74 ವರುಷದ ಮಾಜಿ ಸೈನಿಕ ಅಣ್ಣ ಹಜಾರೆ ದೆಹಲಿಗೆ ಬಂದಿಳಿದರು. ಭ್ರಷ್ಟಾಚಾರ ವಿರೋಧಿ ಬಿಲ್‌ಗಾಗಿ ಹತ್ತು ದಿನದ ಉಪವಾಸ ಶುರು ಮಾಡಿದರು. ನಾವೆಲ್ಲ ಅವರಿಗೆ ಬೆಂಬಲ ಸೂಚಿಸುವಾಗ ಅಂತರಾಳದಲ್ಲಿ ಸರ್ವಾಧಿಕಾರವನ್ನೇ ಬಯಸುತ್ತಿದ್ದೆವು ಎಂದರೆ ತಪ್ಪಾಗಲಾರದು.
2014ರ ಚುನಾವಣೆಯಲ್ಲಿ ಬಿಜೆಪಿ ಬಾರಿ ಬಹುಮತಗಳಿಂದ ಗೆದ್ದಿದ್ದಾದರು ಹೇಗೆ? ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರಲು ಪೂರಕವಾದ ವಿಷಯಗಳಾವುವು? ಇವರ ಹಿಂದಿನ ಮನಮೋಹನ ಸಿಂಗ್ ಸರ್ಕಾರದಲ್ಲಿ ಆದ ಪ್ರಮಾದಗಳೇನು? ಜನ ಮನಮೋಹನ್ ಸರ್ಕಾರದಲ್ಲಿ ವಿಶ್ವಾಸ ಕಳೆದುಕೊಂಡಿದ್ದಾದರು ಏಕೆ? ಮೋದಿ ಕಲ್ಟ್ ಶುರುವಾಗಿದ್ದು ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಈ ಲೇಖನದಲ್ಲಿ ಮಾಡಿದ್ದೇನೆ. ಕಾಂಗ್ರೆಸ್ ಬಿಜೆಪಿಗೆ ಪರ್ಯಾಯವಾಗಬಲ್ಲುದೆಂದು ನನಗೆಂದು ಅನ್ನಿಸಿಲ್ಲ. ಈ ನಿಲುವನ್ನು ಸಮರ್ಥಿಸಿಕೊಳ್ಳಲು ಐತಿಹಾಸಿಕ ಪುರಾವೆಗಳಿಲ್ಲ. ಇಂದಿರಾ, ಸಂಜಯ್, ರಾಜೀವ್, ನರಸಿಂಹರಾವ್, ಮನಮೋಹನ್ ಸಿಂಗ್ ಆದಿಯಾಗಿ ಎಲ್ಲರೂ ಹಿಂದುತ್ವ ಪೋಷಿಸುತ್ತಲೋ ಅಥವಾ ಅದಕ್ಕೆ ವೇದಿಕೆ ಸಜ್ಜು ಮಾಡುತ್ತಲೋ ಬಂದವರು. ಬಡವರ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿ ಸಾಹುಕಾರರಿಗೆ ದೇಶದ ಸಂಪತ್ತು, ಐಶ್ವರ್ಯವನೆಲ್ಲಾ ಒಪ್ಪಿಸಿದವರು. ಆದಿವಾಸಿ, ಬುಡಕಟ್ಟು ಜನಾಂಗದವರ ಮಾರಣಹೋಮ ನಡೆಸಿದವರು… ಈ ಲೇಖನದ ಉದ್ದೇಶ ದಾರಿಯಲ್ಲಿ ನಾವು ಎಡವಿದ ಜಾಗಗಳನ್ನ ತೋರಿಸುವುದೇ ಆಗಿದೆ… ಕಾಂಗ್ರೆಸ್ ಒಂದು ಬಲಿಷ್ಠ ಪರ್ಯಾಯವಾಗಬೇಕಾದರೆ ಈ ಕೆಳಗಿನ ವಿಚಾರಗಳ ಮೇಲೆ ಗಮನ ಹರಿಸಬೇಕಿದೆ.
ಯುಪಿಎಯ ಒಂದು ದಶಕದ ಅಧಿಕಾರಾವಧಿಯಲ್ಲಿ ಮನಮೋಹನ್ ಸಿಂಗ್ ಸರ್ಕಾರ ಪದೇ ಪದೇ ಸಾಲ ತೆಗೆದುಕೊಂಡು, ತೆಗೆದುಕೊಂಡ ಸಾಲವನ್ನ ಮರುಪಾವತಿಸದೆ ಮತ್ತೆ ಸಾಲ ತೆಗೆದುಕೊಳ್ಳುವ ಬಂಡವಾಳಶಾಹಿಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡಿತು. ಹಳ್ಳಿಗಳಲ್ಲಿ ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವಾಗ ಸಿಂಗ್ ಶ್ರೀಮಂತರಿಗೆ ಹೊಸ ಸಾಲ ಕೊಡಿಸುತ್ತಿದ್ದರು.
