ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಸುಮಾರು 50 ದಿನಗಳ ನಂತರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜೂನ್ 24 ರಂದು ರಾಜ್ಯದ ಪರಿಸ್ಥಿತಿ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಕರೆದಿದ್ದಾರೆ.
ಜೂನ್ 24ರಂದು ಮಧ್ಯಾಹ್ನ 3 ಗಂಟೆಗೆ ದೆಹಲಿಯಲ್ಲಿ ಸಭೆ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವಾಲಯದ ವಕ್ತಾರರು ಬುಧವಾರ(ಜೂನ್ 22) ಟ್ವೀಟ್ ಮಾಡಿದ್ದಾರೆ. ಈಶಾನ್ಯ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ100 ಕ್ಕೂ ಹೆಚ್ಚು ಜನರು ಮೃತಪಟ್ಟು ಮತ್ತು 50 ಸಾವಿರಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಬುಧವಾರ ತಡರಾತ್ರಿ ಅಮಿತ್ ಶಾ ಅವರನ್ನು ಭೇಟಿಯಾದ ನಂತರ ಸರ್ವಪಕ್ಷ ಸಭೆಯನ್ನು ಘೋಷಿಸಲಾಗಿದೆ.
ಗೃಹ ಸಚಿವರು ಮೇ 29 ರಿಂದ ಜೂನ್ 1 ರವರೆಗೆ ಮಣಿಪುರಕ್ಕೆ ಭೇಟಿ ನೀಡಿದ್ದರು ಮತ್ತು ಕುಕಿ ಮತ್ತು ಮೀತೀ ಪ್ರತಿನಿಧಿಗಳನ್ನು ಭೇಟಿ ಮಾಡಿ ಶಾಂತಿ ಸ್ಥಾಪನೆಗಾಗಿ ಮನವಿ ಮಾಡಿದ್ದರು. ಆದರೂ ರಾಜ್ಯದಲ್ಲಿ ಹಿಂಸಾಚಾರ ಮುಂದುವರಿದಾಗ ಎರಡು ಗುಂಪುಗಳೊಂದಿಗೆ ಮಾತುಕತೆ ನಡೆಸುವಂತೆ ಶಾ ಅವರು ಮುಖ್ಯಮಂತ್ರಿಗೆ ಸೂಚಿಸಿದ್ದರು.
ಈ ಸುದ್ದಿ ಓದಿದ್ದೀರಾ? ಮೋದಿಯನ್ನು ಹೊಗಳುವ ಅಮೆರಿಕ ಅಧ್ಯಕ್ಷರ ಅಸಲಿಯತ್ತೇನು? ಇಲ್ಲಿದೆ ನೋಡಿ…
ಮಣಿಪುರದ ಹಲವಾರು ಶಾಸಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ನಿರೀಕ್ಷೆಯಲ್ಲಿ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಅಮೆರಿಕ ಮತ್ತು ಈಜಿಪ್ಟ್ ಪ್ರವಾಸದಲ್ಲಿರುವ ಪ್ರಧಾನಿ ಅವರು ಜೂನ್ 26 ರವರೆಗೆ ಸ್ವದೇಶಕ್ಕೆ ವಾಪಸ್ ಬರುವುದಿಲ್ಲ.
ಈ ಸಂದರ್ಭದಲ್ಲಿಯೇ ಮೀತೀ ಶಾಸಕರನ್ನು ಒಳಗೊಂಡ ನಿಯೋಗವು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಮಣಿಪುರದ ಬಿಜೆಪಿ ಉಸ್ತುವಾರಿ ಸಂಬಿತ್ ಪಾತ್ರ ಅವರನ್ನು ಭೇಟಿ ಮಾಡಿತು.
ಈ ನಡುವೆ, ಹಿಂಸಾಚಾರದಿಂದ ನಿರಾಶ್ರಿತರಾದ 11,785 ಜನರಿಗೆ ಪರಿಹಾರ ನೀಡಲು ಮಿಜೋರಾಂ ಸರ್ಕಾರ ಕೇಂದ್ರದಿಂದ ₹ 10 ಕೋಟಿ ಕೇಳಿದೆ. ಮಿಜೋರಾಂ ಮುಖ್ಯಮಂತ್ರಿ ಝೋರಾಮ್‌ತಂಗ ಅವರು ಮೇ 16 ಮತ್ತು ಮೇ 23 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಣದ ನೆರವು ಕೋರಿ ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ಆಕ್ರೋಶ
ಕೇಂದ್ರ ಗೃಹ ಮಂತ್ರಿಗಳು ಹಿಂಸಾಚಾರ ನಡೆದು 50 ದಿನಗಳ ನಂತರ ಸರ್ವಪಕ್ಷ ಸಭೆ ಕರೆದಿರುವುದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, “ಮಣಿಪುರದಲ್ಲಿ 50ಕ್ಕೂ ಹೆಚ್ಚು ಸಾವು ಸಂಭವಿಸಿದ ನಂತರ ಸರ್ವಪಕ್ಷ ಸಭೆ ಕರೆದಿರುವುದು ತುಂಬ ತಡವಾಗಿದೆ. ನಮ್ಮ ನಾಯಕಿ ಸೋನಿಯಾ ಗಾಂಧಿಯವರು ವಿಡಿಯೋ ಮೂಲಕ ಮನವಿ ಜನತೆಗೆ ಶಾಂತಿ ಸಂದೇಶ ನೀಡಿದ ನಂತರ ಸರ್ಕಾರ ಎಚ್ಚೆತ್ತುಕೊಂಡಿದೆ. ಅಲ್ಲದೆ ಪ್ರಧಾನಿಯವರು ವಿದೇಶಿ ಪ್ರವಾಸದಲ್ಲಿರುವಾಗ ಸಭೆ ಕರೆಯಲಾಗಿದೆ. ಪ್ರಧಾನಿಯವರು ಸರ್ವಪಕ್ಷ ಸಭೆಗೆ ಗೈರುಹಾಜರಾಗಿರುವುದು ಅವರ ಹೇಡಿತನ ಮತ್ತು ವೈಫಲ್ಯಗಳನ್ನು ಎದುರಿಸಲು ಸರ್ಕಾರಕ್ಕೆ ಇಷ್ಟವಿಲ್ಲದಿರುವುದನ್ನು ತೋರಿಸುತ್ತದೆ” ಎಂದು ಟೀಕಿಸಿದ್ದಾರೆ.