ಮಣಿಪುರದಲ್ಲಿ ಮತ್ತೆ ಹಿಂಸಾಸಾರ ಭುಗಿಲೆದ್ದಿದ್ದು, ಕಾವಲು ಕಾಯುತ್ತಿದ್ದ ಸ್ವಯಂಸೇವಕನನ್ನು ಶನಿವಾರ ರಾತ್ರಿ ಕೊಲ್ಲಲಾಗಿದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಜೇಮ್ಸ್‌ಬಾಂಡ್ ನಿಂಗೋಂಬಮ್ (35) ಎಂಬವರು ಕೊನೆಯುಸಿರೆಳೆದಿದ್ದಾರೆ. ಇಂಫಾಲ್ ಪಶ್ಚಿಮ ಜಿಲ್ಲೆಯ ಕಡಂಗ್‌ಬಂಡ್ ಪ್ರದೇಶದಲ್ಲಿ ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳಿಂದ ಜೇಮ್ಸ್ ದಾಳಿಗೊಳಗಿದ್ದರು. ಇಂಫಾಲ್ ಪಶ್ಚಿಮದಲ್ಲಿ ಒಂದು ಪ್ರದೇಶದ ಗ್ರಾಮವನ್ನು ಕಾವಲು ಕಾಯುವ ಸ್ವಯಂ ಸೇವಕ ಗುಂಪಿನ ವ್ಯಕ್ತಿ ಇವರಾಗಿದ್ದರು. ಬೆಳಗಿನ ಜಾವದವರೆಗೂ ಗುಂಡಿನ ಚಕಮಕಿ ನಡೆಯಿತು.
ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಜೇಮ್ಸ್ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಅವರ ದೇಹವನ್ನು ಇಂಫಾಲ್‌ನ ಜವಾಹರಲಾಲ್ ನೆಹರೂ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಶವಾಗಾರದಲ್ಲಿ ಇರಿಸಲಾಗಿದೆ.
ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಮೇ 3ರಂದು ಆರಂಭವಾದ ಜನಾಂಗೀಯ ಹಿಂಸಾಚಾರ ಇನ್ನೂ ನಿಂತಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿದ್ದು ಹಿಂಸಾಚಾರದಲ್ಲಿ ಈವರೆಗೆ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಮಣಿಪುರದಲ್ಲಿ ಕನಿಷ್ಠ 60,000 ಜನರನ್ನು ಸ್ಥಳಾಂತರಿಸಿ ನಿರಾಶ್ರಿತ ಶಿಬಿರಗಳಲ್ಲಿ ಇರಿಸಲಾಗಿದೆ. ಮನೆಮಠ ಕಳೆದುಕೊಂಡ ಮಂದಿ, ಸ್ವಂತ ನೆಲೆ ಇಲ್ಲದೆ ಪರಿತಪಿಸುತ್ತಿದ್ದಾರೆ. ಹಿಂಸಾಚಾರದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾದ ಕಡಂಗ್‌ಬಂಡ್, ಕುಕಿ-ಜೋ ಪ್ರಾಬಲ್ಯವಿರುವ ಕಾಂಗ್‌ಪೋಪಿ ಜಿಲ್ಲೆಯ ಗಡಿ ಭಾಗವೂ ಹೌದು.
ಮತ್ತೊಂದು ಘಟನೆ: ತೆಂಗನೌಪಾಲ್ ಜಿಲ್ಲೆಯ ಮೊರೆ ಪಟ್ಟಣದಲ್ಲಿ ಶನಿವಾರ ಮಧ್ಯಾಹ್ನ ಅಪರಿಚಿತ ಬಂದೂಕುಧಾರಿಗಳು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಭಾರೀ ಗುಂಡಿನ ಚಕಮಕಿಯಲ್ಲಿ ಮಣಿಪುರ ಪೊಲೀಸ್ ಕಮಾಂಡೋ ಗಾಯಗೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಭಾರತ ಮತ್ತು ಮ್ಯಾನ್ಮಾರ್ ನಡುವಿನ ಗಡಿಗೆ ಸಮೀಪದಲ್ಲಿರುವ ಮೊರೆ ಮಾರ್ಗದಲ್ಲಿನ ಚಿಕಿಮ್ ವೆಂಗ್‌ನಲ್ಲಿ ಬಂದೂಕುಧಾರಿಗಳು ಪೊಲೀಸ್ ವಾಹನದ ಮೇಲೆ ದಾಳಿ ಮಾಡಿದಾಗ ಕಮಾಂಡೋ ಗಾಯಗೊಂಡಿದ್ದಾರೆ.
ಮಣಿಪುರ ಪೊಲೀಸ್ ಕಮಾಂಡೋಗಳು ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಆರಂಭದಲ್ಲಿ, ಎರಡು ಬಾಂಬ್‌ಗಳು ಸ್ಫೋಟಗೊಂಡವು. ನಂತರ 350 ರಿಂದ 400 ಸುತ್ತುಗಳ ಫೈರಿಂಗ್ ಆಗಿದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. “ಇಂಫಾಲ್-ಮೊರೆ ರಸ್ತೆಯ ಎಂ ಚಾಹ್ನೌ ಗ್ರಾಮ ವಿಭಾಗವನ್ನು ದಾಟುವಾಗ ದಾಳಿಗೆ ಒಳಗಾದಾಗ ಒಬ್ಬ ಕಮಾಂಡೋ ಗಾಯಗೊಂಡಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
ಅಸ್ಸಾಂ ರೈಫಲ್ಸ್ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುವನ್ನು ಇಂಡಿಯಾ ರಿಸರ್ವ್ ಬೆಟಾಲಿಯನ್‌ನ ಪೊನ್‌ಖಲುಂಗ್ ಎಂದು ಗುರುತಿಸಲಾಗಿದೆ.