ಜನರಿಗೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಮತ್ತೆ ಒದಗಿಸಲು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದರ ಕುರಿತು ಕಾರ್ಯವಿಧಾನಗಳನ್ನು ರಚಿಸುವಂತೆ ಮಣಿಪುರ ಸರ್ಕಾರಕ್ಕೆ ಅಲ್ಲಿನ ಹೈಕೋರ್ಟ್ ಸೂಚನೆ ನೀಡಿದೆ.
ಮಣಿಪುರದಲ್ಲಿ ಮೇ 3ರಿಂದ ಹಿಂಸಾಚಾರ ನಡೆಯುತ್ತಿದ್ದು, ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ, ಇಂಟರ್‌ನೆಟ್ ಇಲ್ಲದೆ ಯಾವ ಕೆಲಸಗಳೂ ನಡೆಯುತ್ತಿಲ್ಲ. ಇಂಟರ್‌ನೆಟ್ ಸೇವೆಯನ್ನು ಮರು ಆರಂಭಿಸಲು ನಿರ್ದೇಶಿಸುವಂತೆ ಹಲವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಗಳ ವಿಚಾರಣೆ ನಡೆಸಿರುವ ಹೈಕೋರ್ಟ್ ನ್ಯಾಯಮೂರ್ತಿ ಅಹಂತೇಮ್ ಬಿಮೋಲ್ ಸಿಂಗ್ ಮತ್ತು ನ್ಯಾಯಮೂರ್ತಿ ಎ ಗುಣೇಶ್ವರ್ ಶರ್ಮಾ ಅವರ ಪೀಠವು, “ರಾಜ್ಯ ಅಧಿಕಾರಿಗಳು, ವಿಶೇಷವಾಗಿ ಗೃಹ ಇಲಾಖೆಯು ಮೊಬೈಲ್ ಫೋನ್‌ಗಳ ಇಂಟರ್ನೆಟ್ ಸೇವೆಗಳನ್ನು ಮರುಆರಂಭಿಸಲು ಕಾರ್ಯವಿಧಾನವನ್ನು ರೂಪಿಸಬೇಕು. ಅದಕ್ಕಾಗಿ ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ಪರಿಶೀಲಿಸಬೆಕು” ಎಂದು ಹೇಳಿದೆ.
ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, “ಕೆಲವು ಅಧಿಕಾರಿಗಳ ಮೊಬೈಲ್‌ಗಳು ಶ್ವೇತಪಟ್ಟಿಯಲ್ಲಿವೆ, ಅಂತಹ ಮೊಬೈಲ್ ಫೋನ್‌ಗಳಿಂದ ಯಾವುದೇ ಡೇಟಾ ಸೋರಿಕೆಯಾಗಿಲ್ಲ. ಹೀಗಾಗಿ, ಎಲ್ಲ ಮೊಬೈಲ್ ಫೋನ್‌ಗಳನ್ನು ಹಂತಹಂತವಾಗಿ ಶ್ವೇತಪಟ್ಟಿಗೆ ಸೇರಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೆಕು” ಎಂದು ಮನವಿ ಮಾಡಿದರು.
“ಸೇವಾ ಪೂರೈಕೆದಾರರು ಸಲ್ಲಿಸಿದ ವರದಿಯ ಪ್ರಕಾರ, ಶ್ವೇತಪಟ್ಟಿ ಮಾಡದ ಯಾವುದೇ ಇತರ ಸಂಖ್ಯೆಗಳಿಗೆ ಯಾವುದೇ ಡೇಟಾ ಸೋರಿಕೆಯಾಗಿಲ್ಲ” ಎಂದು ವಕೀಲರು ಮನವರಿಕೆ ಮಾಡಿಕೊಟ್ಟರು.
ಕಾರ್ಯವಿಧಾನಗಳನ್ನು ರೂಪಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದ ಹೈಕೋರ್ಟ್, ವಿಚಾರಣೆಯನ್ನು ಆಗಸ್ಟ್ 31ಕ್ಕೆ ಮುಂದೂಡಿದೆ.