ಇದನ್ನು ಓದಿದ್ದೀರಾ?: ದೇಶ ಕಂಡ ಪರಮ ಪ್ರಾಮಾಣಿಕ ಪ್ರಧಾನಿ ಮನಮೋಹನ್ ಸಿಂಗ್
ಮನಮೋಹನ್ ಸಿಂಗ್‌ರವರು ಕೇಂಬ್ರಿಡ್ಜ್ ಆಕ್ಸ್‌ಫರ್ಡ್ ವಿದ್ಯಾಭ್ಯಾಸ ಮುಗಿಸಿದ ಥಿಯರಿಸ್ಟ್. ಅವರು ಸಾಮಾನ್ಯ ಜನರ ನಡುವೆ ಎಂದೂ ಬದುಕಲಿಲ್ಲ. ಚುನಾವಣೆಗೆ ನಿಂತು ಜನಸಾಮಾನ್ಯರ ನಡುವೆ ಓಡಾಡಿ ಮತ ಯಾಚಿಸಿದವರಲ್ಲ. ಇಂತಹವರು ಜನಸಾಮಾನ್ಯರಿಗೆ, ರೈತರಿಗೆ ಏನು ತಾನೇ ಮಾಡಿಯಾರು? ಆಗ ಸರ್ಕಾರವೇ ನಡೆಸಿದ ಸಮೀಕ್ಷೆಯ ಪ್ರಕಾರ ಕೃಷಿಯನ್ನೇ ನಂಬಿಕೊಂಡ ಮನೆಯವರ ತಿಂಗಳ ಆದಾಯ ಸರಾಸರಿ 6426 ರೂ. ಇತ್ತು. ಸರಾಸರಿ ವೆಚ್ಚ 6233 ರೂ. ಅಂದರೆ ಈ ಕುಟುಂಬಗಳು ತಿಂಗಳಿಗೆ ಉಳಿಸಲಾಗುತ್ತಿದ್ದುದು ಕೇವಲ 203ಗಳು. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಸಾಲ ಸಿಗದೆ, ಅಸಲಿಗೆ ಬಡ್ಡಿ, ಚಕ್ರಬಡ್ಡಿ ಹಾಕುವ ಖಾಸಗಿ ಸಾಲಗಾರರ ಬಳಿ ಕೈವೊಡ್ಡಿ, ಕೊನೆಗೆ ಸಾಲ ತೀರಿಸಲಾಗದೆ ಪ್ರತಿ ವರ್ಷ 16,000 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡರು. ಇವರಲ್ಲಿ ಹಲವರು ತಮ್ಮ ಸೂಸೈಡ್ ನೋಟ್‌ಗಳಲ್ಲಿ ಪ್ರಧಾನಿಯವರನ್ನೇ ನೇರ ಹೊಣೆ ಮಾಡಿದರು. (ಪಿ. ಸಾಯಿನಾಥ್ ಅವರ ಸಾಕ್ಷ್ಯಚಿತ್ರ “ನಿರೋಸ್ ಗೆಸ್ಟ್” ನೋಡಿ)
ಇಷ್ಟೆಲ್ಲಾ ರೈತರು ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಂಡರೂ ಸಿಂಗ್ ಅಳುಕಲಿಲ್ಲ. ಸಿಂಗ್ ಆಡಳಿತಾವಧಿಯ ಎರಡು ವರ್ಷಗಳಲ್ಲೇ ಜರ್ಮನ್ ಚಾನ್ಸಲರ್ ಅಂಜೇಲ ಮೆರ್ಕೆಲ್ ಅಮೆರಿಕಾದ ಖಜಾನೆಯ ಮಾಜಿ ಕಾರ್ಯದರ್ಶಿ ಹೆನ್ರಿ ಪೌಲ್ಸನ್ ದೆಹಲಿಗೆ ಬಂದಿಳಿದರು- ‘ಭಾರತ ಬೆಳಗುತಿದೆ’ ಎಂಬ ಮತ್ತೊಂದು ಸಮ್ಮೇಳನಕ್ಕೆ! ಸುಮಾರು ಹದಿನೈದು ರಾಜ್ಯಗಳಿಂದ ಸಾವಿರಾರು ಆದಿವಾಸಿ ಕೂಲಿಯಾಳುಗಳು, ಭೂರಹಿತ ರೈತರು ಹಲವು ದಿನಗಳ ಕಾಲ ನಡೆಯುತ್ತಾ, ರಸ್ತೆ ಬದಿಯಲ್ಲಿ ಮಲಗುತ್ತಾ, 600km ನಡೆದು ದೆಹಲಿ ತಲುಪಿದರು. ಗಾಂಧಿವಾದಿ ಮತ್ತು ಆಕ್ಟಿವಿಸ್ಟ್ ಪಿವಿ ರಾಜಗೋಪಾಲ್ ಆಯೋಜಿಸಿದ್ದ ಶಾಂತಿಯುತ ಹೋರಾಟದ ಪ್ರಮುಖ ಗುರಿ ಭೂ ಹಕ್ಕಿಗಾಗಿ ಬೇಡಿಕೆ ಇಡುವುದಾಗಿತ್ತು. ಸಿಂಗ್ ಸರಕಾರ ಯಾವುದೇ ಮಾತುಕತೆಯಲ್ಲಿ ತೊಡಗದೆ, ಅನ್ನ ನೀರು ಕೊಡದೆ ಧರಣಿನಿರತ ಎಲ್ಲ ರೈತರನ್ನ, ಆದಿವಾಸಿಗಳನ್ನ ಚಾವಣಿಯಿಲ್ಲದ ಮೈದಾನದಲ್ಲಿ ಸೈನಿಕರ ಪಹರೆಯಲ್ಲಿ ಬಂಧಿಸಿಟ್ಟಿತು. ಅವರೆಲ್ಲಾ ದೆಹಲಿಯ ಬಿರು ಬಿಸಲಲ್ಲಿ ಬೆಂದುಹೋದರು.
