ಮಣಿಪುರ ಜನಾಂಗೀಯ ಹಿಂಸಾಚಾರ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ನೇತೃತ್ವ ವಹಿಸಲು ಹೆಸರಿಸಿದ ಕೂಡಲೇ ಐಪಿಎಸ್ ಅಧಿಕಾರಿ ಆನಂದ್ ಮಿಶ್ರಾ ರಾಜೀನಾಮೆ ನೀಡಿದ್ದರು. ಇದೀಗ, ಅವರ ರಾಜೀನಾಮೆಯು ಕುತೂಹಲದ ತಿರುವು ಪಡೆದುಕೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ಬಿಹಾರದಿಂದ ಸ್ಪರ್ಧಿಸಲು ಬಿಜೆಇ ಟಿಕೆಟ್ ಕೊಡಿಸುವುದಾಗಿ ತಮಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭರವಸೆ ನೀಡಿದ್ದರು ಎಂದು ಆನಂದ್ ಮಿಶ್ರಾ ಹೇಳಿದ್‌ದಾರೆ.
ಬಿಹಾರದ ಬಕ್ಸಾರ್ ಮೂಲದವರೇ ಆಗಿರುವ ಮಿಶ್ರಾ ಅವರು ಡಿಸೆಂಬರ್ 15ರಂದು ರಾಜೀನಾಮೆ ನೀಡಿದ್ದರು. ಇದೀಗ, ಮೇ 7ರಂದು ಬಕ್ಸಾರ್ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
2023ರ ಮೇ 3ರಿಂದ ನಡೆದ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 60,000 ಜನರು ಸ್ಥಳಾಂತರಗೊಂಡಿದ್ದಾರೆ. ಅವರಲ್ಲಿ ಹಲವರು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಿವೆ. ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿ, ಅತ್ಯಾಚಾರ ಎಸಗಿದ್ದ ಕೃತ್ಯದ ವಿಡಿಯೋ ತುಣುಕುಗಳ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರು. ಇಡೀ ದೇಶ ಮಣಿಪುರ ಹಿಂಸಾಚಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಅದರೆ, ಪ್ರಧಾನಿ ಮೋದಿ ಮಾತ್ರ ಮೌನ ಮುರಿದಿರಲಿಲ್ಲ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿತದ ನಡುವೆಯೂ ಮೋದಿ ಆಡಳಿತವು ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಸರ್ಕಾರವನ್ನು ಬೆಂಬಲಿಸುತ್ತಿದೆ.
ಇಂತಹ ಪರಿಸ್ಥಿತಿಯಲ್ಲಿ, ಮಣಿಪುರದಲ್ಲಿ ನಡೆದ ಹಿಂಸಾಚಾರದ ತನಿಖೆ ನಡೆಸಲು ಮಣಿಪುರದ ಹೊರಗಿನ ಅಧಿಕಾರಿಗಳ ಎಸ್‌ಐಟಿ ರಚಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಸುಪ್ರೀಂ ಸೂಚನೆ ಮೇರೆಗೆ 42 ಅಧಿಕಾರಿಗಳಿದ್ದ ಎಸ್‌ಐಟಿಯನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಸಿಬಿಐ ರಚಿಸಿತ್ತು. ಅದೇ ನಿರ್ದೇಶನದಂತೆ ಮಿಶ್ರಾ ಅವರನ್ನು ಎಸ್‌ಐಟಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು.
ಆದರೆ, ಎಸ್‌ಐಟಿ ನೇತೃತ್ವ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ, ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, “ಅಸ್ಸಾಂ ಮುಖ್ಯಮಂತ್ರಿ ಶರ್ಮಾ ಅವರು ತಮಗೆ ಬಿಜೆಪಿ ಟಿಕೆಟ್ ನೀಡುವ ಭರವಸೆ ನೀಡಿದ ಕಾರಣ ರಾಜೀನಾಮೆ ನೀಡಿದೆ” ಎಂದು ಹೇಳಿದ್ದಾರೆ.
ಡಿಸೆಂಬರ್ 28 ರಂದು ಪ್ರಕಟವಾದ ಸುದ್ದಿ ವರದಿಗಳ ಪ್ರಕಾರ, ಮಿಶ್ರಾ ಅವರು ಡಿಸೆಂಬರ್ 18ರಂದು ತಮ್ಮ ರಾಜೀನಾಮೆಯನ್ನು ಡಿಜಿಪಿ ಮೂಲಕ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ. ರಾಜೀನಾಮೆಯಲ್ಲಿ, ಅವರು ತಮ್ಮ ತವರು ರಾಜ್ಯ ಬಿಹಾರಕ್ಕೆ ಸೇವೆ ಸಲ್ಲಿಸಲು ಬಯಸುತ್ತಾರೆ. ಅದಕ್ಕಾಗಿ, ಈ ಹುದ್ದೆಯನ್ನು ತೊರೆಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಆಗ ಅವರು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳು ಹಬ್ಬಿದ್ದವು.
ಇದೆಲ್ಲದರ ನಡುವೆ, ಏಪ್ರಿಲ್ 2ರಂದು ಫೇಸ್‌ಬುಕ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದ ಮಿಶ್ರಾ, “ದೇಶದ ಹಿತಕ್ಕಾಗಿ ನನ್ನ ಆಲೋಚನೆಗಳನ್ನು ಉತ್ತಮವಾಗಿ ಕಾರ್ಯಗತಗೊಳಿಸಲು ನಾನು ದೇಶದ ರಾಜಕೀಯ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದೆ. ನನಗೆ ಟಿಕೆಟ್ ಸಿಗದ ಕಾರಣ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಏಕೆಂದರೆ ದೇಶ ಮತ್ತು ಜನರಿಗಾಗಿ ಕೆಲಸ ಮಾಡುವ ಇಚ್ಛೆ ನನ್ನಲ್ಲಿ ಇನ್ನೂ ಇದೆ” ಎಂದು ಹೇಳಿದ್ದರು.
ಮೇ 18 ರಂದು ಬಿಹಾರದಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿದ್ದ ಅಸ್ಸಾಂ ಮುಖ್ಯಮಂತ್ರಿ ಶರ್ಮಾ, “ಮಿಶ್ರಾ ಅವರು ಬಕ್ಸರ್‌ನಲ್ಲಿ ಬಿಜೆಪಿ ಅಭ್ಯರ್ಥಿಯ ಮತಗಳನ್ನು ಕಡಿತಗೊಳಿಸಲು ಪ್ರತಿಪಕ್ಷ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಬೆಂಬಲವನ್ನು ಪಡೆದಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದರು.
ಮೇ 19ರಂದು ಶರ್ಮಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಿಶ್ರಾ, “ಹಿಮಂತ ಬಿಸ್ವಾ ಶರ್ಮಾ ಅವರು ನನ್ನನ್ನು ಬಿಜೆಪಿಗೆ ಸೇರಿಸುವುದಾಗಿ ಮತ್ತು ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿದ್ದರು. ನನ್ನ ಭಾರತೀಯ ಪೊಲೀಸ್ ಸೇವೆಯ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದರು. ಆದರೆ, ಅಂತಿಮವಾಗಿ ಅವರು ನನಗೆ ದ್ರೋಹ ಮಾಡಿದರು. ನನ್ನನ್ನು ಪಕ್ಷಕ್ಕೆ ಸೇರಿಸಲಿಲ್ಲ” ಎಂದು ಆರೋಪಿಸಿದ್ದಾರೆ.