ದೇಶವಿರೋಧಿ ಹಾಗೂ ಭಯೋತ್ಪಾದನಾ ಚಟುವಟಿಕೆಗಳಿಗೆ ನೆರವು ನೀಡಿದ ಆರೋಪದ ಮೇಲೆ ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ ಹೆಸರಿನ ಸಂಘಟನೆಗೆ ಕೇಂದ್ರ ಸರ್ಕಾರವು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿದೆ.
ಭಯೋತ್ಪಾದನಾ ವಿರೋಧಿ ಕಾನೂನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ(ಯುಎಪಿಎ) ಅಡಿಯಲ್ಲಿ ಮುಸ್ಲಿಂ ಲೀಗ್ ಜಮ್ಮು ಮತ್ತು ಕಾಶ್ಮೀರ (ಮಸಾರತ್ ಆಲಂ ಗ್ರೂಪ್) ಸಂಘಟನೆಗೆ ನಿಷೇಧ ವಿಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ (ಮಸಾರತ್ ಆಲಂ ಬಣ)/ಎಂಎಲ್‌ಜೆಕೆ-ಎಂಎಯನ್ನು ಯುಎಪಿಎ ಅಡಿಯಲ್ಲಿ ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಲಾಗಿದೆ ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.
The ‘Muslim League Jammu Kashmir (Masarat Alam faction)’/MLJK-MA is declared as an ‘Unlawful Association’ under UAPA.
This organization and its members are involved in anti-national and secessionist activities in J&K supporting terrorist activities and inciting people to…
— Amit Shah (@AmitShah) December 27, 2023
“ಈ ಸಂಘಟನೆ ಮತ್ತು ಅದರ ಸದಸ್ಯರು ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶ ವಿರೋಧಿ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಾರೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸಲು ಜನರನ್ನು ಪ್ರಚೋದಿಸುತ್ತಿದ್ದಾರೆ. ನಮ್ಮ ದೇಶದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತೆಗೆ ವಿರುದ್ಧವಾಗಿ ಕೆಲಸ ಮಾಡುವವರನ್ನು ಯಾವುದೇ ಕಾರಣಕ್ಕೂ ನಾವು ಸಹಿಸುವುದಿಲ್ಲ ಎಂಬುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಂದೇಶವಾಗಿದೆ” ಎಂದು ಅಮಿತ್ ಶಾ ತಿಳಿಸಿದ್ದಾರೆ.
ಮುಸ್ಲಿಂ ಲೀಗ್ ಮಸಾರತ್ ಆಲಂ ಗ್ರೂಪ್ ಮಸಾರತ್ ಆಲಂ ಭಟ್ ನೇತೃತ್ವದಲ್ಲಿದೆ. ಈ ಸಂಘಟನೆಯು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿ, ಈ ನಿಷೇಧ ಹೇರಿದೆ. ಸಂಘಟನೆಯ ಸದಸ್ಯರು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಅಲ್ಲದೆ, ದೇಶದ ಸಾಂವಿಧಾನಿಕ ಅಧಿಕಾರದ ಕಡೆಗೆ ಸಂಪೂರ್ಣ ಅಗೌರವವನ್ನು ತೋರಿಸುತ್ತಿದ್ದಾರೆ ಎಂದು ಅಧಿಸೂಚನೆ ಹೇಳಿದೆ.
ಸಂಘಟನೆಯ ಮುಖಂಡರು, ವಿಶೇಷವಾಗಿ ಅದರ ಅಧ್ಯಕ್ಷ ಮಸಾರತ್ ಆಲಂ, ದೇಶದ ಏಕತೆ, ಸಮಗ್ರತೆ, ಭದ್ರತೆ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ. ಈ ನಿಷೇಧವು ಮುಂದಿನ ಐದು ವರ್ಷಗಳವರೆಗೆ ಇರಲಿದೆ ಎಂದು ವರದಿಯಾಗಿದೆ.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಕೇಂದ್ರ ಸರ್ಕಾರವು ಯಾವುದೇ ಸಂಘಟನೆಯನ್ನು ‘ಕಾನೂನುಬಾಹಿರ’ ಅಥವಾ ‘ಭಯೋತ್ಪಾದಕ’ ಎಂದು ಘೋಷಿಸಬಹುದು. ಇದನ್ನೇ ಸಾಮಾನ್ಯ ಭಾಷೆಯಲ್ಲಿ ‘ನಿರ್ಬಂಧ ಅಥವಾ ನಿಷೇಧ’ ಎನ್ನುತ್ತಾರೆ.
ಸಂಘಟನೆಯನ್ನು ‘ಕಾನೂನುಬಾಹಿರ’ ಅಥವಾ ‘ಭಯೋತ್ಪಾದಕ’ ಅಥವಾ ‘ನಿಷೇಧಿಸಲಾಗಿದೆ’ ಎಂದು ಘೋಷಿಸಿದರೆ, ಅದರ ಸದಸ್ಯರನ್ನು ಅಪರಾಧಿಗಳೆಂದು ಪರಿಗಣಿಸಬಹುದು ಮತ್ತು ಅದರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು.
ಗೃಹ ಸಚಿವಾಲಯದ ಪ್ರಕಾರ, ಪ್ರಸ್ತುತ ದೇಶದಲ್ಲಿ 42 ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸಲಾಗಿದೆ. ಅಂದರೆ, ಅವುಗಳನ್ನು ನಿಷೇಧಿಸಲಾಗಿದೆ. ಇವುಗಳಲ್ಲಿ ಅನೇಕ ಖಲಿಸ್ತಾನಿ ಸಂಘಟನೆಗಳು, ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್, ಎಲ್‌ಟಿಟಿಇ ಮತ್ತು ಅಲ್ ಖೈದಾ ಮುಂತಾದ 42 ಸಂಘಟನೆಗಳು ಸೇರಿವೆ.