ಹೀಗೆ ಸರ್ಕಾರದ ಯಾವುದೇ ನೆರವು ಆಶ್ವಾಸನೆ ಸಿಗದ ಸಾಕಷ್ಟು ರೈತರು, ಆದಿವಾಸಿಗಳನ್ನ ಮಾವೋವಾದಿಗಳು ತಮ್ಮತ್ತ ಸೆಳೆದುಕೊಂಡರು. ಮಾವೋವಾದಿಗಳನ್ನು ಹತ್ತಿಕ್ಕಲು ಸಲ್ವ ಜದುಂ ಎಂಬ ಪಡೆ ಕಟ್ಟಿ ಅದಕ್ಕೆ ಆಧುನಿಕ ಶಸ್ತ್ರಾಸ್ತ್ರಗಳನ್ನ ಕೊಡಲಾಯಿತು. ಟಾಸ್ಕ್ ಫೋರ್ಸ್ ಹಾಗೂ ಸಲ್ವ ಜದುಂ, ಆದಿವಾಸಿಗಳ, ಭೂರಹಿತ ರೈತರ, ಹೆಣ್ಣುಮಕ್ಕಳ ಮೇಲೆ ನಡೆಸಿದ ದಾಳಿ ಅತ್ಯಾಚಾರಗಳು ಭಯಾನಕ. ಆಪರೇಷನ್ ಗ್ರೀನ್ ಹಂಟ್‌ನಂತಹ ಕರಾಳ ಅಧ್ಯಾಯ ಭಾರತ ಇತಿಹಾಸದಲ್ಲಿ ಮತ್ತೊಂದಿರಲಾರದು.
ಆದಿವಾಸಿಗಳು ವಾಸಿಸುತ್ತಿದ್ದ ಖನಿಜ, ಅದಿರುಭರಿತ ಕಾಡು, ಬೆಟ್ಟ ಗುಡ್ಡಗಳನ್ನ ಕಾರ್ಪೊರೇಟ್‌ಗಳು ಲೂಟಿ ಮಾಡಲು ಅನುವು ಮಾಡಿಕೊಟ್ಟರು ಸಿಂಗ್. ಪ್ರತಿರೋಧ ತೋರಿದವರನ್ನ ಕೊಲ್ಲಿಸುವುದು, ನಾನಾ ಕೇಸ್‌ಗಳಲ್ಲಿ ಫ್ರೇಮ್ ಮಾಡಿ ಜೈಲಿಗಟ್ಟುವುದು, ಹಿಂಸೆಗೊಳಪಡಿಸುವುದು, ಗುಳೆಯೆಬ್ಬಿಸುವುದು ಸಿಂಗ್ – ಚಿದಂಬರಂಗೆ ಒಲಿದ ಕಲೆಯಾಗಿತ್ತು. ಅಕ್ಷರ ಜ್ಞಾನವಿಲ್ಲದ ಆದಿವಾಸಿಗಳು ಕೋರ್ಟ್ ಕಚೇರಿ ಅಲೆಯುವಂತಾಯಿತು. ವೇದಾಂತ ಎನ್ನುವ ಗಣಿ ಕಂಪನಿ ವಿರುದ್ಧ ಹೋರಾಡಿ ಗೆದ್ದ ನಿಯಮಗಿರಿ ಆದಿವಾಸಿಗಳ ಧೈರ್ಯ ಯಾರಿಗೆ ತಾನೇ ಗೊತ್ತಿಲ್ಲ.
ಇದನ್ನು ಓದಿದ್ದೀರಾ?: ಮನಮೋಹನ್ ಸಿಂಗ್ ಎಂಬ ‘ಕುರಿಮರಿ’ಯ ಮುಂದೆ ಸೋತಿದ್ದ ‘ಉಕ್ಕಿನ ಮನುಷ್ಯ’ ಆಡ್ವಾಣಿ
ಹೀಗೆ ಮನಮೋಹನ್ ಸಿಂಗ್ ಜಗತ್ತಿನ ಎಲ್ಲಾ ಸಭೆಗಳಲ್ಲೂ ಮಿತ ಭಾಷಿ, ಮೌನಿ, ಅದ್ಭುತ ಅರ್ಥಶಾಸ್ತ್ರಜ್ಞನೆಂದು ಪ್ರಶಂಸೆಗೆ ಒಳಗಾದರೆ, ಅವರು ನಮ್ಮ ದೇಶಕ್ಕೆ ಮಾತ್ರ ಪಿನೋಷೆಯೇ ಆಗಿದ್ದರು. 2008ರಲ್ಲಿ ಅವರು ಮಾಡಿದ ಅತಿ ದೊಡ್ಡ ಪ್ರಮಾದವೆಂದರೆ ಮುಂಬೈನಲ್ಲಿ ನಡೆದ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರ ದಾಳಿಗೆ ದಿಟ್ಟ, ಸಮರ್ಥವಾದ ಉತ್ತರ ಕೊಡದಿದ್ದುದು. ಸಿಂಗ್ ಅಮೆರಿಕಾ ಸಖ್ಯ ಎಷ್ಟು ಆಳವಾಗಿತ್ತೆಂದರೆ, ಅಮೆರಿಕಾ ತನ್ನ ಎಲ್ಲ ಪ್ರಭಾವವನ್ನ ಬಳಸಿ ಸಿಂಗ್ ಅವರನ್ನು ಸುಮ್ಮನಾಗಿಸಿತ್ತು. ಭಾರತದ ಬಳಿಯಿರುವುದು ಎರಡೇ ಆಯ್ಕೆಗಳು- ತಾಳ್ಮೆಯಿಂದ/ಡಿಪ್ಲೊಮ್ಯಾಟಿಕ್ ಆಗಿ ಪಾಕಿಸ್ತಾನವನ್ನ ದಾರಿಗೆ ತರುವುದು ಅಥವಾ ನ್ಯೂಕ್ಲಿಯರ್ ಯುದ್ದ ಶುರುಮಾಡುವುದು ಎಂಬ ಹಸಿ ಹಸಿ ಸುಳ್ಳನ್ನು ಮೀಡಿಯಗಳಲ್ಲಿ ಬಿತ್ತರಿಸಲಾಯಿತು. ಒಂದೆಡೆ ಸಿಂಗ್ ಅವರ ತಲೆ ಸವರುತಿದ್ದ ಅಮೆರಿಕಾ ಮತ್ತೊಂದೆಡೆ ಪಾಕಿಸ್ತಾನಕ್ಕೆ ಅತ್ಯಾಧುನಿಕ ಯುದ್ದ ವಿಮಾನ ಎಫ್ 16 ಅನ್ನು ಸೇಲ್ ಮಾಡುತ್ತಿತ್ತು. ಪಾಕಿಸ್ತಾನ ನಡೆಸಿದ ಮುಂಬೈ ಭಯೋತ್ಪಾದಕ ಕೃತ್ಯಕ್ಕೆ ಭಾರತ ತಕ್ಕ ಪಾಠ ಕಲಿಸುವುದು ಅಮೆರಿಕಾಕ್ಕೆ ಬೇಕಾಗಿರಲಿಲ್ಲ. ಆಫ್ಘಾನಿಸ್ತಾನದಲ್ಲಿ ನಡೆಸುತ್ತಿದ್ದ ಅಮೆರಿಕಾದ ಯುದ್ದದಲ್ಲಿ ಪಾಕಿಸ್ತಾನದ ನೆರವು ಅತ್ಯಾವಶ್ಯಕವಾಗಿತ್ತು. ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಪಾಕಿಸ್ತಾನ ಮತ್ತು ಅಮೆರಿಕಾದ ಡಬಲ್ ಏಜೆಂಟ್ ಡಾನ್ ಹೆಡ್ಲಿಯನ್ನ ವಿಚಾರಣೆಗೆ ಒಳಪಡಿಸಲು ಕೂಡ ಮನಮೋಹನ್ ಸಿಂಗ್ ಸರ್ಕಾರಕ್ಕೆ ಆಗಲಿಲ್ಲ. ಈ ರೀತಿಯ ಅಧೀರತನ ಒಂದು ಕಡೆ ಪಾಕಿಸ್ತಾನದ ಮುಸ್ಲಿಂ ಉಗ್ರವಾದಿಗಳ ಧೈರ್ಯ ಹೆಚ್ಚಿಸಿದರೆ, ಇನ್ನೊಂದೆಡೆ ಭಾರತದ ಹಿಂದೂ ಮೂಲಭೂತವಾದಿಗಳಿಗೆ ಲಾಭದಾಯಕವಾಯಿತು. ಮನಮೋಹನ್ ಸಿಂಗ್ ಸರ್ಕಾರ ಪುಕ್ಕಲು ಸರ್ಕಾರ, ಕೈಲಾಗದ ಸರ್ಕಾರ, ನರಸತ್ತ ಸರ್ಕಾರವೆಂದು ಬಿಂಬಿಸಲು ಅನುಕೂಲವಾಯಿತು.

