ಮಣಿಪುರ ವಿಧಾನ ಸಭೆ ಅಧಿವೇಶನ ಬುಧವಾರ ಆರಂಭವಾಗಿದ್ದು, ಈ ಮುಂಗಾರು ಅಧಿವೇಶನಕ್ಕೆ ಭದ್ರತೆಯ ದೃಷ್ಟಿಯಿಂದ ಬಿಜೆಪಿಯ 7 ಸೇರಿ ಒಟ್ಟು 10 ಕುಕಿ ಶಾಸಕರು ಗೈರು ಹಾಜರಾಗಿದ್ದಾರೆ. ರಾಜ್ಯದಲ್ಲಿ ಆದಿವಾಸಿಗಳಿಗೆ ಪ್ರತ್ಯೇಕ ಆಡಳಿತ ನೀಡಬೇಕು ಎಂದು ಶಾಸಕರು ಹಲವು ದಿನಗಳಿಂದ ಆಗ್ರಹಿಸುತ್ತಿದ್ದಾರೆ.
ಕಳೆದ ವರ್ಷ ಮೇ 3ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದೆ. ಇದಾದ ಬಳಿಕ ಮೂರನೇ ಬಾರಿಗೆ ಅಧಿವೇಶನ ನಡೆಯುತ್ತಿದ್ದು ಆಗಸ್ಟ್ 12ರವರೆಗೆ ಕಲಾಪ ನಡೆಯಲಿದೆ. ಕಳೆದ ಅಧಿವೇಶನದಲ್ಲಿಯೂ ತಮ್ಮ ಭದ್ರತೆಯ ಕಾರಣಕ್ಕೆ ಅಧಿವೇಶನಕ್ಕೆ ಹಾಜರಾಗಿಲ್ಲ.
ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಅಧಿವೇಶನಕ್ಕೆ ಹಾಜರಾಗುವಂತೆ ಮನವಿ ಮಾಡಿದರೂ ಕೂಡಾ ಇಬ್ಬರು ಕುಕಿ ಪೀಪಲ್ಸ್ ಅಲಯನ್ಸ್‌ಗೆ ಸೇರಿದ ಸಚಿವರು ಮತ್ತು ಒಬ್ಬ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿರುವ ಶಾಸಕ, ಏಳು ಬಿಜೆಪಿ ಶಾಸಕರು ಅಧಿವೇಶನಕ್ಕೆ ಹಾಜರಾಗಿಲ್ಲ.
ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಕೆ.ಮೇಘಚಂದ್ರ ಅವರೂ ಕೂಡಾ 10 ಕುಕಿ ಶಾಸಕರು ವಿಧಾನಸಭೆ ಅಧಿವೇಶನಕ್ಕೆ ಹಾಜರಾಗುವಂತೆ ತಿಳಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಶಾಂತಿ ಕಾಪಾಡಲು ಮತ್ತು ಸಹಜ ಸ್ಥಿತಿಗೆ ಮರುಳಲು ನಮಗೆ ಇದು ಉತ್ತಮ ದಾರಿಯಾಗಿದೆ. ಅಧಿವೇಶನದಲ್ಲಿ ಪಾಲ್ಗೊಳ್ಳುವ 10 ಕುಕಿ ಶಾಸಕರಿಗೆ ಭದ್ರತೆಯನ್ನು ಕೇಂದ್ರ ಗೃಹ ಸಚಿವಾಲಯದ ಮೂಲಕ ಪಡೆಯಬಹುದು” ಎಂದು ಸಲಹೆ ನೀಡಿದ್ದಾರೆ.
ವಿಧಾನಸಭೆ ಅಧಿವೇಶನಕ್ಕೆ ಮುನ್ನ, ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಚುರಚಂದಪುರ ಜಿಲ್ಲೆಯ ಸೈಕೋಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪೋಲಿಯೆನ್‌ಲಾಲ್ ಹಾಕಿಪ್ ಅವರು ಅಧಿವೇಶನಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿದರು.
ಇದನ್ನು ಒದಿದ್ದೀರಾ? ಮಣಿಪುರ ಹಿಂಸಾಚಾರ | ಮೊದಲ ಬಾರಿ ಸಿಎಂ ಬಿರೇನ್ ಸಿಂಗ್ ಭೇಟಿ ಮಾಡಿದ ಮೋದಿ
“ನನ್ನ ಜನರು ಇಂಫಾಲ್‌ಗೆ ಕಾಲಿಡಲು ಸಾಧ್ಯವಾಗದಿದ್ದಾಗ, ರಾಜ್ಯದ ರಾಜಧಾನಿಯಲ್ಲಿ ನಡೆಯುವ ವಿಧಾನಸಭೆಯಲ್ಲಿ ನಾನು ಹೇಗೆ ಭಾಗವಹಿಸಲಿ” ಎಂದು ಹಾಕಿಪ್ ಪ್ರಶ್ನಿಸಿದ್ದಾರೆ. ಹಾಗೆಯೇ “ತಮ್ಮ ಸಮುದಾಯದವರು ವಾಸಿಸುವ ಗುಡ್ಡಗಾಡು ಜಿಲ್ಲೆಗಳಿಗೆ ಪ್ರತ್ಯೇಕ ಆಡಳಿತವಿಲ್ಲದೆ ಜನಾಂಗೀಯ ಕಲಹಕ್ಕೆ ಶಾಶ್ವತ ಪರಿಹಾರವಿಲ್ಲ” ಎಂದು ಅಭಿಪ್ರಾಯಿಸಿದರು.
ಕಳೆದ ವರ್ಷ ಆರಂಭವಾದ ಜನಾಂಗೀಯ ಹಿಂಸಾಚಾರದಿಂದಾಗಿ ಒಟ್ಟಾಗಿ 226 ಜನರು ಸಾವನ್ನಪ್ಪಿದು ಕುಕಿ ಮತ್ತು ಮೈತಿ ಸಮುದಾಯವು ಪ್ರತ್ಯೇಕವಾಗಿದೆ. ಇಂಫಾಲ್‌ನಲ್ಲಿ ಯಾವುದೇ ಕುಕಿ ಸಮುದಾಯದವರಿಗೆ ವಾಸ ಸುರಕ್ಷಿತವಾಗಿಲ್ಲ. ಈ ಕಾರಣದಿಂದಾಗಿ ಕುಕಿ ಸಮುದಾಯದ ಜನರು ಪ್ರತ್ಯೇಕವಾಗಿದ್ದಾರೆ.
ಇನ್ನು ಮಣಿಪುರದಲ್ಲಿ ಹಿಂಸಾಚಾರ ಆರಂಭವಾದ ಸುಮಾರು ಎರಡಕ್ಕೂ ಅಧಿಕ ತಿಂಗಳುಗಳ ಕಾಲ ಮಣಿಪುರದ ಬಗ್ಗೆ ಪ್ರಸ್ತಾಪ ಮಾಡದ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ವಿಪಕ್ಷಗಳ ಒತ್ತಡದ ಮೇರೆಗೆ ಮಣಿಪುರ ಹಿಂಸಾಚಾರ ಬಗ್ಗೆ ಮಾತನಾಡಿದ್ದಾರೆ. ಆದರೆ ಈವರೆಗೂ ದೇಶ ವಿದೇಶ ಸುತ್ತಾಡುವ ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡಿಲ್ಲ. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.