿದ್ದಾರೆ.
ಮೇ 3ರಂದು ರಾಯಚೂರು ನಗರದಲ್ಲಿ ಮಂದಕೃಷ್ಣ ಅವರು ಬಿಜೆಪಿ ಪರ ಮತಯಾಚಿಸಿ ರಾಯಚೂರು, ಕಲಬುರಗಿ ಜಿಲ್ಲೆಗಳ ದಲಿತರಿಗೆ ವಿಶೇಷವಾಗಿ ಮಾದಿಗರಿಗೆ ಪ್ರಧಾನಿ ನರೇಂದ್ರಮೋದಿಯವರ ಸುಳ್ಳು ಗ್ಯಾರಂಟಿಗಳನ್ನು ನೀಡಿ ಹೋಗಿದ್ದಾರೆ. ಮೋದಿಯವರ ಕೇಂದ್ರ ಸರ್ಕಾರ ದಲಿತರನ್ನು ಶಿಕ್ಷಣ, ಉದ್ಯೋಗ ರಂಗಗಳಲ್ಲಿ ಅಭಿವೃದ್ಧಿ ಪಥದಲ್ಲಿ ನಡೆಸಿದೆ ಎಂದು ಸುಳ್ಳು ಹೇಳಿದ್ದಾರೆ ಎಂದು ಎಚ್ಚರಿಸಿದ್ದಾರೆ.
2020ರಲ್ಲಿ ಜಾರಿಗೆ ತಂದ ಹೊಸ ಶಿಕ್ಷಣ ನೀತಿಯಿಂದ ಶಿಕ್ಷಣ ಕ್ಷೇತ್ರವನ್ನು ಪರಿಪೂರ್ಣ ಖಾಸಗೀಕರಣ ಮಾಡಲಾಗುತ್ತಿದೆ. ಶಿಕ್ಷಣವು ಮಾರಾಟವಾಗುವ ಸರಕಾದರೆ ಬಡವರು, ದಲಿತರು, ಲಕ್ಷ ಲಕ್ಷ ಹಣ ಸುರಿದು ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ನಿರುದ್ಯೋಗವು ಕಳೆದ ಐವತ್ತು ವರ್ಷಗಳಲ್ಲಿ ಅತ್ಯಧಿಕವಾಗಿದೆ. ಈ ನಿರುದ್ಯೋಗವು ಭಾರತೀಯ ಯುವಕರನ್ನು ಇಸ್ರೇಲ್ ದೇಶದ ಯುದ್ಧದಲ್ಲಿ ಪಾಲ್ಗೊಳ್ಳವಂತೆ ಮಾಡಿದೆ. ದಲಿತರಲ್ಲಿ ನಿರುದ್ಯೋಗದ ಪ್ರಮಾಣವು ಇನ್ನೂ ಅಧಿಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
2014ರಲ್ಲಿ ರೈಲ್ವೆ ಇಲಾಖೆಯಲ್ಲಿ 12 ಲಕ್ಷ ಉದ್ಯೋಗಿಗಳಿದ್ದರು. 2023ರಲ್ಲಿ ಕೇವಲ 8 ಲಕ್ಷ ಉದ್ಯೋಗಿಗಳಿದ್ದಾರೆ. ಇರುವ ಉದ್ಯೋಗಗಳು ಕಡಿತಗೊಂಡು ನಿರುದ್ಯೋಗ ಪ್ರಮಾಣವು ಹೆಚ್ಚುತ್ತಿರುವ ಬಗ್ಗೆ ಮೋದಿಯವರು ಈವರೆಗೆ ಮಾತನಾಡಿದ್ದೇ ಇಲ್ಲ. ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ ನೀಡುವ ಅನುದಾನವು ರೂ. ಒಂದು ಲಕ್ಷ ಕೋಟಿಯಿಂದ ಈಗ 62,000 ಕೋಟಿಗಳಿಗೆ ಇಳಿಕೆಯಾಗಿದೆ. ದಲಿತರ ಅಭಿವೃದ್ಧಿಗೆ ಅವಕಾಶವೇ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಸಂಬಂಧಿಸಿದಂತೆ ಮಾದಿಗರ ಬಗ್ಗೆ ನರೇಂದ್ರ ಮೋದಿಯವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಕೈಯಲ್ಲಿ ಅಧಿಕಾರ ಇಟ್ಟುಕೊಂಡು ಸಂವಿಧಾನದ ಪರಿಚ್ಛೇದ 341 (3)ಕ್ಕೆ ತಿದ್ದುಪಡಿ ಮಾಡಲಾರದೆ, 2023ರ ನವೆಂಬರ್ 11ರಂದು ಸಿಕಂದ್ರಾಬಾದ್‌ನಲ್ಲಿ ಯಾವ ಭರವಸೆಯನ್ನೂ ನೀಡದೆ ಒಂದು ಸಮಿತಿ ರಚನೆ ಪ್ರಸ್ತಾಪ ಮಾಡಿ, ಆ ಸಮಿತಿಯನ್ನೂ ಮೋದಿಯವರು ಮೂಲೆಗುಂಪಾಗಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಕಳೆದ ವರ್ಷ 2023ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮೋದಿ ಮತ್ತು ಅಮಿತ್ ಶಾ ಅವರು ಮೀಸಲಾತಿ, ಒಳಮೀಸಲಾತಿ ಬಗ್ಗೆ ನೀಡಿದ ಭರವಸೆಗಳನ್ನು ಈವರೆಗೆ ಪ್ರಸ್ತಾಪ ಮಾಡಿಲ್ಲ. ಅದರಕ್ಕಾಗಿ ಕೇಂದ್ರ ಸರ್ಕಾರವನ್ನು ಮತ್ತೆ ಪ್ರಶ್ನೆ ಮಾಡುತ್ತೇವೆ ಎಂದಿದ್ದಾರೆ.
2014ರಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಬಿಲ್ ಮಂಡನೆ ಪ್ರಸ್ತಾಪ ಮಾಡಿದರು. ಮಂದಕೃಷ್ಣ ಅವರು 2015ರಲ್ಲಿ ದೆಹಲಿಯ ಬಿಜೆಪಿ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಬಿಜೆಪಿ ಹಿರಿಯ ನಾಯಕರ ಕಾಲಿಗೆ ನಮಸ್ಕರಿಸಿದರು, 2017ರಲ್ಲಿ ಹೈದ್ರಾಬಾದ್ ಮಾದಿಗರ ಮಹಾ ಯುದ್ಧ ಸಮಾವೇಶದಲ್ಲಿ ಅಂದಿನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಮುಂದೆ ವೇದಿಕೆಯಲ್ಲಿ ಕೈಕಟ್ಟಿ ದೇಹಿಯಾಗಿ ನಿಂತಿದ್ದರು, 2023ರ ನವೆಂಬರ್ 11ರಂದು ಸಿಕಂದ್ರಾಬಾದ್‌ನಲ್ಲಿ ನಡೆದ ಮಾದಿಗರ ವಿಶ್ವರೂಪ ಹೋರಾಟ ವೇದಿಕೆಯಲ್ಲಿ ನರೇಂದ್ರ ಮೋದಿಯವರ ಎದುರು ಕಣ್ಣೀರು ಸುರಿಸಿದರು. ಮಂದಕೃಷ್ಣ ಅವರು ಮಾದಿಗರ ಸ್ವಾಭಿಮಾನದ ನಾಯಕನಾಗಲು ಸಾಧ್ಯವೇ ಇಲ್ಲ ಎಂದು ಟೀಕಿಸಿದ್ದಾರೆ.
ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ 7 ಜನರ ನ್ಯಾಯಮೂರ್ತಿಗಳ ಪೀಠ ಈಗಾಗಲೇ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದೆ. ಮುಂದೆ ಸುಪ್ರೀಂಕೋರ್ಟ್ ಹೊರಡಿಸುವ ತೀರ್ಪು- ಸುಪ್ರೀಂಕೋರ್ಟ್‌ಗೆ ಸಲ್ಲುತ್ತದೆ. ನರೇಂದ್ರ ಮೋದಿಯವರು ಸುಪ್ರೀಂಕೋರ್ಟ್ ಮೂಲಕ ಒಳಮೀಸಲಾತಿ ಮಾಡಿಸಿಕೊಡುತ್ತಾರೆ ಎನ್ನುವುದಕ್ಕೆ ಸುಪ್ರೀಂಕೋರ್ಟ್ ಬಿಜೆಪಿಯ ಕಾನೂನು ಘಟಕವಲ್ಲ. ಸುಪ್ರೀಂ ಕೋರ್ಟ್ ಒಂದು ಸ್ವಾಯತ್ತ ಅಧಿಕಾರವುಳ್ಳ ಸಂಸ್ಥೆ. ಮಂದಕೃಷ್ಣ ಅವರ ಇಂತಹ ಹೇಳಿಕೆಗಳು ಸುಪ್ರೀಂ ಕೋರ್ಟ್ ಘನತೆಗೆ ಧಕ್ಕೆ ತರುತ್ತವೆ ಎಂದು ವಿವರಿಸಿದ್ದಾರೆ.
ಒಂದೊಮ್ಮೆ ಸುಪ್ರೀಂಕೋರ್ಟ್ ತೀರ್ಪು ಒಳಮೀಸಲಾತಿ ಪರ ಬಂದರೂ ಆ ತೀರ್ಪಿನಿಂದ ಪಂಜಾಬ್, ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳನ್ನು ಹೊರತುಪಡಿಸಿ ಕರ್ನಾಟಕ ಸೇರಿದಂತೆ ದೇಶದ ಇತರೆ ರಾಜ್ಯಗಳಿಗೆ ತಕ್ಷಣದ ಪರಿಹಾರ ಒದಗುವುದಿಲ್ಲ. ಆ ತೀರ್ಪಿನ ಜಾರಿಗೆ ಮತ್ತೊಮ್ಮೆ ಕರ್ನಾಟಕ ರಾಜ್ಯ ಒಳಮೀಸಲಾತಿ ಹೋರಾಟ ನಡೆಸಬೇಕಾಗುತ್ತದೆ. ಈಗಾಗಲೇ ಕರ್ನಾಟಕ ರಾಜ್ಯದಿಂದ ಕೇಂದ್ರಕ್ಕೆ ಸಲ್ಲಿಸಿದ ಒಳಮೀಸಲಾತಿ ವರದಿ ಗೊಂದಲಗಳಿಂದ ಕೂಡಿರುವುದರಿಂದ ಮತ್ತೊಮ್ಮೆ ಪರಿಷ್ಕೃತ ವರದಿಯನ್ನು ಶಿಫಾರಸ್ಸು ಮಾಡಲು ನಮ್ಮ ಹೋರಾಟ ಮುಂದುವರಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಮಿತಿಯ ರಾಜ್ಯ ಸಂಚಾಲಕರಾದ ಜೆ.ಬಿ.ರಾಜು, ಹೇಮರಾಜ ಅಸ್ಕಿಹಾಳ, ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಮನ್ನಾಪುರ್, ದಲಿತ ಸಂಘರ್ಷ ಸಮಿತಿಯ ಎಂ.ಈರಣ್ಣ, ಮಾದಿಗ ದಂಡೋರದ ನರಸಿಂಹಲು ನೇಲಹಳ್ಳಿ ಎಂಆರ್‌ಎಚ್‌ಎಸ್‌ನ ಆಂಜನೇಯ ಹುಟ್ಕೂರ್ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದರು.
