2026ರಲ್ಲಿ ನಡೆಯಲಿರುವ ಕ್ಷೇತ್ರ ಮರುವಿಂಗಡಣೆಯು ರಾಜ್ಯಗಳ ಮೇಲೆ ಬೀರುವ ಪ್ರಭಾವಗಳ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಕರೆದಿರುವ ಮುಖ್ಯಮಂತ್ರಿಗಳ ಸಭೆಯು ಶನಿವಾರ ಆರಂಭವಾಗಿದೆ. ಈ ಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹಾಜರಾಗಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ರಾಜ್ಯಗಳೆಲ್ಲ ಸೇರಿ ಕ್ಷೇತ್ರ ಮರುವಿಂಗಡಣೆ ಬಗ್ಗೆ ಬಿಜೆಪಿ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವ ಸಾಧ್ಯತೆಯಿದೆ.
ಇದನ್ನು ಓದಿದ್ದೀರಾ? Delimitation | ದಕ್ಷಿಣದ ರಾಜ್ಯಗಳಿಗೆ ಕಂಟಕವಾಗಿರುವ ಸಂಸದೀಯ ಕ್ಷೇತ್ರ ಮರುವಿಂಗಡಣೆ
ತೆಲಂಗಾಣದ ಮಾಜಿ ಸಚಿವ ಕೆ ಟಿ ರಾಮರಾವ್ ಬಿಆರ್‌ಎಸ್ ಅನ್ನು ಪ್ರತಿನಿಧಿಸಿದರೆ, ವೈಎಸ್‌ಆರ್‌ಸಿಪಿ, ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ, ಬಿಜೆಡಿ ಮತ್ತು ಎಎಪಿಯಂತಹ ರಾಜಕೀಯ ಪಕ್ಷಗಳ ನಾಯಕರು ಕೂಡಾ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಜನಸೇನಾ ಸಂಸದ ತಂಗೆಲ್ಲ ಉದಯ್ ಶ್ರೀನಿವಾಸ್ ಸಭೆಯಲ್ಲಿ ಭಾಗವಹಿಸುವ ಬಗ್ಗೆ ಊಹಾಪೋಹಗಳಿದ್ದವು. ಆದರೆ ಅವರು ತಮ್ಮ ನಾಯಕ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಪತ್ರವನ್ನು ಸ್ಟಾಲಿನ್ ಅವರಿಗೆ ಹಸ್ತಾಂತರಿಸುವುದಾಗಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಲೋಕಸಭಾ ಕ್ಷೇತ್ರ ಮರುವಿಂಗಡಣೆ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಿ ನಿರ್ಧಾರ: ಡಿ.ಕೆ. ಶಿವಕುಮಾರ್
ಈ ನಡುವೆ ಡಿಎಂಕೆ ತನ್ನ ದ್ವಿಭಾಷಾ ಸೂತ್ರಕ್ಕೆ ಅನುಗುಣವಾಗಿ ಭಾಗವಹಿಸುವ ನಾಯಕರ ಹೆಸರುಗಳನ್ನು ಅವರ ಮಾತೃಭಾಷೆ ಮತ್ತು ಇಂಗ್ಲಿಷ್‌ನಲ್ಲಿ ನಾಮಫಲಕಗಳಲ್ಲಿ ಮುದ್ರಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಮತ್ತೊಂದು ಸಂದೇಶವನ್ನು ರವಾನಿಸಿದೆ. ಲೋಕಸಭಾ ಚುನಾವಣೆಯ ನಂತರ ಬಿಜೆಪಿಯ ವಿಪಕ್ಷಗಳ ಮೊದಲ ಸಭೆ ಇದಾಗಿರುವುದರಿಂದ ಮಹತ್ವವನ್ನು ಪಡೆದಿದೆ.
ಕ್ಷೇತ್ರ ಮರುವಿಂಗಡಣೆಯನ್ನು ಕೇವಲ ಜನಸಂಖ್ಯೆಯ ಆಧಾರದ ಮೇಲೆ ನಡೆಸಿದರೆ ಅನೇಕ ರಾಜ್ಯಗಳು ತಮ್ಮ ರಾಜಕೀಯ ಪ್ರಾತಿನಿಧ್ಯವನ್ನು ಕಳೆದುಕೊಳ್ಳುತ್ತದೆ ಎಂಬ ಬಗ್ಗೆ ಚರ್ಚೆ ನಡೆಯಲಿದೆ.
