ಮಣಿಪುರದ ಚುರಾಚಂದ್ಪುರದಲ್ಲಿ ಜನಾಂಗೀಯ ಹಿಂಸಾಚಾರದಿಂದ ನಿರಾಶ್ರಿತರಾದ ಜನರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪರಿಹಾರ ಶಿಬಿರದಲ್ಲಿ ಭೇಟಿ ಮಾಡಿದರು.
ಹಿಂಸಾಚಾರದಿಂದ ಹೆಚ್ಚು ತತ್ತರಿಸಿರುವ ಮಣಿಪುರದ ಚುರಾಚಂದ್ಪುರ ಜಿಲ್ಲೆಗೆ ತೆರಳುತ್ತಿದ್ದಾಗ ಪೊಲೀಸರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನ ತಡೆಹಿಡಿದ ನಂತರ ಅವರು ಹೆಲಿಕಾಪ್ಟರ್ ಮೂಲಕ ಸಂತ್ರಸ್ತರ ಶಿಬಿರಗಳಿಗೆ ತೆರಳಿದರು.
ಪರಿಹಾರ ಶಿಬಿರದಲ್ಲಿ ಮಕ್ಕಳೊಂದಿಗೆ ರಾಹುಲ್ ಗಾಂಧಿ ಊಟ ಮಾಡಿದರು. ಪೋಷಕರು ಹಾಗೂ ಹಿರಿಯ ನಾಯಕರ ನೋವು ನಲಿವುಗಳನ್ನು ಹಂಚಿಕೊಂಡರು.
“ನಾನು ಮಣಿಪುರದ ನನ್ನ ಎಲ್ಲ ಸಹೋದರ ಸಹೋದರಿಯರ ಸಂಕಷ್ಟ ಕೇಳಲು ಬಂದಿದ್ದೇನೆ. ಎಲ್ಲ ಸಮುದಾಯಗಳ ಜನರು ನನ್ನನ್ನು ಸ್ವಾಗತಿಸಿ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಸರ್ಕಾರ ನನ್ನನ್ನು ತಡೆಯುತ್ತಿರುವುದು ತುಂಬಾ ದುರದೃಷ್ಟಕರ. ಮಣಿಪುರಕ್ಕೆ ಸಹಜ ಸ್ಥಿತಿಗೆ ಮರಳಬೇಕಿದೆ. ಶಾಂತಿ ನಮ್ಮ ಆದ್ಯತೆಯಾಗಬೇಕು” ಎಂದು ರಾಹುಲ್ ಗಾಂಧಿ ಹೇಳಿದರು.
ಹೆಲಿಕಾಪ್ಟರ್ ಮೂಲಕ ಆಗಮನ
ರಾಹುಲ್ ಗಾಂಧಿ ಇಂದು ಬೆಳಗ್ಗೆ ಇಂಫಾಲ್ಗೆ ಬಂದಿಳಿದರು ಹಾಗೂ ಚುರಚಂದಪುರ ಜಿಲ್ಲೆಗೆ ತೆರಳುತ್ತಿದ್ದ ಮಾರ್ಗದಲ್ಲಿ ಪೊಲೀಸರು ಅವರ ಬೆಂಗಾವಲು ವಾಹನ ತಡೆ ಹಿಡಿದಿದ್ದಾರೆ. ಪೊಲೀಸರು ತಡೆದ ನಂತರ ರಾಹುಲ್ ಗಾಂಧಿ ರಾಜಧಾನಿ ಇಂಫಾಲ್ಗೆ ಮರಳಿದರು. ನಂತರ ಅವರನ್ನು ಹೆಲಿಕಾಪ್ಟರ್ ಮೂಲಕ ಸಂತ್ರಸ್ತರ ಶಿಬಿರಗಳಿಗೆ ಕರೆದುಕೊಂಡು ಹೋಗಲಾಯಿತು.
ಹಿಂಸಾಚಾರ ಹೆಚ್ಚಾಗುವ ಭೀತಿಯಿಂದಾಗಿ ಬೆಂಗಾವಲು ವಾಹನ ತಡೆ ಹಿಡಿಯಲಾಯಿತು ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಬೆಂಗಾವಲು ವಾಹನ ತಡೆ ಹಿಡಿದಿರುವುದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, “ಬಿಷ್ಣುಪುರದ ಬಳಿ ಪೊಲೀಸರು ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನ ತಡೆದಿದ್ದಾರೆ. ನಮಗೆ ಅವಕಾಶ ಕೊಡದಂತ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಪೊಲೀಸರು. ರಾಹುಲ್ ಗಾಂಧಿಯವರನ್ನು ನೋಡಲು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದಾರೆ. ಪೊಲೀಸರು ನಮ್ಮನ್ನು ಏಕೆ ನಿಲ್ಲಿಸಿದ್ದಾರೆಂದು ನಮಗೆ ಅರ್ಥವಾಗುತ್ತಿಲ್ಲ” ಎಂದು ತಿಳಿಸಿದರು.
