- ಮಣಿಪುರ ಬಿಜೆಪಿಯ ಮೂವರು ಶಾಸಕರು ವಾರದಲ್ಲಿ ರಾಜೀನಾಮೆ
- ಮುಖ್ಯಮಂತ್ರಿ ಬಿರೇನ್ ಸಿಂಗ್‌ಗೆ ರಾಜೀನಾಮೆ ಪತ್ರ ಸಲ್ಲಿಸಿದ ಬ್ರೋಜೆನ್
ಮಣಿಪುರ ಬಿಜೆಪಿ ಪಾಳಯದಲ್ಲಿ ಕಳೆದ ಕೆಲವು ದಿನಗಳಿಂದ ಅಸಮಾಧಾನ ಹೊಗೆಯಾಡುತ್ತಿದೆ.
ಕಳೆದ ಒಂದು ವಾರದಲ್ಲಿ ಮುಖ್ಯಮಂತ್ರಿ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಮತ್ತೊಬ್ಬ ಶಾಸಕ ರಾಜೀನಾಮೆ ನೀಡಿದ್ದಾರೆ ಎಂದು ಗುರುವಾರ (ಏಪ್ರಿಲ್ 20) ವರದಿಯಾಗಿದೆ.
ರಾಜ್ಯದ ಬಿಜೆಪಿಯಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿದ್ದು, ಈಗಾಗಲೇ ಇಬ್ಬರು ಮಣಿಪುರ ಶಾಸಕರು ನಿಗಮ ಮಂಡಳಿಯಲ್ಲಿನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬಿಜೆಪಿಯ ಮತ್ತೊಬ್ಬ ಶಾಸಕ ಪವೋನಮ್ ಬ್ರೋಜೆನ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ್ದಾರೆ. ಈ ಮೂಲಕ ವಾರದಲ್ಲಿ ಮೂರನೇ ಶಾಸಕ ಬಿಜೆಪಿ ತೊರೆದಂತಾಗಿದೆ.
ರಾಜ್ಯದ ಬಿಜೆಪಿಯಲ್ಲಿ ಬ್ರೋಜೆನ್ ರಾಜೀನಾಮೆ ಮತ್ತಷ್ಟು ಬಿಕ್ಕಟ್ಟು ಉಂಟಾಗುವಂತೆ ಮಾಡಿದೆ. ಪಕ್ಷದಲ್ಲಿ ಭಿನ್ನಾಭಿಪ್ರಾಯವಿದೆ ಎಂಬ ಊಹಾಪೋಹಗಳಿಗೆ ಇದು ಪುಷ್ಟಿ ನೀಡಿದೆ.
ಬ್ರೋಜೆನ್ ಸಿಂಗ್ ಅವರು ವಾಂಗ್ಜಿಂಗ್ ತೆಂತಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.
ಬ್ರೋಜೆನ್ ಸಿಂಗ್ ಅವರು ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರಿಗೆ ಪತ್ರದ ಮುಖೇನ ರಾಜೀನಾಮೆ ಸಲ್ಲಿಸಿದ್ದಾರೆ.
“ವೈಯಕ್ತಿಕ ಕಾರಣ ನೀಡಿ ಮಣಿಪುರ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನನ್ನ ರಾಜೀನಾಮೆಯನ್ನು ಸ್ವೀಕರಿಸಬೇಕು ಎಂದು ವಿನಂತಿಸುತ್ತೇನೆ” ಎಂದು ಪತ್ರದಲ್ಲಿ ಬ್ರೋಜೆನ್ ಹೇಳಿದ್ದಾರೆ.
ಬ್ರೋಜೆನ್ ಸಿಂಗ್ ರಾಜೀನಾಮೆಗೂ ಮುನ್ನ ಏಪ್ರಿಲ್ 8 ರಂದು ಪಕ್ಷದ ಮತ್ತೊಬ್ಬ ಶಾಸಕ ತೊಕ್ಚೋಮ್ ರಾಧೇಶ್ಯಾಮ್ ಮುಖ್ಯಮಂತ್ರಿಗಳ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು.
ಏಪ್ರಿಲ್ 13 ರಂದು ಶಾಸಕ ಕರಮ್ ಶ್ಯಾಮ್, “ತಮಗೆ ಯಾವುದೇ ಜವಾಬ್ದಾರಿ ವಹಿಸಿಲ್ಲ” ಎಂಬ ಕಾರಣ ನೀಡಿ ಟೂರಿಸಂ ಕಾರ್ಪೋರೇಷನ್ ಮಣಿಪುರ ಲಿಮಿಟೆಡ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ರಾಜೀನಾಮೆ ಸಲ್ಲಿಸಿರುವ ಮೂವರು ಶಾಸಕರೂ ದೆಹಲಿಗೆ ತೆರಳಿದ್ದು, ಕೇಂದ್ರದ ಬಿಜೆಪಿ ನಾಯಕರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ಜಮ್ಮು ಕಾಶ್ಮೀರ | ಉಗ್ರರ ದಾಳಿಗೆ ಐವರು ಸೈನಿಕರ ಸಾವು
ಮಣಿಪುರದ ಬಿಜೆಪಿಯ ಮತ್ತೊಬ್ಬ ಶಾಸಕ ಖ್ವೈರಕ್ಪಂ ರಘುಮಣಿ ತಮ್ಮ ಫೇಸ್‌ಬುಕ್‌ನಲ್ಲಿ ತಮಗೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ವಿರುದ್ಧ ಪೊಲೀಸ್ ದೂರು ಸಲ್ಲಿಸಿದ್ದಾರೆ.
ಮಣಿಪುರ ಬಿಜೆಪಿ ಘಟಕದಲ್ಲಿ ಉಂಟಾಗಿರುವ ಅಸಮಾಧಾನ ಶಮನಗೊಳಿಸಲು ಶುಕ್ರವಾರ (ಏಪ್ರಿಲ್ 21) ಬಿಜೆಪಿಯ ಉನ್ನತ ಮಟ್ಟದ ಸಭೆ ನಡೆಯಲಿದೆ.