ರಾಜ್ಯದಲ್ಲಿ ಒಟ್ಟಾರೆ ಕಬ್ಬಿಣದ ಅದಿರಿನ ಬಹುಪಾಲು ಸಂಡೂರಿನ ಅರಣ್ಯದಲ್ಲಿ ನಿಕ್ಷೇಪಗೊಂಡಿದೆ. ಪಶ್ಚಿಮ ಘಟ್ಟದಂತ ಪರಿಸರವನ್ನು ಸಂಡೂರಿನ ಅರಣ್ಯ ಹೋಲುತ್ತದೆಯಾದರೂ, ರಾಜ್ಯದ ಯಾವುದೇ ಅರಣ್ಯಕ್ಕೂ ಸಂಪರ್ಕಗೊಳ್ಳದೇ, ಪ್ರತ್ಯೇಕವಾಗಿದೆ. ಇಂಥ ಪ್ರದೇಶದಲ್ಲಿ ಮತ್ತೆ ಗಣಿಗಾರಿಕೆ ಆರಂಭವಾಗುತ್ತಿದೆ. ಇದು ಭವಿಷ್ಯದಲ್ಲಿ ದೊಡ್ಡಮಟ್ಟದ ವನ್ಯಜೀವಿ-ಮಾನವ ಸಂಘರ್ಷಕ್ಕೆ ದಾರಿ ಮಾಡಿಕೊಡಲಿದೆ ಎನ್ನುತ್ತಿದ್ದಾರೆ ಪರಿಸರ ತಜ್ಞರು, ಸಾಮಾಜಿಕ ಹೋರಾಟಗಾರರು.
ಗಣಿನಾಡು ಬಳ್ಳಾರಿಯಲ್ಲಿ 2000 ದಿಂದ 2011ರವರೆಗೆ ಅಕ್ರಮ ಗಣಿಗಾರಿಕೆಯಿಂದ ಅಪಾರ ಅರಣ್ಯ ಸಂಪತ್ತು ನಾಶವಾದ ಕಹಿನೆನಪು ಕಾಡುತ್ತಿರುವ ಮಧ್ಯೆಯೇ ಮತ್ತೆ ರಾಜ್ಯದಲ್ಲಿ ಗಣಿಗಾರಿಕೆ ಗರಿಗೆದರುವ ಲಕ್ಷಣಗಳು ಗೋಚರಿಸುತ್ತಿವೆ.
ಒಂದು ಕಡೆ ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣ ಚಿಂಕಾರ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ಪ್ರದೇಶದ 120 ಎಕರೆ ಭೂಮಿಯಲ್ಲಿ ಗಣಿಗಾರಿಕೆ ನಡೆಸಲು ಸಿದ್ದತೆ ನಡೆದಿದೆ. ಇನ್ನೊಂದಡೆ ಬಳ್ಳಾರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇತ್ತೀಚೆಗೆ ಸಂಡೂರು ತಾಲ್ಲೂಕಿನಲ್ಲಿ ಒಟ್ಟು ಏಳು ಅದಿರು ಬ್ಲಾಕ್‌ಗಳನ್ನು ಹರಾಜು ಹಾಕಲಾಗಿದೆ. ಜೊತೆಗೆ ವಿಜಯನಗರ, ಚಿತ್ರದುರ್ಗ ಹಾಗೂ ತಮಕೂರು ಅದಿರು ಗಣಿಗಳನ್ನೂ ಹರಾಜು ಹಾಕಲಾಗಿದೆ.
