ದೇವದಾರಿ ಉಕ್ಕು ಗಣಿಗಾರಿಕೆ | ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ – ಪ್ರಕೃತಿ ಮೇಲಿನ ಅತ್ಯಾಚಾರ: ಎಸ್‌.ಆರ್‌ ಹಿರೇಮಠ್

Date:

Advertisements


ಬಳ್ಳಾರಿ
ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ ಕುಮಾರಸ್ವಾಮಿ ಸಮ್ಮತಿ ನೀಡಿದ್ದಾರೆ. ‘ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್‌’ಗೆ (ಕೆಐಒಸಿಎಲ್‌) ಅನುಮತಿ ನೀಡಿ ಕಡತಕ್ಕೆ ಸಹಿ ಹಾಕಿದ್ದಾರೆ. ಈ ಹಿಂದೆ, ತಾವೇ ವಿರೋಧಿಸಿದ್ದ ಗಣಿಗಾರಿಕೆಗೆ ಈಗ ಅವರೇ ಅನುಮೋದನೆ ನೀಡಿದ್ದಾರೆ.

ಕುಮಾರಸ್ವಾಮಿ ಅವರು ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಅವಕಾಶ ನೀಡಿರುವುದನ್ನು ಸಾಮಾಜಿಕ ಹೋರಾಟಗಾರ ಎಸ್‌.ಆರ್ ಹಿರೇಮಠ್ ಖಂಡಿಸಿದ್ದಾರೆ. ಈ ದಿನ.ಕಾಮ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದು ಪ್ರಕೃತಿ ಮೇಲಿನ ಅತ್ಯಾಚಾರ. ದೇವದಾರಿಯಲ್ಲಿ ಗಣಿಗಾರಿಕೆ ನಡೆಸುವ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

“ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆಗೆ ಕೇಂದ್ರ ಸರ್ಕಾರ ಅವಕಾಶ ನೀಡುತ್ತಿದೆ. ಸಂಡೂರು, ಬಳ್ಳಾರಿ, ಹೊಸಪೇಟೆ ತಾಲೂಕಿನ ಸಂಘಟನೆಗಳು ಗಣಿಗಾರಿಕೆಯನ್ನು ವಿರೋಧಿಸುತ್ತಿವೆ. ಈ ಹಿಂದೆ, 2008-2009ರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಪಾರಾಕಾಷ್ಟೆ ತಲುಪಿದ್ದಾಗ, ‘ಸಮಾಜ ಪರಿವರ್ತನಾ’ ಸಂಘಟನೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಪಿಐಎಲ್‌ ಸಲ್ಲಿಸಿ, ನ್ಯಾಯಾಂಗ ಹೋರಾಟ ನಡೆಸಿತ್ತು. ಪರಿಣಾಮ, ಬಳ್ಳಾರಿಯನ್ನು ತಮ್ಮ ‘ರಿಪಬ್ಲಿಕ್’ ಮಾಡಿಕೊಂಡಿದ್ದ ಮೈನಿಂಗ್ ಮಾಫಿಯಾದ ಕಿಂಗ್‌ಪಿನ್ ಗಾಲಿ ಜನಾರ್ದನ ರೆಡ್ಡಿ, ಅವರ ಸಹೋದ್ಯೋಗಿ ಶಾಸಕ-ಸಚಿವರು ಹಾಗೂ ಎಂಟು ಮಂದಿ ಅಧಿಕಾರಗಳನ್ನು ಜೈಲಿಗೆ ಕಳಿಸಲಾಗಿತ್ತು” ಎಂದು ಹೇಳಿದ್ದಾರೆ.

Advertisements

“ಅಂದಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮತ್ತು ಆಂಧ್ರಪ್ರದೇಶದ ರಾಜಶೇಖರ್ ರೆಡ್ಡಿ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರೆಡ್ಡಿ ಸಹೋದರರ ಕೈಜೋಡಿಸಿ, ಅಕ್ರಮ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದರು. ಆ ಗಣಿಗಾರಿಕೆಯನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿತ್ತು” ಎಂದು ವಿವರಿಸಿದ್ದಾರೆ.

“ರೆಡ್ಡಿ ಸಹೋದರರ ಅಕ್ರಮ ಗಣಿಗಾರಿಕೆಯಿಂದ ನೊಂದಿದ್ದ, ದುರ್ಬಲರಾಗಿದ್ದ ಸಂತ್ರಸ್ತ ಬಡ ಜನರಿಗೆ ಶಿಕ್ಷಣ, ಆದಾಯ,  ಆರೋಗ್ಯ, ಶುದ್ಧ ಕುಡಿಯುವ ನೀರು ದೊರೆಯಬೇಕೆಂದು ಆಗ ನಾವು ಆಗ್ರಹಿಸಿದ್ದೆವು. ಆದರೆ, ಈಗ ಎನ್‌ಡಿಎ ಸರ್ಕಾರ ಅದೇ (ಬಳ್ಳಾರಿ) ಜಿಲ್ಲೆಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲು ಮುಂದಾಗಿದೆ. ಇದು, ಜೈವಿಕ ವೈವಿಧ್ಯ ವಿರೋಧಿ, ಪರಿಸರ ವಿರೋಧಿ ನಡೆ. ಇದನ್ನು ಸರ್ಕಾರ ಕೈಬಿಡಬೇಕು. ಸರ್ಕಾರ ಕೂಡ ಪರಿಸರ ರಕ್ಷಣೆಯ ಕಾಳಜಿಯನ್ನು ಅರ್ಥ ಮಾಡಿಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

“ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು 388 ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಗಣಿಗಾರಿಕೆ ನಡೆಸಲು ‘ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್‌’ಗೆ (ಕೆಐಒಸಿಎಲ್‌) ಅವಕಾಶ ನೀಡಿದ್ದಾರೆ. ಅವರು ಅಧಿಕಾರಿಗಳ ಮಾತು ಕೇಳಿ, ದುಡುಕಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ತಮ್ಮ ನಿರ್ಧಾರವನ್ನು ಮರುಪರಿಶೀಲನೆ ಮಾಡಬೇಕು. ಸ್ಥಳಕ್ಕೆ ಭೇಟಿ ನೀಡಿ, ಅರಣ್ಯ ಪ್ರದೇಶವನ್ನು ಗಮನಿಸಿ, ತಮ್ಮ ನಿರ್ಧಾರವನ್ನು ಕೈಬಿಡಬೇಕು” ಎಂದು ಒತ್ತಾಯಿಸಿದ್ದಾರೆ.

ಮಾತ್ರವಲ್ಲದೆ, “ಬಳ್ಳಾರಿ ಜಿಲ್ಲೆಯ ಅರಣ್ಯ ಭಾಗದಲ್ಲಿ ಈಗಾಗಲೇ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಮತ್ತು ವಿಶ್ವೇಶ್ವರಯ್ಯ ಐರನ್ ಅಂಡ್ ಸ್ಟೀಲ್‌ ಗಣಿಗಾರಿಕೆ ನಡೆಸುತ್ತಿವೆ. ಆ ಗಣಿಗಾರಿಕೆಗಳನ್ನೂ ನಿಲ್ಲಿಸಬೇಕು” ಎಂದು ಆಗ್ರಹಿಸಿದ್ದಾರೆ.

“ಗಣಿಗಾರಿಕೆ ನಡೆಯಬಾರದು ಎಂಬುದು ನಮ್ಮ ವಾದವಲ್ಲ. ಆದರೆ, ಅಕ್ರಮ ಗಣಿಗಾರಿಕೆಗಳು ಹಾಗೂ ಖಾಸಗಿಯವರಿಗೆ ಗಣಿಗಾರಿಕೆಗೆ ಕೊಡೋದು, ವಿನಾಶಕಾರಿ. ಗಣಿಗಾರಿಕೆಯು ಪ್ರಕೃತಿ, ನೈಸರ್ಗಿಕ ಸಂಪನ್ಮೂಲಗಳಿಗೆ ಮಾರಕವಾದದ್ದು. ಈ ಸಂಪನ್ಮೂಲಗಳನ್ನ ಅತಿ ಕಡಿಮೆ ಅವಶ್ಯಕತೆಗಳಿಗೆ ಬಳಸಬೇಕೇ ಹೊರತು, ಪರಿಸರವನ್ನೇ ಹಾಳು ಮಾಡುವ ಹಂತಕ್ಕೆ ಹೋಗಬಾರದು” ಎಂದು ಅವರು ತಿಳಿಸಿದ್ದಾರೆ.

“ಸುಪ್ರೀಂ ಕೋರ್ಟ್‌ ‘ಎ, ಬಿ, ಸಿ ಕೆಟಗರಿ’ಯಲ್ಲಿ ಗಣಿ ಪ್ರದೇಶವನ್ನು ವಿಂಗಡಿಸಬೇಕು ಅಂತ ಹೇಳಿದೆ. ಸಿ ಕೆಟಗರಿಯ ಪ್ರದೇಶಗಳನ್ನು ಮಾತ್ರ ಗಣಿಗಾರಿಕೆಗೆ ನೀಡಬೇಕು ಅಂತ ಹೇಳುತ್ತದೆ. ಹಾಗಾಗಿಯೇ, ಸಿ ಕೆಟಗರಿ ಪ್ರದೇಶವಾದ ತೋರಣಗಲ್ಲಿನಲ್ಲಿ ಉಕ್ಕು ಕಂಪನಿ ಗಣಿಗಾರಿಕೆ ನಡೆಸುತ್ತಿದೆ. ಅಂತಹ ಗಣಿ ಪ್ರದೇಶಗಳನ್ನು ಗಣಿಗಾರಿಕೆಗೆ ನೀಡಬೇಕೇ ಹೊರತು. ಅರಣ್ಯ ಪ್ರದೇಶವನ್ನು ಮೈನಿಂಗ್‌ಗೆ ನೀಡಬಾರದು” ಎಂದು ಎಸ್‌.ಆರ್ ಹಿರೇಮಠ್ ತಿಳಿಸಿದ್ದಾರೆ.