ಅಮೆರಿಕಾ ಭಾರತ ಸರ್ಕಾರದ ಮೇಲೆ ಈ ಮಟ್ಟಕ್ಕೆ ಹಿಡಿತ ಸಾಧಿಸಿದ್ದರಿಂದ ಕಸಿವಿಸಿಗೊಂಡು ಕಮ್ಯುನಿಸ್ಟ್ ಪಾರ್ಟಿ ಮೈತ್ರಿ ಸರ್ಕಾರದಿಂದ ಹೊರಬಂದ ನಂತರ ಯುಪಿಎ ಎರಡನೇ ಅವಧಿಯಲ್ಲಂತೂ ಭ್ರಷ್ಟಾಚಾರ ತಾಂಡವವಾಡತೊಡಗಿತು. ನೀರ ರಾಡಿಯ ಕೇಸ್, ಕಾಮನ್ ವೆಲ್ತ್ ಕ್ರೀಡೆ ಹಗರಣ, 2ಜಿ ಹಗರಣ ಸರ್ಕಾರಕ್ಕೆ ಮುಜುಗರ ಉಂಟುಮಾಡಿತು. ಇಷ್ಟೆಲ್ಲದರ ನಡುವೆ (2009 ನಡೆಸಿದ ಸಮೀಕ್ಷೆಯ ಪ್ರಕಾರ) ಸುಮಾರು 450 ಸರ್ಕಾರಿ ಯೋಜನೆಗಳಿಗೆ, ಸಂಸ್ಥೆಗಳಿಗೆ ಗಾಂಧಿ ಮನೆಯವರ ಹೆಸರಿಡಲಾಯಿತು. ಬಡವರಿಗೆ ಉಚಿತ ಊಟದ ವ್ಯವಸ್ಥೆ, ಆಹಾರ ಸುರಕ್ಷಾ ಯೋಜನೆ, ಹಳ್ಳಿಯ ಶಿಶು ವಿಹಾರ ರಾಷ್ಟೀಯ ಸ್ಕೀಮ್, ಕುಡಿಯುವ ನೀರಿನ ಯೋಜನೆಗಳು, ರಸ್ತೆಗಳು, ಕಟ್ಟಡಗಳು, ವಿಶ್ವವಿದ್ಯಾಲಯಗಳು, ವಿಮಾನ ನಿಲ್ದಾಣಗಳು, ಕ್ರೀಡಾಂಗಣಗಳು, ರಾಷ್ಟೀಯ ಉದ್ಯಾನವನ, ಮ್ಯೂಸಿಯಂಗಳು, ಕ್ರೀಡಾ ಪಂದ್ಯಾವಳಿಗಳಿಗೆ ಗಾಂಧಿ ಮನೆಯವರ ಹೆಸರಿಡಲಾಯಿತು. ”Our economy may increasingly be dynamic, but our moral universe seems to be shrinking” ಎಂದು 2010ರಲ್ಲಿ ನಡೆದ ಇಂದಿರಾ ಗಾಂಧಿ ಕಾನ್ಫರೆನ್ಸ್ ನಲ್ಲಿ ಸೋನಿಯಾ ಒಪ್ಪಿಕೊಂಡರು. ಇದಕ್ಕೆ ಪೂರಕವೆಂಬಂತೆ ನಿಷ್ಠಾವಂತ ಅಧಿಕಾರಿಯಾಗಿದ್ದ ಅಶೋಕ ಖೇಮ್ಕ ರಾಬರ್ಟ್ ವಾದ್ರ ಅವರ ಅಕ್ರಮ ಭೂ ವ್ಯವಹಾರಗಳ ಕುರಿತು ತನಿಖೆ ಮಾಡಲು ಮುಂದಾದಾಗ ಆತನನ್ನು ಎತ್ತಂಗಡಿ ಮಾಡಿತು. ಸಿಬಿಐ ಬೊಫೋರ್ಸ್ ಹಗರಣದ ರೂವಾರಿ ಓಟವಿಯೋ ಕ್ವಟ್ರೋಚಿಯನ್ನ ಅರ್ಜೆಂಟೀನಾದಿಂದ ಹಸ್ತಾಂತರ ಮಾಡಿಸಿಕೊಳ್ಳುವ ಅವಕಾಶ ಕೈಚೆಲ್ಲಿ ಆತನ ಮೇಲಿದ್ದ ಎಲ್ಲ ಪ್ರಕರಣಗಳನ್ನೂ ಕೈಬಿಟ್ಟಿತು. ಐತಿಹಾಸಿಕ ಮಾಹಿತಿ ಹಕ್ಕು ಕಾಯ್ದೆ(ಆರ್‍ಟಿಐ) ಹಾಗೂ ಶಿಕ್ಷಣ ಹಕ್ಕು ಕಾಯ್ದೆಗಳು ಅಷ್ಟಾಗಿ ಸದ್ಧು ಮಾಡಲೇ ಇಲ್ಲ.
ಇದ್ದೆಲ್ಲದರ ಪರಿಣಾಮವಾಗಿ 74 ವರುಷದ ಮಾಜಿ ಸೈನಿಕ ಅಣ್ಣ ಹಜಾರೆ ದೆಹಲಿಗೆ ಬಂದಿಳಿದರು. ಭ್ರಷ್ಟಾಚಾರ ವಿರೋಧಿ ಬಿಲ್‌ಗಾಗಿ ಹತ್ತು ದಿನದ ಉಪವಾಸ ಶುರು ಮಾಡಿದರು. ತಂಡವೊಂದು ಅವರಿಗೆ ಸಾಥ್ ನೀಡಿತು. ಜನ ಲೋಕಪಾಲ್‌ಗಾಗಿ ಪಟ್ಟು ಹಿಡಿದರು. ಈ ಜನ ಲೋಕಪಾಲ್ ಹನ್ನೊಂದು ಸದಸ್ಯರನೊಳಗೊಂಡ supra constitutional super committeeಯಾಗಿತ್ತು. ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗಗಳನ್ನ ಮೀರಿದ ಅಧಿಕಾರಕ್ಕಾಗಿ ಬೇಡಿಕೆಯಿಡಲಾಯಿತು. ತನ್ನ ಹಳ್ಳಿಯಲ್ಲಿ ಕುಡಿದು ಬಂದವರಿಗೆ ಮರಕ್ಕೆ ಕಟ್ಟಿ ಚಾಟಿ ಏಟು ಕೊಡುತ್ತಿದ್ದ ‘ಗಾಂಧಿವಾದಿ’ ತಾತ ಅಣ್ಣ ಹಜಾರೆಯಿಟ್ಟ ಬೇಡಿಕೆಗಳನ್ನ ಸರಿಯಾಗಿ ಅರ್ಥ ಮಾಡಿಕೊಳ್ಳದೆ ಎಲ್ಲರೂ ಅವರಿಗೆ ಬೆಂಬಲ ಸೂಚಿಸಿದರು. ನಾವೆಲ್ಲ ಅವರಿಗೆ ಬೆಂಬಲ ಸೂಚಿಸುವಾಗ ಅಂತರಾಳದಲ್ಲಿ ಸರ್ವಾಧಿಕಾರವನ್ನೇ ಬಯಸುತ್ತಿದ್ದೆವು ಎಂದರೆ ತಪ್ಪಾಗಲಾರದು. Jan Lokpal as devised by Team Anna was a crystallization of the emergent Indian Middle class’s Yearning for a benign dictatorship. ಅಣ್ಣ ಹಜಾರೆ ಮತ್ತು ಅವರ ತಂಡದ ಸದಸ್ಯರು ಮೋದಿಯವರ ಆಗಮನಕ್ಕೆ ಸೂಕ್ತ ವೇದಿಕೆ ಸಜ್ಜುಗೊಳಿಸಿದ್ದರು.