ರಾಜ್ಯದ ಅರಣ್ಯ ಪ್ರದೇಶದ ಗಣಿಗಳಲ್ಲಿ ದಿನದ 24 ಗಂಟೆಯೂ ಗಣಿಗಾರಿಕೆ ನಡೆಸುವುದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ನಡೆದ ಈ ಬೆಳವಣಿಗೆಗಳು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪರಿಸರ ತಜ್ಞರು, ಸಾಮಾಜಿಕ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವನ್ಯಜೀವಿಗಳ ಹಿತದೃಷ್ಟಿಯಿಂದ 24X7 ಗಣಿಗಾರಿಕೆ ಚಟುವಟಿಕೆ ನಡೆಸುವುದು ಕಾರ್ಯಸಾಧ್ಯವಲ್ಲ. ಗಣಿಗಾರಿಕೆ ಪ್ರದೇಶದ ವ್ಯಾಪ್ತಿಯಲ್ಲಿ ವನ್ಯಜೀವಿ ರಕ್ಷಣಾ ವಲಯವಿಲ್ಲದಿದ್ದರೂ ಆ ಪ್ರದೇಶದಲ್ಲಿ ಕಾಡು ಪ್ರಾಣಿಗಳಿವೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದು ಬಳ್ಳಾರಿಯ ಗಣಿ ತಜ್ಞರು ಹೇಳುತ್ತಿದ್ದಾರೆ.
ರಾಜ್ಯದಲ್ಲಿ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ನಾಲ್ಕು ಸಮೃದ್ಧ ಗಣಿಗಳಿವೆ. ರಾಜ್ಯದ ಅರಣ್ಯ ಪ್ರದೇಶದಲ್ಲಿರುವ ಗಣಿಗಳಲ್ಲಿ ದಿನದ 24 ಗಂಟೆಯೂ ಗಣಿಗಾರಿಕೆ ನಡೆಸುವುದರ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಲು ಒಡಿಶಾ ಮತ್ತು ಜಾರ್ಖಂಡ್‌ಗೆ ತೆರಳಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಸರ್ಕಾರಕ್ಕೆ ವರದಿ ಕೂಡ ಸಲ್ಲಿಸಿದೆ. ಆ ಎರಡೂ ರಾಜ್ಯಗಳ ಮಾದರಿಯನ್ನು ರಾಜ್ಯದಲ್ಲಿ ಅನುಸರಿಸುವುದು ಸೂಕ್ತವಲ್ಲ ಎಂದು ತಂಡ ಅಭಿಪ್ರಾಯಪಟ್ಟಿದೆ.
ಕರ್ನಾಟಕದಲ್ಲಿ ಅದಿರು ಉತ್ಪಾದನೆಗೆ ಸುಪ್ರೀಂ ಕೊರ್ಟ್ ಮಿತಿ ವಿಧಿಸಿದೆ. ಬಳ್ಳಾರಿಯಲ್ಲಿ ವಾರ್ಷಿಕ 35 ದಶಲಕ್ಷ ಮೆಟ್ರಿಕ್ ಟನ್, ಚಿತ್ರದುರ್ಗ, ತುಮಕೂರಿನಲ್ಲಿ 15 ಲಕ್ಷ ಮೆಟ್ರಿಕ್ ಟನ್ ಅದಿರು ಹೊರ ತೆಗೆಯಬಹುದು. (ಒಡಿಶಾ, ಜಾರ್ಖಂಡ್‌ನಲ್ಲಿ ಈ ಮಿತಿ ಇಲ್ಲ. ಕರ್ನಾಟಕದಲ್ಲಿ ಅದಿರನ್ನು ಅರಣ್ಯ ಉತ್ಪನ್ನ ಎಂದು ಪರಿಗಣಿಸಲಾಗಿದೆ. ಒಡಿಶಾ, ಜಾರ್ಖಂಡ್‌ನಲ್ಲಿ ಅದಿರನ್ನು ಅರಣ್ಯ ಉತ್ಪನ್ನ ಎಂದು ಪರಿಗಣಿಸಿಲ್ಲ. ಹೀಗಾಗಿ ಅಲ್ಲಿ ಗಣಿಗಾರಿಕೆ ಮೇಲೆ ಅರಣ್ಯ ಇಲಾಖೆಯ ಅಂಕುಶವಿಲ್ಲ)