“ಪೊಲೀಸರು ನಮಗೆ ಏಕೆ ಅವಕಾಶ ನೀಡುತ್ತಿಲ್ಲ ಎಂದು ನನಗೆ ತಿಳಿದಿಲ್ಲ. ಸಂತ್ರಸ್ತ ಜನರನ್ನು ಭೇಟಿ ಮಾಡಲು ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ಸುಮಾರು 20-25 ಕಿ.ಮೀ ಸಂಚರಿಸಿದರೂ ಎಲ್ಲಿಯೂ ರಸ್ತೆ ತಡೆ ಆಗಿಲ್ಲ. ರಾಹುಲ್ ಗಾಂಧಿ ಕಾರಿನೊಳಗೆ ಕುಳಿತಿದ್ದಾರೆ. ಸ್ಥಳೀಯ ಪೊಲೀಸರಿಗೆ ಯಾರು ಸೂಚನೆ ನೀಡಿದ್ದಾರೆಂದು ನನಗೆ ತಿಳಿದಿಲ್ಲ,” ಎಂದು ಕೆ ಸಿ ವೇಣುಗೋಪಾಲ್ ಹೇಳಿದರು.
ಘಟನೆಯ ಬಗ್ಗೆ ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಣಿಪುರ ಸರ್ಕಾರವು “ರಾಹುಲ್ ಗಾಂಧಿಯವರ ಸಹಾನುಭೂತಿಯ ಪ್ರಭಾವವನ್ನು ತಡೆಯಲು ನಿರಂಕುಶ ವಿಧಾನಗಳನ್ನು ಬಳಸುತ್ತಿದೆ” ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? 9 ವರ್ಷಗಳ ನಂತರ ಈಗೇಕೆ: ಪ್ರಧಾನಿಯ ಏಕರೂಪ ನಾಗರಿಕ ಸಂಹಿತೆ ಪ್ರಶ್ನಿಸಿದ ಕಪಿಲ್ ಸಿಬಲ್
“ಮಣಿಪುರದಲ್ಲಿ ರಾಹುಲ್ ಗಾಂಧಿ ಬೆಂಗಾವಲು ಪಡೆಯನ್ನು ಬಿಷ್ಣುಪುರ ಬಳಿ ಪೊಲೀಸರು ತಡೆದಿದ್ದಾರೆ. ಅವರು ಪರಿಹಾರ ಶಿಬಿರಗಳಲ್ಲಿ ತೊಂದರೆ ಪಡುತ್ತಿರುವ ಜನರನ್ನು ಭೇಟಿ ಮಾಡಲು ಮತ್ತು ಕಲಹ ಪೀಡಿತ ರಾಜ್ಯದಲ್ಲಿ ಜನರನ್ನು ಸಂತೈಸಲು ಅಲ್ಲಿಗೆ ಹೋಗುತ್ತಿದ್ದಾರೆ. ಮಣಿಪುರದ ಬಗ್ಗೆ ಮೌನ ಮುರಿಯಲು ಪ್ರಧಾನಿ ಮೋದಿ ತಲೆಕೆಡಿಸಿಕೊಂಡಿಲ್ಲ. ಅವರ ಡಬಲ್ ಇಂಜಿನ್ ವಿನಾಶಕಾರಿ ಸರ್ಕಾರಗಳು ರಾಹುಲ್ ಗಾಂಧಿಯವರ ಸಹಾನುಭೂತಿಯ ಪ್ರಭಾವವನ್ನು ನಿಲ್ಲಿಸಲು ನಿರಂಕುಶಾಧಿಕಾರದ ವಿಧಾನಗಳನ್ನು ಬಳಸುತ್ತಿವೆ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ಎಲ್ಲ ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ಮಾನದಂಡಗಳನ್ನು ಛಿದ್ರಗೊಳಿಸುತ್ತದೆ. ಮಣಿಪುರಕ್ಕೆ ಶಾಂತಿ ಬೇಕು, ಸಂಘರ್ಷವಲ್ಲ” ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.
ಮೇ 3 ರಂದು ಮೊದಲ ಬಾರಿಗೆ ಹಿಂಸಾಚಾರ ನಡೆದ ನಂತರ ಈಶಾನ್ಯ ರಾಜ್ಯಕ್ಕೆ ರಾಹುಲ್ ಗಾಂಧಿ ಅವರ ಮೊದಲ ಭೇಟಿ ಇದಾಗಿದೆ.
ಹಿಂಸಾಚಾರ ಭೀತಿಯಿಂದಾಗಿ ಬೆಂಗಾವಲು ಪಡೆಯನ್ನು ತಡೆಹಿಡಿಯಲಾಗಿತ್ತು. ಬಿಷ್ಣುಪುರ್ ಜಿಲ್ಲೆಯ ಉಟ್ಲೌ ಗ್ರಾಮದ ಬಳಿ ಹೆದ್ದಾರಿಯಲ್ಲಿ ಟೈರ್ಗಳಿಗೆ ಬೆಂಕಿ ಹಚ್ಚಲಾಗಿತ್ತು. ಬೆಂಗಾವಲು ಪಡೆಗೆ ಕೆಲವು ಕಲ್ಲುಗಳನ್ನು ಎಸೆಯಲಾಗಿತ್ತು. ಹೀಗಾಗಿ ಮಾರ್ಗದಲ್ಲಿ ಹಿಂಸಾಚಾರ ಸೃಷ್ಟಿಯಾಗುವ ಆತಂಕದಿಂದ ಅವರನ್ನು ತಡೆಹಿಡಿಯಲಾಯಿತು. ಮತ್ತೆ ಹಿಂಸಾಚಾರ ಭುಗಿಲೇಳುವ ಆತಂಕದಲ್ಲಿದ್ದೇವೆ. ಹೀಗಾಗಿ ರಾಹುಲ್ ಗಾಂಧಿಯವರ ಬೆಂಗಾವಲು ವಾಹನ ತಡೆದು, ಬಿಷ್ಣುಪುರದಲ್ಲಿಯೇ ತಂಗುವಂತೆ ಮನವಿ ಮಾಡಿಕೊಳ್ಳಲಾಯಿತು ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.