ಸಿಂಗ್ ಸರ್ಕಾರ ಹೀಗೆ ನಡೆಸಿದ ಒಂದು ದಶಕದ ಆಡಳಿತ ಲಕ್ಷಾಂತರ ಮಂದಿಯನ್ನ ಬಡತನದಿಂದ ಮೇಲಕೆತ್ತಿದರೆ, ಕೋಟ್ಯಂತರ ಜನರನ್ನ ಬಡತನದಿಂದ ತೀವ್ರ ಸಂಕಷ್ಟಕ್ಕೆ ದೂಡಿತು. ಬರಿಯ ಶ್ರೀಮಂತರನ್ನು ನೋಡಿದಾಗ ಸಾಧನೆಯಂತೆ ಕಾಣುವ ಸಿಂಗ್ ಆಡಳಿತದ ದಿನಗಳು, ದೇಶದ ಉಳಿದ ಬಡವರ ಜೊತೆಗೆ ಒಂದು ಪರ್ಸೆಂಟ್ ಧನಿಕರನ್ನ ಒಮ್ಮೆಲೆ ನೋಡಿದಾಗ ಅಸಮಾನತೆ, ಅನ್ಯಾಯವೆಲ್ಲವು ಸ್ಪಷ್ಟವಾಗುತ್ತವೆ. ದೇಶದ ಈ ಒಂದು ಪರ್ಸೆಂಟ್ ಶ್ರೀಮಂತರು, ದೇಶದ ಅರ್ಧದಷ್ಟು ಸಂಪತ್ತಿನ ಒಡೆಯರಾದರು. ಸಿಂಗ್ ಅವರ ಪರಿಕಲ್ಪನೆಯಾಗಿದ್ದ trickle-down economics ಮಕಾಡೆ ಮಲಗಿತ್ತು.
2007ರ ಹೊತ್ತಿಗೆ ಭಾರತ ಟ್ರಿಲಿಯನ್ ಡಾಲರ್ ಎಕಾನಮಿ ಆಗಿದ್ದು, 2009ರಲ್ಲಿ 42 ಸಾವಿರ ಮಿಲಿಯನರ್‍ಗಳನ್ನ ಹೊಂದಿತ್ತು. 2010ರ ಪ್ರಪಂಚದ ಟಾಪ್ ಟೆನ್ ಶ್ರೀಮಂತರಲ್ಲಿ ಎಂಟು ಶ್ರೀಮಂತರು ಭಾರತದಲ್ಲಿದ್ದರು! ಅದರೂ 2010ರಲ್ಲಿ 400 ಮಿಲಿಯನ್ ಭಾರತೀಯರು ಬಡತನದ ರೇಖೆಯ ಕೆಳಗಿದ್ದರು. ದೇಶ 46% ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. The practice of cutting taxes for the rich, hoping it would benefit the poor- does not work ಅನ್ನೋದನ್ನ ಅರಿತು ಕೂಡ ಶ್ರೀಮಂತರಿಗೆ ಎಲ್ಲಾ ಅನುಕೂಲ ಮಾಡಿಕೊಟ್ಟ ಪ್ರಧಾನಿ ಮನಮೋಹನ್ ಸಿಂಗ್.
ಹೀಗೆ ಬಡತನವನ್ನ ನಿವಾರಿಸಲಾಗದ ಸಿಂಗ್ ಆಡಳಿತ ಬಡತನವನ್ನ ಮರು ವ್ಯಾಖ್ಯಾನಿಸಲು ಹೊರಟಿತು. ಪ್ಲಾನಿಂಗ್ ಕಮಿಷನ್ ಅಧ್ಯಕ್ಷರಾದ ಮೊಂಟೆಕ್ ಸಿಂಗ್ ಆಲುವಾಲಿಯ ದಿನಕ್ಕೆ 32 ರೂಪಾಯಿ ದುಡಿಯುವಾತ ಬಡವನಾಗಿರಲು ಸಾಧ್ಯವಿಲ್ಲವೆಂದು 2012ರಲ್ಲಿ ಘೋಷಿಸಿದರು. “ಸರ್ ನೀವೇ ದಿನಕ್ಕೆ 32 ರೂಪಾಯಿಯಲ್ಲಿ ಬದುಕಿಬಿಡುವಿರೆ?” ಎಂಬ ಪ್ರಶ್ನೆಗೆ ಮೊಂಟೆಕ್ ಆಗುವುದಿಲ್ಲವೆಂದು ನೇರವಾಗಿ ಒಪ್ಪಿಕೊಂಡರು.