ಈ ಎಲ್ಲ ಬೆಳವಣಿಗೆಗಳ ನಡುವೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿ ಜಂಬುನಾಥ, ವಿಭೂತಿಗುಡ್ಡ, ಕರಡಿಕೊಳ್ಳ, ಉತ್ತರ ರಾಜಾಪುರ, ದಕ್ಷಿಣ ರಾಜಾಪುರ, ಶಾಂತಿಪ್ರಿಯ, ಕುಮಾರಸ್ವಾಮಿ ಕಬ್ಬಿಣದ ಅದಿರು ಗಣಿಗಳು ಹರಾಜುಗೊಂಡಿವೆ. ಯುವಗಳ ಜೊತೆಗೆ ವಿಜಯನಗರ ಜಿಲ್ಲೆಯ ಕಾರಿಗನೂರು, ಚಿತ್ರದುರ್ಗದ ಜಂತಕಲ್, ತಮಕೂರಿನ ಜಾಣೇಹಾರ ಕಬ್ಬಿಣದ ಅದಿರು ಗಣಿಗಳನ್ನೂ ಹರಾಜು ಹಾಕಲಾಗಿದೆ. ಆದರೆ, ಹರಾಜು ಹಾಕಿದ ಏಳು ಅದಿರು ಬ್ಲಾಕ್‌ಗಳ ಪೈಕಿ ಒಂದು ಬ್ಲಾಕ್ ದಟ್ಟಾರಣ್ಯವಾಗಿದ್ದು (ವರ್ಜಿನ್ ಅರಣ್ಯ), ಹರಾಜಿಗೂ ಮುನ್ನ ಅರಣ್ಯ ಇಲಾಖೆಯ ಅನುಮತಿಯನ್ನೇ ಪಡೆದಿಲ್ಲ ಎಂಬುದು ವರದಿಯಾಗಿದೆ.
ಈ ಸುದ್ದಿ ಓದಿದ್ದೀರಾ? ರಾಜ್ಯಗಳು ಖನಿಜ – ಗಣಿಗಾರಿಕೆಗೆ ರಾಜಧನ ತೆರಿಗೆ ವಿಧಿಸುವ ಹಕ್ಕನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್
ಸಂಡೂರಿನ ಅರಣ್ಯ ಪ್ರದೇಶದ ದಕ್ಷಿಣ ವಲಯದಲ್ಲಿರುವ ದಟ್ಟಾರಣ್ಯದ ಒಟ್ಟು 217.453 ಎಕರೆ ವ್ಯಾಪ್ತಿಯಲ್ಲಿ ಬರುವ ‘ಕುಮಾರಸ್ವಾಮಿ ಕಬ್ಬಿಣದ ಅದಿರು ಗಣಿ’ ಹೆಸರಿನ ಅದಿರು ಬ್ಲಾಕ್ ಅನ್ನು ಆರ್‌ಬಿಎಸ್‌ಎಸ್‌ಎನ್ ಸಂಸ್ಥೆ ಅತ್ಯಧಿಕ ಪ್ರೀಮಿಯಂ (ಶೇ.200 ಪಟ್ಟು) ನೀಡಿ ಹರಾಜಿನಲ್ಲಿ ಖರೀದಿ ಮಾಡಿದೆ ಎನ್ನುವ ಆರೋಪವಿದೆ. ಅಪಾರ ಜೀವ ಸಂಕುಲವಿರುವ ವರ್ಜಿನ್ ಕಾಡಿನಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂಬ ವಾದವಿದೆ. ಈ ಕಾರಣಕ್ಕೆ ಹಲವು ಸಲ ಪ್ರಸ್ತಾವ ತಿರಸ್ಕೃತವಾಗಿದೆ. ಆದರೆ, ವರ್ಜಿನ್ ಕಾಡಿನಲ್ಲಿ ಬ್ಲಾಕ್ ಗುರುತು ಮಾಡಲಾಗಿದ್ದು, ಅರಣ್ಯ ಇಲಾಖೆಯ ಅಭಿಪ್ರಾಯವನ್ನು ಕೇಳದೆ ‘ಕುಮಾರಸ್ವಾಮಿ ಕಬ್ಬಿಣದ ಅದಿರು ಗಣಿ’ ಬ್ಲಾಕ್ ಹರಾಜು ಮಾಡಲಾಗಿದೆ.
