- ಮೇಕೆದಾಟು ಯೋಜನೆ ಎರಡು ರಾಜ್ಯಗಳ ರೈತರ ಹಿತ ಕಾಯಲಿದೆ
- ಎಲ್ಲ ಸಮಸ್ಯೆಗಳಿಗೆ ಮೇಕೆದಾಟು ಯೋಜನೆಯೇ ಪರಿಹಾರ: ಡಿಕೆಶಿ
ಮೇಕೆದಾಟು ಯೋಜನೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ರೈತರ ಹಿತ ಕಾಯಲಿದೆ. ಹೀಗಾಗಿ ನಾನು ತಮಿಳುನಾಡು ಸರ್ಕಾರ ಹಾಗೂ ನಾಯಕರಿಗೆ ಈ ವಿಚಾರದಲ್ಲಿ ಹೃದಯವೈಶಾಲ್ಯತೆ ಪ್ರದರ್ಶಿಸಿ, ಸಹಕಾರ ನೀಡುವಂತೆ ಮನವಿ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ಎಲ್ಲ ಸಮಸ್ಯೆಗಳಿಗೆ ಮೇಕೆದಾಟು ಯೋಜನೆಯೇ ಪರಿಹಾರ. ಈ ಯೋಜನೆಯಿಂದ ನಮಗಿಂತ ಹೆಚ್ಚು ತಮಿಳುನಾಡಿಗೆ ಅನುಕೂಲವಾಗಲಿದೆ. ಕರ್ನಾಟಕ ಬಳಸಿಕೊಳ್ಳಲಾಗದ ನೀರು ತಮಿಳುನಾಡಿಗೆ ಸೇರಲಿದೆ. ಈ ನೀರನ್ನು ಸಂಕಷ್ಟದ ಸಮಯದಲ್ಲಿ ಬಳಸಿಕೊಳ್ಳಲು ಈ ಯೋಜನೆ ಅಗತ್ಯವಿದೆ” ಎಂದರು.
“ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ವಾಸ್ತವಾಂಶ ನ್ಯಾಯಾಲಯದ ಮುಂದಿಟ್ಟಿದ್ದೇವೆ. ಕಾವೇರಿ ವಿಚಾರವಾಗಿ ಈಗಾಗಲೇ ನಮ್ಮ ತಂಡ ದೆಹಲಿಯಲ್ಲಿ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿದೆ. ನಾನು ಮುಂದಿನ ದಿನಗಳಲ್ಲಿ ಮತ್ತೊಂದು ಸಭೆ ಮಾಡಲಿದ್ದೇನೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಯಾರಿಗೆ ಎಷ್ಟು ಗೌರವ ಕೊಡಬೇಕು ಎಂಬುದನ್ನು ಬಿಜೆಪಿಯಿಂದ ಕಲಿಯಬೇಕಿಲ್ಲ: ಡಿಕೆ ಶಿವಕುಮಾರ್
“ಕರ್ನಾಟಕದಲ್ಲಿ ನೀರಿದೆ. ಇದಕ್ಕಾಗಿಯೇ ನೀರು ಬಿಡುಗಡೆ ಮಾಡಿದ್ದು, ಈಗ ಸುಪ್ರೀಂ ಕೋರ್ಟ್ ಮುಂದೆ ನೀರಿಲ್ಲ ಎಂದು ಹೇಳುತ್ತಿದೆ” ಎಂಬ ತಮಿಳುನಾಡು ಪರ ವಕೀಲ ಮುಕುಲ್ ರೋಹಟಗಿ ಹೇಳಿಕೆಗೆ ಪ್ರತಿಕ್ರಿಯಿಸಿ, “ಈ ವಿಚಾರವಾಗಿ ನಾವು ಪ್ರತಿಕ್ರಿಯೆ ನೀಡುವುದಿಲ್ಲ. ವಾಸ್ತವಾಂಶವನ್ನು ನ್ಯಾಯಾಲಯದ ಮುಂದಿಟ್ಟಿದ್ದೇವೆ. ಇದು ತಾಂತ್ರಿಕ ವಿಚಾರವಾಗಿದ್ದು, ನಾವು ಅಣೆಕಟ್ಟುಗಳಲ್ಲಿನ ಒಳಹರಿವಿನ ಮಾಹಿತಿ ಹಂಚಿಕೊಂಡಿದ್ದೇವೆ” ಎಂದರು.
ಕಾವೇರಿ ವಿಚಾರವಾಗಿ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗುತ್ತಿರುವುದು ರಾಜಕೀಯ ಮಾಡಲು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ಕೋರ್ಟ್ ಈ ವಿಚಾರದಲ್ಲಿ ಏನು ಹೇಳಬೇಕೋ ಹೇಳಿದೆ. ಅವರಿಗೆ ಕರ್ನಾಟಕ ರಾಜ್ಯದ ಬಗ್ಗೆ ಹಿತಾಸಕ್ತಿ ಇದ್ದರೆ ಅವರು ನಮ್ಮ ಜೊತೆ ಸೇರಿ ರಾಜ್ಯದ ಪರವಾಗಿ ಧ್ವನಿ ಎತ್ತಲಿ. ಇಲ್ಲದಿದ್ದರೆ ನಮ್ಮ ಕರ್ತವ್ಯ ಮಾಡುತ್ತೇವೆ” ಎಂದು ಹೇಳಿದರು.