ಸಿಂಗ್ ಆಡಳಿತಾವಧಿಯಲ್ಲಿ ಮಹಾ ಸಾಮಾಜಿಕ ವಿಪ್ಲವತೆ ಎದ್ದು ಕಾಣುತಿತ್ತು. ಅದೊಂದು ವಿರೋಧಾಭಾಸದ ಯೋಗ. ಕುಟುಂಬಗಳು ಅಗಲಿಹೋಗುತ್ತಿದ್ದವು, ಕೋಟ್ಯಂತರ ಜನರು ಹಳ್ಳಿಗಳಲ್ಲಿ ಬದುಕಲಾಗದೆ ನಗರಗಳಿಗೆ ವಲಸೆ ಬಂದರು. ಕೊಳೆತು ಹೋಗುತಿದ್ದ ಹಳ್ಳಿಗಳಿಂದ ಬಂದ ಜನ ನಗರದ ನಾರುವ ಸ್ಲಮ್‌ಗಳಲ್ಲಿ ವಾಸಿಸತೊಡಗಿದರು, ಪ್ರತಿ ವರ್ಷ ಸಾಲ ತೀರಿಸಲಾಗದೆ ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾದರು, ಭೂಮಿಗಾಗಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದವರು ಕೊಲೆಯಾದರು, ಸರ್ಕಾರ ಪ್ರಾಯೋಜಿತ ಪೌರಸೇನೆಗಳು ಹಳ್ಳಿಗಳಿಗೆ ಬೆಂಕಿಯಿಡುತ್ತಿದ್ದರು, ದೊಡ್ಡ ದೊಡ್ಡ ಧನಿಕರಿಗೆ, ಗಣಿ ಮಾಲೀಕರಿಗೆ, ಕಾರ್ಪೊರೇಟ್‌ಗಳಿಗೆ ತಮ್ಮ ನೆಲ ಜಲ ಬಿಟ್ಟುಕೊಡದ ಬುಡಕಟ್ಟು ಜನಾಂಗದವರು ಆದಿವಾಸಿಗಳ ಮಾರಣಹೋಮ ನಡೆಯಿತು, ಅತ್ಯಾಚಾರ, ಲೂಟಿ, ಹಿಂಸೆ, ಕೊಲೆಗಳಂತಹ ವಿಕೃತಿಗಳು ಬಡವರ ಮೇಲೆ ದಿನಂಪ್ರತಿ ನಡೆದವು. ಆದರೆ ದಿನಪತ್ರಿಕೆಗಳಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ನಮಗೆ ದಿನ ಕಾಣುತ್ತಿದ್ದುದು ಹಾಲಿವುಡ್ ಸೆಲೆಬ್ರೆಟಿಗಳ ವಿಲಾಸಿ ಜೀವನ, ಐಪಿಎಲ್ ಪಂದ್ಯಗಳಲ್ಲಿ ಕುಣಿಯುತ್ತಿದ್ದ ವಿದೇಶಿ ಬಿಳಿಯ ಸುಂದರಿಯರು, ದೊಡ್ಡವರ ಅದ್ದೂರಿ ಮದುವೆಗಳು, ಬೀಚ್ ಪಾರ್ಟಿಗಳು, ಖಾಸಗಿ ವಿಮಾನ ಹಡಗುಗಳು!
ಇದನ್ನು ಓದಿದ್ದೀರಾ?: ಭಾರತವೆಂಬ ಮಹಾನ್ ಮಾರುಕಟ್ಟೆಯ ಹೆಬ್ಬಾಗಿಲುಗಳನ್ನು ವಿದೇಶೀ ಕಂಪನಿಗಳಿಗೆ ಹಾರು ಹೊಡೆದು ತೆರೆಯಲಿಲ್ಲವೇ ಮನಮೋಹನ್ ಸಿಂಗ್?