ಸಂಡೂರಿನ ಅರಣ್ಯದಲ್ಲಿ ಈಗಾಗಲೇ ಅಸ್ತಿತ್ವದಲ್ಲಿದ್ದ ಗುತ್ತಿಗೆ ಅವಧಿ ಮೀರಿದ್ದ ವಿವಿಧ ಗಣಿಗಳನ್ನು ಸಂಯೋಜಿಸಿ ಬ್ಲಾಕ್‌ಗಳನ್ನು ಸಿದ್ದಪಡಿಸಲಾಗಿತ್ತು. ಆ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ 2024ರ ಅಕ್ಟೋಬರ್ 3ರಂದು ಅಧಿಸೂಚನೆ ಹೊರಡಿಸಿ, ಒಟ್ಟು ಒಂಬತ್ತು ಬ್ಲಾಕ್‌ಗಳ ಕುರಿತು ಅಧಿಸೂಚನೆಯಲ್ಲಿ ಪ್ರಸ್ತಾಪಿಸಿ, ಉನ್ನತ ಮಟ್ಟದ ಸಭೆಯೂ ನಡೆದಿದೆ. ಆದರೆ, ಎಂಟು ಬ್ಲಾಕ್‌ಗಳ ಬಗ್ಗೆ ಮಾತ್ರ ಸಭೆಯಲ್ಲಿ ಸಮಾಲೋಚನೆ ನಡೆದಿದ್ದು, ವರ್ಜಿನ್ ಅರಣ್ಯ ವ್ಯಾಪ್ತಿಯ ‘ಕುಮಾರಸ್ವಾಮಿ ಐರನ್ ಓರ್ ಬ್ಲಾಕ್’ ಬಗ್ಗೆ ಈ ಸಭೆಯಲ್ಲಿ ಯಾವುದೇ ಮಾತುಕತೆ ನಡೆದಿರಲಿಲ್ಲ ಎಂಬುದು ಸಭಾ ನಡಾವಳಿಗಳಿಂದ ಗೊತ್ತಾಗಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ.

ತುಮಕೂರು | ಚಿಂಕಾರದಲ್ಲೂ ಗಣಿಗಾರಿಕೆ
ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣ ಚಿಂಕಾರ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ಪ್ರದೇಶದ 120 ಎಕರೆ ಭೂಮಿಯಲ್ಲಿ ಗಣಿಗಾರಿಕೆ ನಡೆಸಲು ಸಿದ್ದತೆ ನಡೆದಿದೆ. ಕಬ್ಬಿಣದ ಅದಿರು ಗಣಿಗಾರಿಕೆಗಾಗಿ 17,200 ಮರಗಳನ್ನು ಕತ್ತರಿಸಬೇಕಾಗುತ್ತದೆ ಎಂದು ತುಮಕೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಹಾಸನ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿಫಾರಸು ಮಾಡಿದ್ದಾರೆ. ಹಾಗೆಯೇ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯಕ್ಕೂ ಪ್ರಸ್ತಾವ ಸಲ್ಲಿಕೆಯಾಗಿದೆ.
ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಈ ಪ್ರಸ್ತಾವ ಇನ್ನಷ್ಟೇ ಚರ್ಚೆಗೆ ಬರಬೇಕಿದೆ. ಅರಣ್ಯ ನಾಶದ ನೆಪವೊಡ್ಡಿ ಬಳ್ಳಾರಿ ಜಿಲ್ಲೆಯ ಸಂಡೂರಿನ ದೇವದಾರಿಯಲ್ಲಿ ಕುದುರೆಮುಖ ಅದಿರು ಕಂಪನಿಯ ಕಾರ್ಯಾಚರಣೆಗೆ ತಡೆ ಒಡ್ಡಿದ್ದ ಅರಣ್ಯ ಇಲಾಖೆಯು ತುಮಕೂರು ಜಿಲ್ಲೆಯ ಚಿಂಕಾರ ಧಾಮದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಗಣಿಗಾರಿಕೆಗೆ ರತ್ನಗಂಬಳಿ ಹಾಸಿದೆಯೇ ಎನ್ನುವ ಅನುಮಾನ ಮೂಡಿದೆ.
ರಾಜ್ಯ ಸರ್ಕಾರದ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಕ (ಪಿಸಿಸಿಎಫ್) ನೇತೃತ್ವದಲ್ಲಿ 2016 ಮಾರ್ಚ್ 28 ರಂದು ನಡೆದ ಸಭೆಯಲ್ಲಿ ಯಾವುದೇ ಕಾರಣಕ್ಕೂ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ಕೊಡಬಾರದು ಎಂಬ ತೀರ್ಮಾನವನ್ನು ಇದೀಗ ರಾಜ್ಯ ಸರ್ಕಾರ ಮರೆತಂತೆ ಕಾಣುತ್ತಿದೆ.

ಭವಿಷ್ಯದಲ್ಲಿ ತುಂಬಲಾಗದ ನಷ್ಟ: ಶ್ರೀಶೈಲ್ ಆಲದಹಳ್ಳಿ ಸಂಡೂರು ತಾಲ್ಲೂಕಿನಲ್ಲಿ ಒಟ್ಟು ಏಳು ಅದಿರು ಬ್ಲಾಕ್‌ಗಳನ್ನು ಹರಾಜು ಹಾಕಿರುವ ಬಗ್ಗೆ ಜನಸಂಗ್ರಾಮ ಪರಿಷತ್ ಮುಖಂಡ ಶ್ರೀಶೈಲ್ ಆಲದಹಳ್ಳಿ ಈ ದಿನ.ಕಾಮ್ ಜೊತೆ ಮಾತನಾಡಿ, "ಉತ್ತರ ಕರ್ನಾಟಕದ ಆಕ್ಸಿಜನ್ ಬ್ಯಾಂಕ್ ಎಂದೇ ಸಂಡೂರು ಅರಣ್ಯ ಪ್ರದೇಶ ಹೆಸರಾಗಿದೆ. ಬರೋಬ್ಬರಿ 90 ಸಾವಿರ ಹೆಕ್ಟೇರ್ ವಿಸ್ತರಣೆ ಇದೆ. ಕಾಡಿನ ದಟ್ಟತೆ 0.4 ಎಂದು ಗುರುತಿಸಲಾಗಿದ್ದು, ಇಲ್ಲಿನ ಕಾಡಿನಲ್ಲಿ ಶ್ರೀಗಂಧ, ರಕ್ತ ಚಂದನ, ಅರಳಿ, ಆಲ, ತೇಗ, ಮುತ್ತುಗ ಸೇರಿ 91 ಜಾತಿಯ ಗಿಡಗಳಿವೆ. ವಿಶೇಷವಾಗಿ ಸಂಡೂರಿಯನ್ ಪ್ರಭೇದಗಳು ಏಷ್ಯಾ ಖಂಡದ ಯಾವ ಭಾಗದಲ್ಲೂ ಕಾಣಸಿಗುವುದಿಲ್ಲ ಎಂದು ಗುರುತಿಸಲಾಗಿದೆ. ದಟ್ಟ ಅರಣ್ಯ ಪ್ರದೇಶದಲ್ಲಿರುವ ಚಿರತೆ, ಪ್ಯಾಂಗೋಲಿಯನ್, ನವಿಲುಗಳು, ರಣಹದ್ದು, ಕೊಂಡಗುರಿ, ಕರಡಿ ಸೇರಿ ಜೀವ ವೈವಿಧ್ಯವಿದೆ. ಇಲ್ಲಿ ಗಣಿಗಾರಿಕೆ ಮತ್ತೆ ಆರಂಭವಾದರೆ ಇದು ಭವಿಷ್ಯದಲ್ಲಿ ತುಂಬಲಾಗದ ನಷ್ಟವಾಗಲಿದೆ" ಎಂದು ಹೇಳಿದರು. "ಅರಣ್ಯ ನಾಶ ಕ್ರಿಮಿನಲ್ ಕೆಲಸವಿದ್ದಂತೆ, ಅತಿಯಾದ ಅರಣ್ಯ ನಾಶ ಮಾನವ ಸೇರಿ ಜೀವಿಗಳ ಅಸ್ತಿತ್ವಕ್ಕೆ ಕುಂದು ಬರಲಿದೆ. ಸರ್ಕಾರ ಜವಾಬ್ದಾರಿಯಿಂದ ವರ್ತಿಸಬೇಕು. 'ಕುಮಾರಸ್ವಾಮಿ ಐರನ್ ಓರ್ ಬ್ಲಾಕ್' ಅನ್ನು ಅರಣ್ಯ ಇಲಾಖೆಯ ಒಪ್ಪಿಗೆ ಇಲ್ಲದೇ ಹೇಗೆ ಹರಾಜು ಮಾಡಲಾಗಿದೆ? ರಾಜ್ಯದ ಅರಣ್ಯ ಇಲಾಖೆ ಏನು ಮಾಡುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಈಗಾಗಲೇ ಸಂಡೂರು ಪ್ರದೇಶದಲ್ಲಿ 8 ಲಕ್ಷ ಹೆಕ್ಟೇರ್ ಪ್ರದೇಶ ಅದಿರಿನಿಂದ ನಾಶವಾಗಿದೆ" ಎಂದು ಕಳವಳ ವ್ಯಕ್ತಪಡಿಸಿದರು. "ರಾಜ್ಯದಲ್ಲಿ ಒಟ್ಟಾರೆ ವರ್ಷಕ್ಕೆ 50 ಮಿಲಿಯನ್ ಟನ್ ಅದಿರು ಉತ್ಪಾದನೆಯಾಗುತ್ತಿದೆ. ಸಂಡೂರು ಪ್ರದೇಶದಲ್ಲಿ 35 ಮಿಲಿಯನ್ ಟನ್. ನಾವು ಇದನ್ನೇ ಇಳಿಕೆ ಮಾಡುವಂತೆ ಸಾಕಷ್ಟು ಸಲ ಆಗ್ರಹಿಸಿದ್ದೇವೆ. ಕಾರಣ ಅದಿರು ವಾಹನಗಳ ಸಂಚಾರ ದಟ್ಟಣೆಯಿಂದ ರಸ್ತೆಗಳು ತಗ್ಗು ಬಿದ್ದು, ವಾಹನ ಸಂಚಾರರಿಗೆ ಭಾರಿ ಸಮಸ್ಯೆಯಾಗಿದೆ. ವರ್ಷದಿಂದ ವರ್ಷಕ್ಕೆ ಅಪಘಾತಗಳ ಸಂಖ್ಯೆ ಏರಿಕೆಯಾಗುತ್ತಿದ್ದು, 2020ರಿಂದ ಜನವರಿಯಿಂದ 2024 ಡಿಸೆಂಬರ್ ಮಧ್ಯದ ಅವಧಿಯಲ್ಲಿ ಸಾವಿರಾರು ಅಪಘಾತಗಳ ಸಂಭವಿಸಿವೆ. 1,110 ಮಂದಿ ಗಾಯಗೊಂಡಿದ್ದಾರೆ. ನೂರಾರು ಜನ ಮೃತಪಟ್ಟಿದ್ದಾರೆ. ಇದೆಲ್ಲ ನನ್ನ ಆರ್‌ಟಿಐ ಅರ್ಜಿಗೆ ಸಿಕ್ಕ ಮಾಹಿತಿ" ಎಂದು ಹೇಳಿದರು. "ಕರ್ನಾಟಕ ಗಣಿಗಾರಿಕೆ ಪರಿಸರ ಮರುಸ್ಥಾಪನೆ ನಿಗಮ (ಕೆಎಂಇಆರ್‌ಸಿ) ಸುಪ್ರೀಂಕೋರ್ಟ್ ನಿರ್ದೇಶನದಂತೆ ಸ್ಥಾಪನೆಯಾಗಿದೆ. ಇದರ ಕೆಲಸ ಅರಣ್ಯ ಪುನಶ್ಚೇತನ. ಪ್ರತಿ ಟನ್ ಅದಿರು ಮಾರಾಟದ ಶೇ.10 ರಷ್ಟು ಹಣ ನಿಗಮಕ್ಕೆ ಜಮೆಯಾಗುತ್ತದೆ. ಕೆಎಂಇಆರ್‌ಸಿನಲ್ಲೇ 30 ಸಾವಿರ ಕೋಟಿ ರೂ. ಹಣ ಜಮೆ ಇದೆ. ಇದೆಲ್ಲ ಏನಾಗುತ್ತಿದೆ? ಸರ್ಕಾರ ಮಾತ್ರ ಅನುದಾನ ಕ್ರೋಡೀಕರಣಕ್ಕೆ ಗಣಿಗಾರಿಕೆಗೆ ಒಪ್ಪಿಗೆ ನೀಡುತ್ತಿದೆ. ಇದರಿಂದ ಅರಣ್ಯ ಸಂಪತ್ತು ಹಾಳಾಗುವುದಲ್ಲದೇ ಮತ್ತೆ ಎಂದೂ ಸೃಷ್ಟಿಯಾಗದ ಅದಿರು ಮಣ್ಣು ಕಾಣೆಯಾಗಲಿದೆ. ಭವಿಷ್ಯದ ದೃಷ್ಟಿಯಿಂದ ಗಣಿಗಾರಿಕೆಗೆ ಒಪ್ಪಿಗೆಯೇ ಬೇಡ" ಎಂದು ಶ್ರೀಶೈಲ್ ಆಲದಹಳ್ಳಿ ಆಗ್ರಹಿಸಿದರು.
ರಾಜ್ಯದಲ್ಲಿರುವ ಒಟ್ಟಾರೆ ಕಬ್ಬಿಣದ ಅದಿರಿನ ಬಹುಪಾಲು ಸಂಡೂರಿನ ಅರಣ್ಯದಲ್ಲಿ ನಿಕ್ಷೇಪಗೊಂಡಿದೆ. ಪಶ್ಚಿಮ ಘಟ್ಟದಂತ ಪರಿಸರವನ್ನು ಸಂಡೂರಿನ ಅರಣ್ಯ ಹೋಲುತ್ತದೆಯಾದರೂ, ರಾಜ್ಯದ ಯಾವುದೇ ಅರಣ್ಯಕ್ಕೂ ಸಂಪರ್ಕಗೊಳ್ಳದೇ, ಪ್ರತ್ಯೇಕವಾಗಿದೆ. ಇಂಥ ಪ್ರದೇಶದಲ್ಲಿ ಮತ್ತೆ ಗಣಿಗಾರಿಕೆ ಆರಂಭವಾದರೆ ವನ್ಯಜೀವಿಗಳು ವಿಚಲಿತಗೊಂಡು ಬೇರೆಡೆಗೆ ಹೋಗಲು ಪ್ರಯತ್ನಿಸುತ್ತವೆ. ಆದರೆ, ಎಲ್ಲಿಗೂ ಹೋಗಲಾಗದೇ ಜನವಸತಿ ಪ್ರದೇಶಗಳತ್ತಲೂ ನುಗ್ಗಬಹುದು. ಇದು ಭವಿಷ್ಯದಲ್ಲಿ ದೊಡ್ಡಮಟ್ಟದ ವನ್ಯಜೀವಿ-ಮಾನವ ಸಂಘರ್ಷಕ್ಕೆ ದಾರಿ ಮಾಡಿಕೊಡಲಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.