“ರೆಡ್ಡಿ ಸಹೋದರರು ನಡೆಸುತ್ತಿದ್ದ ಅಕ್ರಮ ಗಣಿಗಾರಿಕೆ ವಿರುದ್ಧ ಹೈಕೋರ್ಟ್‌ಗೆ ಹೋದಾಗ ನ್ಯಾಯಮೂರ್ತಿ ಶೈಲೇಂದ್ರ ಕುಮಾರ್, ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿದ್ದರು. ‘ಇಂತಹ ಅರಣ್ಯ ಪ್ರದೇಶವನ್ನು ಗಣಿಗಾರಿಕೆಗೆ ನೀಡುವುದು, ಪ್ರಕೃತಿಯ ಮೇಲಿನ ಅತ್ಯಾಚಾರ ಮಾಡಿದಂತೆ’ ಎಂದು ಹೇಳಿದ್ದರು. ಅದನ್ನ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಈಗ ಮತ್ತೆ, ನಾವು ಸುಪ್ರೀಂ ಕೋರ್ಟ್‌ಗೆ ಹೋಗುವಂತಹ ಪರಿಸ್ಥಿತಿಯನ್ನ ಸರ್ಕಾರ ಉಂಟುಮಾಡಬಾರದು. ನೈಸರ್ಗಿಕ ವಿಕೋಪಕ್ಕೆ ತುತ್ತಾಗುತ್ತಿರುವ ಇಂತಹ ಸಂದರ್ಭದಲ್ಲಿ ಸರ್ಕಾಋಗಳು ವಿವೇಚನೆಯಿಂದ ನಡೆದುಕೊಳ್ಳಬೇಕು. ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದನ್ನು ನಿಲ್ಲಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಈ ವರದಿ ಓದಿದ್ದೀರಾ?: ದೇವದಾರಿ ಉಕ್ಕು ಗಣಿಗಾರಿಕೆ | ಆರು ವರ್ಷಗಳ ಹಿಂದೆ ವಿರೋಧ – ಇಂದು ಒಪ್ಪಿಗೆ; ಇದು ಕೇಂದ್ರ ಸಚಿವ ಎಚ್‌ಡಿಕೆ ವರಸೆ!

“2019ರ ಅಕ್ಟೋಬರ್ 10ರಂದು ‘ಡೆಪ್ಯುಟಿ ಕಂಜರ್ವೇಟರ್ ಆಫ್ ಫಾರೆಸ್ಟ್‌’-ಬಳ್ಳಾರಿ ಅಧಿಕಾರಿಗಳು ದೇವದಾರಿ ಅರಣ್ಯ ಪ್ರದೇಶದಲ್ಲಿ ಭಾರೀ ಪ್ರಮಾಣದ ಜೀವ ವೈವಿಧ್ಯವಿದೆ. ಇಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಅಂತ ಹೇಳಿದೆ. ಅದನ್ನೇ, ‘ಚೀಫ್ ಕಂಜರ್ವೇಟರ್‌ ಅಫ್ ಫಾರೆಸ್ಟ್‌’-ಬಳ್ಳಾರಿ ಕೂಡ ಒತ್ತಿ ಹೇಳಿದೆ. ಜೊತೆಗೆ, ಅರಣ್ಯಾಧಿಕಾರಿ ರಾಜೀವ್ ರಂಜನ್ ಕೂಡ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂಬುದನ್ನೇ ಪ್ರತಿಪಾದಿಸಿದ್ದಾರೆ. ಹೀಗಾಗಿ, ಜಿಲ್ಲೆಯಲ್ಲಿ ಗಣಿಗಾರಿಕೆಗೆ ಅವಕಾಶ ಕೊಡಬಾರದು” ಎಂದಿದ್ದಾರೆ.

“ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆ ಬಗ್ಗೆ ಸಮಗ್ರ ವರದಿ ನೀಡಬೇಕೆಂದು 2019ರಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು. ಇಂತಹ ಸಮಯದಲ್ಲಿ, ಮತ್ತೊಂದು ಗಣಿಗಾರಿಕೆಗೆ ಅವಕಾಶ ನೀಡುವುದು ಅನುಚಿತ ಮತ್ತು ಪರಿಸರ ವ್ಯವಸ್ಥೆಗೆ ಮಾಡುವ ಅನ್ಯಾಯ. ಸರ್ಕಾರಗಳು ತಮ್ಮ ನಿರ್ಧಾರಗಳನ್ನು ಹಿಂಪಡೆಯಬೇಕು. ಪರಿಸರವನ್ನು ರಕ್ಷಿಸಬೇಕು. ಮುಂದಿನ ಪೀಳಿಗೆಯನ್ನ ಗಮನದಲ್ಲಿಟ್ಟುಕೊಂಡು ನಾವು ಪರಿಸರವನ್ನು ರಕ್ಷಿಸಿಕೊಳ್ಳಬೇಕು. ಅದಕ್ಕಾಗಿ ಹೋರಾಟ ನಡೆಸಬೇಕು” ಎಂದು ಹಿರೇಮಠ್ ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X