ಪ್ರಿನ್ಸ್ ಟನ್ ಅರ್ಥಶಾಸ್ತ್ರಜ್ಞ ಅತುಲ್ ಕೊಹ್ಲಿ ಹೇಳುವಂತೆ ಮನಮೋಹನ್ ತಮ್ಮ ಒಂದು ದಶಕದ ಆಡಳಿತಾವಧಿಯಲ್ಲಿ ನಡೆಸಿದ್ದು ದ್ವಿಪಥದ ಡೆಮಾಕ್ರಸಿಯನ್ನ- ಬಡವರು, ಸಾಮಾನ್ಯರು ಚುನಾವಣೆ ಸಮಯದಲ್ಲಿ ಬೇಕಾಗುತ್ತಿದ್ದರು. ಅವರು ಬಂದು ಮತ ಚಲಾಯಿಸಿ ತಮ್ತಮ್ಮ ಕೆಲಸ ನೋಡಿಕೊಳ್ಳಬೇಕಿತ್ತು. ರಾಜಕೀಯ ಮರೆತುಬಿಡಬೇಕಿತ್ತು. ನಂತರ ನಮ್ಮ ದೇಶದ ‘ಬುದ್ದಿವಂತ’ ಎಲೀಟ್ ವ್ಯಾಪಾರಿಗಳ ಪರವಾದ ಸರ್ಕಾರ ನಡೆಸುತ್ತಿದ್ದರು. ಹೀಗೆ predatory capitalismನಿಂದ ಹಳ್ಳಿಗಳು ನರಕಗಳಾದರೆ, ನಗರಗಳು ಅಸಮಾನತೆಯ ಕೂಪಗಳಾದವು, ಪೂರ್ವಕ್ಕೆ ಚೀನಾ ಭಾರತದ ಭೂಮಿಯನ್ನ ಎಗ್ಗಿಲ್ಲದೆ ಸ್ವಾಧೀನ ಪಡಿಸಿಕೊಳ್ಳುತ್ತಿದ್ದರೆ, ಮುಂಬೈ ಹತ್ಯಾಕಾಂಡ ನಡೆಸಿದವರು ಪಶ್ಚಿಮದಲ್ಲಿ ಹಾಯಾಗಿ ವಿರಮಿಸುತ್ತಿದ್ದರು. ಅಮೆರಿಕಾದ ಜೊತೆಗಿನ ಸಂಬಂಧ ಹಾಳಾಗತೊಡಗಿತ್ತು. ಗುಜರಾತಿನಲ್ಲಿ ಆರ್ಥಿಕ ಅಭಿವೃದ್ದಿ ತುಂಬಾ ವೇಗದಿಂದ ಆಗುತ್ತಿದ್ದರೂ, ಚಲನಶೀಲತೆ ಮಂದಗತಿಯಲ್ಲಿತ್ತೆಂದು, ಆಂಧ್ರ, ಮಹಾರಾಷ್ಟ್ರ, ಕೇರಳ ಗುಜರಾತ್‌ಗಿಂತ ಸಾಕಷ್ಟು ಮುಂದಿವೆಯೆಂದು, ಜನನದಿಂದ ಮರಣದವರೆಗೆ ಜೀವನಮಟ್ಟ ಉತ್ತಮವಾಗಿದೆಯೆಂದು ಪ್ರತಿಷ್ಠಿತ ಎಂಐಟಿ ಹಾಗೂ ವಿಶ್ವಬ್ಯಾಂಕ್ ನಡೆಸಿದ ಅಧ್ಯಯನದಲ್ಲಿ ಸ್ಪಷ್ಟ ಪುರಾವೆಗಳಿದ್ದರೂ, ಟಾಟ, ಅನಿಲ್/ಮುಕೇಶ್ ಅಂಬಾನಿ, ಅದಾನಿಗಳು, ವಿದೇಶಿ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞರು, ಮೋದಿ ಗುಜರಾತ್ ಮಾಡೆಲ್ ಅನ್ನು ಹಾಡಿ ಹೊಗಳಲು ಶುರುಮಾಡಿಕೊಂಡಿದ್ದರು. ದಾವೋಸ್‌ನಲ್ಲಿ ಅವರ ಗುಣಗಾನವಾಗತೊಡಗಿತ್ತು, ಸಿಂಗಾಪುರದ ಚಿತ್ರಗಳು ಅಹಮದಾಬಾದ್, ಗಾಂಧಿನಗರವೆಂದು ವಾಟ್ಸ್ ಆಪ್‌ನಲ್ಲಿ ಶೇರ್ ಆಗುತ್ತಿದ್ದವು, ಅಮೆರಿಕಾದ ಪಿಆರ್ ಫರ್ಮ್ ಆಪ್ಕೋ (APCO) ಮೋದಿಯ ಚುನಾವಣ ಅಭಿಯಾನ ನೋಡಿಕೊಳ್ಳತೊಡಗಿತು. ಭಾರತ ಇತಿಹಾಸದಲ್ಲೇ ಅತ್ಯಂತ ದುಬಾರಿ ಚುನಾವಣ ಅಭಿಯಾನ ನಡೆಸಲು ಬಿಜೆಪಿ ಆರೆಸ್ಸೆಸ್ ಸಜ್ಜಾಗಿದ್ದವು. ಕಾಂಗ್ರೆಸ್ ಮನಮೋಹನ್ ಸಿಂಗ್ ಅವರನ್ನು ಮನೆಗೆ ಕಳುಹಿಸಿ ರಾಹುಲ್ ಅವರನ್ನ ಮೋದಿಯ ಪ್ರತಿಸ್ಪರ್ಧಿಯನ್ನಾಗಿ ಮಾಡುವ ತರಾತುರಿಯಲ್ಲಿತ್ತು. ಒಂದಾನೊಂದು ಕಾಲದಲ್ಲಿ ಮಿನುಗುತ್ತಿದ್ದ ಕಾಂಗ್ರೆಸ್ ಕೋಟೆ ಈಗೇಕೋ ಮಂಕಾಗಿತ್ತು. ಅಯಾತುಲ್ಲ ಅಲ್ ಖಮೇನಿ ಬರುವ ಮುನ್ನ ಬರಿಬರಿದಾಗಿದ್ದ ಷಾ ರೆಜ ಪೆಹ್ಲವಿಯ ತೆಹರಾನಿನ ಅರಮನೆಯಂತಿತ್ತು.
-ಹರೀಶ್
(ಈ ಲೇಖನದ ಕೆಲ ಮಾಹಿತಿಯನ್ನ ಕೋಮಿರೆಡ್ಡಿ ಬರೆದ ಮೆಲವೊಲೆಂಟ್ ರಿಪಬ್ಲಿಕ್ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ)